ಬ್ಯುಸಿನೆಸ್ (Business) ಆರಂಭಿಸೋದು ಹಲವರ ಕನಸು. ಆದ್ರೆ ನಷ್ಟದ ಭಯದಿಂದ ಅಥವಾ ಬಂಡವಾಳ ಕೊರತೆಯಿಂದ ಹೆಚ್ಚಿನವರು ಯಾವುದೇ ವ್ಯವಹಾರ ಆರಂಭಿಸದೇ ಸುಮ್ಮನಿದ್ದುಬಿಡುತ್ತಾರೆ. ಆದ್ರೆ ನಿಮ್ಮತ್ರ 6 ರಿಂದ 8 ಲಕ್ಷ ರೂಪಾಯಿ ಇದ್ರೆ ಸಾಕು, ಆರಾಮವಾಗಿ ಈ ಬ್ಯುಸಿನೆಸ್ ಆರಂಭಿಸಬಹುದು. ಅದಕ್ಕಾಗಿ ನಿಮ್ಮಲ್ಲಿರಬೇಕಾದದ್ದು ದುಡ್ಡು, ಜಾಗ, ನೀರು, ಕರೆಂಟ್ ಅಷ್ಟೇ. ಇಲ್ಲೊಬ್ಬರು ಯುವ ಉದ್ಯಮಿ ಕಡಿಮೆ ಹೂಡಿಕೆಯಲ್ಲಿ, ಹೆಚ್ಚು ಲಾಭ ಗಳಿಸುವ ಸೂಪರ್ ಬ್ಯುಸಿನೆಸ್ ಐಡಿಯಾ ನೀಡಿದ್ದಾರೆ ನೋಡಿ.

ಈ ಬ್ಯುಸಿನೆಸ್‌ಗೆ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು 30 ರಿಂದ 50 ದಿನದಲ್ಲಿ 50 ಸಾವಿರದವರೆಗೆ ಸಂಪಾದಿಸಬಹುದು. ಹಾಗಿದ್ರೆ ಅಷ್ಟಕ್ಕೂ ಆ ಬ್ಯುಸಿನೆಸ್ ಯಾವುದು ಅನ್ನೋ ಕುತೂಹಲ ನಿಮಗಿದ್ರೆ ಈ ಸುದ್ದಿ ಓದಿ ಸಾಕು.
ಕೋಳಿ ಸಾಕಾಣಿಕೆ ಮಾಡಿ, 50 ಸಾವಿರ ಆದಾಯ ಪಡೆಯಿರಿ!
ಹೌದು, ಹೊಸದಾಗಿ ಬ್ಯುಸಿನೆಸ್ ಆರಂಭಿಸುವವರಿಗೆ ಇಲ್ಲೊಬ್ಬರು ಯುವ ಉದ್ಯಮಿ ರಕ್ಷಿತ್ ಎಂಬವರು ಸಿಂಪಲ್ ಬ್ಯುಸಿನೆಸ್ ಐಡಿಯಾ ನೀಡಿದ್ದಾರೆ ನೋಡಿ. ಕೋಳಿ ಸಾಕಾಣಿಕೆ (Poultry Farming) ಮೂಲಕ ರಕ್ಷಿತ್ ಪ್ರಸ್ತುತ 1 ಲಕ್ಷಕ್ಕೂ ಅಧಿಕ ಆದಾಯ ಸಂಪಾದನೆ ಮಾಡುತ್ತಿದ್ದಾರೆ. ಇದೀಗ ಮತ್ತೊಬ್ಬರಿಗೂ ವ್ಯವಹಾರ ಪ್ರಾರಂಭಿಸಲು ಸ್ಪೂರ್ತಿಯಾಗಿದ್ದಾರೆ.

ಏನೆಲ್ಲಾ ಬೇಕು?
1) ಸ್ಥಳ: ಸರಿಯಾದ ಜಾಗ ಬೇಕಾಗುತ್ತದೆ. ಏಕೆಂದರೆ ಕೋಳಿ ಸಾಕಾಣಿಕೆ ಮಾಡುವುದರಿಂದ ಎಷ್ಟು ಲಾಭವಿದೆಯೋ, ಅಷ್ಟೇ ಸವಾಲು ಕೂಡಾ ಇದೆ. ಅದಕ್ಕಾಗಿ ಗ್ರಾಮ ಪಂಚಾಯತ್‌ಗಳಿಂದ ಅನುಮತಿ ಕೂಡಾ ಪಡೆಯಬೇಕು. ಕಾರಣ ಸುತ್ತಮುತ್ತಲಿನ ಮನೆಯವರಿಗಾಗಲೀ, ಪರಿಸರ ವ್ಯವಸ್ಥೆ ಮೇಲೆ ಇದರಿಂದ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಕಾಪಾಡುವುದು ಬಹಳ ಮುಖ್ಯ.
2)ನೀರು, ಕರೆಂಟ್ ವ್ಯವಸ್ಥೆ: ಕೋಳಿಗೆ ನಿರಂತರವಾಗಿ ನೀರು, ಫೀಡ್‌ಗಳನ್ನು ನೀಡುತ್ತಿರಬೇಕು. ಆದ್ದರಿಂದ ನೀರಿನ ವ್ಯವಸ್ಥೆಯೂ ಮುಖ್ಯ. ಅದೇ ರೀತಿ 24 ಗಂಟೆಯೂ ಕರೆಂಟ್ ವ್ಯವಸ್ಥೆ ನೀಡಲಾಗುತ್ತದೆ. ಆದ್ದರಿಂದ ವಿದ್ಯುತ್ ವ್ಯವಸ್ಥೆಯನ್ನೂ ಸರಿಪಡಿಸಿಕೊಳ್ಳಬೇಕು.

ಬ್ಯುಸಿನೆಸ್ ಆರಂಭಿಸುವುದು ಹೇಗೆ?
ಕೋಳಿ ಸಾಕಾಣಿಕೆ ಬ್ಯುಸಿನೆಸ್ ಅನ್ನು ಕಡಿಮೆಯಲ್ಲಿ ಆರಂಭಿಸಿ, ಹೆಚ್ಚು ಲಾಭಗಳಿಸುವಂತೆ ಮಾಡಬಹುದು. ಅಂದರೆ ನೀವು 3000 ಕೋಳಿ ಸಾಕಲು ತಯಾರಿದ್ದರೆ, ಅದಕ್ಕಾಗಿ 3600 ಸ್ಕ್ವಾರ್ ಫೀಟ್‌ನ ಶೆಡ್ ಒಂದು ರೆಡಿ ಮಾಡಬೇಕು. ಅದು 20 ಫೀಟ್ ಅಗಲ ಮತ್ತು 180 ಫೀಟ್ ಉದ್ದದಲ್ಲಿರಬೇಕು. ನಂತರ ನೀವು ಕೋಳಿಗಳಿಗಾಗಿ ಡ್ರಿಂಕರ್, ಫೀಡರ್, ಬೇಬಿ ಡ್ರಿಂಕರ್, ಬೇಬಿ ಫೀಡರ್ (ಕೋಳಿಗಳಿಗೆ ಇಡಲು ನೀರು, ಫುಡ್ ಹಾಕುವುದು) ಖರೀದಿಸಬೇಕು.
ಕೋಳಿ ತೆಗೆದುಕೊಳ್ಳುವುದು ಹೇಗೆ?
ಇನ್ನು ಕೋಳಿ ಫಾರ್ಮ್ ಆರಂಭಿಸಲು ಆಯಾ ಕಂಪನಿಗಳೇ ಕೋಳಿಗಳನ್ನು ನೀಡುತ್ತದೆ. ಅಂದರೆ ಇಲ್ಲಿ ನೀವು ಹೂಡಿಕೆ ಮಾಡಬೇಕಾಗಿರುವುದು ಜಾಗ, ಶೆಡ್, ನೀರು, ವಿದ್ಯುತ್‌ಗೆ ಮಾತ್ರ. ಉಳಿದ ಕೋಳಿ ಮರಿಗಳನ್ನು, ಫೀಡರ್‌ಗಳನ್ನು, ಟ್ರಾನ್ಸ್‌ಪೋರ್ಟ್ ಎಲ್ಲವನ್ನೂ ಕಂಪನಿಯೇ ಮಾಡುತ್ತದೆ. ಆದರೆ ಕಂಪನಿಯ ನಿಯಮದ ಪ್ರಕಾರ ಕೆಲವು ಕೋಳಿಗಳನ್ನು ಬೆಳೆಸಲು 35 ದಿನ ಟೈಂ ಇದ್ರೆ, ಇನ್ನೂ ಕೆಲವು 45 ದಿನಗಳವರೆಗೆ ಇರಲಿದೆ. ಆ ನಂತರ ಕಂಪನಿಯೇ ಬಂದು ಕೋಳಿಗಳನ್ನು ಲೋಡ್ ಮಾಡಿಕೊಂಡು ಹೋಗುತ್ತದೆ. ಆದರೆ ಇಲ್ಲಿ ಲೋಡ್, ಅನ್‌ಲೋಡ್ ಮಾಡುವವರಿಗೆ ಮಾತ್ರ ನೀವು ಸಂಬಳ ನೀಡಬೇಕಾಗುತ್ತದೆ ಮತ್ತು ಅವರನ್ನು ನೀವೇ ಕರೆದುಕೊಂಡು ಬರಬೇಕು. ಫೀಡರ್‌ನಿಂದ ಹಿಡಿದು ಮಾರ್ಕೆಟಿಂಗ್‌ವರೆಗೆ ಕಂಪನಿಯೇ ಮಾಡುವುದರಿಂದ ನಿಮಗೆ ಅಲ್ಲಿ ಯಾವುದೇ ಒತ್ತಡಗಳಿರುವುದಿಲ್ಲ ಎನ್ನುತ್ತಾರೆ ರಕ್ಷಿತ್.

3000 ಕೋಳಿ, 50 ಸಾವಿರ ಆದಾಯ!
ಒಂದು ಶೆಡ್‌ನಲ್ಲಿ 3000 ಕೋಳಿ ಮರಿಗಳನ್ನು ನೀವು ಸಾಕುತ್ತೀರಿ ಎಂದಾದರೆ, 45 ದಿನಗಳವರೆಗೆ ಅದನ್ನು ಇಟ್ಟುಕೊಳ್ಳಬೇಕು. 45 ದಿನಗಳ ನಂತರ ಅದರ ಕೆಜಿ ಆಧಾರದಲ್ಲಿ ಆದಾಯ ಲೆಕ್ಕ ಹಾಕಲಾಗುತ್ತದೆ. ಅಂದರೆ ಕೆಜಿಗೆ 7.50 ರೂ. ಅಂದರೂ 45 ದಿನಗಳಲ್ಲಿ ಕಂಪನಿ ನಿಮಗೆ ಅಂದಾಜಿನ ಪ್ರಕಾರ 45 ರಿಂದ 50 ಸಾವಿರ ರೂ. ನೀಡಬಹುದು ಎಂದು ಉದ್ಯಮಿ ರಕ್ಷಿತ್ ಹೇಳಿದ್ದಾರೆ. ಅಂದರೆ ವಾರ್ಷಿಕವಾಗಿ 2 ಲಕ್ಷ 75 ಸಾವಿರದಿಂದ 3 ಲಕ್ಷ ರೂಪಾಯಿ ಆದಾಯ ಪಡೆಯಬಹುದು ಎಂದು ಹೇಳಿದ್ದಾರೆ. ಆದರೆ ಫೀಡರ್ ಬಳಕೆ, ಕೋಳಿಗಳ ಬೆಳವಣಿಗೆಗಳನ್ನೆಲ್ಲಾ ಲೆಕ್ಕಾಚಾರ ಮಾಡಿಕೊಂಡು ಕಂಪನಿ ಈ ಬೆಲೆ ನಿರ್ಧಾರ ಮಾಡಬಹುದು. ಆದ್ದರಿಂದ ಕೆಲವೊಮ್ಮೆ ಆದಾಯದಲ್ಲಿ ಏರಿಳಿತಗಳಾಗಬಹುದು ಎಂದು ಹೇಳುತ್ತಾರೆ ರಕ್ಷಿತ್.
ಇನ್ನು ಬ್ಯುಸಿನೆಸ್ ಆರಂಭಿಸುವುದರ ಬಗ್ಗೆ ಹೇಳಿರುವ ಉದ್ಯಮಿ ರಕ್ಷಿತ್, "ವ್ಯವಹಾರದಲ್ಲಿ ಲಾಭ ಗಳಿಸಬಹುದು. ಆದರೆ ನಿರ್ವಹಣೆ ಮಾಡುವುದೇ ದೊಡ್ಡ ಸವಾಲು. ಲಾಭ ಪಡೆಯಬೇಕೆಂದರೆ, ಶ್ರಮ ಪಡೋದು ಮುಖ್ಯ. ಇದರಿಂದಲೇ ಹೆಚ್ಚು ಆದಾಯ ಗಳಿಸಬಹುದು" ಎಂದು ಹೇಳಿದ್ದಾರೆ.


Click it and Unblock the Notifications