
“ಒಂದು ಕೋಟಿ ರೂಪಾಯಿ ಆಯಿತೆಂದರೆ ಲೈಫ್ ಸೆಟ್” – ಈ ವಾಕ್ಯವು ದಶಕಗಳಿಂದ ಮನೆ ಮಾತಾಗಿದೆ. ಚಾಯ್ ಅಂಗಡಿಗಳಲ್ಲಿ, ಎಲ್‍ಐಸಿ ಏಜೆಂಟರ ಬ್ರೋಷರ್‍ಗಳಲ್ಲಿ ಮತ್ತು 2000ರ ಪ್ರಾರಂಭದಲ್ಲಿ ಕೌನ್ ಬನೇಗಾ ಕರೋಡ್‍ಪತಿ (ಕೆಬಿಸಿ) ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಅವರ ಗಂಭೀರ ಧ್ವನಿಯಲ್ಲಿ "ಏಕ್ ಕೋಟಿ" ಮಹತ್ವವನ್ನು ಸಾರುವಂತೆ ಕೇಳಿ ಬರುತ್ತಿತ್ತು. ಮಧ್ಯಮ ವರ್ಗದವರಿಗೆ ಇದು ಅಂತಿಮ ಮೈಲಿಗಲ್ಲಾಗಿತ್ತು. ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಇದು ಖಚಿತವಾದ ಮಾರ್ಗವೆಂದು ಭಾವಿಸಲಾಗಿತ್ತು.
ಆದರೆ 2025ರಲ್ಲಿ, ಆ ಒಂದು ಕೋಟಿ ಕನಸು ಅಷ್ಟೇನೂ ಉಳಿಯುವುದಿಲ್ಲ. ಹಣದುಬ್ಬರ, ಇಎಂಐಗಳು ಮತ್ತು ಜೀವನದ ಏಳು-ಬೀಳುಗಳು ನೀವು ಅಂದುಕೊಂಡಿದ್ದನ್ನು ತಲೆಕೆಳಗಾಗಿಸುತ್ತವೆ. ಒಂದು ಕೋಟಿ ರೂಪಾಯಿ ಸಾಕು ಎಂಬ ಮಿಥ್ಯೆಯನ್ನು ಬಿಚ್ಚಿಟ್ಟು, ಆರ್ಥಿಕವಾಗಿ "ನೆಲೆಸುವುದು" ಹೇಗೆ ಒಂದು ಚಲಿಸುವ ಗುರಿಯಾಗಿದೆ ಎಂಬುದನ್ನು ನೋಡೋಣ.
2000ರ ದಶಕದ ಆರಂಭದಲ್ಲಿ ಒಂದು ಕೋಟಿ ರೂಪಾಯಿಯಲ್ಲಿ ಒಂದು ಮನೆ, ಕಾರು ಖರೀದಿಸಬಹುದಿತ್ತು. ಉಳಿದ ಹಣವನ್ನು ಎಫ್‌ಡಿ ಬಡ್ಡಿಗೆ ಹಾಕಿದರೆ ಮನೆಯ ಖರ್ಚುಗಳು ನಡೆಯುತ್ತಿದ್ದವು. ಆದರೆ ಇಂದು ಬೆಂಗಳೂರು ಅಥವಾ ಮುಂಬೈನಂತಹ ನಗರಗಳಲ್ಲಿ ಒಂದು ಕೋಟಿ ರೂಪಾಯಿಯಲ್ಲಿ ಒಂದು ಸಣ್ಣ 2BHK ಮನೆಯೂ ಸಿಗುವುದಿಲ್ಲ. ಇದಕ್ಕೆ ಶೇ 4-6 ಹಣದುಬ್ಬರವನ್ನು ಸೇರಿಸಿದರೆ, ನಿಮ್ಮ ಒಂದು ಕೋಟಿ ರೂಪಾಯಿ 30-40 ಲಕ್ಷದಂತೆ ಭಾಸವಾಗುತ್ತದೆ. ಇಂದು 30 ರೂಪಾಯಿಯ ದೋಸೆ 120 ರೂಪಾಯಿ ಆಗಿದೆ. ಇದು ಕೇವಲ ಉಪಹಾರದ ಲೆಕ್ಕಾಚಾರ ಅಷ್ಟೇ.
ಮಧ್ಯಮ ವರ್ಗದ ಕುಟುಂಬಗಳು ಆರೋಗ್ಯದ ಸಮಸ್ಯೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಕ್ಯಾನ್ಸರ್ ಚಿಕಿತ್ಸೆ, ಬೈಪಾಸ್ ಸರ್ಜರಿ ಅಥವಾ ಅಂಗಾಂಗ ಕಸಿ ಮಾಡಲು 15-30 ಲಕ್ಷ ರೂಪಾಯಿ ಬೇಕಾಗುತ್ತದೆ. ನಿಮ್ಮ ಆರೋಗ್ಯ ವಿಮೆಯು ವರ್ಷಗಳ ಹಿಂದಿನ 5 ಲಕ್ಷ ರೂಪಾಯಿಗಳದ್ದಾಗಿದ್ದರೆ, ನಿಮ್ಮ ಉಳಿತಾಯವು ಅಪಾಯಕ್ಕೆ ಸಿಲುಕುತ್ತದೆ. ಒಂದು ಐಸಿಯು ಬಿಲ್ ಒಂದು ಕೋಟಿಗೆ ಗುಡ್ ಬೈ ಹೇಳುವಂತೆ ಮಾಡುತ್ತದೆ.
ನಿಮ್ಮ ಜೀವನಶೈಲಿ ಬದಲಾಗಿದೆ, ಆದರೆ ನಿಮ್ಮ ಉಳಿತಾಯವು ಅದಕ್ಕೆ ತಕ್ಕಂತೆ ಇದೆಯೇ? ನಿಮ್ಮ ಮಕ್ಕಳು ಇಂಟರ್ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದರೆ ವರ್ಷಕ್ಕೆ 3 ಲಕ್ಷ ರೂಪಾಯಿ ಬೇಕಾಗುತ್ತದೆ. ವಾರಕ್ಕೊಮ್ಮೆ ಊಟಕ್ಕೆ ಹೋದರೆ 3000 ರೂಪಾಯಿ ಆಗುತ್ತದೆ. ನೆಟ್‍ಫ್ಲಿಕ್ಸ್, ಹಾಟ್‍ಸ್ಟಾರ್, ಅಮೆಜಾನ್, ಜಿಯೋಗೆ ವರ್ಷಕ್ಕೆ 10,000 ರೂಪಾಯಿ ಬೇಕು. ವಾರ್ಷಿಕ ಪ್ರವಾಸಕ್ಕೆ (ದೇಶೀಯ ಪ್ರವಾಸವಾದರೂ) 80,000 ರೂಪಾಯಿಗಿಂತ ಹೆಚ್ಚು ಖರ್ಚಾಗುತ್ತದೆ. ಐಫೋನ್‍ನಿಂದ ಹಿಡಿದು ಬೇಕಾಬಿಟ್ಟಿ ಜೋಮಾಟೋ ಆರ್ಡರ್‍ಗಳವರೆಗೆ ನಿಮ್ಮ ಕೋಟಿ ರೂಪಾಯಿ ಎಲ್ಲಿ ಮಾಯವಾಗುತ್ತದೆಯೋ ಗೊತ್ತಾಗುವುದಿಲ್ಲ.
ಖಾಸಗಿ ವಲಯದಲ್ಲಿ ಯಾವುದೇ ಕೆಲಸ ಶಾಶ್ವತವಲ್ಲ. ಒಂದು ಹಿಂಜರಿತ, ಒಂದು ಪುನರ್ರಚನೆ ಅಥವಾ ಒಂದು ಎಐ ಟೂಲ್ ಬಂದರೆ ಸಾಕು ಉದ್ಯೋಗ ಕಡಿತ, ಸಂಬಳ ಕಡಿತ ಅಥವಾ ಕೌಶಲ್ಯ ಹೆಚ್ಚಿಸುವ ಒತ್ತಡಗಳು ಬರುತ್ತವೆ. 40ರ ಹರೆಯದ ಯಾವುದೇ ಟೆಕ್ಕಿಯನ್ನು ಕೇಳಿ, ಅವರು ಈ ಪರಿಸ್ಥಿತಿಯನ್ನು ಅನುಭವಿಸಿರುತ್ತಾರೆ. ಒಂದು ಕೋಟಿ ಇದ್ದರೆ ಬೇಗನೆ ನಿವೃತ್ತಿ ಪಡೆದು ಗೋವಾದಲ್ಲಿ ಹೋಂ ಸ್ಟೇ ಪ್ರಾರಂಭಿಸುವ ಆಲೋಚನೆ ಇದ್ದರೆ, ಅದನ್ನು ಮರುಪರಿಶೀಲಿಸುವುದು ಉತ್ತಮ.
ಇಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣ ದುಬಾರಿಯಾಗಿದೆ. ಒಂದು ಕೋಟಿ ರೂಪಾಯಿ ಇದ್ದರೆ ನಿಶ್ಚಿಂತೆಯಿಂದ ಇರಬಹುದು ಎಂದು ನೀವು ಭಾವಿಸಿದರೆ ಅದು ತಪ್ಪು. ಒಂದು ಉತ್ತಮ ಭಾರತೀಯ ಖಾಸಗಿ ವಿಶ್ವವಿದ್ಯಾಲಯದಲ್ಲಿ ಓದಿಸಲು 30-40 ಲಕ್ಷ ರೂಪಾಯಿ ಬೇಕಾಗುತ್ತದೆ. ವಿದೇಶದಲ್ಲಿ ಓದಿಸುವುದಾದರೆ 1-1.5 ಕೋಟಿ ರೂಪಾಯಿ ಬೇಕಾಗುತ್ತದೆ. ಇದರಲ್ಲಿ ಕೋಚಿಂಗ್ ಶುಲ್ಕಗಳು, ಲ್ಯಾಪ್‍ಟಾಪ್ ಅಥವಾ ಹಾಸ್ಟೆಲ್ ಶುಲ್ಕಗಳು ಸೇರಿಲ್ಲ. ಒಂದು ಮಗು ಎಂದರೆ ಒಂದು ಕೋಟಿ ರೂಪಾಯಿ ಎಂದು ನೆನಪಿಡಿ.
ನಾವು ಇನ್ನೂ ಒಂದು ಕೋಟಿ ರೂಪಾಯಿ ಅಂಕಿ ಅಂಶವನ್ನು ಏಕೆ ಪೂಜಿಸುತ್ತೇವೆ? ಏಕೆಂದರೆ ಅದು ದೊಡ್ಡ ಮೊತ್ತವೆಂದು ನಮಗೆ ಅನಿಸುತ್ತದೆ. ಆದರೆ ಭಾವನೆಗಳು ಸತ್ಯವನ್ನು ಮೀರಿಸುವುದಿಲ್ಲ. ಇಂದಿನ ಭಾರತದಲ್ಲಿ ಸತ್ಯವು ಕಠೋರವಾಗಿದೆ. ಆರ್ಥಿಕ ಸ್ಥಿರತೆ ಇನ್ನು ಮುಂದೆ ತಲುಪಬೇಕಾದ ಗುರಿಯಲ್ಲ. ಇದು ನಿರಂತರ ಪ್ರಯಾಣ. ಒಂದು ಕೋಟಿ ರೂಪಾಯಿ ಕೇವಲ ಪೆಟ್ರೋಲ್ ಪಂಪ್ ಅಷ್ಟೇ, ಅಂತಿಮ ಗೆರೆಯಲ್ಲ.
ನಿಮಗೆ ನಿಜವಾಗಿಯೂ ಭದ್ರತೆ ಬೇಕೆಂದರೆ ಹಲವು ಆದಾಯದ ಮೂಲಗಳನ್ನು ಹೊಂದಿರಿ. ಕೇವಲ ಒಂದು ಕೆಲಸವನ್ನು ಮಾತ್ರ ಅವಲಂಬಿಸಬೇಡಿ. ಸ್ವತಂತ್ರವಾಗಿ ಕೆಲಸ ಮಾಡಿ, ಹೂಡಿಕೆ ಮಾಡಿ, ಆಸ್ತಿಯನ್ನು ಬಾಡಿಗೆಗೆ ನೀಡಿ. ಕಷ್ಟಪಟ್ಟು ದುಡಿಯುವ ಬದಲು ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ಕನಿಷ್ಠ 6 ರಿಂದ 12 ತಿಂಗಳ ಖರ್ಚಿಗೆ ಹಣವನ್ನು ಹೊಂದಿರಿ. ಆರೋಗ್ಯ ಮತ್ತು ಜೀವ ವಿಮೆಯನ್ನು ಮಾಡಿಸಿ. ಕನಿಷ್ಠ 25-50 ಲಕ್ಷ ರೂಪಾಯಿಗಳಿಗೆ ಆರೋಗ್ಯ ವಿಮೆ ಇರಲಿ. ನಿಮ್ಮ ಕಚೇರಿಯ ವಿಮೆ ನೀವು ಕೆಲಸದಲ್ಲಿ ಇಲ್ಲದಿದ್ದಾಗ ಸಹಾಯಕ್ಕೆ ಬರುವುದಿಲ್ಲ.
ಎಫ್‍ಡಿಗಳು ನಿಮ್ಮನ್ನು ಉಳಿಸುವುದಿಲ್ಲ. ಮ್ಯೂಚುವಲ್ ಫಂಡ್‍ಗಳು, ಇಂಡೆಕ್ಸ್ ಫಂಡ್‍ಗಳು, ಎನ್‍ಪಿಎಸ್‍ಗಳಲ್ಲಿ ಹೂಡಿಕೆ ಮಾಡಿ. ಹಣಕಾಸು ಸಾಕ್ಷರತೆಯನ್ನು ಹೊಂದಿರುವುದು ಬಹಳ ಮುಖ್ಯ. ನಿಮಗೆ ಚಾರ್ಟರ್ಡ್ ಅಕೌಂಟೆಂಟ್ ಪದವಿ ಬೇಕಿಲ್ಲ. ಆದರೆ ಹಣದುಬ್ಬರ, ತೆರಿಗೆ ಮತ್ತು ಚಕ್ರಬಡ್ಡಿ ಬಗ್ಗೆ ತಿಳಿದಿರಬೇಕು. ನಿಮ್ಮ ಆರ್ಥಿಕ ಭವಿಷ್ಯವು ಇದರ ಮೇಲೆ ನಿಂತಿದೆ. ಹೆಚ್ಚಿನ ಮಧ್ಯಮ ವರ್ಗದ ಭಾರತೀಯರು ಆರ್ಥಿಕವಾಗಿ ನೆಲೆಸಿಲ್ಲ, ಅವರು ಕೇವಲ ಬದುಕುತ್ತಿದ್ದಾರೆ ಅಷ್ಟೇ. ಒಂದು ಉದ್ಯೋಗ ನಷ್ಟ, ಒಂದು ಶಸ್ತ್ರಚಿಕಿತ್ಸೆ, ಒಂದು ಮಾರುಕಟ್ಟೆ ಕುಸಿತ ನಿಮ್ಮೆಲ್ಲಾ ಕನಸುಗಳನ್ನು ನುಚ್ಚುನೂರು ಮಾಡಬಹುದು.
ನಿಮ್ಮ ಆದಾಯವು ಇಂದು ಸ್ಥಗಿತಗೊಂಡರೆ, ನಿಮ್ಮ ಈಗಿನ ಜೀವನಶೈಲಿಯನ್ನು ನೀವು ಎಷ್ಟು ಕಾಲ ನಡೆಸಬಹುದು ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ. ನಿಮ್ಮ ಉತ್ತರವು 10-12 ವರ್ಷಗಳಿಗಿಂತ ಕಡಿಮೆಯಿದ್ದರೆ, ನೀವು ನೆಲೆಸಿಲ್ಲ. ನೀವು ಆರ್ಥಿಕ ಜಂಗಾ ಆಟವನ್ನು ಆಡುತ್ತಿದ್ದೀರಿ. ಮುಂದಿನ ಇಟ್ಟಿಗೆಯು ಎಲ್ಲವನ್ನೂ ಉರುಳಿಸುವುದಿಲ್ಲ ಎಂದು ಭಾವಿಸುತ್ತಿದ್ದೀರಿ ಅಷ್ಟೇ. ಹಣವು ನಿದ್ರೆಯಲ್ಲಿ ಕೆಲಸ ಮಾಡಿದಾಗ ಮತ್ತು ನಿಮ್ಮ ಬದುಕು ಸಕ್ರಿಯ ಆದಾಯವನ್ನು ಅವಲಂಬಿಸದಿದ್ದಾಗ ಮಾತ್ರ ಜೀವನವು ಸ್ಥಿರವಾಗಿರುತ್ತದೆ. ಒಂದು ಕೋಟಿ ಕನಸು ಸತ್ತಿಲ್ಲ, ಅದಕ್ಕೆ ಸ್ವಲ್ಪ ಬದಲಾವಣೆ ಬೇಕಷ್ಟೇ. ಅದಕ್ಕೆ ಶ್ರಮ, ರಕ್ಷಣೆ, ಜಾಗೃತಿ ಮತ್ತು ಬೆಳವಣಿಗೆಯನ್ನು ಸೇರಿಸಿ, ಆಗ ನೀವು ನೆಲೆಸಲು ಸಾಧ್ಯವಾಗುತ್ತದೆ.


Click it and Unblock the Notifications