ಶಿಕ್ಷಣ, ಚಿನ್ನ ಖರೀದಿ ಹೀಗೆ ಅಗತ್ಯವಿದ್ದಾಗ ಸಾಮಾನ್ಯವಾಗಿ ಹೆಚ್ಚಿನವರು ಪರ್ಸನಲ್ ಲೋನ್‌ನತ್ತ (Personal Loan) ಮುಖ ಮಾಡುತ್ತಾರೆ. ಆದರೆ ಕೆಲವು ಸಂಸ್ಥೆಗಳು ಕಡಿಮೆ ಬಡ್ಡಿಯಲ್ಲಿ ಸಾಲ ನೀಡಿದ್ರೆ, ಇನ್ನೂ ಕೆಲವು ಕಂಪನಿಗಳಲ್ಲಿ ಹೆಚ್ಚಿನ ಬಡ್ಡಿದರದೊಂದಿಗೆ ಸಾಲ ನೀಡುತ್ತದೆ. ಆದರೆ ಈ ಸಂದರ್ಭದಲ್ಲಿ ಬಡ್ಡಿ ಕಟ್ಟೋದೆ ದೊಡ್ಡ ಸವಾಲಾಗಿರುತ್ತದೆ. ಆದರೆ ವಿಮಾ ಪಾಲಿಸಿಗಳಿಂದಲೂ (Insurance Policy Loan) ಸಾಲ ಸೌಲಭ್ಯ ಪಡೆಯಬಹುದು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ವಿಮಾ ಪಾಲಿಸಿ ಸಾಲ vs ವೈಯಕ್ತಿಕ ಸಾಲ: ಯಾವುದು ಬೆಸ್ಟ್?
ವಿಮಾ ಕಂಪನಿಗಳಿಂದ (ಉದಾಹರಣೆಗೆ ಎಲ್‌ಐಸಿ) ತಮ್ಮ ಪಾಲಿಸಿಯನ್ನು ಅಡಮಾನವಿಟ್ಟು ಸಾಲ ಪಡೆಯುವುದು ವೈಯಕ್ತಿಕ ಸಾಲಕ್ಕಿಂತ ಹೆಚ್ಚು ಲಾಭದಾಯಕ ಎಂದು ಹೇಳಲಾಗಿದೆ. ವೈಯಕ್ತಿಕ ಸಾಲಗಳು ಸಾಮಾನ್ಯವಾಗಿ 12% ರಿಂದ 15% ವರೆಗೆ ಬಡ್ಡಿದರಗಳನ್ನು ವಿಧಿಸಿದರೆ, ವಿಮಾ ಪಾಲಿಸಿ ಸಾಲಗಳಿಗೆ 9% ಅಥವಾ ಅದಕ್ಕಿಂತ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತದೆ ಎನ್ನಲಾಗಿದೆ. ಅದೇ ಕಾರಣದಿಂದ ವಿಮಾ ಪಾಲಿಸಿ ಸಾಲಗಳು ಒಳ್ಳೆಯದು ಎನ್ನಲಾಗಿದೆ.
ವೈಯಕ್ತಿಕ ಸಾಲಗಳಿಗೆ ಸಿಬಿಲ್ ಸ್ಕೋರ್ ಕಡ್ಡಾಯವಾಗಿ ಬೇಕೇ ಬೇಕು. ಆದ್ರೆ ವಿಮಾ ಪಾಲಿಸಿ ಸಾಲಗಳಿಗೆ ಸಿಬಿಲ್ ಸ್ಕೋರ್ ಅನ್ನು ಪರಿಗಣಿಸಲಾಗುವುದಿಲ್ಲ. ಎಲ್ಲಾ ಪಾಲಿಸಿದಾರರಿಗೂ ಒಂದೇ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಅಲ್ಲದೆ, ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲದೆ, ಕಡಿಮೆ ಸಮಯದಲ್ಲಿ ಈ ಸಾಲವನ್ನು ಪಡೆಯಬಹುದು. ಸಾಲದ ಮೊತ್ತವನ್ನು ಪಾಲಿಸಿಯ 'ಸರೆಂಡರ್ ವ್ಯಾಲ್ಯೂ' ಆಧರಿಸಿ ನಿರ್ಧರಿಸಲಾಗುತ್ತದೆ.
ಇನ್ನು ವಿಮಾ ಸಾಲದಲ್ಲಿ, ಸಾಲ ಮರುಪಾವತಿಯಲ್ಲಿ ವಿಳಂಬವಾದರೂ ಅದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪಾಲಿಸಿಯ ಅವಧಿ ಪೂರ್ಣಗೊಂಡಾಗ ದೊರೆಯುವ ಅಂತಿಮ ಮೊತ್ತದಿಂದ ಬಾಕಿ ಉಳಿದ ಸಾಲವನ್ನು ವಿಮಾ ಕಂಪನಿಗಳು ಕಡಿತಗೊಳಿಸುತ್ತವೆ. ಇದು ಸಾಲಗಾರರಿಗೆ ಒಂದು ದೊಡ್ಡ ಅನುಕೂಲವಾಗಿದೆ.
ವೈಯಕ್ತಿಕ ಸಾಲ ಯಾವಾಗ ಬೆಸ್ಟ್?
ಇನ್ನು ಎಲ್ಲಾ ಸಂದರ್ಭಗಳಲ್ಲಿ ವಿಮಾ ಪಾಲಿಸಿ ಸಾಲ ಸೂಕ್ತವಲ್ಲ ಎಂದು ಹೇಳಲಾಗಿದೆ. ನಿಮ್ಮ ವಿಮಾ ಪಾಲಿಸಿಯಲ್ಲಿ ಸಾಕಷ್ಟು ಸರೆಂಡರ್ ಮೌಲ್ಯ ಇಲ್ಲದಿದ್ದಾಗ ಅಥವಾ ದೊಡ್ಡ ಮೊತ್ತದ ಸಾಲದ ಅಗತ್ಯವಿದ್ದರೆ, ವೈಯಕ್ತಿಕ ಸಾಲ ಆಯ್ಕೆ ಮಾಡುವುದು ಒಳ್ಳೆಯದು.
ಗಮನಿಸಿ:
ನಿಮ್ಮ ಬಳಿ ಉತ್ತಮ ಸರೆಂಡರ್ ವ್ಯಾಲ್ಯೂ ಹೊಂದಿರುವ ವಿಮಾ ಪಾಲಿಸಿ ಇದ್ದರೆ, ಹೆಚ್ಚಿನ ಬಡ್ಡಿದರದ ವೈಯಕ್ತಿಕ ಸಾಲಗಳ ಬದಲು ಪಾಲಿಸಿ ಸಾಲವನ್ನು ಆಯ್ಕೆ ಮಾಡುವುದು ಬೆಸ್ಟ್. ಇದು ಬಡ್ಡಿ ರೂಪದಲ್ಲಿ ಗಣನೀಯ ಮೊತ್ತವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ. ಆದರೆ ಸರೆಂಡರ್ ವ್ಯಾಲ್ಯೂ ಕಡಿಮೆ ಇದ್ದರೆ, ಸಾಲ ಕೂಡಾ ಪಡೆಯುವುದು ಕಷ್ಟ. ಆ ಸಂದರ್ಭದಲ್ಲಿ ವೈಯಕ್ತಿಕ ಸಾಲ ಪಡೆಯಿರಿ. ಅದಕ್ಕಾಗಿ ಕ್ರೆಡಿಟ್ ಸ್ಕೋರ್ ಉತ್ತಮ ರೀತಿಯಲ್ಲಿಟ್ಟುಕೊಳ್ಳುವುದು ಮುಖ್ಯ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications