ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರಗಳನ್ನು ಸರ್ಕಾರವು 20 ಮೂಲಾಂಕ ಏರಿಸಿದೆ. ಹಾಗೆಯೇ ಮೂರು ವರ್ಷಗಳ ಟರ್ಮ್ ಡೆಪಾಸಿಟ್ ಯೋಜನೆಯ ಬಡ್ಡಿದರಗಳನ್ನು 10 ಮೂಲಾಂಕ ಹೆಚ್ಚಳ ಮಾಡಲಾಗುತ್ತದೆ ಎಂದು ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ.
ಆದರೆ ಇತರ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರಗಳನ್ನು ಕೇಂದ್ರ ಸರ್ಕಾರವು ಸ್ಥಿರವಾಗಿ ಉಳಿಸಿಕೊಂಡಿದೆ. ಶುಕ್ರವಾರ ಹಣಕಾಸು ಸಚಿವಾಲಯ ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯ ಪ್ರಕಾರ ಸುಕನ್ಯಾ ಸಮೃದ್ಧಿ ಯೋಜನೆಯಡಿ ಡೆಪಾಸಿಟ್‌ನ ಬಡ್ಡಿದರವನ್ನು ಶೇಕಡ 8 ರಿಂದ ಶೇಕಡ 8.2 ಕ್ಕೆ ಏರಿಕೆ ಮಾಡಲಾಗಿದೆ.

ಈ ನಡುವೆ 3 ವರ್ಷಗಳ ಟರ್ಮ್ ಡೆಪಾಸಿಟ್‌ನ ಅಸ್ತಿತ್ವದಲ್ಲಿರುವ ಶೇಕಡ 7 ಬಡ್ಡಿದರವನ್ನು ಶೇಕಡ 7.1 ಕ್ಕೆ ಏರಿಕೆ ಮಾಡಲಾಗಿದೆ. ಇನ್ನು ಪ್ರಸಿದ್ಧವಾದ ಪಿಪಿಎಫ್ ಮತ್ತು ಉಳಿತಾಯ ಡೆಪಾಸಿಟ್‌ಗಳ ಬಡ್ಡಿದರವನ್ನು ಕ್ರಮವಾಗಿ ಶೇಕಡ 7.1 ಮತ್ತು ಶೇಕಡ 4 ರಷ್ಟು ಉಳಿಸಿಕೊಳ್ಳಲಾಗಿದೆ ಎಂದು ಸರ್ಕಾರ ಉಲ್ಲೇಖಿಸಿದೆ. ಪಿಟಿಐ ವರದಿಯ ಪ್ರಕಾರ ಡಿಸೆಂಬರ್ ತ್ರೈಮಾಸಿಕದಲ್ಲಿ ದರಗಳು ಒಂದೇ ಆಗಿದ್ದವು.
ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ದರವು ಶೇಕಡ 7.5 ಆಗಿದ್ದು, 115 ತಿಂಗಳುಗಳಲ್ಲಿ ಹೂಡಿಕೆಗಳು ಮೆಚ್ಯೂರ್ ಆಗುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ (ಎನ್‌ಎಸ್‌ಸಿ) ಬಡ್ಡಿ ದರವು ಜನವರಿ 1 ರಿಂದ ಮಾರ್ಚ್ 31, 2024 ರ ಅವಧಿಯವರೆಗೆ ಶೇಕಡ 7.7 ರಲ್ಲಿ ಸ್ಥಿರವಾಗಿ ಇರಿಸಲಾಗಿದೆ.
ಈ ನಡುವೆ ಮಾಸಿಕ ಆದಾಯ ಯೋಜನೆಗೆ ಬಡ್ಡಿದರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಈ ಯೋಜನೆಯಲ್ಲಿ ಹೂಡಿಕೆದಾರರು ಶೇಕಡ 7.4 ಬಡ್ಡಿದರವನ್ನು ಗಳಿಸಬಹುದು ಎಂದು ಪಿಟಿಐ ವರದಿ ಮಾಡಿದೆ. ಮುಖ್ಯವಾಗಿ ಅಂಚೆ ಕಚೇರಿಯಲ್ಲಿ ನಿರ್ವಹಣೆ ಮಾಡಲಾಗುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ತಿಳಿಸುತ್ತದೆ.
ಮೇ 2022 ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಲದ ಬಡ್ಡಿದರವನ್ನು ಶೇಕಡ 2.5ರಿಂದ ಶೇಕಡ 6.5ಕ್ಕೆ ಹೆಚ್ಚಳ ಮಾಡಿದೆ. ಡೆಪಾಸಿಟ್‌ಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲು ಬ್ಯಾಂಕುಗಳನ್ನು ಪ್ರೇರೇಪಿಸಿದೆ ಎಂದು ಪಿಟಿಐ ವರದಿ ಸೇರಿಸಲಾಗಿದೆ. ಆರ್‌ಬಿಐ ಈ ವರ್ಷದ ಫೆಬ್ರವರಿಯಿಂದ ಕಳೆದ ಐದು ಸತತ ಹಣಕಾಸು ನೀತಿ ಸಮಿತಿ ಸಭೆಗಳಲ್ಲಿ ನೀತಿ ದರದ ಮೇಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?
ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಹೆಣ್ಣು ಮಗು ಮತ್ತು ಅವಳ ಆರ್ಥಿಕ ಅಗತ್ಯಗಳಿಗಾಗಿ ಸರ್ಕಾರದ ಬೆಂಬಲಿತ ಸಣ್ಣ ಡೆಪಾಸಿಟ್ ಯೋಜನೆಯಾಗಿದೆ. 'ಭೇಟಿ ಬಚಾವೋ ಭೇಟಿ ಪಢಾವೋ' ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನವನ್ನು ನೀಡುತ್ತದೆ. ಯೋಜನೆಯಿಂದ ಸಿಗುವ ಬಡ್ಡಿ ಅಥವಾ ಉಳಿತಾಯ ಹಣಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಕೂಡ ಇರುವುದಿಲ್ಲ.
ಖಾತೆಯನ್ನು ಯಾವಾಗ ತೆರೆಯಬಹುದು?
ಹೆಣ್ಣು ಮಗುವಿನ ಜನನದ ನಂತರ ಆಕೆ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು, ಅಲ್ಲಿ ನೀವು ಕನಿಷ್ಟ 250 ರೂಪಾಯಿಗಳನ್ನು ಡೆಪಾಸಿಟ್ ಮಾಡಬೇಕಾಗುತ್ತದೆ. ನಂತರದ ವರ್ಷಗಳಲ್ಲಿ, ಕನಿಷ್ಠ 250 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ. ಒಂದು ಆರ್ಥಿಕ ವರ್ಷದಲ್ಲಿ ಡೆಪಾಸಿಟ್ ಇಡಬೇಕು.
ಖಾತೆಯು ಪ್ರಾರಂಭವಾದ ದಿನಾಂಕದಿಂದ 21 ವರ್ಷಗಳವರೆಗೆ ಅಥವಾ ಹುಡುಗಿಗೆ 18 ವರ್ಷ ತುಂಬಿದ ನಂತರ ಅವಳ ಮದುವೆಯವರೆಗೆ ಕಾರ್ಯನಿರ್ವಹಿಸುತ್ತದೆ. ಮಗುವಿನ ಉನ್ನತ ಶಿಕ್ಷಣದ ವೆಚ್ಚದ ಅಗತ್ಯವನ್ನು ಪೂರೈಸಲು, ಆಕೆಗೆ 18 ವರ್ಷ ತುಂಬಿದ ನಂತರ ಅವಶ್ಯಕತೆ ಇದ್ದರೆ ನೀವು ಅರ್ಧ ಹಣವನ್ನು ವಾಪಸ್ ಕೂಡ ಪಡೆಯಬಹುದು.


Click it and Unblock the Notifications