ಆಗಸ್ಟ್ 31ರ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆಗೆ ಇನ್ನು ಕೇವಲ 10 ದಿನಗಳಷ್ಟೇ ಬಾಕಿ ಇವೆ. ಹೀಗಾಗಿ ದೇಶಾದ್ಯಂತ ತೆರಿಗೆದಾರರು ಐಟಿಆರ್ ಫೈಲಿಂಗ್ ಮಾಡಲು ಮುಗಿಬಿದ್ದಿದ್ದಾರೆ. ಅದರಲ್ಲೂ ವೇತನದಾರರು ಮತ್ತು ಎಸ್‌ಐಪಿ (SIP) ಹೂಡಿಕೆದಾರರು ಈ ಸಮಯದಲ್ಲಿ ಜಾಗರೂಕರಾಗಿರುವುದು ಬಹಳ ಮುಖ್ಯ. ಹಣಕಾಸಿನ ಮಾಹಿತಿಯಲ್ಲಿ ಸಣ್ಣ ವ್ಯತ್ಯಾಸವಾದರೂ ಅಥವಾ ಅವಸರದಲ್ಲಿ ತಪ್ಪು ಮಾಹಿತಿ ನೀಡಿದರೆ, ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಐಟಿಆರ್ ಸಲ್ಲಿಸುವ ಮುನ್ನ ನಿಮ್ಮ ಫಾರ್ಮ್ 16 (Form 16) ಅನ್ನು ವಾರ್ಷಿಕ ಮಾಹಿತಿ ಹೇಳಿಕೆ (AIS) ಜೊತೆ ತಾಳೆ ನೋಡಿ. ಇದರೊಂದಿಗೆ ತೆರಿಗೆದಾರರ ಮಾಹಿತಿ ಸಾರಾಂಶ (TIS) ಹಾಗೂ ಬ್ರೋಕರ್ ನೀಡುವ ಲಾಭ-ನಷ್ಟದ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಿ. ಮ್ಯೂಚುಯಲ್ ಫಂಡ್ (MF) ಕ್ಯಾಪಿಟಲ್ ಗೇನ್ಸ್ ವರದಿಗಳು ನಿಮ್ಮ ಅಧಿಕೃತ ಆದಾಯದ ದಾಖಲೆಗಳಿಗೆ ಹೊಂದುವಂತಿರಬೇಕು. ಸಾಮಾನ್ಯವಾಗಿ ಡಿವಿಡೆಂಡ್ ಆದಾಯ ಮತ್ತು ಫಿಕ್ಸ್ಡ್ ಡೆಪಾಸಿಟ್ (FD) ಮೇಲಿನ ಬಡ್ಡಿಯನ್ನು ನಮೂದಿಸದಿರುವುದೇ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ಕಂಪನಿ ನೀಡುವ ಬೋನಸ್ ಅಥವಾ ಸ್ಟಾಕ್ ಆಪ್ಷನ್‌ಗಳ ವಿವರಗಳನ್ನೂ ಸರಿಯಾಗಿ ನಮೂದಿಸುವುದನ್ನು ಮರೆಯದಿರಿ.

ಐಟಿಆರ್ ಡೆಡ್‌ಲೈನ್‌ಗೂ ಮುನ್ನ ವೇತನದಾರರು ಮತ್ತು ಎಂಎಫ್ ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ವಿಷಯಗಳು
ಈಕ್ವಿಟಿ ಮತ್ತು ಡೆಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವವರು ಕ್ಯಾಪಿಟಲ್ ಗೇನ್ಸ್ ಲೆಕ್ಕಾಚಾರ ಮಾಡುವಾಗ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ವಹಿಸಬೇಕು. ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್ ಕ್ಯಾಪಿಟಲ್ ಲಾಸ್ ಸೆಟ್-ಆಫ್ ನಿಯಮಗಳನ್ನು ಸರಿಯಾಗಿ ಪರಿಶೀಲಿಸಿ. 2018ಕ್ಕಿಂತ ಮೊದಲು ಮಾಡಿದ ಈಕ್ವಿಟಿ ಹೂಡಿಕೆಗಳಿಗೆ 'ಗ್ರಾಂಡ್‌ಫಾದರಿಂಗ್ ಕ್ಲಾಸ್' ಸರಿಯಾಗಿ ಅನ್ವಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೊತೆಗೆ, ಷೇರುಗಳ ಡಿವಿಡೆಂಡ್ ಮೇಲಿನ ಟಿಡಿಎಸ್ (TDS) ನಿಮ್ಮ ಒಟ್ಟು ಟ್ಯಾಕ್ಸ್ ಕ್ರೆಡಿಟ್‌ನಲ್ಲಿ ಪ್ರತಿಫಲಿಸಬೇಕು. ಸಣ್ಣಪುಟ್ಟ ಹೂಡಿಕೆಗಳ ಆದಾಯವನ್ನು ಕೈಬಿಟ್ಟರೂ ನಿಮ್ಮ ಐಟಿಆರ್ ಪ್ರಕ್ರಿಯೆ ವಿಳಂಬವಾಗಬಹುದು.
ಐಟಿಆರ್ ಸಲ್ಲಿಸುವ ಮುನ್ನ ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ (Tax Regimes) ಅಡಿಯಲ್ಲಿ ನಿಮ್ಮ ತೆರಿಗೆಯನ್ನು ಹೋಲಿಸಿ ನೋಡಿ. ನೀವು ಹಳೆಯ ತೆರಿಗೆ ಪದ್ಧತಿಯನ್ನು ಆಯ್ದುಕೊಂಡರೆ, ಸೆಕ್ಷನ್ 80C ಮತ್ತು 80D ಅಡಿಯಲ್ಲಿ ಸಿಗುವ ವಿನಾಯಿತಿಗಳಿಗೆ ಅಗತ್ಯ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಿ. ಹೆಚ್‌ಆರ್‌ಎ (HRA) ಕ್ಲೇಮ್‌ಗಳು ಮತ್ತು ಗೃಹ ಸಾಲದ ಬಡ್ಡಿ ವಿನಾಯಿತಿಯನ್ನು ಸರಿಯಾಗಿ ಲೆಕ್ಕ ಹಾಕಿ. ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ದರ ಕಡಿಮೆಯಿದ್ದರೂ, ಬಹುತೇಕ ವಿನಾಯಿತಿಗಳು ಸಿಗುವುದಿಲ್ಲ. ಸೂಕ್ತ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ವೇತನದಾರರು ಹೆಚ್ಚಿನ ತೆರಿಗೆ ಉಳಿಸಬಹುದು.
ಐಟಿಆರ್ ಸಲ್ಲಿಸಿದ ನಂತರ ಇ-ವೆರಿಫೈ ಮತ್ತು ಮುಂದಿನ ಹಂತಗಳು
ನೆನಪಿಡಿ, ಬರಿ ಐಟಿಆರ್ ಫೈಲ್ ಮಾಡಿದರೆ ಕೆಲಸ ಮುಗಿಯುವುದಿಲ್ಲ. ಐಟಿಆರ್ ರದ್ದಾಗುವುದನ್ನು ತಪ್ಪಿಸಲು ಫೈಲಿಂಗ್ ಮಾಡಿದ 30 ದಿನಗಳ ಒಳಗಾಗಿ ಇ-ವೆರಿಫೈ ಮಾಡುವುದು ಕಡ್ಡಾಯ. ಆಧಾರ್ ಒಟಿಪಿ (Aadhaar OTP), ಬ್ಯಾಂಕ್ ನೆಟ್ ಬ್ಯಾಂಕಿಂಗ್ ಅಥವಾ ಡಿಜಿಲಾಕರ್ ಬಳಸಿ ತಕ್ಷಣ ಇ-ವೆರಿಫೈ ಮಾಡಬಹುದು. ಅರ್ಜಿ ಸಲ್ಲಿಸಿದ ನಂತರ ನಿಮ್ಮ ರಿಫಂಡ್ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಿ. ಸಮಯಕ್ಕೆ ಸರಿಯಾಗಿ ಇ-ವೆರಿಫೈ ಮಾಡುವುದರಿಂದ ದಂಡವನ್ನು ತಪ್ಪಿಸಬಹುದು ಹಾಗೂ ಆದಾಯ ತೆರಿಗೆ ಪ್ರಕ್ರಿಯೆಯೂ ಸುಲಭವಾಗಿ ಪೂರ್ಣಗೊಳ್ಳುತ್ತದೆ.


Click it and Unblock the Notifications