ನವದೆಹಲಿಯಲ್ಲಿ ಅಕ್ಟೋಬರ್ 7 ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿಯ (GST Council) ಪ್ರಮುಖ ಸಭೆಗೂ ಮುನ್ನವೇ ಒಂದು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಜಿಎಸ್‌ಟಿಗೆ ಸಂಬಂಧಿಸಿದಂತೆ ತೆರಿಗೆ ಅಧಿಕಾರಿಗಳಿಗಿರುವ ಬಂಧನದ ಅಧಿಕಾರವನ್ನು ರದ್ದುಗೊಳಿಸುವ ಕುರಿತು ಭಾನುವಾರ ಮಹತ್ವದ ಪ್ರಸ್ತಾವನೆಯೊಂದು ಮುನ್ನೆಲೆಗೆ ಬಂದಿದೆ. ಮೂಲಗಳ ಪ್ರಕಾರ, ಕೆಲವು ನಿರ್ದಿಷ್ಟ ಉಲ್ಲಂಘನೆಗಳನ್ನು 'ಅಪರಾಧ' ಪಟ್ಟಿಯಿಂದ ಕೈಬಿಡುವ (decriminalisation) ವಿಷಯ ಚರ್ಚೆಯ ಪಟ್ಟಿಯಲ್ಲಿದೆ. ಇದರಿಂದ ದಂಡದ ನಿಯಮಗಳು ಮುಂದುವರಿದರೂ, ಜೈಲು ಶಿಕ್ಷೆ ಅಥವಾ ಕಾನೂನು ಕ್ರಮದ ಭೀತಿ ಕಡಿಮೆಯಾಗಲಿದೆ. ಸಣ್ಣ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಇದು ಅತ್ಯಂತ ಪ್ರಮುಖ ಸುದ್ದಿಯಾಗಿದೆ. ಆದರೆ, ಮಂಡಳಿಯ ಅಧಿಕೃತ ನಿರ್ಧಾರ ಮತ್ತು ಸರ್ಕಾರಿ ಸೂಚನೆ (Notification) ಹೊರಬಿದ್ದ ನಂತರವೇ ಈ ಹೊಸ ನಿಯಮ ಜಾರಿಗೆ ಬರಲಿದೆ.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST) ಕಾಯ್ದೆಯ ಸೆಕ್ಷನ್ 69 ರ ಅಡಿಯಲ್ಲಿ ನೀಡಿರುವ ಬಂಧನದ ಅಧಿಕಾರವನ್ನು ಹಿಂಪಡೆಯುವುದು ಈ ಪ್ರಸ್ತಾವನೆಯ ಮುಖ್ಯ ಉದ್ದೇಶ. ಆದರೆ ತನಿಖೆ, ತೆರಿಗೆ ಮೌಲ್ಯಮಾಪನ ಮತ್ತು ದಂಡ ವಿಧಿಸುವ ಪ್ರಕ್ರಿಯೆಗಳು ಯಥಾವತ್ತಾಗಿ ಮುಂದುವರಿಯಲಿವೆ. ಈ ನಿಯಮ ರದ್ದುಗೊಳ್ಳಬೇಕಾದರೆ ಜಿಎಸ್‌ಟಿ ಮಂಡಳಿಯ ಅನುಮೋದನೆ ಹಾಗೂ ಸಂಸತ್ತಿನಲ್ಲಿ ಕಾನೂನು ತಿದ್ದುಪಡಿ ಅಗತ್ಯ. ಸಭೆಯಲ್ಲಿ ಪ್ರಕ್ರಿಯಾತ್ಮಕ ಸುಧಾರಣೆ ತರುವುದಾಗಿ ಸರ್ಕಾರ ಮುಂಚಿತವಾಗಿಯೇ ಸುಳಿವು ನೀಡಿತ್ತು. ಸದ್ಯ ಜಿಎಸ್‌ಟಿ ಮಂಡಳಿಯ ಅಧಿಕೃತ ಅಜೆಂಡಾ ಹಾಗೂ ಸಿಬಿಐಸಿ (CBIC) ನೀಡಲಿರುವ ಸ್ಪಷ್ಟೀಕರಣಗಳಿಗಾಗಿ ಕಾಯಲಾಗುತ್ತಿದೆ.

ಜಿಎಸ್‌ಟಿ ಮಂಡಳಿಯಿಂದ ಬಂಧನದ ಅಧಿಕಾರ ರದ್ದು ಸಾಧ್ಯತೆ: ಇದರಿಂದ ಏನೇನು ಬದಲಾಗಲಿದೆ?
ಇತ್ತೀಚಿನ ದಿನಗಳಲ್ಲಿ ಜಿಎಸ್‌ಟಿ ಅಡಿಯಲ್ಲಿ ಬಂಧಿಸುವ ಅಧಿಕಾರವು ನ್ಯಾಯಾಲಯಗಳ ಕಟ್ಟುನಿಟ್ಟಿನ ಪರಿಶೀಲನೆಗೆ ಒಳಪಟ್ಟಿದೆ. ಮುಂಗಡ ಜಾಮೀನು ಅರ್ಜಿ ವಿಚಾರಣೆಗೂ ಮುನ್ನವೇ ಬಂಧನದ ಕಾರಣಗಳನ್ನು ತಿಳಿಸುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿತ್ತು. ಅಷ್ಟೇ ಅಲ್ಲ, ತನಿಖೆ ಪೂರ್ಣಗೊಳ್ಳುವ ಮುನ್ನ ಬಂಧಿಸಲು ಬಲವಾದ ಸೂಕ್ತ ಕಾರಣಗಳಿರಬೇಕು ಎಂದೂ ನ್ಯಾಯಾಲಯಗಳು ಸ್ಪಷ್ಟಪಡಿಸಿದ್ದವು. ಇಷ್ಟೆಲ್ಲಾ ಮುನ್ನೆಚ್ಚರಿಕೆಗಳಿದ್ದರೂ, ತೆರಿಗೆ ಅಧಿಕಾರಿಗಳ ಕಠಿಣ ನಡವಳಿಕೆಯ ಭಯದಿಂದಾಗಿ ಉದ್ಯಮಿಗಳಿಗೆ ವರ್ಕಿಂಗ್ ಕ್ಯಾಪಿಟಲ್ ನಿರ್ವಹಣೆ ಕಷ್ಟವಾಗುತ್ತಿತ್ತು. ಈಗ ಬಂಧನದ ಭಯವನ್ನು ತೆಗೆದುಹಾಕಿದರೆ, ದಂಡದ ನಿಯಮಗಳು ಜಾರಿಯಲ್ಲಿದ್ದರೂ ಉದ್ಯಮಿಗಳು ನಿರಾಳವಾಗಿ ವ್ಯಾಪಾರ ನಡೆಸಬಹುದಾಗಿದೆ.
ಬಂಧನದ ಅಧಿಕಾರ ರದ್ದಾದರೆ ಯಾರಿಗೆ ಲಾಭ? ಉದ್ಯಮಿಗಳು ಈಗ ಏನು ಮಾಡಬೇಕು?
ಈ ನಿರ್ಧಾರದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME), ಆನ್‌ಲೈನ್ ಮಾರ್ಕೆಟ್‌ಪ್ಲೇಸ್‌ಗಳು ಹಾಗೂ ಫಿನ್‌ಟೆಕ್ ಮಾರಾಟಗಾರರಿಗೆ ತಕ್ಷಣದ ಪರಿಹಾರ ಸಿಗಲಿದೆ. ಇ-ಕಾಮರ್ಸ್ ವ್ಯಾಪಾರಿಗಳು ಹೆಚ್ಚಾಗಿ ಸಪ್ಲೈಯರ್‌ಗಳ ಲೋಪ ಹಾಗೂ ನಕಲಿ ಇನ್‌ವಾಯ್ಸ್‌ಗಳಿಂದಾಗಿ ಅನಗತ್ಯ ತೊಂದರೆ ಅನುಭವಿಸುತ್ತಿದ್ದರು. ಹೊಸ 'ಸಿವಿಲ್ ಫಸ್ಟ್' (Civil-first) ವಿಧಾನವು ವ್ಯಾಜ್ಯಗಳನ್ನು ಸುಲಭವಾಗಿ ಬಗೆಹರಿಸಲು ನೆರವಾಗಲಿದ್ದು, ಉದ್ಯಮಕ್ಕೆ ಉಂಟಾಗುವ ಅಡಚಣೆಗಳನ್ನು ತಪ್ಪಿಸಲಿದೆ. ಪ್ರತ್ಯಕ್ಷ ತೆರಿಗೆಗಳಲ್ಲೂ (Direct Tax) ಇಂತಹದೇ ಸುಧಾರಣೆ ತರಲಾಗಿತ್ತು. ಕಳೆದ ತಿಂಗಳಷ್ಟೇ CBDT ತನ್ನ ವಸೂಲಾತಿ ನಿಯಮಗಳಿಂದ ಬಂಧನದ ಪ್ರಕ್ರಿಯೆಯನ್ನು ತೆಗೆದುಹಾಕಿತ್ತು. ಅದೇ ಮಾದರಿಯನ್ನು ಈಗ ಪರೋಕ್ಷ ತೆರಿಗೆಯಲ್ಲೂ (Indirect Tax) ತರಲು ಹೊರಟಿರುವುದು ಉದ್ಯಮ ಕ್ಷೇತ್ರಕ್ಕೆ ಹೊಸ ಭರವಸೆ ನೀಡಿದೆ.
ಜಿಎಸ್‌ಟಿ ಮಂಡಳಿಯ ಅಧಿಕೃತ ನಿರ್ಧಾರ ಮತ್ತು ಸರ್ಕಾರಿ ಗೆಜೆಟ್ ಅಧಿಸೂಚನೆ ಬರುವವರೆಗೂ ಉದ್ಯಮಿಗಳು ತಮ್ಮ ಪ್ರಸ್ತುತ ವ್ಯವಹಾರ ಪ್ರಕ್ರಿಯೆಗಳಲ್ಲಿ ಯಾವುದೇ ತರಾತುರಿಯ ಬದಲಾವಣೆ ಮಾಡಬಾರದು. ಆದರೆ, ನಿಮ್ಮ ಪೂರೈಕೆದಾರರನ್ನು (Vendors) ಸರಿಯಾಗಿ ಪರಿಶೀಲಿಸಿ, ಇನ್‌ವಾಯ್ಸ್ ಹಾಗೂ ಇ-ವೇ ಬಿಲ್‌ಗಳನ್ನು ಸರಿಯಾಗಿ ತಾಳೆ ಮಾಡಿ. ಜೊತೆಗೆ GSTR-1 ಮತ್ತು GSTR-3B ಫೈಲಿಂಗ್‌ಗಳನ್ನು ಮರುಪರಿಶೀಲಿಸಿ (Reconcile). ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯಲು ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಿ ಮತ್ತು ಸಂಶಯಾಸ್ಪದ ವಹಿವಾಟುಗಳಿಂದ ದೂರವಿರಿ. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ಒಪ್ಪಂದಗಳು, ಸೇವಾ ಪುರಾವೆಗಳು ಮತ್ತು ಪಾವತಿಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಅಕ್ಟೋಬರ್ 7 ರಂದು ಹೊರಬರಲಿರುವ ಸಭೆಯ ಅಜೆಂಡಾ, ಸಿಬಿಐಸಿ ಸರ್ಕ್ಯುಲರ್‌ಗಳು ಮತ್ತು ಕರಡು ತಿದ್ದುಪಡಿಗಳ ಮೇಲೆ ಕಣ್ಣಿಟ್ಟಿರಿ.


Click it and Unblock the Notifications
