ಕೇಂದ್ರ ಸರ್ಕಾರ (Central Govt) ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM Kisan Samman), ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್, ಕಿಸಾನ್ ಕೃಷಿ ಸಿಂಚಾಯಿ ಯೋಜನೆ ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯೂ (PM Kisan Maandhan Yojana) ಒಂದು. ರೈತರು ಈ ಯೋಜನೆ ಮೂಲಕ ತಮ್ಮ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಬಹುದು.

ಕೇಂದ್ರ ಸರ್ಕಾರವು ರೈತರಿಗಾಗಿ (Farmers) ಸೆಪ್ಟೆಂಬರ್ 12, 2019 ರಂದು ಪ್ರಾರಂಭಿಸಿದ ಯೋಜನೆಯೇ ಅದು ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ. ಈ ಸ್ಕೀಮ್ ದೇಶದ ಸಣ್ಣ ಮತ್ತು ಅತಿಸಣ್ಣ ರೈತರಿಗೆ (SMF) ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಸುರಕ್ಷತೆಯನ್ನು ಒದಗಿಸುತ್ತದೆ. ಆದ್ದರಿಂದ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸು ಪೂರೈಸಿದ ರೈತರು ಮಾಸಿಕವಾಗಿ ಕನಿಷ್ಠ ₹3000 ಮಾಸಿಕ ಪಿಂಚಣಿಯನ್ನು ಪಡೆಯಬಹುದು.
ರೈತರ ಬದಲಿಗೆ ಸಂಗಾತಿಗೆ ಪಿಂಚಣಿ:
ಒಂದು ವೇಳೆ ಪಿಂಚಣಿ ಪಡೆಯುತ್ತಿರುವ ಸಂದರ್ಭದಲ್ಲಿ ರೈತರು ಮರಣ ಹೊಂದಿದರೆ, ಅವರ ಸಂಗಾತಿಗೆ ಕುಟುಂಬ ಪಿಂಚಣಿಯಾಗಿ ಶೇಕಡಾ 50 ರಷ್ಟು ಪಿಂಚಣಿ ನೀಡಲಾಗುತ್ತದೆ. ಈ ಪಿಂಚಣಿ ಸಂಗಾತಿಗೆ ಮಾತ್ರ ಅನ್ವಯವಾಗುತ್ತದೆ. ಇದು ಸ್ವಯಂಪ್ರೇರಿತ ಮತ್ತು ಕೊಡುಗೆ ಆಧಾರಿತ ಪಿಂಚಣಿ ಯೋಜನೆಯಾಗಿದ್ದು, 18 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಗಳು ನೋಂದಾಯಿಸಿಕೊಳ್ಳಬಹುದು.
ಕೊಡುಗೆಗೆ ತಕ್ಕ ಪಿಂಚಣಿ:
ಈ ಯೋಜನೆಯ ಸದಸ್ಯರಾಗಲು, ಅರ್ಹ ರೈತರು ಪಿಂಚಣಿ ನಿಧಿಗೆ ಮೊದಲು ಚಂದಾದಾರರಾಗಬೇಕು. ಉದಾಹರಣೆಗೆ, 29 ವರ್ಷಕ್ಕೆ ನೀವು ಈ ಯೋಜನೆಗೆ ಸೇರಲು ಇಚ್ಛಿಸಿದರೆ ಮಾಸಿಕವಾಗಿ ₹100 ರೂ. ಕೊಡುಗೆ ನೀಡಬೇಕು. ಅಲ್ಲದೇ ಕೇಂದ್ರ ಸರ್ಕಾರವು ಕೂಡಾ ಅಷ್ಟೇ ಮೊತ್ತವನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತದೆ. ಈ ಎರಡೂ ಮೊತ್ತಗಳನ್ನು ಜೀವ ವಿಮಾ ನಿಗಮ (LIC) ನಿರ್ವಹಿಸುವ ಪಿಂಚಣಿ ನಿಧಿಯಲ್ಲಿ ಜಮಾ ಮಾಡಲಾಗುತ್ತದೆ. ನಂತರ ಅದು ಪಿಂಚಣಿ ಪಾವತಿಗೆ ಕೊಡುಗೆ ನೀಡಲಾಗುತ್ತದೆ.
ವರ್ಷಕ್ಕೆ 36 ಸಾವಿರ ಪಿಂಚಣಿ ಸೌಲಭ್ಯ:
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಮೂಲಕ ಯಾವುದೇ ಹೆಚ್ಚುವರಿ ಹಣವನ್ನು ಖರ್ಚು ಮಾಡದೆ, 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ಸಿಗಲಿದೆ. ಈ ಮೂಲಕ ರೈತರು ಮನೆಯಲ್ಲೇ ಕೂತು ವರ್ಷಕ್ಕೆ ಒಟ್ಟು ₹36,000 ಹಣ ಪಡೆಯಬಹುದು. ಇನ್ನು ಈ ಯೋಜನೆಯಲ್ಲಿ ರಿಜಿಸ್ಟರ್ ಆಗಲು ಯಾವುದೇ ಹೆಚ್ಚಿನ ದಾಖಲೆಗಳನ್ನು ಸಲ್ಲಿಸಬೇಕಿಲ್ಲ. ಆದ್ದರಿಂದ ರೈತರಿಗೆ ತುಂಬಾನೇ ಸಹಾಯವಾಗಲಿದೆ.
ನೋಂದಣಿ ಮಾಡಿಕೊಳ್ಳುವುದು ಹೇಗೆ?
18 ರಿಂದ 40 ವರ್ಷ ವಯಸ್ಸಿನ ಯಾವುದೇ ರೈತರು ಈ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನೀವು ಈಗಾಗಲೇ ಪಿಎಂ ಕಿಸಾನ್ ಯೋಜನೆಯಲ್ಲಿ ಸೇರಿಕೊಂಡಿದ್ದರೆ, ನಿಮ್ಮ ನೋಂದಣಿ ಪ್ರಕ್ರಿಯೆ ಮತ್ತಷ್ಟು ಸುಲಭವಾಗುತ್ತದೆ.
ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡಿ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಭೂ ದಾಖಲೆಗಳು ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋದೊಂದಿಗೆ ಹೋಗಿ. ಅಲ್ಲಿ ನೀವು ಆನ್‌ಲೈನ್ ಮೂಲಕ ಈ ಯೋಜನೆಯ ಫಾರ್ಮ್ ಭರ್ತಿ ಮಾಡಬಹುದು ಮತ್ತು ನಿಮ್ಮ ಬ್ಯಾಂಕ್ ಖಾತೆಯಿಂದ ಮಾಸಿಕ ಮೊತ್ತವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸುವ ಫಾರ್ಮ್ ಅನ್ನು ನೀಡಲಾಗುತ್ತದೆ.
ಆ ಪ್ರಕಾರ ನಿಮ್ಮ ವಯಸ್ಸಿಗೆ ತಕ್ಕಂತೆ ಪ್ರತಿ ತಿಂಗಳು ₹55 ರಿಂದ ₹200 ರೂ. ಕಡಿತವಾಗುತ್ತದೆ. ಇದು ನಿಮ್ಮ ಖಾತೆಯಿಂದಲೇ ಡೆಬಿಟ್ ಆಗುತ್ತದೆ.
ಉದಾಹರಣೆಗೆ, ನೀವು 40 ವರ್ಷ ವಯಸ್ಸಿನಲ್ಲಿ ನೋಂದಾವಣೆ ಮಾಡಿಕೊಂಡರೆ, ನೀವು ಮಾಸಿಕವಾಗಿ ₹200 ರೂ. ಪಾವತಿಸಬೇಕು. ಈ ಮೂಲಕ ವರ್ಷಕ್ಕೆ ₹2,400 ರೂ. ಪಾವತಿ ಮಾಡಬೇಕು. ಈ ಮೂಲಕ ನಿಮ್ಮ ವೃದ್ಧಾಪ್ಯದಲ್ಲಿ ಪಿಂಚಣಿಗಾಗಿ ಯಾವುದೇ ಹೆಚ್ಚುವರಿ ಹಣ ಹಾಕದೇ ಸೌಲಭ್ಯ ಪಡೆಯಬಹುದು.


Click it and Unblock the Notifications