ಸರ್ಕಾರಿ ಸ್ವಾಮ್ಯದ, ಖಾಸಗಿ ಸ್ವಾಮ್ಯದ ಬ್ಯಾಂಕುಗಳು (Banks) ಗ್ರಾಹಕರ ಅನುಕೂಲಕ್ಕಾಗಿ ಸದಾ ಏನಾದರೊಂದು ನಿರ್ಧಾರಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಹೆಚ್‌ಡಿಎಫ್‌ಸಿ ಬ್ಯಾಂಕ್ ಇದೀಗ ಮಹತ್ವದ ಅಪ್ಡೇಟ್ ನೀಡಿದೆ. ಏಪ್ರಿಲ್ 1, 2026 ರಿಂದ ಯುಪಿಐ ಮೂಲಕ ಎಟಿಎಂ ಅಥವಾ ಸಿಆರ್‌ಎಮ್ (Cash Recycler Machine)ಗಳಲ್ಲಿ ಹಣ ವಿಥ್ ಡ್ರಾ ಮಾಡುವುದನ್ನು, ಮಾಸಿಕ ಉಚಿತ ಎಟಿಎಂ ವ್ಯವಹಾರ ಮಿತಿಯೊಳಗೆ ಸೇರಿಸಲಾಗುತ್ತದೆ ಎಂದು ಬ್ಯಾಂಕ್ ನಿರ್ಧಾರ ಕೈಗೊಂಡಿದೆ.

ಇನ್ಮೇಲೆ ಎಲ್ಲನೂ ದುಬಾರಿ!
ಈ ಹಿಂದಿನ ವಹಿವಾಟುಗಳಲ್ಲಿ ಯುಪಿಐ ಆಧಾರಿತ ಕಾರ್ಡ್‌ಲೆಸ್ ಕ್ಯಾಶ್ ವಿಥ್ ಡ್ರಾ ಮಾಡುವುದನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತಿತ್ತು. ಅಲ್ಲದೇ ಉಚಿತವಾಗಿತ್ತು. ಆದ್ರೆ ಇದೀಗ ಸಾಮಾನ್ಯ ಎಟಿಎಂ ವಹಿವಾಟಿನಂತೆಯೇ ಲೆಕ್ಕ ಹಾಕಲಾಗುತ್ತದೆ ಎನ್ನಲಾಗಿದೆ. ಅಂದರೆ ನಿಮ್ಮ ಖಾತೆಯ ಮಾಸಿಕ ಉಚಿತ ಎಟಿಎಂ ವ್ಯವಹಾರಗಳ ಸಂಖ್ಯೆ ಮೀರಿದರೆ, ಮತ್ತೆ ಶುಲ್ಕ ವಿಧಿಸಲಾಗುತ್ತದೆ.
ಹೊಸ ನಿಯಮ ಏನು?
ಇನ್ನು ಈ ಹೊಸ ನಿಯಮ ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ಇನ್ಮೇಲೆ ಎಟಿಎಂನಿಂದ ಯುಪಿಐ ಮೂಲಕ ಕ್ಯಾಶ್ ವಿಥ್‌ಡ್ರಾ ಮಾಡುವುದಾದ್ರೆ, ಮಾಸಿಕ ಉಚಿತ ಎಟಿಎಂ ವ್ಯವಹಾರ ಮಿತಿಯಲ್ಲಿ ಸೇರ್ಪಡೆಯಾಗುತ್ತದೆ. ಒಂದು ವೇಳೆ ಈ ಮಿತಿ ಮೀರಿದರೆ ಪ್ರತೀ ವಹಿವಾಟಿಗೆ 23 ರೂ. ಅನ್ವಯವಾಗುತ್ತದೆ. ಇದು ಹೆಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗಳಲ್ಲಿ ಮಾತ್ರ ಅನ್ವಯವಾಗುತ್ತದೆ ಎಂದು ವರದಿಯಾಗಿದೆ. ಇನ್ನು ಯುಪಿಐ ಆಪ್‌ಗಳಾದ ಫೋನ್‌ಪೇ, ಗೂಗಲ್ ಪೇ, ಪೇಟಿಯಂ, ಭೀಮ್ ಹೀಗೆ ಮುಂತಾದ ಆಪ್‌ಗಳ ಮೂಲಕ ಈ ಸೌಲಭ್ಯ ನೀಡಲಾಗುತ್ತದೆ.
ಏಕೆ ಈ ನಿರ್ಧಾರ?
ಹೆಚ್‌ಡಿಎಫ್‌ಸಿ ಬ್ಯಾಂಕ್ ಕೈಗೊಂಡಿರುವ ಪ್ರಕಾರ, ಬ್ಯಾಂಕ್ ವಹಿವಾಟುಗಳನ್ನು ಪಾರದರ್ಶಕವಾಗಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಮಾಡಲಾಗಿದೆ. ಯುಪಿಐ ಕ್ಯಾಶ್ ವಿಥ್‌ಡ್ರಾ ಪ್ರಕ್ರಿಯೆ ಕಾರ್ಡ್ ಸಂಬಂಧಿತ ವಂಚನೆಗಳನ್ನು ತಡೆಯುವ, ಸುರಕ್ಷಿತ ಮತ್ತು ಅನುಕೂಲಕರ ವಿಧಾನವಾಗಿದೆ. ಇತರ ಎಟಿಎಂ ವಹಿವಾಟಿನಂತೆಯೇ ಇದು ಕೆಲಸ ಮಾಡುತ್ತದೆ.
ಪ್ರಸ್ತುತ, ಉಳಿತಾಯ ಮತ್ತು ಸಂಬಳ ಖಾತೆಗಳಿಗೆ, ಹೆಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗಳಲ್ಲಿ 5 ವಿಥ್‌ಡ್ರಾವ್ ವಹಿವಾಟುಗಳು ಉಚಿತವಾಗಿರುತ್ತದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಅಲ್ಲದ ಎಟಿಎಂಗಳಲ್ಲಿ, ಉಚಿತ ಮಿತಿಯು ಟಾಪ್-6 ನಗರಗಳಿಗೆ 3 ವಹಿವಾಟುಗಳು ಮತ್ತು ಟಾಪ್ 6 ಅಲ್ಲದ ನಗರಗಳಲ್ಲಿ 5 ವಹಿವಾಟುಗಳು ಲಭ್ಯವಿದೆ.
ಯುಪಿಐ ಎಟಿಎಂ ವಿಥ್‌ಡ್ರಾವಲ್ಸ್ ಎಂದರೇನು?
UPI ATM Withdrawal ಎಂದರೆ ಡೆಬಿಟ್ ಕಾರ್ಡ್ ಬಳಸದೆ, ಕೇವಲ ಮೊಬೈಲ್‌ನ ಯುಪಿಐ ಆಪ್ ಮೂಲಕ ಎಟಿಎಂನಿಂದ ನಗದು ಹಣ ಪಡೆಯುವುದಾಗಿದೆ. ಇದನ್ನು ಅಧಿಕೃತವಾಗಿ Interoperable Cardless Cash Withdrawal (ICCW) ಅಥವಾ UPI-ATM ಎಂದು ಕರೆಯುತ್ತಾರೆ. NPCI ಪರಿಚಯಿಸಿದ ಈ ಸೌಲಭ್ಯ 2023 ರಿಂದ ಜಾರಿಯಲ್ಲಿದೆ. ಸದ್ಯ ಈ ಸೇವೆ ಯುಪಿಐ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಗ್ರಾಹಕರ ಅಗತ್ಯಗಳಿಗೂ ಬಹಳ ಸುಲಭವಾಗಲಿದೆ.


Click it and Unblock the Notifications