ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಇಂದು, ಅಂದರೆ ಸೆಪ್ಟೆಂಬರ್ 15, 2025, ಕೊನೆಯ ದಿನವಾಗಿದೆ. ಈ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವ ಯೋಚನೆ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಭಾನುವಾರ ಕೆಲವು ಸಮಯ ತೆರಿಗೆ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾದರೂ, ಗಡುವು ವಿಸ್ತರಣೆ ಮಾಡುವ ಸಾಧ್ಯತೆ ಇಲ್ಲ ಎಂದು ಇಲಾಖೆ ತಿಳಿಸಿದೆ.

ಪೋರ್ಟಲ್ ಅಡಚಣೆ, ತೆರಿಗೆದಾರರ ದೂರು:
ಭಾನುವಾರ ತೆರಿಗೆ ಪೋರ್ಟಲ್ ಕೆಲವು ಗಂಟೆಗಳ ಕಾಲ ಕಾರ್ಯನಿರ್ವಹಿಸದೇ ಇದ್ದ ಕಾರಣ, ಅನೇಕ ತೆರಿಗೆದಾರರು ಐಟಿಆರ್ ಸಲ್ಲಿಸಲು ಸಾಧ್ಯವಾಗಲಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಗಡುವು ವಿಸ್ತರಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಆದಾಯ ತೆರಿಗೆ ಇಲಾಖೆ ಎಕ್ಸ್ (ಹಳೆಯ ಟ್ವಿಟರ್) ಮೂಲಕ ಸ್ಪಷ್ಟನೆ ನೀಡುತ್ತಾ, "ಸೆಪ್ಟೆಂಬರ್ 15ರ ಗಡುವು ಯಥಾಸ್ಥಿತಿಯಲ್ಲೇ ಇರುತ್ತದೆ, ವಿಸ್ತರಣೆ ಮಾಡುವ ಯೋಚನೆ ಇಲ್ಲ" ಎಂದು ತಿಳಿಸಿದೆ.
ಗಡುವು ತಪ್ಪಿಸಿದರೆ ಏನು ಪರಿಣಾಮ?
ಗಡುವಿನೊಳಗೆ ಐಟಿಆರ್ ಸಲ್ಲಿಸದಿದ್ದರೆ, ತೆರಿಗೆದಾರರು ದಂಡ ಮತ್ತು ಬಡ್ಡಿ ಎರಡನ್ನೂ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ 234F ಸೆಕ್ಷನ್ ಪ್ರಕಾರ, ಆದಾಯ ₹5 ಲಕ್ಷಕ್ಕಿಂತ ಹೆಚ್ಚಿದ್ದರೆ ₹5,000 ದಂಡ ವಿಧಿಸಲಾಗುತ್ತದೆ. ಆದರೆ ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಕೇವಲ ₹1,000 ದಂಡ ಅನ್ವಯವಾಗುತ್ತದೆ.
ಇದೆ ರೀತಿ, ಇನ್ನೂ ತೆರಿಗೆ ಪಾವತಿಸಬೇಕಿದ್ದರೆ ಮತ್ತು ಗಡುವು ತಪ್ಪಿಸಿದರೆ, 234A ಸೆಕ್ಷನ್ ಪ್ರಕಾರ ಬಾಕಿ ಇರುವ ತೆರಿಗೆಯ ಮೇಲೆ ಪ್ರತಿ ತಿಂಗಳಿಗೆ 1% ಸರಳ ಬಡ್ಡಿ ವಿಧಿಸಲಾಗುತ್ತದೆ. ಈ ಬಡ್ಡಿಯನ್ನು ತೆರಿಗೆ ಪಾವತಿ ವಿಳಂಬವಾದ ದಿನಾಂಕದಿಂದ ಲೆಕ್ಕ ಹಾಕಲಾಗುತ್ತದೆ.
ವಿಳಂಬಿತ ಹಾಗೂ ಪರಿಷ್ಕೃತ ರಿಟರ್ನ್ಸ್ ಅವಕಾಶ:
ಒಂದು ವೇಳೆ ಸೆಪ್ಟೆಂಬರ್ 15ರೊಳಗೆ ಐಟಿಆರ್ ಸಲ್ಲಿಸಲು ಸಾಧ್ಯವಾಗದಿದ್ದರೆ, ಡಿಸೆಂಬರ್ 31, 2025ರವರೆಗೆ ವಿಳಂಬಿತ ಅಥವಾ ಪರಿಷ್ಕೃತ ರಿಟರ್ನ್ಸ್ ಸಲ್ಲಿಸಲು ಅವಕಾಶವಿದೆ. ಅಲ್ಲದೆ, ನವೀಕರಿಸಿದ ರಿಟರ್ನ್ಸ್ (ITR-U) ಅನ್ನು ಮಾರ್ಚ್ 31, 2030ರವರೆಗೆ ಸಲ್ಲಿಸಬಹುದು.
ಐಟಿಆರ್ ಸಲ್ಲಿಸುವ ವಿಧಾನ:
ಐಟಿಆರ್ ಸಲ್ಲಿಸಲು ಆದಾಯ ತೆರಿಗೆ ಪೋರ್ಟಲ್ ಗೆ ಭೇಟಿ ನೀಡಬೇಕು. ಪ್ಯಾನ್ ಅಥವಾ ಆಧಾರ್ ಸಂಖ್ಯೆ ಬಳಸಿ ಲಾಗಿನ್ ಆಗಿ. ನಂತರ ಐಟಿಆರ್ ಸಲ್ಲಿಕೆ ವಿಭಾಗಕ್ಕೆ ಹೋಗಿ, ಸೂಕ್ತ ಮೌಲ್ಯಮಾಪನ ವರ್ಷ ಮತ್ತು ಸರಿಯಾದ ಐಟಿಆರ್ ಫಾರ್ಮ್ ಆಯ್ಕೆ ಮಾಡಬೇಕು.
ಆದಾಯದ ಮೂಲಗಳಿಗೆ ಅನುಗುಣವಾಗಿ ಮಾಹಿತಿಯನ್ನು ಪರಿಶೀಲಿಸಿ, ಬಾಕಿ ತೆರಿಗೆ ಪಾವತಿಸಿ, ನಂತರ ರಿಟರ್ನ್ಸ್ ಸಲ್ಲಿಸಿ. ಕೊನೆಯಲ್ಲಿ ಇ-ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಐಟಿಆರ್ ಸಲ್ಲಿಕೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.
ವದಂತಿಗಳಿಗೆ ಸ್ಪಷ್ಟನೆ:
ಸಾಮಾಜಿಕ ಮಾಧ್ಯಮಗಳಲ್ಲಿ "ಐಟಿಆರ್ ಸಲ್ಲಿಕೆ ಗಡುವು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ" ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಆದಾಯ ತೆರಿಗೆ ಇಲಾಖೆ ಈ ವದಂತಿಗಳಿಗೆ ಸ್ಪಷ್ಟನೆ ನೀಡುತ್ತಾ, "ಐಟಿಆರ್ ಸಲ್ಲಿಕೆ ಗಡುವು ಸೆಪ್ಟೆಂಬರ್ 15, 2025 ರಂದೇ ಇರುತ್ತದೆ" ಎಂದು ಅಧಿಕೃತ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಅದರಂತೆ, ತೆರಿಗೆದಾರರು ಗಡುವಿನೊಳಗೆ ಐಟಿಆರ್ ಸಲ್ಲಿಸುವುದು ಅತ್ಯಂತ ಮುಖ್ಯ. ಗಡುವು ತಪ್ಪಿಸಿದರೆ ದಂಡ ಮತ್ತು ಬಡ್ಡಿ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಲಿದೆ.


Click it and Unblock the Notifications