ಮನೆ ಕಟ್ಟಬೇಕು ಅಂತಿದ್ದೀರಾ? ಕಡಿಮೆ ಖರ್ಚಿನಲ್ಲಿ, ವಿಶಿಷ್ಟವಾದ ಹಾಗೂ ಪರಿಸರ ಸ್ನೇಹಿ ಮನೆ ಕಟ್ಟುವುದು ನಿಮ್ಮ ಉದ್ದೇಶವಾ? ಹಾಗಿದ್ದರೆ 'ಅರ್ಥ್ ಹೋಮ್' ಎಂಬುದರ ಬಗ್ಗೆ ತಿಳಿದುಕೊಂಡರೆ ಸಹಾಯ ಆಗಬಹುದು. ಏನಿದು ಅರ್ಥ್ ಹೋಮ್ ಅಂದರೆ, ಮನೆ ಕಟ್ಟುವಾಗ ಸಿಮೆಂಟ್, ಕಬ್ಬಿಣದ ಬಳಕೆ ಬಹಳ ಕಡಿಮೆ ಅಥವಾ ಬಳಸದಿರುವಂಥದ್ದೇ ಈ ಭೂಮಿ ಮನೆ.
ಸ್ಥಳೀಯವಾಗಿ, ಅಂದರೆ ಮನೆ ನಿರ್ಮಾಣ ಮಾಡುವ ಸ್ಥಳದಿಂದ ಆರೆಂಟು ಕಿ.ಮೀ. ಒಳಗೇ ಸಿಗುವಂಥ ವಸ್ತುಗಳನ್ನು ಬಳಸಿ, ಮನೆ ನಿರ್ಮಿಸುವಂಥ ಪದ್ಧತಿ ಇದು. ಇಂಥ ಮನೆಗಳ ನಿರ್ಮಾಣದಲ್ಲಿ ಲ್ಯಾಟರೈಟ್ ಇಟ್ಟಿಗೆ ಅಥವಾ ಜಂಬಿಟ್ಟಿಗೆ (ಕೇರಳದಲ್ಲಿ ಹಾಗೂ ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬಳಸುತ್ತಾರೆ) ಬಳಸಲಾಗುತ್ತದೆ. ಅಥವಾ ಎಕ್ಸ್ ಪೋಸ್ಡ್ ಇಟ್ಟಿಗೆ ಬಳಸಲಾಗುತ್ತದೆ.
ಪ್ಲಾಸ್ಟರಿಂಗ್ ಕಡ್ಡಾಯ ಅಲ್ಲ
ಈ ಇಟ್ಟಿಗೆ ಬಳಸಿದಲ್ಲಿ ಪ್ಲಾಸ್ಟರಿಂಗ್ ಮಾಡುವುದು ಕಡ್ಡಾಯ ಅಲ್ಲ. ಒಂದು ವೇಳೆ ಪ್ಲಾಸ್ಟರಿಂಗ್ ಮಾಡುವುದೇ ಆದಲ್ಲಿ ಮಣ್ಣು, ಭತ್ತದ ಹುಲ್ಲು, ಸುಣ್ಣದ ಕಲ್ಲು, ಗೋಮೂತ್ರ, ಸಗಣಿ ಇವುಗಳನ್ನು ವೈಜ್ಞಾನಿಕ ವಿಧಾನದಲ್ಲಿ ಮಿಶ್ರಣ ಮಾಡಿ, ಗೋಡೆಗಳಿಗೆ ಪ್ಲಾಸ್ಟರಿಂಗ್ ಮಾಡಬಹುದು. ಆದರೆ ಇಂಥ ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಮಾನಸಿಕವಾಗಿ ಗಟ್ಟಿಯಾಗಿ ಇರಬೇಕು. ಜತೆಗೆ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು, ಅನುಭವಿ- ಕೌಶಲ ಇರುವ ಕಾರ್ಮಿಕರ ನೆರವಿನಿಂದ ಮನೆ ನಿರ್ಮಾಣ ಮಾಡಬಹುದು. ಇನ್ನೊಂದು ವಿಚಾರ ಏನೆಂದರೆ, ಫ್ಲೋರಿಂಗ್ ಗೆ ಆಥಂಗುಡಿ (ತಮಿಳುನಾಡಿನ ಶಿವಗಂಗೆ ಜಿಲ್ಲೆಯಲ್ಲಿ ಈ ಸ್ಥಳ ಇದೆ) ಟೈಲ್ಸ್ ಸಿಗುತ್ತದೆ. ಅದನ್ನು ಬಳಸಬಹುದು. ಇದನ್ನು ಒಮ್ಮೆ ಪರಿಶೀಲಿಸಿ. ಸೂಕ್ತವಾಗಿ ಇಲ್ಲದಿದ್ದಲ್ಲಿ ಎಂಜಿನಿಯರ್ ಗಳ ಮೂಲಕ ಪರ್ಯಾಯ ಮಾರ್ಗಗಳನ್ನು ಕೇಳಿ ತಿಳಿಯಬಹುದು.
ಛಾವಣಿಗೆ ಮಂಗಳೂರು ಹೆಂಚು ಅಥವಾ ಟೆರಾಕೋಟ್ ಟೈಲ್ಸ್
ಅದೇ ರೀತಿ ರೂಫಿಂಗ್ ಗೆ, ಛಾವಣಿಗೆ ಮಂಗಳೂರು ಹೆಂಚು ಅಥವಾ ಈಚೆಗೆ ಬಂದಿರುವ ಛಾವಣಿಯ ಟೆರಾಕೋಟ್ ಟೈಲ್ಸ್ ಗಳನ್ನು ಬಳಸಬಹುದು. ಮನೆ ನಿರ್ಮಾಣಕ್ಕೆ ಮುಂಚೆ ಆ ವಾತಾವರಣಕ್ಕೆ ಯಾವುದು ಸೂಕ್ತ ಎಂಬುದನ್ನು ಕಂಡುಕೊಳ್ಳಬೇಕು. ಏಕೆಂದರೆ, ಕೆಲವು ಸ್ಥಳಗಳಲ್ಲಿ ಲ್ಯಾಟರೈಟ್ ಸ್ಟೋನ್ ಸರಿ ಹೊಂದುವುದಿಲ್ಲ. ಇನ್ನು ಇಂಥ ಮನೆಗಳನ್ನು ನಿರ್ಮಿಸಿ, ಅನುಭವ ಇರುವ ಕಾರ್ಮಿಕರ ನೆರವು ಪಡೆದುಕೊಂಡಲ್ಲಿ ಅತ್ಯುತ್ತಮ. ಒಂದು ಮನೆ ನಿರ್ಮಾಣದ ವೇಳೆ ಅದರ ಪ್ಲ್ಯಾನ್ ಹಾಗೂ ಯಾವ ಬಗೆಯಲ್ಲಿ ಕಟ್ಟಬೇಕು ಎಂದು ನಿರ್ಧರಿಸುವುದು ಬಹಳ ಮುಖ್ಯ. ಆ ವಿಷಯದಲ್ಲಿ ಎಂಜಿನಿಯರ್ ಗಳು ಹಾಗೂ ಆರ್ಕಿಟೆಕ್ಚರ್ ಗಳನ್ನು ಭೇಟಿಯಾಗಿ, ಚರ್ಚಿಸುವುದು ಒಳ್ಳೆಯದು. ಅವರ ಅನುಭವ ಹಾಗೂ ಜ್ಞಾನದ ಮೂಲಕ, ಮುಂದೆ ಏನು ಸವಾಲು ಹಾಗೂ ಅನುಕೂಲ- ಅನನುಕೂಲಗಳೇನು ಎಂಬುದನ್ನು ತಿಳಿಸುತ್ತಾರೆ.
ಮನೆಯಲ್ಲಿ ಮಳೆ ನೀರು ಕೊಯ್ಲು ಕಡ್ಡಾಯ
ಇನ್ನು ಮನೆಯಲ್ಲಿ ಮಳೆ ನೀರು ಸಂಗ್ರಹ (ಮಳೆ ನೀರು ಕೊಯ್ಲು) ವ್ಯವಸ್ಥೆ ಕಡ್ಡಾಯವಾಗಿ ವ್ಯವಸ್ಥೆ ಮಾಡಿಕೊಳ್ಳಬೇಕು. ಸೋಲಾರ್ ಪವರ್ (ಸೌರಶಕ್ತಿ) ಮೂಲಕ ಇಡೀ ಮನೆಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳಬಹುದು. ಕಿಟಕಿ- ಬೆಳಕಿಂಡಿಗಳನ್ನು ಸರಿಯಾಗಿ ಬಳಸಿಕೊಂಡು, ಜತೆಗೆ 'ತೊಟ್ಟಿ ಮನೆ'ಯಂಥದ್ದನ್ನು ನಿರ್ಮಿಸಿಕೊಂಡರೆ ಪ್ರತಿ ತಿಂಗಳು ವಿದ್ಯುತ್ ಬಿಲ್ ನಲ್ಲಿ ಉಳಿತಾಯ ಮಾಡಬಹುದು. ಜತೆಗೆ ಗಾಳಿ- ಬೆಳಕು ಯಥೇಚ್ಛವಾಗಿ ಇರುತ್ತದೆ. ಎಷ್ಟೇ ಚಿಕ್ಕ ಜಾಗ ಇದ್ದರೂ ಮಣ್ಣು ಕಾಣುವಂತೆ ಒಂದಿಷ್ಟು ಜಾಗವನ್ನು ಮೀಸಲಿರಿಸುವುದು, ಅಂಥಲ್ಲಿ ಗಿಡಗಳನ್ನು ಬೆಳೆಯುವುದು ಉತ್ತಮ. ನೀರಿನ ಪಾಯಿಂಟ್ ಪರೀಕ್ಷೆ ಮಾಡಿಸಿ, ಸಾಧ್ಯವಿದ್ದಲ್ಲಿ ಬಾವಿ ತೋಡಿಸುವುದರಿಂದ ಅನುಕೂಲ ಆಗುತ್ತದೆ. ಇನ್ನು ಈ ರೀತಿಯ ಭೂಮಿ ಮನೆಗಳಿಗೆ ಕಬ್ಬಿಣ, ಸಿಮೆಂಟ್, ಪೇಂಟಿಂಗ್ ಸೇರಿದಂತೆ ಇತರೆ ಖರ್ಚುಗಳು ಇರುವುದಿಲ್ಲ ಅಥವಾ ಬಹಳ ಕಡಿಮೆ ಖರ್ಚಾಗುತ್ತದೆ. ಹಣ ಉಳಿತಾಯ ಆಗುತ್ತದೆ. ಇದರ ಜತೆಗೆ ಪರಿಸರ ಸ್ನೇಹಿ, ಆರೋಗ್ಯಕ್ಕೂ ಒಳ್ಳೆಯದು.


Click it and Unblock the Notifications