ಹೊಸ ಮನೆ ಖರೀದಿದಾರರು ಹಾಗೂ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಬಯಸುವವರಿಗೆ ಆರಂಭಿಕ ವೆಚ್ಚ ಕಡಿಮೆ ಮಾಡಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಗೃಹ ಸಾಲದ ಪ್ರೊಸೆಸಿಂಗ್ ಶುಲ್ಕ ವಿನಾಯಿತಿ ಆಫರ್ ಅನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿವೆ. ನವೆಂಬರ್ 21ರ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸುತ್ತೋಲೆಯ ಪ್ರಕಾರ ಈ ಕೊಡುಗೆ ವರ್ಷಾಂತ್ಯದವರೆಗೆ ಇರಲಿದೆ. ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಕೆನರಾ ಬ್ಯಾಂಕ್ ಅಕ್ಟೋಬರ್ 1 ರಂದು ಆರಂಭಿಸಿದ್ದ ಹಬ್ಬದ ಕೊಡುಗೆಗಳು ಕೂಡ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮುಂದುವರಿದಿವೆ.
ಡಿಸೆಂಬರ್ 31ರವರೆಗೆ ಪ್ರೊಸೆಸಿಂಗ್ ಶುಲ್ಕ ಮನ್ನಾ ಮಾಡಲಾಗಿದ್ದರೂ, ಗೃಹ ಸಾಲದ ದಾಖಲಾತಿ ಶುಲ್ಕವನ್ನು (Documentation charges - ಸಾಮಾನ್ಯವಾಗಿ ₹1,350) ಪಾವತಿಸಬೇಕಾಗುತ್ತದೆ ಎಂದು ಸೆಂಟ್ರಲ್ ಬ್ಯಾಂಕ್ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ, ಪಿಎನ್‌ಬಿಯ ‘ಉತ್ಸವ್ ಫೆಸ್ಟಿವಿಟೀಸ್’ ಕೊಡುಗೆಯಡಿಯಲ್ಲಿ ಪ್ರೊಸೆಸಿಂಗ್, ಟೇಕ್‌ಓವರ್ ಮತ್ತು ಡಾಕ್ಯುಮೆಂಟೇಶನ್ ಶುಲ್ಕಗಳಿಂದ ಸಂಪೂರ್ಣ ವಿನಾಯಿತಿ ಸಿಗಲಿದೆ. ಇತ್ತ ಕೆನರಾ ಬ್ಯಾಂಕ್‌ನ ‘ರಿಟೇಲ್ ಲೋನ್ ಫೆಸ್ಟಿವಲ್’ ಅಡಿಯಲ್ಲಿ ಎಲ್ಲ ಮಾದರಿಯ ಗೃಹ ಸಾಲಗಳ ಪ್ರೊಸೆಸಿಂಗ್ ಶುಲ್ಕವನ್ನು 100 ಪ್ರತಿಶತ ಮನ್ನಾ ಮಾಡಲಾಗಿದೆ.

ಗೃಹ ಸಾಲದ ಪ್ರೊಸೆಸಿಂಗ್ ಶುಲ್ಕ ವಿನಾಯಿತಿ: ಬ್ಯಾಂಕ್‌ವಾರು ವಿವರಗಳು
| ಬ್ಯಾಂಕ್ | ವಿನಾಯಿತಿ | ಅರ್ಹ ಸಾಲದ ಪ್ರಕಾರಗಳು | ಕೊನೆಯ ದಿನಾಂಕ |
|---|---|---|---|
| ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | 100% ಪ್ರೊಸೆಸಿಂಗ್ ಶುಲ್ಕ | ಗೃಹ ಸಾಲಗಳು; ಟಾಪ್-ಅಪ್‌ಗೆ ವಿನಾಯಿತಿ ಇಲ್ಲ; ಡಾಕ್ಯುಮೆಂಟೇಶನ್ ಪ್ರತ್ಯೇಕ | ಡಿಸೆಂಬರ್ 31, 2026 |
| ಪಂಜಾಬ್ ನ್ಯಾಷನಲ್ ಬ್ಯಾಂಕ್ | ಪ್ರೊಸೆಸಿಂಗ್, ಟೇಕ್‌ಓವರ್ ಮತ್ತು ಡಾಕ್ಯುಮೆಂಟೇಶನ್ ಶುಲ್ಕ ಮನ್ನಾ | ಟೇಕ್‌ಓವರ್ ಸೇರಿ ಗೃಹ ಸಾಲಗಳು; LAP/ಟಾಪ್-ಅಪ್‌ಗೆ ಅನ್ವಯಿಸಲ್ಲ | ಡಿಸೆಂಬರ್ 31, 2026 |
| ಕೆನರಾ ಬ್ಯಾಂಕ್ | 100% ಪ್ರೊಸೆಸಿಂಗ್ ಶುಲ್ಕ | ಗೃಹ ಸಾಲಗಳು; ಎಸ್‌ಬಿ ಪ್ರೀಮಿಯಂ ಪೇರೋಲ್ ಗ್ರಾಹಕರಿಗೆ ಟೇಕ್‌ಓವರ್ ವಿನಾಯಿತಿ | ಡಿಸೆಂಬರ್ 31, 2026 |
| ಬ್ಯಾಂಕ್ ಆಫ್ ಇಂಡಿಯಾ | 100% ಪ್ರೊಸೆಸಿಂಗ್ ಶುಲ್ಕ | ಗೃಹ ಸಾಲಗಳು | ಮಾರ್ಚ್ 31, 2027 |
| ಇಂಡಿಯನ್ ಬ್ಯಾಂಕ್ | ಶೂನ್ಯ ಪ್ರೊಸೆಸಿಂಗ್ ಶುಲ್ಕ | IBHL/IND DIGI ಹೋಮ್ ಲೋನ್ (ಕ್ಯಾಂಪೇನ್) | ನವೆಂಬರ್ 30, 2026 |
ಈ ಆಫರ್‌ನಿಂದ ನಿಮಗಾಗುವ ಲಾಭವೆಷ್ಟು? ಪಿಎನ್‌ಬಿಯಲ್ಲಿ ಸಾಮಾನ್ಯವಾಗಿ ನಿಗದಿತ ಕನಿಷ್ಠ ಮೊತ್ತದಿಂದ ಸಾಲದ ಶೇ. 0.35 ರಷ್ಟು ಪ್ರೊಸೆಸಿಂಗ್ ಶುಲ್ಕವಿರುತ್ತದೆ (ಗರಿಷ್ಠ ₹15,000 ವರೆಗೆ ಮಿತಿ). ಅಂದರೆ ₹40 ಲಕ್ಷದ ಸಾಲದ ಮೇಲೆ ತೆರಿಗೆಯನ್ನು ಹೊರತುಪಡಿಸಿ ಗರಿಷ್ಠ ₹14,000 ವರೆಗೆ ಉಳಿತಾಯ ಮಾಡಬಹುದು! ಅರ್ಹ ಟೇಕ್‌ಓವರ್‌ಗಳಿಗೆ ಪಿಎನ್‌ಬಿಯು ಸೀಮಿತ ಲೀಗಲ್ ಮತ್ತು ಮೌಲ್ಯಮಾಪನ ವೆಚ್ಚಗಳನ್ನು ಮರುಪಾವತಿಸುತ್ತದೆ, ಆದರೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಟಾಪ್-ಅಪ್ ಸಾಲಗಳಿಗೆ ಸಾಮಾನ್ಯ ಶುಲ್ಕವನ್ನು ಪಡೆಯುತ್ತದೆ ಎಂಬುದನ್ನು ನೆನಪಿಡಿ.
ಆಫರ್‌ನ ಅರ್ಹತಾ ಅವಧಿಯ ಬಗ್ಗೆ ಸ್ಪಷ್ಟತೆ ಇರಲಿ. ಬ್ಯಾಂಕ್‌ಗಳು ಪ್ರಚಾರ ಅವಧಿಯನ್ನು ನಮೂದಿಸುತ್ತವೆಯಾದರೂ, ಈ ವಿನಾಯಿತಿಯು ಸಾಲದ ಅರ್ಜಿ ಸಲ್ಲಿಸಿದ ದಿನಾಂಕಕ್ಕೆ ಅನ್ವಯಿಸುತ್ತದೆಯೋ, ಮಂಜೂರಾತಿ (Sanction) ಅಥವಾ ಹಣ ಬಿಡುಗಡೆಯಾದ (Disbursal) ದಿನಾಂಕಕ್ಕೆ ಅನ್ವಯಿಸುತ್ತದೆಯೋ ಎಂಬುದನ್ನು ತಿಳಿಸುವುದಿಲ್ಲ. ಆದ್ದರಿಂದ ಬ್ಯಾಂಕ್ ಶಾಖೆಯಿಂದ ಬರವಣಿಗೆಯಲ್ಲಿ ಸ್ಪಷ್ಟನೆ ಪಡೆದುಕೊಂಡು, ಸ್ಯಾಂಕ್ಷನ್ ಲೆಟರ್‌ನಲ್ಲಿ ವಿನಾಯಿತಿಯ ಷರತ್ತನ್ನು ಸೇರಿಸಿಕೊಳ್ಳಿ. ದೊಡ್ಡ ಮೊತ್ತದ ಸಾಲಗಳಿಗೆ ಪ್ರೊಸೆಸಿಂಗ್ ಶುಲ್ಕ ವಿನಾಯಿತಿ ನೀಡಿದರೂ ಪಿಎನ್‌ಬಿ 'ಹ್ಯಾಂಡ್ಲಿಂಗ್ ಚಾರ್ಜಸ್' ವಿಧಿಸುವ ಸಾಧ್ಯತೆ ಇರುತ್ತದೆ.
ನಿಮ್ಮ ದಾಖಲೆಗಳು ಸರಿಯಿದ್ದರೆ ಶುಲ್ಕ ವಿನಾಯಿತಿ ಪಡೆಯುವುದು ಸುಲಭ. ಸಾಲದ ಅರ್ಜಿಯೊಂದಿಗೆ ಶಾಖೆಯ ಸೂಚನೆ ಲಗತ್ತಿಸಿ, ಮಂಜೂರಾತಿ ಪತ್ರದಲ್ಲಿ "ಪ್ರೊಸೆಸಿಂಗ್ ಶುಲ್ಕ ವಿನಾಯಿತಿ ನೀಡಲಾಗಿದೆ" ಎಂದು ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಇಮೇಲ್ ದಾಖಲೆಗಳನ್ನು ಕಾಯ್ದುಕೊಳ್ಳಿ. ಸಾಲವನ್ನು ಟಾಪ್-ಅಪ್ ಎಂದು ಪರಿಗಣಿಸುವುದು, ಕೆನರಾ ಬ್ಯಾಂಕ್ ಟೇಕ್‌ಓವರ್‌ಗೆ ಅಗತ್ಯವಿರುವ ಪೇರೋಲ್ ಸ್ಟೇಟಸ್ ಇಲ್ಲದಿರುವುದು ಅಥವಾ ಹಣ ಬಿಡುಗಡೆ ಜನವರಿಗೆ ಮುಂದೂಡಲ್ಪಡುವುದರಿಂದ ಆಫರ್ ಕೈತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕೊನೆಯ ದಿನಾಂಕದವರೆಗೂ ಕಾಯಬೇಡಿ.
ಪಿಎನ್‌ಬಿ, ಕೆನರಾ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಡಿಸೆಂಬರ್ 31ರವರೆಗೆ ಈ ಅವಕಾಶ ಲಭ್ಯವಿದೆ. ಬ್ಯಾಂಕ್ ಆಫ್ ಇಂಡಿಯಾದ ವಿನಾಯಿತಿ ಆಫರ್ ಮಾರ್ಚ್ 31, 2027 ರವರೆಗೆ ಇರಲಿದ್ದು, ಇಂಡಿಯನ್ ಬ್ಯಾಂಕ್‌ನ ಶುಲ್ಕ ರಹಿತ ಕ್ಯಾಂಪೇನ್ ನವೆಂಬರ್ 30ಕ್ಕೆ ಮುಕ್ತಾಯಗೊಂಡಿದೆ. ನೀವು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅಥವಾ ಹೊಸ ಸಾಲ ಪಡೆಯಲು ಯೋಜನೆ ಹಾಕಿದ್ದರೆ ಈಗಲೇ ಪ್ರಕ್ರಿಯೆ ಆರಂಭಿಸಿ. ಮೌಲ್ಯಮಾಪನ (Valuation), ಲೀಗಲ್, MODT ಹಾಗೂ ಇನ್ಶೂರೆನ್ಸ್ ನಂತಹ ಇತರ ವೆಚ್ಚಗಳ ಬಗ್ಗೆಯೂ ಮೊದಲೇ ಖಚಿತಪಡಿಸಿಕೊಳ್ಳಿ.


Click it and Unblock the Notifications