ನೌಕರರ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ತಂದ ಯೋಜನೆಯೇ ಇಪಿಎಫ್‌ಒ (EPFO). ಇಪಿಎಫ್‌ಒನ ಮುಖ್ಯ ಉದ್ದೇಶವೆಂದರೆ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ನೌಕರರಿಗೆ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮೆ ಸೌಲಭ್ಯಗಳನ್ನು ಒದಗಿಸುವುದಾಗಿದೆ. ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಇದೂ ಒಂದು. ಆದರೆ ಇದೀಗ ಪಿಎಫ್ ಖಾತೆ (PF Account) ಬಗ್ಗೆ ಭಾರೀ ದೊಡ್ಡ ಪ್ರಶ್ನೆ ಎದ್ದಿದೆ. ಅಂದರೆ ಕೆಲಸ ತೊರೆದ ನಂತರವೂ ಪಿಎಫ್ ಖಾತೆಗೆ ಬಡ್ಡಿ ಜಮೆಯಾಗುತ್ತದೆಯೇ? ಇಲ್ಲವೇ? ಎಂಬ ಪ್ರಶ್ನೆ ಎದ್ದಿದೆ.

ಹೌದು, ಕೆಲಸ ತೊರೆದ ನಂತರ ಮೂರು ವರ್ಷಗಳ ನಂತರ ಪಿಎಫ್ ಖಾತೆಗೆ ಬಡ್ಡಿ ಜಮೆಯಾಗುವುದು ನಿಲ್ಲುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಆದರೆ, ಇದು ತಪ್ಪು ಎಂಬುದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸ್ಪಷ್ಟನೆ ನೀಡಿದೆ. ನಿಮ್ಮ ಪಿಎಫ್ ಖಾತೆಯು ಯುನಿವರ್ಸಲ್ ಅಕೌಂಟ್ ನಂಬರ್ (UAN) ಗೆ ಲಿಂಕ್ ಆಗಿದ್ದರೆ, ಉದ್ಯೋಗ ತೊರೆದ ನಂತರವೂ ಬಡ್ಡಿಯನ್ನು ಗಳಿಸಬಹುದು ಎಂದು ಹೇಳಲಾಗಿದೆ.
ಪಿಎಫ್ ಖಾತೆಗೆ ಬಡ್ಡಿ ಸಿಗುತ್ತಾ?
ನೀವು ಜಸ್ಟ್ ಮೂರು ವರ್ಷಗಳ ಹಿಂದೆ ಅಥವಾ ಒಂದು ದಶಕದ ಮುನ್ನವೇ ಕೆಲಸ ತೊರೆದಿದ್ದರೂ ಸಹ, ಪಿಎಫ್ ಖಾತೆಯು 58 ವರ್ಷ ವಯಸ್ಸಾಗುವವರೆಗೆ ಅಥವಾ ಸಂಪೂರ್ಣ ನಿಧಿಯನ್ನು ಹಿಂಪಡೆಯುವವರೆಗೆ ವಾರ್ಷಿಕವಾಗಿ ಬಡ್ಡಿ ಜಮೆಯಾಗುತ್ತಿರುತ್ತದೆ ಎಂದು ಹೇಳಲಾಗಿದೆ. EPFO ಮಾಹಿತಿಯಂತೆ, ಉದ್ಯೋಗಿ ಕೆಲಸ ಬಿಟ್ಟ 36 ತಿಂಗಳವರೆಗೆ ಖಾತೆಯನ್ನು 'ಸಕ್ರಿಯ' ಎಂದು, ನಂತರ 'ನಿಷ್ಕ್ರಿಯ' ಎಂದು ಡಿವೈಡ್ ಮಾಡಲಾಗುತ್ತದೆ.
ಖಾತೆಯು 'ನಿಷ್ಕ್ರಿಯ' ಸ್ಥಿತಿಯಲ್ಲಿದ್ದರೂ ಬಡ್ಡಿ ಜಮೆಯಾಗುವುದು ನಿಲ್ಲುವುದಿಲ್ಲ ಎನ್ನಲಾಗಿದೆ. ನಿಷ್ಕ್ರಿಯ ಪಿಎಫ್ ಖಾತೆಗಳಿಗೂ ಸಹ EPFO ಘೋಷಿಸುವ ದರದಲ್ಲಿ ಬಡ್ಡಿ ನೀಡಲಾಗುತ್ತದೆ. 2024-25ರ ಆರ್ಥಿಕ ವರ್ಷಕ್ಕೆ, ಇಪಿಎಫ್‌ಒ ಬಡ್ಡಿ ದರವು ಶೇಕಡಾ 8.25 ರಷ್ಟಿದ್ದು, ನಿಮ್ಮ ಉಳಿತಾಯಕ್ಕೆ ಹೆಚ್ಚಿನ ಆದಾಯ ಸಿಗುತ್ತದೆ.
ತೆರಿಗೆ ಕಡ್ಡಾಯ
ಆದರೆ, ಉದ್ಯೋಗಿಗಳು ಇಲ್ಲಿ ಒಂದು ಪ್ರಮುಖ ತೆರಿಗೆ ಅಂಶವನ್ನು ಗಮನಿಸಬೇಕು. ಕೆಲಸ ತೊರೆದ ನಂತರ ಪಿಎಫ್ ಬಾಕಿಯ ಮೇಲೆ ಗಳಿಸಿದ ಬಡ್ಡಿಯನ್ನು 'ಇತರ ಮೂಲಗಳಿಂದ ಆದಾಯ' ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ತೆರಿಗೆ ನಿಯಮಕ್ಕೂ ಒಳಪಡುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಗಳಿಸಿದ ಬಡ್ಡಿಯು ₹50,000 ಮೀರಿದರೆ ಮಾತ್ರ ಮೂಲದಲ್ಲಿ ತೆರಿಗೆ ಕಡಿತ (TDS) ಅನ್ವಯವಾಗುತ್ತದೆ.
EPFO ತನ್ನ ಸದಸ್ಯರಿಗೆ ಎಲ್ಲಾ ಹಳೆಯ ಪಿಎಫ್ ಖಾತೆಗಳನ್ನು ಪ್ರಸ್ತುತ UAN ಗೆ 'ಒಂದು ಸದಸ್ಯ, ಒಂದು ಪಿಎಫ್ ಖಾತೆ' ಸೌಲಭ್ಯದ ಮೂಲಕ ಲಿಂಕ್ ಮಾಡಲು ಸಲಹೆ ನೀಡುತ್ತದೆ. ಇದರಿಂದ ಸುಲಭವಾಗಿ ಟ್ರ್ಯಾಕ್ ಮಾಡಲು, ಬಡ್ಡಿ ನಿರಂತರವಾಗಿ ಜಮೆಯಾಗುವುದನ್ನು ತಿಳಿಯಲು ಮತ್ತು ಹಣ ರಿಫಂಡ್ ಬಗ್ಗೆ ತಿಳಿಯಲು ಸುಲಭವಾಗುತ್ತದೆ. ಉತ್ತಮ ಬಡ್ಡಿಯೊಂದಿಗೆ, ನಿಯಮಿತ ಉಳಿತಾಯ ಖಾತೆಯಾಗಿ ಪಿಎಫ್ ಇಂದು ಭಾರೀ ಜನಪ್ರಿಯತೆ ಹೊಂದಿದೆ.


Click it and Unblock the Notifications