ಹಳೇ ವರ್ಷ ಕಳೆದು, ಹೊಸ ವರ್ಷಕ್ಕೆ (New Year) ದಿನಗಣನೆ ಶುರುವಾಗಿದೆ. ಇನ್ನೇನು 2026ಕ್ಕೆ 5 ದಿನವಷ್ಟೇ ಬಾಕಿ ಇದೆ. ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳು ಹೊಸ ವರ್ಷಾಚರಣೆಗೆ ಸಜ್ಜಾಗಿ ನಿಂತಿದೆ. ಅತ್ತ ಒಂದು ಕಡೆ ಸಂಭ್ರಮಾಚರಣೆಗಾಗಿ ರೆಡಿಯಾದ್ರೆ, ಇತ್ತ ಹೂಡಿಕೆದಾರರು (Investment) 2026 ರ ಹೂಡಿಕೆ ಪ್ಲಾನ್‌ಗಳನ್ನು ರೆಡಿ ಮಾಡುತ್ತಿದ್ದಾರೆ. ಹಾಗಾಗಿ, 2025ರಲ್ಲಿ ನಿಮಗೆ ಮಗು ಹುಟ್ಟಿದ್ದರೆ, ಅದರ ಆರ್ಥಿಕ ಭವಿಷ್ಯದ ಬಗ್ಗೆ ಈಗಲೇ ಯೋಚಿಸುವುದು ಮುಖ್ಯ.

ಮಗುವೊಂದು ಹುಟ್ಟಿದಾಗ ಪೋಷಕರಲ್ಲಿಯೂ ಹೊಸ ಜವಾಬ್ದಾರಿ ಹುಟ್ಟುತ್ತದೆ. ಅಲ್ಲದೇ ಪ್ರತೀ ಪೋಷಕರಿಗೂ, ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕು, ಉದ್ಯೋಗ ಸಿಗಬೇಕೆಂಬ ಕನಸು ಇದ್ದೇ ಇರುತ್ತದೆ. ಅದರ ಜೊತೆಗೆ ಆರ್ಥಿಕ ಭದ್ರತೆ ನೀಡುವುದು ಕೂಡಾ ಅತಿ ದೊಡ್ಡ ಉಡುಗೊರೆಯಾಗಿದೆ. ಹೆಚ್ಚುತ್ತಿರುವ ಹಣದುಬ್ಬರದ ಯುಗದಲ್ಲಿ, ಮಗುವಿನ ಭವಿಷ್ಯದ ವೆಚ್ಚಗಳು ಗಣನೀಯವಾಗಿ ಏರಿಕೆ ಕಾಣಲಿದೆ. ಹೀಗಾಗಿ, ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಆರಂಭದಿಂದಲೇ ಹೂಡಿಕೆ ಪ್ಲಾನ್ ಮಾಡಿದರೆ ಉತ್ತಮ.
ಅದೇ ಕಾರಣದಿಂದ ಬ್ಯಾಂಕ್, ಪೋಸ್ಟ್ ಆಫೀಸ್, ಹೀಗೆ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಮಕ್ಕಳಿಗಾಗಿ ಹಲವು ಉಳಿತಾಯ ಯೋಜನೆಗಳನ್ನು ಪರಿಚಯಿಸಲಾಗಿದೆ. ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಖಾತೆಗಳನ್ನು ತೆರೆದು ಹೂಡಿಕೆ ಮಾಡಿ, ಉತ್ತಮ ಆದಾಯ ಗಳಿಸಬಹುದು. ಆದರೆ ಹುಟ್ಟಿದಾಗಿನಿಂದಲೇ ಹೂಡಿಕೆ ಆರಂಭಿಸಿದ್ರೆ ದೊಡ್ಡ ಮೊತ್ತದಲ್ಲಿ ಸೇವಿಂಗ್ಸ್ ಆಗುತ್ತದೆ ಮತ್ತು ಬಡ್ಡಿಯೂ ಸೇರುತ್ತದೆ. ಈ ಮೂಲಕ ಮಕ್ಕಳು ದೊಡ್ಡವರಾಗುವಾಗ ಲಕ್ಷಗಟ್ಟಲೆ ಅಥವಾ ಕೋಟಿಗಟ್ಟಲೆ ಹಣ ಸಂಗ್ರಹಿಸಿಟ್ಟುಕೊಳ್ಳಬಹುದು. ಅಂತಹ ಉತ್ತಮ ಯೋಜನೆಗಳ ವಿವರ ಇಲ್ಲಿದೆ ಓದಿ.
ಸುಕನ್ಯಾ ಸಮೃದ್ಧಿ ಯೋಜನೆ: ನಿಮಗೆ ಹೆಣ್ಣು ಮಗುವಿದ್ದರೆ, ಸರ್ಕಾರಿ ಬೆಂಬಲಿತ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಇಂದೇ ಶುರು ಮಾಡಿ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕ ಗರಿಷ್ಠ ₹ 1.5 ಲಕ್ಷದವರೆಗೆ ಹೂಡಿಕೆ ಮಾಡುವ ಅವಕಾಶವಿದೆ. ಪ್ರಸ್ತುತ, ಇದಕ್ಕೆ 8.2% ವಾರ್ಷಿಕ ಬಡ್ಡಿ ಲಭ್ಯವಿದೆ. ಇದು ದೀರ್ಘಾವಧಿಯ ಯೋಜನೆಯಾಗಿರುವುದರಿಂದ, ಚಕ್ರಬಡ್ಡಿ ಲಾಭದಿಂದ ದೊಡ್ಡ ಮೊತ್ತದ ಹಣವನ್ನು ಪಡೆಯಬಹುದು.
ಎನ್‌ಪಿಎಸ್ ವಾತ್ಸಲ್ಯ: ಮಕ್ಕಳಿಗಾಗಿ ಹೂಡಿಕೆ ಮಾಡಬಹುದಾದ ಮತ್ತೊಂದು ಸುರಕ್ಷಿತ ಯೋಜನೆ ಎಂದರೆ ಎನ್‌ಪಿಎಸ್ ವಾತ್ಸಲ್ಯ ಯೋಜನೆ. ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. 18 ವರ್ಷ ತುಂಬುವ ಮೊದಲು ವಿಶೇಷ ಅಗತ್ಯಗಳಿಗಾಗಿ ಹಣ ಹಿಂಪಡೆಯುವ ಅವಕಾಶವೂ ಇಲ್ಲಿದೆ.
ಮಗು 18 ವರ್ಷ ಪೂರೈಸಿದಾಗ, ಈ ಖಾತೆಯು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುವ ಸಾಮಾನ್ಯ ಎನ್‌ಪಿಎಸ್ ಖಾತೆಯಾಗಿ ಪರಿವರ್ತನೆಗೊಳ್ಳುತ್ತದೆ. ಇದರಲ್ಲಿ ತೆರಿಗೆ ಪ್ರಯೋಜನಗಳೂ ಲಭ್ಯವಿರುವುದರಿಂದ ಮಕ್ಕಳ ಉಳಿತಾಯ ಖಾತೆ ತೆರೆಯುವವರಿಗೆ ಇದು ಉತ್ತಮವಾಗಿದೆ.
ಮ್ಯೂಚುಯಲ್ ಫಂಡ್‌ಗಳು: ಮಕ್ಕಳಿಗಾಗಿ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ ನಿರ್ಧಾರ. ದೊಡ್ಡ ಆರ್ಥಿಕ ಗುರಿಗಳನ್ನು ತಲುಪಲು ಇವು ತಕ್ಷಣ ಸಹಾಯವಾಗುತ್ತದೆ. ಮಾರುಕಟ್ಟೆ ಅಪಾಯಗಳಿದ್ದರೂ, ದೀರ್ಘಾವಧಿಯ ಹೂಡಿಕೆಯಿಂದ ಆದಾಯ ಗಳಿಸಬಹುದು. ಆದ್ದರಿಂದ ಸ್ವಲ್ಪ ಮಾರುಕಟ್ಟೆ ಬೆಳವಣಿಗೆ, ಹೂಡಿಕೆ ಮಾಡುವುದು ಹೇಗೆ ಎಂಬುದನ್ನೆಲ್ಲಾ ಅರಿತುಕೊಂಡು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು..
ಹೂಡಿಕೆ ಮಾಡಲು ಶುರು ಮಾಡುವವರಿಗೂ 2026ರ ಆರಂಭ ಶುಭ ವರ್ಷ ಇದ್ದ ಹಾಗೆ. ಆದ್ದರಿಂದ ನಿಮ್ಮ ಮಕ್ಕಳಿಗಾಗಿ ಹೂಡಿಕೆ ಆರಂಭಿಸುವುದು ಬಹಳ ಮುಖ್ಯ. ಶೈಕ್ಷಣಿಕ ಸಾಲಗಳಿಗಿಂತ ಮಗು ಹುಟ್ಟಿದ ತಕ್ಷಣ ಹೂಡಿಕೆ ಮಾಡಲು ಆರಂಭಿಸಿದರೆ ನಂತರದ ಹೊರೆ ಕಡಿಮೆಯಾಗಲಿದೆ.


Click it and Unblock the Notifications