ಬೆಂಗಳೂರು, ಜೂನ್ 4: ಗೆಳೆಯರೆಲ್ಲ ಸ್ಟಾಕ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡಿ ಸಖತ್ ಲಾಭ ಮಾಡಿಕೊಳ್ಳುತ್ತಿದ್ದಾರೆ. ನಾನು ಸಹ ಅವರಂತೆ ಹಣ ಗಳಿಸಬೇಕಲ್ವಾ? ಎಂದು ನಿಮಗೆ ಒಂದೆಲ್ಲಾ ಒಂದು ಬಾರಿ ಅನಿಸಿರಬಹುದು. ನೀವು ಟ್ರೇಡಿಂಗ್ ಮಾಡಲು ಮುಂದಾದರೆ ಅದಕ್ಕೆ ಪ್ರಪ್ರಥಮವಾಗಿ ಡಿಮ್ಯಾಟ್ ಅಕೌಂಟ್ ಬೇಕೆ ಬೇಕು. ಸ್ಟಾಕ್ ಇರಲಿ ಮ್ಯೂಚುವಲ್ ಫಂಡ್ ಇರಲಿ ಈ ಡಿಮ್ಯಾಟ್ ಖಾತೆ ಬೇಕಾಗುತ್ತದೆ.
ಡಿಮ್ಯಾಟ್ ಖಾತೆ ಎಂದರೇನು? ಯಾವ ರೀತಿಯ ಡಿಮ್ಯಾಟ್ ಖಾತೆ ನಿಮಗೆ ಸೂಕ್ತವಾಗಿರುತ್ತದೆ? ಎನ್ನುವುದನ್ನು ಒಂದೊಂದಾದಾಗಿ ನೋಡೀಕೊಂಡು ಬರೋಣ. ಡಿಮ್ಯಾಟ್ ಎಂದರೆ ಡಿಮೆಟಿರಿಯಲೈಸ್ಡ್ ಅಕೌಂಟ್. ಷೇರು ಮಾರುಕಟ್ಟೆಯಲ್ಲಿ ಖರೀದಿಸಿದ ಷೇರುಗಳು, ಡಿಬೆಂಚರ್‌ಗಳು, ಬಾಂಡ್‌ಗಳು, ಇಟಿಎಫ್‌ಗಳು ಮುಂತಾದ ಹಣಕಾಸು ಪ್ರಾಡಕ್ಟ್ ಗಳನ್ನು ಎಲೆಕ್ಟ್ರಾನಿಕ್ ಮಾದರಿಯಲ್ಲಿ ಸಂಗ್ರಹಿಸಿಡುವ ಅಕೌಂಟೇ ಡಿಮ್ಯಾಟ್ ಅಕೌಂಟ್. ಸರಳವಾಗಿ ಹೇಳುವುದಾದರೆ, ಡಿಮ್ಯಾಟ್ ಖಾತೆಯು ನಿಮ್ಮ ಷೇರುಗಳನ್ನು ಸುರಕ್ಷಿತವಾಗಿರಿಸುವ ಬ್ಯಾಂಕ್ ಲಾಕರ್‌ನಂತೆ ಕಾರ್ಯನಿರ್ವಹಿಸುತ್ತದೆ.

ಡಿಮ್ಯಾಟ್ ಖಾತೆ ಓಪನ್ ಮಾಡುವ ಸಂದರ್ಭ ಬಂದಾಗ ನೀವು ಸರಿಯಾದ ಡಿಪಾಸಿಟಿರಿ ಅಂದರೆ ಡಿಪಿಯನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಸುಲಭ ಮತ್ತು ಸರಳ ಬ್ಯಾಂಕಿಂಗ್ ಗಾಗಿ ಯಾವ ರೀತಿ ಉತ್ತಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ಸರಿಯಾದ ಡಿಪಾಸಿಟಿರಿ ಆಯ್ಕೆ ಮಾಡಿಕೊಳ್ಳಬೇಕು.ಈ ನಿಮ್ಮ ಡಿಮ್ಯಾಟ್ ಖಾತೆಯ ಮುಖೇನವೇ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲು ಮತ್ತು ಡಿರೈವೇಟಿವ್ಸ್ ಟ್ರೇಡಿಂಗ್ ಮಾಡಲು, ಮ್ಯೂಚುವಲ್ ಫಂಡ್ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.
COVID ಸಮಯದಲ್ಲಿ ಡಿಮ್ಯಾಟ್ ಖಾತೆ ತೆರೆಯುವಿಕೆಯಲ್ಲಿ ಏಕಾಏಕಿ ಏರಿಕೆ ಕಂಡುಬಂದಿತು. ಜನರು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು. ಭಾರತದಲ್ಲಿ 40% ಕ್ಕಿಂತ ಹೆಚ್ಚು ಸಕ್ರಿಯ ಡಿಮ್ಯಾಟ್ ಖಾತೆಗಳನ್ನು ಈ ಅಪ್ಲಿಕೇಶನ್‌ಗಳ ಮೂಲಕ ತೆರೆಯಲಾಗಿದೆ.
ಹಾಗಾದರೆ ಡಿಮ್ಯಾಟ್ ಖಾತೆ ಎಲ್ಲಿ ತೆರೆಯಬೇಕು. ಡಿಸ್ಕೌಂಟ್ ನೀಡುವ ಬ್ರೋಕರೇಜ್ ಕಂಪನಿಗಳಲ್ಲೋ? ಅಥವಾ ಫುಲ್-ಸರ್ವೀಸ್ ಬ್ರೋಕರೇಜ್ ಕಂಪನಿಗಳಲ್ಲಾ? ಇದಕ್ಕೂ ಸಹ ಉತ್ತರ ಕಂಡುಕೊಳ್ಳಬೇಕು. ಕಳೆದ ಕಳೆದ 4 ವರ್ಷಗಳಲ್ಲಿ, ಡಿಮ್ಯಾಟ್ ಖಾತೆಗಳನ್ನು ತೆರೆಯುವ ವಿಷಯದಲ್ಲಿ ಡಿಸ್ಕೌಂಟ್ ಬ್ರೋಕರೇಜ್ ಕಂಪನಿಗಳು ಫುಲ್-ಸರ್ವೀಸ್ ಬ್ರೋಕರೇಜ್ ಕಂಪನಿಗಳನ್ನು ಹಿಂದಕ್ಕೆ ಹಾಕಿವೆ.
ಡಿಸ್ಕೌಂಟ್ ಬ್ರೋಕರೇಜ್ ಕಂಪನಿಗಳು ಅತಿ ಕಡಿಮೆ ಬ್ರೋಕರೇಜ್ ಫೀ ಇಲ್ಲವೇ ಫ್ಲಾಟ್ ಫೀ ವಿಧಿಸುತ್ತವೆ. ಇಲ್ಲಿ ಡಿಮ್ಯಾಟ್ ಖಾತೆ ನಿರ್ವಹಿಸುವ ಶುಲ್ಕಗಳು ತುಂಬಾ ಕಡಿಮೆ ಅಥವಾ ಉಚಿತವಾಗಿದೆ. ಈ ರಿಯಾಯಿತಿ ಬ್ರೋಕರೇಜ್ ಕಂಪನಿಗಳು ಡಿಮ್ಯಾಟ್ ಖಾತೆಗಳನ್ನು ತೆರೆಯುವ ಪ್ರಕ್ರಿಯೆಯನ್ನು ತುಂಬಾ ಸುಲಭಗೊಳಿಸಿವೆ. ಕನಿಷ್ಠ ದಾಖಲೆ ಇಲ್ಲಿ ಸಾಕಾಗುತ್ತದೆ. ಸ್ಮಾರ್ಟ್ ಪೋನ್ ಇದ್ದರೆ ಒಂದೇ ದಿನದಲ್ಲಿ ಖಾತೆ ತೆರೆದು ವಹಿವಾಟು ಆರಂಭಿಸಲು ಸಾಧ್ಯವಾಗುತ್ತದೆ. ಮೊಬೈಲ್ ಆ್ಯಪ್ ಮೂಲಕವೇ ಖಾತೆ ನಿರ್ವಹಿಸಬಹುದು.
ಮತ್ತೊಂದೆಡೆ, ಫುಲ್- ಸರ್ವೀಸ್ ಬ್ರೋಕರೇಜ್ ಕಂಪನಿಗಳು ಅಗಾಧ ಅನುಭವ ಹೊಂದಿವೆ. ರಿಯಾಯಿತಿ ಬ್ರೋಕರೇಜ್ ಕಂಪನಿಗಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಕಾಲದಿಂದ ಇವೆ. ಫುಲ್-ಸರ್ವೀಸ್ ಬ್ರೋಕರೇಜ್ ಕಂಪನಿಗಳು ಪ್ರಸ್ತುತ ಮಾರ್ಕೆಟ್ ಟ್ರೆಂಡ್, ಇಂಡಸ್ಟ್ರಿಗೆ ಸಂಬಂಧಿಸಿದ ಅಪ್ ಡೇಟ್, ರಿಸರ್ಚ್ ರಿಪೋರ್ಟ್ ಗಳನ್ನು ನೀಡುತ್ತವೆ. ಇದಲ್ಲದೆ ಅಸೆಟ್ ಮ್ಯಾನೇಜ್ ಮೆಂಟ್ ಸರ್ವೀಸ್ ನೀಡುತ್ತವೆ. ಪೆನ್ಶನ್ ಪ್ಲಾನಿಂಗ್ ಗೂ ಮಾರ್ಗದರ್ಶನ ನೀಡುತ್ತವೆ. ಹೊಸ ಹೂಡಿಕೆದಾರರಾಗಿ ಕಾಲಿಡುವುದಾದರೆ ನಿಮಗೆ ಈ ಬ್ರೋಕರೇಜ್ ಕಂಪನಿಗಳೆ ಸೂಕ್ತ.
ಒಟ್ಟಿನಲ್ಲಿ ಸ್ಟಾಕ್ ಮಾರ್ಕೆಟ್ ಮತ್ತು ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆಯ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಅನೇಕ ಡಿಮ್ಯಾಟ್ ಅಪ್ಲಿಕೇಶನ್ ಗಳು ದಿನೇ ದಿನೇ ಹುಟ್ಟಿಕೊಳ್ಳುತ್ತಿವೆ. ಟ್ರೇಡಿಂಗ್ ನಲ್ಲಿ ಒಂದಷ್ಟು ವರ್ಷದ ಅನುಭವ ನಿಮಗಿದ್ದರೆ ಮೊಬೈಲ್ ಅಪ್ಲಿಕೇಶನ್ ನಲ್ಲಿ ಖಾತೆ ತೆರೆಯಬಹುದು. ನಾನು ಹೊಸದಾಗಿ ಮಾರ್ಕೆಟ್ ಗೆ ಕಾಲಿಡುತ್ತಿದ್ದೇನೆ ಎಂದಾದರೆ ಮಾರ್ಕೆಟ್ ನ ಆಗು ಹೋಗು ತಿಳಿಸುವ, ಕಂಪನಿಗಳ ಮುನ್ನೋಟ ತಿಳಿಸುವ ಬ್ರೋಕರೇಜ್ ಕಂಪನಿಗಳಲ್ಲಿ ಖಾತೆ ತೆರೆಯುವುದು ಉತ್ತಮ.


Click it and Unblock the Notifications