ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು ಗಾದೆಯನ್ನು ಎಲ್ಲರೂ ಕೇಳಿರಬಹುದು. ಏಕೆಂದರೆ ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ ಇದು. ಭಾರತೀಯರಲ್ಲಿ ಮದುವೆ ಅನ್ನೋದು ಕೇವಲ ಆಚರಣೆ ಅಷ್ಟೇ ಅಲ್ಲದೇ, ಹಣಕಾಸು ವಿಚಾರದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಇನ್ನು ಈಗಿನ ಮದುವೆಗಳು (Marriage) ಸಂಪ್ರದಾಯದ ಜೊತೆಗೆ ಖರ್ಚು ಕೂಡಾ ಜಾಸ್ತಿಯೇ ಇರುತ್ತೆ. ಚಿನ್ನ, ಹಾಲ್, ಊಟ ಹೀಗೆ ಅನೇಕ ಖರ್ಚುಗಳು ಕುಟುಂಬದ ಮೇಲೆ ಬರುತ್ತೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ವಿವಾಹದ ಸರಾಸರಿ ವೆಚ್ಚ ರೂ. 10 ಲಕ್ಷದಿಂದ ರೂ. 25 ಲಕ್ಷದವರೆಗೆ ಇರುತ್ತದೆ ಎನ್ನಲಾಗಿದೆ. ಆದರೆ ಇಷ್ಟೊಂದು ಹಣ ಎಲ್ಲರಲ್ಲೂ ಇರಲ್ಲ. ಹೆಚ್ಚಿನವರು ವೈಯಕ್ತಿಕ ಸಾಲಕ್ಕೇ (Loan) ಅಥವಾ ಇತರ ಬ್ಯಾಂಕ್ ಸಾಲಗಳ ಮೊರೆ ಹೋಗುತ್ತಾರೆ. ಆದ್ರೆ ಸಾಲ ಮಾಡದೆಯೇ ನೀವು ಮದುವೆಯಾಗಬಹುದು. ಅದಕ್ಕಾಗಿ ಈ ಇಲ್ಲಿದೆ ನೋಡಿ ಟಿಪ್ಸ್.

ಹೆಚ್ಚಿನವರು ಮನೆಯಲ್ಲಿ ಒಂದು ಕಾರ್ಯಕ್ರಮ ಮಾಡುವುದಕ್ಕೆ 1 ರಿಂದ 2 ಲಕ್ಷದಷ್ಟು ಸಾಲ ಮಾಡುತ್ತಾರೆ. ಆದ್ರೆ ಕಾಲ ಕಳೆದಂತೆ ಇದೇ ಸಾಲ ನಿಮಗೆ ದೊಡ್ಡ ಹೊರೆಯಾಗಬಹುದು. ಆದ್ದರಿಂದ ಸಾಲ ಮಾಡೋದನ್ನು ಆದಷ್ಟು ತಪ್ಪಿಸಿ ಅಂತಾರೆ ತಜ್ಞರು.
ಸಾಲ ತೆಗೆದುಕೊಳ್ಳದೆಯೆ ಮದುವೆಯಾಗಬಹುದು ಅಂದ್ರೆ ಎಲ್ಲರೂ ಆಶ್ಚರ್ಯಪಡುತ್ತಾರೆ. ಆದ್ರೆ ಇದು ನಿಜ. ಅನಗತ್ಯ ಖರ್ಚುಗಳನ್ನು ಮಾಡದೆ, ಸರಿಯಾಗಿ ಬಜೆಟ್ ಪ್ಲಾನ್ ಮಾಡಿದ್ರೆ ಮೊದಲೇ ನಿಮಗೊಂದು ಐಡಿಯಾ ಬರುತ್ತೆ.
ಬಜೆಟ್ ಪ್ಲಾನ್ ಮಾಡಿ:
ಮದುವೆಗೂ ಮುನ್ನವೇ, ನಿಮ್ಮ ಕಾರ್ಯಕ್ರಮಕ್ಕೆ ಬೇಕಾದ ಅಂದಾಜು ಬಜೆಟ್ ಪ್ಲಾನ್ ರೆಡಿ ಮಾಡಿಕೊಳ್ಳಬೇಕು. ಇದರಲ್ಲಿ ವಧು-ವರರು ಮತ್ತು ಅವರ ಕುಟುಂಬದವರು ಸೇರಿಕೊಂಡು ತಮ್ಮ ಒಟ್ಟು ಖರ್ಚಿನ ಮಿತಿಯನ್ನು ನಿರ್ಧರಿಸಬೇಕು. ನಂತರ ನೀವು ಪ್ಲಾನ್ ಮಾಡಿದ ಬಜೆಟ್‌ನಲ್ಲಿ ಯಾವುದಕ್ಕೆ ಎಷ್ಟೆಷ್ಟು ಹಣ ಬೇಕಾಗುತ್ತೆ ಎಂಬುದನ್ನು ಲೆಕ್ಕಹಾಕಬೇಕು. (ಉದಾಹರಣೆಗೆ, ಸ್ಥಳ, ಆಹಾರ, ಬಟ್ಟೆ, ಆಭರಣ, ಡೆಕೋರೇಷನ್, ಛಾಯಾಗ್ರಹಣ). ಈ ಸಂದರ್ಭದಲ್ಲಿ ಒಂದು ರೀತಿಯಲ್ಲಿ ನಿಮ್ಮ ಮದುವೆ ಖರ್ಚಿನ ಬಗ್ಗೆ ಅರಿವಾಗುತ್ತದೆ.
ಖರ್ಚಿನ ಬಗ್ಗೆ ಪ್ಲಾನ್ ಮಾಡಿ:
ಮೊದಲಿಗೆ, ಮದುವೆಯಾಗುವ ಸ್ಥಳ ಮತ್ತು ಮದುವೆಯಲ್ಲೊ ನೀಡುವ ಆಹಾರದ ಬಗ್ಗೆ ಪ್ಲಾನ್ ಮಾಡಿ. ಜೊತೆಗೆ ಮದುವೆಗೆ ಆಹ್ವಾನಿಸುವ ಜನರ ಬಗ್ಗೆಯೂ ಲೆಕ್ಕಾಚಾರ ಹಾಕಬೇಕು. ಇದರಿಂದ ಆಹಾರದ ಲೆಕ್ಕವನ್ನೂ ಸರಿದೂಗಿಸಬಹುದು. ಇನ್ನು ಯಾವುದೇ ಐಷಾರಾಮಿ ರೆಸಾರ್ಟ್, ಲಕ್ಸುರಿ ಹಾಲ್‌ಗಳನ್ನು ಬುಕ್ ಮಾಡುವ ಬದಲಿಗೆ, ಯಾವುದಾದರೂ ಸ್ಥಳೀಯವಾಗಿರುವ, ಹತ್ತಿರದ ಸಭಾಂಗಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಇಲ್ಲಿ ಟ್ರಾವೆಲ್ ಖರ್ಚು ಕೂಡಾ ಉಳಿಯುತ್ತದೆ. ಇನ್ನು ಆಹಾರದ ವಿಷಯದಲ್ಲಿ ನಿಮ್ಮ ಪರಿಚಯಸ್ಥರಲ್ಲೇ ಹೇಳುವುದು ಉತ್ತಮ. ಕಡಿಮೆ ಆಹಾರ ಮೆನು ನೀಡಿ. ಕ್ಯಾಟರಿಂಗ್ ಹೇಳುವ ಬದಲಿಗೆ ನೀವೇ ಅಡುಗೆಗೆ ಜನ ಮಾಡಿದ್ರೆ ಒಳ್ಳೆಯದು.
ಬಟ್ಟೆ ಮತ್ತು ಆಭರಣದ ಖರ್ಚು:
ಸಭಾಂಗಣ, ಆಹಾರದ ನಂತರ ಮದುವೆಗೆ ಬೇಕಾಗುವ ಬಟ್ಟೆ ಮತ್ತು ಆಭರಣಗಳ ಖರ್ಚಿನ ಬಗ್ಗೆ ಲೆಕ್ಕ ಹಾಕಿ. ದುಬಾರಿ ಡಿಸೈನರ್ ಉಡುಪುಗಳ ಬದಲಿಗೆ, ಕಡಿಮೆ ಬೆಲೆಯಲ್ಲಿ ಯಾರು ಮಾಡುತ್ತಾರೆ ಎಂದು ನೋಡಿಕೊಂಡು ತಯಾರಿಸಿ. ಮದುವೆ ಸಂದರ್ಭದಲ್ಲಿ ಆಭರಣಗಳಿಗೆ ಹೂಡಿಕೆ ಮಾಡುವ ಬದಲಿಗೆ, ಮೊದಲೇ ಚಿನ್ನಾಭರಣಗಳ ಮೇಲೆ ಹೂಡಿಕೆ ಮಾಡಿಟ್ಟುಕೊಳ್ಳಿ. ಚಿನ್ನ, ಬೆಳ್ಳಿ ಮೇಲಿನ ಹೂಡಿಕೆ ಎಂದಿಗೂ ಸುರಕ್ಷಿತ. ಇನ್ನು ಫೋಟೋಗ್ರಾಫಿ, ವಿಡಿಯೋಗ್ರಾಫಿ ವಿಷಯದಲ್ಲಿ ನಿಮ್ಮ ಬಜೆಟ್‌ಗೆ ತಕ್ಕಂತೆ ಯಾರು ಒಪ್ಪಿಕೊಳ್ಳುತ್ತಾರೋ ಅವರನ್ನೇ ಆಯ್ಕೆ ಮಾಡಿ.
ಮದುವೆಗೆ ಸಂಬಂಧಿಸಿದ ಯಾವುದೇ ಸಣ್ಣಪುಟ್ಟ ಖರ್ಚುಗಳಿಗೂ ಬಜೆಟ್ ಪ್ಲಾನ್ ಮಾಡಲೇಬೇಕು. ಆಹ್ವಾನ ಪತ್ರಿಕೆಯಿಂದ ಹಿಡಿದು ಮದುವೆ ಮಂಟಪದವರೆಗೂ ಎಷ್ಟು ಖರ್ಚಾಗುತ್ತೆ ಎಂದು ಮೊದಲೇ ಪ್ಲಾನ್ ಮಾಡಬೇಕು. ಇದರಿಂದ ನಿಮಗೂ ವೆಚ್ಚದ ಬಗ್ಗೆ ಅರಿವಿರುತ್ತದೆ. ಸಾಲ ಮಾಡಬೇಕೋ ಅಥವಾ ಮಾಡಬಾರದೋ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.


Click it and Unblock the Notifications