ಹನಿ ಹನಿ ಕೂಡಿದರೆ ಹಳ್ಳ. ತೆನೆ ತೆನೆ ಕೂಡಿದರೆ ಬಳ್ಳ. ಪ್ರತಿಯೊಂದು ಹನಿಯೂ ಈ ಹಳ್ಳದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹನಿಗಳನ್ನು ನಾವು ಕಡೆಗಣಿಸಿದರೆ ಆ ಗಾತ್ರದ ಹಳ್ಳ ತಯಾರಾಗದು. ಇದೇ ರೀತಿ ಪೈಸೆ ಪೈಸೆಗಳು ಕೂಡಿದರೆ ರೂಪಾಯಿ. ಸಂಪಾದನೆಯಲ್ಲಿನ ಅಲ್ಪ ಸ್ವಲ್ಪ ಉಳಿಕೆಯಿಂದಲೇ ನಮ್ಮ ಕನಸು ನನಸು ಮಾಡಲು ಸಾಧ್ಯ. ಆದಾಯ ಕಡಿಮೆ ಎಂದ ಮಾತ್ರಕ್ಕೆ ಉಳಿತಾಯ ಸಾಧ್ಯವಿಲ್ಲವೆಂದಲ್ಲ. ಮನಸ್ಸಿದ್ದರೆ ಮಾರ್ಗ ಎಂಬಂತೆ ಶಿಸ್ತುಬದ್ದ ಉಳಿತಾಯವನ್ನು ಹೂಡಿಕೆ ಮಾಡಿ ಬೃಹತ್ ಮೊತ್ತವನ್ನು ಸಂಗ್ರಹಿಸಬಹುದಾಗಿದೆ.

ಸಣ್ಣ ಮೊತ್ತದ ಹೂಡಿಕೆಯಿಂದ ಕೋಟಿ ಕೋಟಿ ಮೊತ್ತವನ್ನು ಸಂಗ್ರಹಿಸಬಹುದು ಅಂದರೆ ನಂಬಿಕೆ ಬರಲು ಸಾಧ್ಯವಿಲ್ಲ. ಆದರೆ ನಿಯಮಿತ ಮತ್ತು ಶಿಸ್ತುಬದ್ಧ ಹೂಡಿಕೆಯಿಂದ "ದೊಡ್ಡ ಮೊತ್ತದ ಫಂಡ್" ನಿರ್ಮಿಸಲು ಸಾಧ್ಯ. ಇನ್ನು ಅದಷ್ಟು ಮುಂಚಿತವಾಗಿ ಪ್ರಾರಂಭಿಸಿದ್ರೆ ಅಂದರೆ ನಿಮ್ಮ ಹಣವು ಹೆಚ್ಚು ಸಮಯ ಪಡೆದಷ್ಟೂ ಹೆಚ್ಚು ಬೆಳೆಯುತ್ತದೆ. ತಿಂಗಳಿಗೆ ಕೇವಲ 7,000 ರೂ. ಹೂಡಿಕೆ ಮಾಡುವ ಮೂಲಕ ನಿಮ್ಮ 5 ಕೋಟಿ ರೂ. ಗುರಿಯನ್ನು ಹೇಗೆ ತಲುಪಬಹುದು ಎಂದು ನೋಡೋಣ.
SIP ಎಂದರೇನು?
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮ್ಯೂಚುವಲ್ ಫಂಡ್‌ಗಳು ನೀಡುವ ಹೂಡಿಕೆಯ ಮಾರ್ಗವಾಗಿದೆ. ಪ್ರತಿ ತಿಂಗಳು ನಿಯಮಿತವಾಗಿ ಸಣ್ಣ ಮೊತ್ತದ ಹಣವನ್ನು ಹೂಡಿಕೆ ಮಾಡುವ ಮೂಲಕ ಸಂಪತ್ತನ್ನು ಸೃಷ್ಟಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ, ನೀವು ದೈನಂದಿನ, ವಾರ, ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡಬಹುದು.
SIP ಉತ್ತಮ ಆಯ್ಕೆ ಏಕೆ ?
ಆರಂಭಿಕರಿಗಾಗಿ SIP (ವ್ಯವಸ್ಥಿತ ಹೂಡಿಕೆ ಯೋಜನೆ) ಅತ್ಯುತ್ತಮ ಆಯ್ಕೆಯಾಗಿದೆ. ಮೊದಲ ಬಾರಿಗೆ ಹೂಡಿಕೆ ಮಾಡುವವರಿಗೆ ಇದು ತುಂಬಾ ಅನುಕೂಲಕರ. ಏಕೆಂದರೆ, ನೀವು ಕೇವಲ 100 ರೂಪಾಯಿಗಳಿಂದ ನಿಯಮಿತವಾಗಿ ಹೂಡಿಕೆ ಪ್ರಾರಂಭಿಸಬಹುದು. ಇದು ಕಾಲಾನಂತರದಲ್ಲಿ ನಿಮ್ಮ ಹಣವನ್ನು ಬೆಳೆಸಲು ಸಹಾಯ ಮಾಡುತ್ತದೆ. ಹಾಗೆಯೇ, ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಯಿಂದ ನಿಗದಿತ ಮೊತ್ತ ಸ್ವಯಂಚಾಲಿತವಾಗಿ ಕಡಿತಗೊಳ್ಳುವುದರಿಂದ, ಹೂಡಿಕೆಯನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ. ಇದು ನಿಮಗೆ ಸುಲಭ ಮತ್ತು ಅನುಕೂಲಕರವಾದ ಹೂಡಿಕೆಯ ಮಾರ್ಗವಾಗಿದೆ.
ನೀವು ಬೇಗನೆ ಹೂಡಿಕೆ ಮಾಡಲು ಏಕೆ ಪ್ರಾರಂಭಿಸಬೇಕು?
ದೀರ್ಘಾವಧಿಯಲ್ಲಿ ಹೂಡಿಕೆಯಿಂದ ಗರಿಷ್ಠ ಲಾಭವನ್ನು ಪಡೆಯಲು ಒಬ್ಬರು ಬೇಗನೆ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ.
ಕರುಣಾಕರ್ ತನ್ನ 20 ನೇ ವಯಸ್ಸಿನಲ್ಲಿ ತಿಂಗಳಿಗೆ 1,000 ರೂ. ಹೂಡಿಕೆ ಮಾಡಲು ಪ್ರಾರಂಭಿಸುತ್ತಾನೆ. 40 ವರ್ಷಗಳ ನಂತರ, ಅವನಿಗೆ ಅಂದಾಜು 1.18 ಕೋಟಿ ರೂ. ಸಿಗುತ್ತದೆ. ಅದೇ ಆತನ ಅವನ ಸ್ನೇಹಿತ ಸಾಗರ್ 30 ನೇ ವಯಸ್ಸಿನಲ್ಲಿ ತಿಂಗಳಿಗೆ 1,000 ರೂ. ಹೂಡಿಕೆ ಮಾಡಲು ಪ್ರಾರಂಭಿಸುತ್ತಾನೆ. 30 ವರ್ಷಗಳ ನಂತರ ಅವನಿಗೆ 35 ಲಕ್ಷ ರೂ. ಸಿಗುತ್ತದೆ. ಇಲ್ಲಿ ಕರುಣಾಕರ್ 10 ವರ್ಷಗಳ ಹಿಂದೆ ಪ್ರಾರಂಭಿಸಿ ತಮ್ಮ ಲಾಭವನ್ನು 3 ಪಟ್ಟು ಹೆಚ್ಚು ಪಡೆದುಕೊಂಡಿದ್ದಾರೆ.
ಮಾಸಿಕ 7,000 ರೂ. SIP ಯೊಂದಿಗೆ 5 ಕೋಟಿ ರೂ.ಗಳನ್ನು ನಿರ್ಮಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ
ನಿಮ್ಮ ಗುರಿ 5 ಕೋಟಿ ರೂಪಾಯಿಗಳ ನಿಧಿಯನ್ನು ಸಂಗ್ರಹಿಸುವುದಾಗಿದ್ದರೆ, ಪ್ರತಿ ತಿಂಗಳು 7,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ವಾರ್ಷಿಕವಾಗಿ ಶೇಕಡಾ 12 ರಷ್ಟು ಆದಾಯವನ್ನು ಅಂದಾಜು ಇಟ್ಟುಕೊಳ್ಳೋಣ.. ಇಲ್ಲಿ 5 ಕೋಟಿ ರೂಪಾಯಿಗಳನ್ನು ಒಟ್ಟುಗೂಡಿಸಲು ಸರಿಸುಮಾರು 38 ವರ್ಷಗಳು ಬೇಕಾಗುತ್ತದೆ.
10 ವರ್ಷಗಳಲ್ಲಿ ಮಾಸಿಕ 7,000 ರೂ. SIP ಎಷ್ಟು ಸಂಗ್ರಹಿಸಬಹುದು?
ನೀವು 10 ವರ್ಷಗಳ ಕಾಲ ಪ್ರತಿ ತಿಂಗಳು 7,000 ರೂಪಾಯಿಗಳನ್ನು SIP ಮೂಲಕ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆಯ ಮೊತ್ತ 8,40,000 ರೂಪಾಯಿಗಳಾಗುತ್ತದೆ. ಅಂದಾಜು ವಾರ್ಷಿಕ ಆದಾಯ ಶೇಕಡಾ 12 ರಷ್ಟಿದ್ದರೆ, ನಿಮ್ಮ ಬಂಡವಾಳ ಲಾಭವು ಸುಮಾರು 7,28,251 ರೂಪಾಯಿಗಳಾಗಿರುತ್ತದೆ. ಇದರೊಂದಿಗೆ ನಿಮ್ಮ ಒಟ್ಟು ಅಂದಾಜು ಅಂತಿಮ ನಿಧಿ 15,68,251 ರೂಪಾಯಿಗಳಷ್ಟಾಗುತ್ತದೆ.
20 ವರ್ಷಗಳಲ್ಲಿ ಎಷ್ಟು ಸಂಗ್ರಹಿಸಬಹುದು?
ಹೂಡಿಕೆಯ ಮೊತ್ತ 16,80,000 ರೂ., ಬಂಡವಾಳ ಲಾಭ 47,59,001 ರೂ., ಮತ್ತು ಅಂದಾಜು ನಿವೃತ್ತಿ ನಿಧಿ 64,39,001 ರೂ.
30 ವರ್ಷಗಳಲ್ಲಿ ಮಾಸಿಕ 7,000 ರೂ. SIP ಎಷ್ಟು ಸಂಗ್ರಹಿಸಬಹುದು?
ಪ್ರತಿ ತಿಂಗಳು 7,000 ರೂಪಾಯಿಗಳನ್ನು 30 ವರ್ಷಗಳ ಕಾಲ ಹೂಡಿಕೆ ಮಾಡಿದ್ರೆ ಹೂಡಿಕೆಯ ಮೊತ್ತ 25,20,000 ರೂ., ಬಂಡವಾಳ ಲಾಭ 1,90,46,812 ರೂ., ಮತ್ತು ಅಂದಾಜು ನಿವೃತ್ತಿ ನಿಧಿ 2,15,66,812 ರೂ. ಆಗಿರುತ್ತದೆ.
38 ವರ್ಷಗಳಲ್ಲಿ ಮಾಸಿಕ 7,000 ರೂ. SIP ಎಷ್ಟು ಸಂಗ್ರಹಿಸಬಹುದು?
ಇನ್ನು ಪ್ರತಿ ತಿಂಗಳು 7,000 ರೂ. 38 ವರ್ಷಗಳ ಕಾಲ ಹೂಡಿಕೆ ಮಾಡಿದ್ರೆ ಹೂಡಿಕೆಯ ಮೊತ್ತ 31,92,000 ರೂ., ಬಂಡವಾಳ ಲಾಭ 5,13,05,802 ರೂ., ಮತ್ತು ಅಂದಾಜು ನಿವೃತ್ತಿ ನಿಧಿ 5,44,97,802 ರೂ.ಆಗಿರುತ್ತದೆ.
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications