ಹಿಂದೂ ಅವಿಭಜಿತ ಕುಟುಂಬ ಅಥವಾ HUF (Hindu Undivided Family). ಅಂದರೆ ಹಿಂದೂ ಜನಾಂಗದವರೇ ಸೇರಿ ರಚಿಸುವ ಘಟಕವನ್ನು ಹಿಂದೂ ಅವಿಭಾಜ್ಯ ಕುಟುಂಬ ಎಂದು ಕರೆಯುತ್ತಾರೆ. ವಿಶೇಷವಾಗಿ ಭಾರತೀಯ ಆದಾಯ ತೆರಿಗೆ ಕಾನೂನಿನಲ್ಲಿ ಪ್ರತ್ಯೇಕ ತೆರಿಗೆ ಪಾವತಿದಾರನಾಗಿ ಪರಿಗಣಿಸಲಾಗುತ್ತದೆ. ಅಂದರೆ ವ್ಯಕ್ತಿಯಂತೆಯೇ ಹೆಚ್‌ಯುಎಫ್‌ಗೆ ತನ್ನದೇ ಆದ ಪಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಮತ್ತು ಪ್ರತ್ಯೇಕ ಐಟಿಆರ್ ಫೈಲ್ ಮಾಡುವ ಅವಕಾಶ ನೀಡಲಾಗುತ್ತದೆ.

ಇದೀಗ ತೆರಿಗೆ ಉದ್ದೇಶಗಳಿಗಾಗಿ ತಂದೆ ಮತ್ತು ಮಗ ಇಬ್ಬರೂ ಪ್ರತ್ಯೇಕ ಹಿಂದೂ ಅವಿಭಜಿತ ಕುಟುಂಬಗಳನ್ನು (HUF) ಹೊಂದಬಹುದೇ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪ್ರಶ್ನೆಗೆ ತಜ್ಞರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಶ್ನೆ ಏನು?
'ಆಸ್ಕ್ ವಾಲೇಟ್ ವೈಸ್'ಗೆ ಇ-ಮೇಲ್ ಮೂಲಕ ಒಬ್ಬರು ಪ್ರಶ್ನೆ ಮಾಡಿದ್ದು, 'ನನ್ನ ತಂದೆಯವರು ಈಗಾಗಲೇ ಒಂದು ಹಿಂದೂ ಅವಿಭಜಿತ ಕುಟುಂಬ (HUF) ಹೊಂದಿದ್ದು, ಅದರ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುತ್ತಿದ್ದಾರೆ. ನಾನು ಅವರ ಮಗನಾಗಿ, ಆ HUF ನ ಸಹ-ಭಾಗಿದಾರನಾಗಿದ್ದೇನೆ (coparcener). ಅದೇ ಸಂದರ್ಭದಲ್ಲಿ ನನಗೇ ಪ್ರತ್ಯೇಕ HUF ಅನ್ನು ಸ್ಥಾಪಿಸಿ, ಅದಕ್ಕೆ ITR ಸಲ್ಲಿಸಲು ಸಾಧ್ಯವೇ? ಇದು ಆದಾಯ ತೆರಿಗೆ ಕಾಯ್ದೆಯಡಿ ಅನುಮತಿ ಪಡೆಯುತ್ತಾ?' ಎಂದು ಕೇಳಿದ್ದಾರೆ
ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ತಜ್ಞರು, 'ಒಂದು ಹಿಂದೂ ಅವಿಭಜಿತ ಕುಟುಂಬ (HUF) ಸಾಮಾನ್ಯ ಪುರುಷ ಪೂರ್ವಜನಿಂದ (male ancestor) ನಾಲ್ಕು ತಲೆಮಾರುಗಳವರೆಗಿನ ವಂಶಸ್ಥರನ್ನು ಒಳಗೊಂಡಿರುತ್ತದೆ. ಪೂರ್ವಜರ HUF ನಲ್ಲಿ ಸದಸ್ಯನಾಗಿದ್ದರೂ, ಸಹ-ಭಾಗಿದಾರನಾದವನು (coparcener) ಒಬ್ಬ ಪುರುಷನಾಗಿದ್ದ ಸದಸ್ಯ ತನ್ನದೇ ಆದ ಪ್ರತ್ಯೇಕ HUF ಅನ್ನು ಸ್ಥಾಪಿಸಲು ಅವಕಾಶವಿದೆ. ಹೀಗಾಗಿ, ನೀವು ನಿಮ್ಮ ತಂದೆಯ HUF ನಲ್ಲಿ ಸದಸ್ಯರಾಗಿದ್ದರೂ ಸಹ, ಪ್ರತ್ಯೇಕ HUF ಹೊಂದುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ,' ಎಂದು ತಜ್ಞರು ತಿಳಿಸಿದ್ದಾರೆ.
ಹೆಚ್‌ಯುಎಫ್ ರಚಿಸುವುದು ಏಕೆ?
ಹಿಂದೂ ಅವಿಭಜಿತ ಕುಟುಂಬ (HUF) ರಚಿಸುವುದು ವಿಶೇಷವಾಗಿ ತೆರಿಗೆ ಪ್ರಯೋಜನ ಮತ್ತು ಆಸ್ತಿ ಸಂರಕ್ಷಣೆಗಾಗಿ ಮಾತ್ರ. ಇದು ಭಾರತೀಯ ಆದಾಯ ತೆರಿಗೆ ಕಾನೂನಿನಲ್ಲಿ ಪ್ರತ್ಯೇಕ ತೆರಿಗೆ ವಿಧವಾಗಿ ಕಾರ್ಯ ನಿರ್ವಹಿಸುತ್ತದೆ.
ಮುಖ್ಯ ಕಾರಣಗಳು:
- ತೆರಿಗೆ ಉಳಿತಾಯ: ಅಂದರೆ ಕುಟುಂಬದ ಆದಾಯವನ್ನು ವೈಯಕ್ತಿಕದಿಂದ HUFಗೆ ವರ್ಗಾಯಿಸಬಹುದು ಮತ್ತು ತೆರಿಗೆ ಸ್ಲಾಪ್ ಕಡಿಮೆ ಮಾಡುವ ಅವಕಾಶವಿದೆ. ಉದಾಹರಣೆಗೆ ಒಂದು ಕುಟುಂಬದಲ್ಲಿ ತಂದೆಯ ವೈಯಕ್ತಿಕ ಆದಾಯ 15 ಲಕ್ಷ ರೂ. ಇದ್ದರೆ ಹೆಚ್ಚು ತೆರಿಗೆ ವಿಧಿಸಬೇಕಾಗುತ್ತದೆ. ಅದೇ ಹೆಚ್‌ಯುಎಫ್ ರಚಿಸಿದರೆ 5 ಲಕ್ಷ ಆದಾಯವನ್ನು ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ಆಡ್ ಮಾಡಬಹುದು ಮತ್ತು ತೆರಿಗೆ ಪ್ರಯೋಜನ ಪಡೆಯಬಹುದು.
- ಆಸ್ತಿ ಸಂರಕ್ಷಣೆ ಮತ್ತು ಸುಲಭ ನಿರ್ವಹಣೆ: ಕುಟುಂಬದ ಆಸ್ತಿಯನ್ನು ಒಟ್ಟಾಗಿ ಇಟ್ಟುಕೊಳ್ಳಬಹುದು. ಅಲ್ಲದೇ ಪಾಲನ್ನು ತಪ್ಪಿಸಿ ಆಸ್ತಿಯನ್ನು ಕುಟುಂಬದೊಂದಿಗೆಯೇ ಉಳಿಸಬಹುದು.
ಯಾರಿಗೆ ಅನ್ವಯ?
- ಹಿಂದೂ, ಜೈನ್, ಸಿಖ್, ಬೌದ್ಧ ಧರ್ಮದ ಕುಟುಂಬಗಳು ರಚಿಸಬಹುದು.
- ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಕುಟುಂಬಗಳಿಗೆ ಅವಕಾಶವಿಲ್ಲ


Click it and Unblock the Notifications