ಇತ್ತೀಚೆಗೆ ಚಿನ್ನ-ಬೆಳ್ಳಿ ದರಗಳು (Gold-Silver Rate) ಏರಿಳಿತಗಳನ್ನು ಕಾಣುತ್ತಲೇ ಇದೆ. ಅದರಲ್ಲೂ ಕಳೆದ ತಿಂಗಳಂತೂ ಚಿನ್ನ ಮತ್ತು ಬೆಳ್ಳಿ ದರಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು. ಅದೇ ಕಾರಣದಿಂದ ಹೆಚ್ಚಿನವರು ಲಾಭ ಪಡೆಯುವ ನಿಟ್ಟಿನಲ್ಲಿ, ತಮ್ಮಲ್ಲಿದ್ದ ಚಿನ್ನ, ಬೆಳ್ಳಿಯನ್ನು ಮಾರಾಟ ಮಾಡಿದ್ದಾರೆ. ಕೆಲವರು ಆಭರಣಗಳನ್ನು ಮಾರಾಟ ಮಾಡಿದ್ರೆ, ಇನ್ನೂ ಕೆಲವರು ಸ್ಟಾಕ್, ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್‌ಗಳ ಮೂಲಕ ಮಾರಾಟ ಮಾಡಿದ್ದಾರೆ. ಆದ್ರೆ ಯಾರೇ ಆಗಲಿ ಮಾರಾಟ ಮಾಡುವ ಮುನ್ನ ತೆರಿಗೆ ನಿಯಮಗಳನ್ನು (Tax Rules) ತಿಳಿದುಕೊಳ್ಳಬೇಕು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಮೂಲ್ಯ ಲೋಹಗಳ ಮೇಲಿನ ತೆರಿಗೆ ಒಂದೇ ವಿಧಾನವನ್ನು ಅನುಸರಿಸುವುದಿಲ್ಲ. ಬದಲಿಗೆ, ನೀವು ಅವುಗಳನ್ನು ಹೇಗೆ ಇಟ್ಟುಕೊಂಡಿದ್ದೀರಿ, ಎಷ್ಟು ಅವಧಿಯವರೆಗೆ ಇಟ್ಟುಕೊಂಡಿದ್ದೀರಿ ಮತ್ತು ಯಾವ ರೀತಿಯಲ್ಲಿ ಮಾರಾಟ ಮಾಡುತ್ತೀರಿ ಎಂಬುದರ ಮೇಲೆ ತೆರಿಗೆ ನಿಯಮಗಳು ನಿರ್ಧಾರವಾಗುತ್ತವೆ. ನಿಮ್ಮ ಅವಧಿಗೆ ತಕ್ಕಂತೆ ತೆರಿಗರ ನಿಯಮಗಳು ಬದಲಾಗಬಹುದು.
ಭಾರತೀಯರು ಚಿನ್ನ ಮತ್ತು ಬೆಳ್ಳಿಯಲ್ಲಿ ಹಲವು ವಿಧಗಳಲ್ಲಿ ಹೂಡಿಕೆ ಮಾಡುತ್ತಾರೆ. ಕೆಲವರು ಆಭರಣ, ನಾಣ್ಯಗಳ ಮೇಲೆ ಹೂಡಿಕೆ ಮಾಡಲು ಬಯಸಿದರೆ, ಇನ್ನು ಕೆಲವರು ಡಿಜಿಟಲ್ ಚಿನ್ನ ಖರೀದಿಸುತ್ತಾರೆ. ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್‌ಗಳು (ETF), ಚಿನ್ನ/ಬೆಳ್ಳಿ ಮ್ಯೂಚುವಲ್ ಫಂಡ್‌ಗಳು ಮತ್ತು ಸಾವರಿನ್ ಗೋಲ್ಡ್ ಬಾಂಡ್‌ಗಳು (SGB) ಕೂಡ ಹೂಡಿಕೆಗಳಲ್ಲಿ ಜನಪ್ರಿಯವಾಗಿದೆ. ಪ್ರತಿ ಆಯ್ಕೆಗೂ ವಿಭಿನ್ನ ವೆಚ್ಚ, ಲಿಕ್ವಿಡಿಟಿ ಮತ್ತು ತೆರಿಗೆ ನಿಯಮಗಳಿರುವುದರಿಂದ, ಮಾರಾಟದ ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.
ಇಟಿಎಫ್‌ನಲ್ಲಿ ತೆರಿಗೆ ನಿಯಮಗಳು:
ನೀವು ಚಿನ್ನ ಅಥವಾ ಬೆಳ್ಳಿ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿ ಒಂದು ವರ್ಷಕ್ಕೂ ಹೆಚ್ಚು ಕಾಲ ಇಟ್ಟುಕೊಂಡರೆ, ನಿಮ್ಮ ಲಾಭಕ್ಕೆ ದೀರ್ಘಾವಧಿಯ ಬಂಡವಾಳ ಲಾಭ (LTCG) ಎಂದು ಪರಿಗಣಿಸಿ, ತೆರಿಗೆಯಾಗಿ 12.5% ವಿಧಿಸಲಾಗುತ್ತದೆ. ಆದರೆ, ಒಂದು ವರ್ಷದೊಳಗೆ ಮಾರಾಟ ಮಾಡಿದರೆ, ಆ ಲಾಭಗಳನ್ನು ಅಲ್ಪಾವಧಿಯ ಬಂಡವಾಳ ಲಾಭ (STCG) ಎಂದು ಪರಿಗಣಿಸಲಾಗುತ್ತದೆ ಮತ್ತು 20% ತೆರಿಗೆ ವಿಧಿಸಲಾಗುತ್ತದೆ.
ಗೋಲ್ಡ್ ಅಥವಾ ಸಿಲ್ವರ್ ಫಂಡ್ ಆಫ್ ಫಂಡ್‌ಗಳು (FoF):
ಚಿನ್ನ ಮತ್ತು ಬೆಳ್ಳಿ ಫಂಡ್ ಆಫ್ ಫಂಡ್‌ಗಳು (FoF) ಇಟಿಎಫ್‌ಗಳಿಗಿಂತ ಭಿನ್ನವಾದ ನಿಯಮಗಳನ್ನು ಹೊಂದಿದೆ. ಇಲ್ಲಿ, 12.5% ಎಲ್‌ಟಿಸಿಜಿ ತೆರಿಗೆಗೆ ಅರ್ಹತೆ ಪಡೆಯಲು ಹೂಡಿಕೆಯನ್ನು ಕನಿಷ್ಠ ಎರಡು ವರ್ಷ ಇಟ್ಟುಕೊಳ್ಳುವುದು ಕಡ್ಡಾಯ. ಎರಡು ವರ್ಷ ಪೂರ್ಣಗೊಳಿಸುವ ಮೊದಲೇ ಮಾರಾಟ ಮಾಡಿದರೆ, ಲಾಭಗಳನ್ನು ನಿಮ್ಮ ಆದಾಯಕ್ಕೆ ಸೇರಿಸಿ ತೆರಿಗೆ ಸ್ಲ್ಯಾಬ್ ಪ್ರಕಾರ ವಿಧಿಸಲಾಗುತ್ತದೆ. ಆದ್ದರಿಂದ ವಹಿವಾಟು, ಮಾರಾಟ ಮಾಡುವ ಮುನ್ನ ಸರಿಯಾಗಿ ಮಾಹಿತಿ ಪಡೆದುಕೊಳ್ಳಿ.
ಅನೇಕ ಈಕ್ವಿಟಿ ಹೂಡಿಕೆದಾರರು ವರ್ಷಕ್ಕೆ 1.25 ಲಕ್ಷ ರೂಪಾಯಿಗಳವರೆಗೆ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ, ಈ ಪ್ರಯೋಜನ ಚಿನ್ನ ಮತ್ತು ಬೆಳ್ಳಿ ಫಂಡ್‌ಗಳಿಗೆ ಅನ್ವಯಿಸುವುದಿಲ್ಲ. ಇವುಗಳನ್ನು ಇಕ್ವಿಟಿ-ಆಧಾರಿತ ಸಾಧನಗಳೆಂದು ವರ್ಗೀಕರಿಸದ ಕಾರಣ, ಆ ವಿನಾಯಿತಿಗೆ ಅರ್ಹತೆ ಪಡೆಯುವುದಿಲ್ಲ. ಹೀಗಾಗಿ, ಚಿನ್ನ ಮತ್ತು ಬೆಳ್ಳಿ ಫಂಡ್‌ಗಳ ಪ್ರತಿ ಲಾಭಾಂಶಕ್ಕೂ ಅನ್ವಯವಾಗುವ ನಿಯಮಗಳ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.
ಒಂದು ವರ್ಷದೊಳಗೆ ಚಿನ್ನ ಅಥವಾ ಬೆಳ್ಳಿ ಇಟಿಎಫ್‌ಗಳು ಅಥವಾ ಫಂಡ್ ಆಫ್ ಫಂಡ್‌ಗಳನ್ನು ಮಾರಾಟ ಮಾಡಿ ಅಲ್ಪಾವಧಿಯ ಬಂಡವಾಳ ನಷ್ಟ ಅನುಭವಿಸಿದರೆ, ಆ ನಷ್ಟವನ್ನು ಷೇರುಗಳು, ಇತರ ಇಟಿಎಫ್‌ಗಳು ಅಥವಾ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳಂತಹ ಇತರೆ ಬಂಡವಾಳ ಸ್ವತ್ತುಗಳಿಂದ ಬಂದ ಅಲ್ಪಾವಧಿಯ ಅಥವಾ ದೀರ್ಘಾವಧಿಯ ಲಾಭಗಳ ವಿರುದ್ಧ ಸರಿಹೊಂದಿಸುವ ಅವಕಾಶವಿದೆ. ಇದರಿಂದ ಒಟ್ಟಾರೆ ತೆರಿಗೆ ಹಣ ಕಡಿಮೆಯಾಗುತ್ತದೆ.
ಕೆಲವು ಹೂಡಿಕೆದಾರರು ಬೆಲೆ ಏರಿಳಿತಗಳಿಂದ ಲಾಭ ಪಡೆಯಲು ಒಂದೇ ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಇಟಿಎಫ್‌ಗಳನ್ನು ವಹಿವಾಟು ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ, ಲಾಭವನ್ನು ಬಂಡವಾಳ ಲಾಭಗಳೆಂದು ಪರಿಗಣಿಸದೆ ಊಹಾತ್ಮಕ ವ್ಯಾಪಾರ ಆದಾಯವೆಂದು ಪರಿಗಣಿಸಲಾಗುತ್ತದೆ. ಈ ಲಾಭಗಳನ್ನು ನಿಮ್ಮ ಒಟ್ಟು ವಾರ್ಷಿಕ ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ದರಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications