ಈ ದುಬಾರಿ ದುನಿಯಾದಲ್ಲಿ ಉಳಿತಾಯಕ್ಕಿಂತ ವೆಚ್ಚಗಳೇ ಹೆಚ್ಚು. ಅದರಲ್ಲೂ ಬೆಂಗಳೂರು, ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಯಾವುದನ್ನೂ ಖರೀದಿಸಬೇಕೆಂದರೂ ಹಣ ನೀಡಲೇಬೇಕು. ಅದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಜೀವನ ವೆಚ್ಚ ಹಾಗೂ ಹಣದುಬ್ಬರ ಗಣನೀಯವಾಗಿ ಹೆಚ್ಚಾಗುತ್ತಿದೆ. ಉದ್ಯೋಗದಲ್ಲಿರುವಾಗಲೇ ವೆಚ್ಚಗಳನ್ನು ನಿಭಾಯಿಸುವುದು ಕಷ್ಟಕರವಾಗಿರುವಾಗ, ನಿವೃತ್ತಿಯ ನಂತರವಂತೂ ಜೀವನ ಸಾಗಿಸೋದೆ ಕಷ್ಟವೆಂಬಂತಾಗಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಭದ್ರತೆಯೇ ಒಂದು ದೊಡ್ಡ ಸವಾಲು. ದೊಡ್ಡ ಮೊತ್ತದ ಉಳಿತಾಯಕ್ಕಿಂತ, ನಿವೃತ್ತಿ ಜೀವನಕ್ಕೆ ಸ್ಥಿರ ಆದಾಯವನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅದಕ್ಕಾಗಿ ಎಲ್‌ಐಸಿ (LIC) ತಂದಿದೆ ನೋಡಿ ಸೂಪರ್ ಪ್ಲಾನ್.

ಹೌದು, ನಿವೃತ್ತಿಯ ನಂತರ ಆರಾಮವಾಗಿ ಜೀವನ ಸಾಗಿಸಬೇಕು ಎಂಬ ಆಸೆ ಇದ್ದವರಿಗೆ ಎಲ್‌ಐಸಿಯ ಸರಳ ಪಿಂಚಣಿ ಯೋಜನೆ ಇದಕ್ಕೆ ಉತ್ತಮ ಪರಿಹಾರವಾಗಿದೆ. ಎಲ್‌ಐಸಿಯ ಈ ಯೋಜನೆಯು ನಿವೃತ್ತಿಯ ನಂತರ ಜೀವನ ಸಾಗಿಸಲು ನೆರವಾಗುತ್ತದೆ. ಒಂದೇ ಬಾರಿ ಹೂಡಿಕೆ (lump sum) ಮಾಡುವ ಮೂಲಕ, ಪಾಲಿಸಿದಾರರು ತಮ್ಮ ಜೀವಿತಾವಧಿಯವರೆಗೆ ನಿರಂತರ ಪಿಂಚಣಿಯನ್ನು ಪಡೆಯಬಹುದು. ಇದು ಷೇರುಮಾರುಕಟ್ಟೆ, ಇತರ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಇದು ಗ್ಯಾರಂಟಿ ಆದಾಯ ಬಯಸುವವರಿಗೆ ಉತ್ತಮವಾಗಿದೆ.
ಹೂಡಿಕೆದಾರರಿಗೆ ಮೊದಲ ಆದ್ಯತೆ!
ವ್ಯಕ್ತಿ ಏಕಾಂಗಿಯಾಗಿ ಅಥವಾ ದಂಪತಿ ಜಂಟಿಯಾಗಿ ಇದನ್ನು ಆಯ್ಕೆ ಮಾಡಬಹುದು. ಪಾಲಿಸಿಗೆ ಸೇರಲು ಕನಿಷ್ಠ 40 ವರ್ಷಗಳು ಮತ್ತು ಗರಿಷ್ಠ 80 ವರ್ಷಗಳು ವಯಸ್ಸಾಗಿರಬೇಕು. ತಡವಾಯಿತು ಎಂದು ಭಾವಿಸುವವರಿಗೂ ಇದು ಹೂಡಿಕೆ ಮಾಡುವವರಿಗೆ ಸುವರ್ಣಾವಕಾಶ ನೀಡುತ್ತದೆ.
ಪಾಲಿಸಿದಾರರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿ ಪಡೆಯಲು ಆಯ್ಕೆ ಮಾಡಬಹುದು. ಪಿಂಚಣಿ ಮೊತ್ತವು ಆರಂಭದಿಂದ ಅಂತ್ಯದವರೆಗೆ ಸ್ಥಿರವಾಗಿರುತ್ತದೆ. ಇದು ಅಪಾಯವನ್ನು ಇಷ್ಟಪಡದ, ನಿವೃತ್ತಿಗೆ ಸಮೀಪಿಸುತ್ತಿರುವವರಿಗೆ ಅಥವಾ ತಮ್ಮ ಪಿಎಫ್ (PF)/ಗ್ರಾಚ್ಯುಟಿ ಮೊತ್ತವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಬಯಸುವವರಿಗೆ ಬೆಸ್ಟ್ ಪ್ಲಾನ್ ಆಗಿದೆ.
ಯೋಜನೆ ಪ್ರಾರಂಭವಾಗಿ ಆರು ತಿಂಗಳ ನಂತರ ಸರೆಂಡರ್ ಸೌಲಭ್ಯ ಲಭ್ಯವಿದೆ. ಅಂದರೆ ಪಾಲಿಸಿ ಸೂಕ್ತವಲ್ಲ ಎಂದು ಅನಿಸಿದರೆ ಹಿಂಪಡೆಯಲು ಅವಕಾಶವಿದೆ. ಪಾಲಿಸಿದಾರರು ಮರಣ ಹೊಂದಿದರೆ, ಹೂಡಿಕೆ ಮಾಡಿದ ಸಂಪೂರ್ಣ ಮೊತ್ತವು ನಾಮಿನಿದಾರರಿಗೆ ನೀಡಲಾಗುತ್ತದೆ. ಇದು ಕುಟುಂಬದ ಆರ್ಥಿಕ ಸುರಕ್ಷತೆಗೂ ನೆರವಾಗಲಿದೆ. ಅಲ್ಲದೇ ಆರು ತಿಂಗಳ ಬಳಿಕ ಸಾಲ ಸೌಲಭ್ಯವೂ ನೀಡಲಾಗುತ್ತದೆ.
ಕನಿಷ್ಠ ವಾರ್ಷಿಕ ₹12,000 ಹೂಡಿಕೆಯೊಂದಿಗೆ ನೀವು ಈ ಪೆನ್ಷನ್ ಸೌಲಭ್ಯವನ್ನು ಪಡೆಯಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಉದಾಹರಣೆಗೆ, ಎಲ್‌ಐಸಿ ಕ್ಯಾಲ್ಕುಲೇಟರ್ ಪ್ರಕಾರ, 42 ವರ್ಷದ ವ್ಯಕ್ತಿಯೊಬ್ಬರು ಯೋಜನೆಯಲ್ಲಿ ₹30 ಲಕ್ಷ ಒಬ್ಬರೇ ಹೂಡಿಕೆ ಮಾಡಿದರೆ, ಅವರು ಮಾಸಿಕವಾಗಿ ಸುಮಾರು ₹12,388 ಗ್ಯಾರಂಟಿ ಪಿಂಚಣಿ ಪಡೆಯಬಹುದು.
ಸರಳ ಪಿಂಚಣಿ ಯೋಜನೆಯನ್ನು ನೀವೂ ಕೂಡಾ ಆರಂಭಿಸಿದರೆ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಎಲ್‌ಐಸಿ ಏಜೆಂಟ್‌ಗಳ ಮೂಲಕ ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಪಾಲಿಸಿಯ ಕುರಿತ ಎಲ್ಲ ಪ್ರಮುಖ ಮಾಹಿತಿ ಬೇಕಾದರೆ ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.


Click it and Unblock the Notifications