ಹೂಡಿಕೆ (Investment) ಮಾಡೋದು ಹಲವರ ಕನಸು. ಹಾಗಾಗಿ ಚಿನ್ನ, ಎಫ್‌ಡಿ, ಆರ್‌ಡಿ, ಪೋಸ್ಟ್ ಆಫೀಸ್ ಹೀಗೆ ಹಲವು ಕಡೆ ಹೆಚ್ಚಿನವರು ಹೂಡಿಕೆ ಮಾಡುತ್ತಾರೆ. ಆದ್ರೆ ಇದೆಲ್ಲದರ ಹಿಂದಿನ ಉದ್ದೇಶ ಒಂದೇ, ಅದೇ ಆದಾಯ. ಆದ್ರೆ ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ ಸಿಗುತ್ತೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಅಂತಹ ಯೋಜನೆಯೊಂದರ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.

ಸುರಕ್ಷಿತ ಹೂಡಿಕೆ ಜೊತೆಗೆ, ಗ್ಯಾರಂಟಿ ಆದಾಯ ಸಿಗಬೇಕೆಂಬುದು ಹಲವರ ಗುರಿ. ಅಂತಹವರಿಗಾಗಿ ಇಂದು ನಾವೊಂದು ಹೂಡಿಕೆ ಟಿಪ್ಸ್ ನೀಡುತ್ತೇವೆ ನೋಡಿ. ಈ ಯೋಜನೆ ಸುರಕ್ಷಿತವೂ ಹೌದು, ಹೂಡಿಕೆ ಮಾಡಿದ್ರೆ ಹೆಚ್ಚಿನ ರಿಟರ್ನ್ಸ್ ಸಿಗೋದಂತೂ ಪಕ್ಕಾ. ಹಾಗಿದ್ರೆ ಆ ಯೋಜನೆ ಯಾವುದು ಗೊತ್ತಾ?
ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರಬೇಕು, ಆದಾಯ ಹೆಚ್ಚು ಬರಬೇಕು ಎಂದು ಬಯಸುವವರಿಗೆ ಅಂಚೆ ಕಚೇರಿಯಲ್ಲಿ ಹಲವಾರು ಪ್ಲಾನ್‌ಗಳಿವೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಈ ಯೋಜನೆಗಳಲ್ಲಿ ಯಾವುದೇ ಭಯವಿಲ್ಲದೇ ಹೂಡಿಕೆ ಮಾಡಬಹುದು ಮತ್ತು ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಅದರಲ್ಲೂ ಪೋಸ್ಟ್ ಆಫೀಸ್‌ನ ರಾಷ್ಟ್ರೀಯ ಉಳಿತಾಯ ಪತ್ರ (NSC) ಬಹಳ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ, 5 ವರ್ಷಗಳಲ್ಲಿ ಉತ್ತಮ ಆದಾಯ ಸಂಪಾದಿಸಬಹುದು.
ಬಡ್ಡಿ ಎಷ್ಟು?
ಎನ್‌ಎಸ್‌ಸಿ ಯೋಜನೆಯಲ್ಲಿ ಶೇ 7.7 ರಷ್ಟು ಬಡ್ಡಿದರವನ್ನು ವಾರ್ಷಿಕವಾಗಿ ಚಕ್ರಬಡ್ಡಿ ರೂಪದಲ್ಲಿ ನೀಡುತ್ತದೆ. ಉದಾಹರಣೆಗೆ, ₹11 ಲಕ್ಷ ರೂ.ಅನ್ನು ಹೂಡಿಕೆ ಮಾಡಿದರೆ, 5 ವರ್ಷಗಳಲ್ಲಿ ಸುಮಾರು ₹16 ಲಕ್ಷ ಮರಳಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಇದರರ್ಥ ಹೂಡಿಕೆದಾರರು ತಮ್ಮ ಹಣಕ್ಕೆ ಬರೋಬ್ಬರಿ ₹5 ಲಕ್ಷ ಬಡ್ಡಿ ಹಣವನ್ನೇ ಪಡೆಯುತ್ತಾರೆ. ಇನ್ನು ತಜ್ಞರ ಪ್ರಕಾರ, ಹೆಚ್ಚು ಹೂಡಿಕೆ ಮಾಡಿದ್ರೆ, ಹೆಚ್ಚು ಆದಾಯ ಗಳಿಸಬಹುದು.
ಎಷ್ಟು ಹೂಡಿಕೆ ಮಾಡಬಹುದು?
ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ (NSC) ಹೂಡಿಕೆ ಮಾಡಲು ದೊಡ್ಡ ಮೊತ್ತದ ಅಗತ್ಯವಿಲ್ಲ. ಕನಿಷ್ಠ ₹1,000 ದೊಂದಿಗೆ ಈ ಹೂಡಿಕೆ ಯೋಜನೆಯನ್ನು ಓಪನ್ ಮಾಡಬಹುದು. ಇನ್ನು ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಅಷ್ಟೇ ಅಲ್ಲ, ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಈ ಖಾತೆಯನ್ನು ಓಪನ್ ಮಾಡಲು ಅವಕಾಶವಿದೆ.
ಈ ಯೋಜನೆಗೆ ಕಡ್ಡಾಯ 5 ವರ್ಷಗಳ ಲಾಕ್-ಇನ್ ಅವಧಿ ಇದೆ. ಒಂದು ವೇಳೆ, ಅವಧಿಗೆ ಮುನ್ನವೇ ಅಕೌಂಟ್ ಮುಚ್ಚಲು ಮುಂದಾದರೆ ಅಥವಾ ಹಣ ಹಿಂಪಡೆದರೆ, ಬಡ್ಡಿ ಸಿಗದೆ ಕೇವಲ ಅಸಲು ಹಣ ಮಾತ್ರ ನಿಮ್ಮ ಕೈಸೇರುತ್ತದೆ. ನಿಜವಾದ ಲಾಭ ಪಡೆಯಬೇಕೆಂದರೆ ಸಂಪೂರ್ಣವಾಗಿ 5 ವರ್ಷ ಪೂರ್ಣಗೊಳಿಸುವುದು ಕಡ್ಡಾಯ.
ಎನ್‌ಎಸ್‌ಸಿ ಹೂಡಿಕೆ ಕೇವಲ ಹೆಚ್ಚಿನ ಲಾಭ ಮಾತ್ರವಲ್ಲದೇ, ತೆರಿಗೆ ಪ್ರಯೋಜನಗಳನ್ನು ಸಹ ಹೊಂದಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ, ನೀವು ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಒಟ್ಟಾರೆಯಾಗಿ ಈ ಯೋಜನೆಯು ಸುರಕ್ಷಿತ ಹೂಡಿಕೆ ಮತ್ತು ತೆರಿಗೆ ಉಳಿತಾಯದ ಅನುಕೂಲದ ಜೊತೆ ಉತ್ತಮ ಬಡ್ಡಿಯನ್ನು ನೀಡುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications