ಕೇಂದ್ರ ಸರ್ಕಾರವು ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅನ್ನು ಮೇ ವೇಳೆಗೆ ಪ್ರಾರಂಭಿಸುವ ಸಾಧ್ಯತೆಯಿದೆ. ಸಾರ್ವಜನಿಕ ಕೊಡುಗೆಯ ಮೂಲಕ ಶೇಕಡಾ 5 ಕ್ಕಿಂತ ಹೆಚ್ಚಿನ ಪಾಲನ್ನು ಮಾರಾಟ ಮಾಡಲು ಕೇಂದ್ರವು ಮುಂದಾಗಬಹುದು ಎಂದು ವರದಿಯು ಉಲ್ಲೇಖ ಮಾಡಿದೆ.
ಐಪಿಒಗಾಗಿ ಕಂಪನಿಯ ಕರಡನ್ನು ಅಂತಿಮಗೊಳಿಸಲು ಕೇಂದ್ರ ಸರ್ಕಾರವು ಬ್ಯಾಂಕರ್‌ಗಳು ಮತ್ತು ಸಲಹೆಗಾರರೊಂದಿಗೆ ಸಂಪರ್ಕದಲ್ಲಿದೆ ಎಂದು ಎಲ್‌ಐಸಿ ಐಪಿಒ ಬೆಳವಣಿಗೆಯ ಬಗ್ಗೆ ಮಾಹಿತಿ ತಿಳಿದಿರುವ ನಿಕಟ ಮೂಲಗಳು ತಿಳಿಸಿದೆ.
ಎಲ್‌ಐಸಿ ಆರಂಭಿಕ ಷೇರು ಮಾರಾಟದ ಮೂಲಕ ಹಣವನ್ನು ಸಂಗ್ರಹಿಸಲು ಈಗಾಗಲೇ ಬಂಡವಾಳ ಮಾರುಕಟ್ಟೆಗಳ ನಿಯಂತ್ರಕ ಸೆಬಿಯ ಅನುಮೋದನೆಯನ್ನು ಸ್ವೀಕಾರ ಮಾಡಿದೆ. ಸೆಬಿಗೆ ಸಲ್ಲಿಸಿದ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ಪ್ರಕಾರ, ಕೇಂದ್ರವು ಎಲ್‌ಐಸಿಯ 31 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುತ್ತದೆ. ಅದರಲ್ಲಿ ಒಂದು ಭಾಗವನ್ನು ತನ್ನ ಹೂಡಿಕೆದಾರರಿಗೆ ಎಲ್‌ಐಸಿ ಕಾಯ್ದಿರಿಸಲಿದೆ.

ವರದಿಯ ಪ್ರಕಾರ, ಐಪಿಒ ಗಾತ್ರದ ಸುಮಾರು 10 ಪ್ರತಿಶತವನ್ನು ಪಾಲಿಸಿದಾರರಿಗೆ ಕಾಯ್ದಿರಿಸಲಾಗುತ್ತದೆ ಮತ್ತು 35 ಪ್ರತಿಶತದವರೆಗೆ ಚಿಲ್ಲರೆ ಹೂಡಿಕೆದಾರರಿಗೆ ಕಾಯ್ದಿರಿಸಲಾಗುತ್ತದೆ. ಗಮನಾರ್ಹವಾಗಿ, ಎಲ್‌ಐಸಿ ಐಪಿಒ ಕೇಂದ್ರ ಸರ್ಕಾರ ನೀಡುವ ಮಾರಾಟದ ಕೊಡುಗೆಯಾಗಿದೆ. ಹಾಗೆಯೇ ಎಲ್‌ಐಸಿಯಿಂದ ಯಾವುದೇ ಹೊಸ ಷೇರುಗಳನ್ನು ನೀಡಲಾಗುವುದಿಲ್ಲ. ಕೇಂದ್ರ ಸರ್ಕಾರವು ಎಲ್‌ಐಸಿಯಲ್ಲಿ 100 ಪ್ರತಿಶತ ಪಾಲನ್ನು ಅಥವಾ 632.49 ಕೋಟಿ ಷೇರುಗಳನ್ನು ಹೊಂದಿದೆ.
ಎಲ್‌ಐಸಿ ಐಪಿಒ: ಕೇಂದ್ರಕ್ಕೆ ಮೇ 12 ರವರೆಗೆ ಸಮಯ
ಸೆಬಿಗೆ ಹೊಸ ದಾಖಲೆಗಳನ್ನು ಸಲ್ಲಿಸದೆ ಎಲ್‌ಐಸಿ ಐಪಿಒ ಪ್ರಾರಂಭಿಸಲು ಕೇಂದ್ರಕ್ಕೆ ಮೇ 12 ರವರೆಗೆ ಸಮಯವಿದೆ ಎಂದು ಮೂಲಗಳು ಹೇಳಿದೆ. "ಸೆಬಿಗೆ ಸಲ್ಲಿಸಿದ ಪೇಪರ್‌ಗಳ ಆಧಾರದ ಮೇಲೆ ಐಪಿಒ ಪ್ರಾರಂಭಿಸಲು ನಮಗೆ ಮೇ 12 ರವರೆಗೆ ಅವಕಾಶವಿದೆ. ನಾವು ಮಾರುಕಟ್ಟೆಯಲ್ಲಿನ ಬೆಳವಣಿಗೆಯನ್ನು ವೀಕ್ಷಿಸುತ್ತೇವೆ. ಶೀಘ್ರದಲ್ಲೇ ಬೆಲೆ ಪಟ್ಟಿಯನ್ನು ನೀಡುವ ಆರ್‌ಎಚ್‌ಪಿ ಅನ್ನು ಸಲ್ಲಿಕೆ ಮಾಡುತ್ತೇವೆ," ಎಂದು ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.

ಫೆಬ್ರವರಿ 13 ರಂದು ಡಿಎಚ್‌ಆರ್‌ಪಿ ಅನ್ನು ಸಲ್ಲಿಸಲಾಗಿದೆ. ಎಲ್‌ಐಸಿ ಐಪಿಒ ಐದು ಶೇಕಡಾ ಪಾಲನ್ನು ಮಾರಾಟ ಮಾಡುವ ಮೂಲಕ ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಸಾರ್ವಜನಿಕ ಕೊಡುಗೆ ಅಥವಾ ಐಪಿಒ ಇದಾಗಲಿದೆ.


Click it and Unblock the Notifications