ಇಪಿಎಫ್‌ಒ ಇತ್ತೀಚೆಗೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿತ್ತು. ಅಂದರೆ ತನ್ನ ನಿಯಮಗಳಲ್ಲಿ ಹಲವು ಕ್ರಮಗಳನ್ನು ಸರಳಗೊಳಿಸಿದ್ದು, ಉದ್ಯೋಗಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹಣ ವಿಥ್‌ಡ್ರಾ ಮಾಡಬಹುದು. ಅಲ್ಲದೇ ನಿರುದ್ಯೋಗದ ಸಮಯದಲ್ಲೂ ಪಿಎಫ್ ಅಕೌಂಟ್ (PF Account) ಮುಕ್ತಾಯಕ್ಕೆ ಸಂಬಂಧಿಸಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಕೆಲವು ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಪ್ರಕಾರ ನಿರುದ್ಯೋಗದ ವೇಳೆ ಪಿಎಫ್ ಅನ್ನು ಸಂಪೂರ್ಣವಾಗಿ ಹಿಂಪಡೆಯಲು ಇರುವ ಕಾಲಾವಧಿಯನ್ನು ಎರಡು ತಿಂಗಳಿಂದ 12 ತಿಂಗಳಿಗೆ ಹೆಚ್ಚಿಸಲಾಗಿದೆ. ಇದರೊಂದಿಗೆ, ಪಿಎಫ್ ಸದಸ್ಯರು ತಮ್ಮ ಖಾತೆಯಲ್ಲಿ ಕನಿಷ್ಠ 25% ಕೊಡುಗೆಯ ಬಾಕಿ ಹಣವನ್ನು ಹಾಗೆಯೇ ಇಟ್ಟುಕೊಳ್ಳಬೇಕೆಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.

ಗೊಂದಲಕ್ಕೆ ಸ್ಪಷ್ಟನೆ ಕೊಟ್ಟ ಇಪಿಎಫ್‌ಒ
ಇಪಿಎಫ್‌ಒನ ಈ ನಿರ್ಧಾರವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇಪಿಎಫ್‌ಒ ಸ್ಪಷ್ಟನೆ ನೀಡಿದ್ದು, ಉದ್ಯೋಗ ತೊರೆದ ತಕ್ಷಣ ಪಿಎಫ್‌ನ ಶೇ 75ರಷ್ಟು ಮೊತ್ತವನ್ನು ಹಿಂಪಡೆಯಬಹುದು ಮತ್ತು ಒಂದು ವರ್ಷದ ನಿರುದ್ಯೋಗದ ನಂತರ ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ ಎಂದು ತಿಳಿಸಿದೆ.
ಶ್ರಮ ಮತ್ತು ಉದ್ಯೋಗ ಸಚಿವಾಲಯದ ಹೇಳಿಕೆಯ ಪ್ರಕಾರ, "ಉದ್ಯೋಗ ಬಿಟ್ಟ ತಕ್ಷಣ ಶೇ 75ರಷ್ಟು ಹಣವನ್ನು ಹಿಂಪಡೆಯಬಹುದು ಮತ್ತು ಒಂದು ವರ್ಷ ನಿರುದ್ಯೋಗದಲ್ಲಿದ್ದರೆ ಸಂಪೂರ್ಣ ಹಣವನ್ನು 12 ತಿಂಗಳ ನಂತರ ಹಿಂಪಡೆಯಬಹುದು ಎಂದು ಹೇಳಿದೆ. ಅಲ್ಲದೇ ಹಿಂದೆ ಪದೇ ಪದೇ ಹಣ ಹಿಂಪಡೆಯುವುದರಿಂದ ಸೇವೆಯಲ್ಲಿ ಸ್ವಲ್ಪ ಲೋಪಗಳು ಬರುತ್ತಿದ್ದು, ಅದರಿಂದ ಪಿಂಚಣಿ ಸೇವೆಗಳಲ್ಲೂ ಸಮಸ್ಯೆಗಳಾಗುತ್ತಿತ್ತು. ಈ ಪರಿಣಾಮ ಅಂತಿಮ ಸಮಯದಲ್ಲಿ ನೌಕರರಿಗೆ ಅಲ್ಪ ಹಣ ಮಾತ್ರ ಉಳಿಯುತ್ತಿತ್ತು." ಈ ಹೊಸ ನಿಯಮಗಳು ಉದ್ಯೋಗಿಯ ಸೇವೆಯ ನಿರಂತರತೆ, ಉತ್ತಮ ಅಂತಿಮ ಪಿಎಫ್ ಇತ್ಯರ್ಥ ಮತ್ತು ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಖಚಿತಪಡಿಸುತ್ತವೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೆ, ಅಂತಿಮ ಪಿಂಚಣಿ ಹಿಂಪಡೆಯುವಿಕೆಯ ಕನಿಷ್ಠ ಅವಧಿಯನ್ನು ಎರಡು ತಿಂಗಳಿಂದ 36 ತಿಂಗಳಿಗೆ ಹೆಚ್ಚಿಸಲಾಗಿದೆ. ನಿರುದ್ಯೋಗದ ಸಮಯದಲ್ಲಿ ಪೂರ್ವಭಾವಿ ಪಿಎಫ್ ಇತ್ಯರ್ಥಕ್ಕಾಗಿ ಹಿಂಪಡೆಯುವ ಅವಧಿಯನ್ನು ಎರಡು ತಿಂಗಳಿಂದ 12 ತಿಂಗಳಿಗೆ ವಿಸ್ತರಿಸಲಾಗಿದೆ. ಪಿಂಚಣಿ ಹಿಂಪಡೆಯುವ ವಿಭಾಗಗಳನ್ನು 13 ರಿಂದ ಮೂರಕ್ಕೆ ಇಳಿಸಲಾಗಿದೆ -ಅಗತ್ಯಕ್ಕಾಗಿ (ಅನಾರೋಗ್ಯ, ಶಿಕ್ಷಣ, ಮದುವೆ), ವಸತಿ ಅಗತ್ಯಗಳು ಮತ್ತು ವಿಶೇಷ ಸಂದರ್ಭಗಳು.
ಇಪಿಎಫ್‌ಒ ನ 238ನೇ ಸಭೆಯಲ್ಲಿ, ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಈ ಬದಲಾವಣೆಗಳನ್ನು ಅನುಮೋದಿಸಿದ್ದು, ಶಿಕ್ಷಣ, ಅನಾರೋಗ್ಯ, ವಸತಿ ಮತ್ತು ವಿಶೇಷ ಸಂದರ್ಭಗಳಿಗಾಗಿ ಪಿಎಫ್ ಹಣ ಹಿಂಪಡೆಯಬಹುದು ಎಂದು ಸೂಚಿಸಿದೆ. ಇವುಗಳು ಮುಂದಿನ 1-2 ತಿಂಗಳಲ್ಲಿ ಜಾರಿಗೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ.
ಎಷ್ಟು ಬಾರಿ ಹಣ ಪಡೆಯಬಹುದು?
ಶಿಕ್ಷಣಕ್ಕಾಗಿ ಸದಸ್ಯತ್ವದ ಅವಧಿಯಲ್ಲಿ 10 ಬಾರಿ ಮತ್ತು ಮದುವೆಗೆ 5 ಬಾರಿ ಭಾಗಶಃ ಹಣವನ್ನು ಹಿಂಪಡೆಯಬಹುದು ಎಂದು ಈ ಹೊಸ ನಿಯಮದಲ್ಲಿ ತಿಳಿಸಲಾಗಿದೆ. ಆದ್ರೆ ಈ ಹಿಂದೆ ಮದುವೆ ಮತ್ತು ಶಿಕ್ಷಣ ಎರಡಕ್ಕೂ ಸೇರಿ 3 ಬಾರಿ ಮಾತ್ರ ಹಣ ವಿಥ್‌ಡ್ರಾ ಮಾಡುವ ಅವಕಾಶವಿತ್ತು. ಅನಾರೋಗ್ಯ ಮತ್ತು 'ವಿಶೇಷ ಸಂದರ್ಭಗಳ' ಅಡಿಯಲ್ಲಿ, ಪ್ರತಿ ಆರ್ಥಿಕ ವರ್ಷದಲ್ಲಿ 3 ಬಾರಿ ಮತ್ತು 2 ಬಾರಿ ಹಣವನ್ನು ಹಿಂಪಡೆಯಬಹುದು ಎಂದು ಹೇಳಲಾಗಿದೆ. ಯಾವುದೇ ವಿಶೇಷ ಸಂದರ್ಭಗಳಲ್ಲೂ ಅಥವಾ ತುರ್ತು ಪರಿಸ್ಥಿತಿಗಳಲ್ಲಿ, ಸಂಪೂರ್ಣ ಅರ್ಹ ಮೊತ್ತವನ್ನು ವರ್ಷಕ್ಕೆ ಎರಡು ಬಾರಿ ಸರಳವಾಗಿ ಹಿಂಪಡೆಯಬಹುದು ಎಂದು ಎಂದು ಸಚಿವಾಲಯ ತಿಳಿಸಿದೆ.
"ಹಿಂದೆ, ಪಿಎಫ್ ಹಣ ವಿಥ್ ಡ್ರಾ ಮಾಡಬೇಕೆಂದರೆ 13 ರೀತಿಯಲ್ಲಿ ವಿವಿಧ ವರ್ಗಗಳಿದ್ದವು ಮತ್ತು ಅನೇಕ ಷರತ್ತುಗಳಿಂದಾಗಿ ಹಣ ಬಾಕಿ ಉಳಿಯುತ್ತಿತ್ತು. ಈಗ ಇವುಗಳನ್ನು ಸರಳೀಕರಿಸಿ ಏಕರೂಪದ ನಿಯಮವಾಗಿ ಪರಿವರ್ತಿಸಲಾಗಿದೆ, ಇದರಿಂದ ಯಾವುದೇ ದಾಖಲೆಗಳಿಲ್ಲದೆ, ಸರಿಯಾದ ಕಾರಣ ನೀಡಿ ಹಣವನ್ನು ಹಿಂಪಡೆಯುವುದು ಸುಲಭವಾಗಿದೆ," ಎಂದು ಸಚಿವಾಲಯ ಹೇಳಿದೆ.
ಸೇವಾ ಅವಧಿಯಲ್ಲೂ ಬದಲಾವಣೆ
ಹಣವನ್ನು ಹಿಂಪಡೆಯಲು ಅಗತ್ಯವಾದ ಕನಿಷ್ಠ ಸೇವಾ ಅವಧಿಯನ್ನೂ ಕೂಡಾ ಈ ಬಾರಿ ಬದಲಾವಣೆ ಮಾಡಲಾಗಿದೆ. ಈಗ, ವಸತಿಗಾಗಿ 12 ತಿಂಗಳ ಇಪಿಎಫ್ ಸದಸ್ಯತ್ವದ ನಂತರ ಹಣ ಹಿಂಪಡೆಯಬಹುದು (ಹಿಂದೆ 5 ವರ್ಷ), ಶಿಕ್ಷಣ ಮತ್ತು ಮದುವೆಗೆ 12 ತಿಂಗಳ ನಂತರ (ಹಿಂದೆ 7 ವರ್ಷ) ಮತ್ತು ಇತರ ಹಿಂಪಡೆಯುವಿಕೆಗಳಿಗೆ ಸೇವಾವಧಿಯಲ್ಲಿ ಯಾವುದೇ ಸಮಯದಲ್ಲಿ ಹಣವನ್ನು ಹಿಂದೆ ಪಡೆಯಬಹುದಾಗಿದೆ.
ಇಪಿಎಫ್‌ಒ ದತ್ತಾಂಶದ ಪ್ರಕಾರ, ಸುಮಾರು 50 ಪ್ರತಿಶತ ಇಪಿಎಫ್ ಸದಸ್ಯರು ಅಂತಿಮ ಇತ್ಯರ್ಥದ ಸಮಯದಲ್ಲಿ ಬರೀ 20,000 ರೂಪಾಯಿಗಿಂತಲೂ ಕಡಿಮೆ ಹಣವನ್ನು ಹೊಂದಿರತ್ತಿದ್ದರಂತೆ. ಇದರಿಂದ 75 ಪ್ರತಿಶತ ಪಿಂಚಣಿ ಹಿಂಪಡೆಯುವಿಕೆಗಳು 4 ವರ್ಷಗಳೊಳಗೆ ನಡೆಯುತ್ತವೆ. ಇನ್ನು ವರದಿ ಪ್ರಕಾರ, ಅನೇಕರು ಕೆಲಸ ಬಿಟ್ಟು 2 ತಿಂಗಳಾದ್ರೆ ಸಾಕು, ನಂತರ ಸಂಪೂರ್ಣ ಪಿಎಫ್ ಹಣವನ್ನು ಹಿಂಪಡೆದು ಮತ್ತೊಂದು ಕಂಪನಿಗೆ ಸೇರಿಕೊಳ್ಳುತ್ತಾರೆ ಎನ್ನಲಾಗಿದೆ. ಇದರಿಂದ ಅಂತಿಮ ಸೇವಾವಧಿಯಲ್ಲಿ ಕಡಿಮೆ ಹಣ ಉಳಿದು, ಪಿಂಚಣಿಗೆ ಅನರ್ಹರಾಗುತ್ತಾರೆ. ಆದ್ರೆ ಮುಂಬರುವ ಹೊಸ ನಿಯಮಗಳು ನಿಮ್ಮ ಆರ್ಥಿಕ ಭದ್ರತೆಗೆ ಸಹಕಾರಿಯಾಗಲಿದೆ.


Click it and Unblock the Notifications