ಬೆಂಗಳೂರು, ಆಗಸ್ಟ್ 8: ಸೈಬರ್ ವಂಚಕರು ಪ್ರತಿ ದಿನ ಹೊಸ ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ. ಸೈಬರ್ ವಂಚಕರ ಕಣ್ಣು ಈಗ ಇಪಿಎಫ್ ಖಾತೆಗಳ ಮೇಲೆ ಬಿದ್ದಿದೆ. ಇದೇ ಕಾರಣಕ್ಕೆ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ.
ರಿಟೈರ್ ಆಗಿ ಇನ್ನೂ ಹಣ ಹಿಂಪಡೆಯಲಾಗದೇ ಉಳಿದಿರುವ ಇಪಿಎಫ್ ಖಾತೆಗಳನ್ನು ವಂಚಕರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಸರ್ಕಾರ ನಿಯಮ ರೂಪಿಸಿದೆ. ನಿಷ್ಕ್ರಿಯ ಅಥವಾ ನಿಂತು ಹೋಗಿರುವ ಇಪಿಎಫ್ ಖಾತೆಗಳಿಗೆ ನಿಯಮ ಬದಲಾವಣೆ ಮಾಡಲಾಗಿದೆ. ಇನಾಪರೇಟಿವ್ ಆಗಿರುವ ಇಪಿಎಫ್ ಖಾತೆಗಳಿಗೆ ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡಲಾಗಿದ್ದು ಫೀಲ್ಡ್ ಆಫೀಸ್ಗಳು ವಿಚಾರಣೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಒಂದು ಇಪಿಎಫ್ ಖಾತೆಯಲ್ಲಿ ಸರ್ಕಾರದಿಂದ ಬಡ್ಡಿ ಜಮಾವಣೆ ಹೊರತುಪಡಿಸಿ ಬೇರಾವ ಹಣವೂ ಮೂರು ವರ್ಷದಿಂದ ಕ್ರೆಡಿಟ್ ಆಗದೇ ಇದ್ದರೆ ಅಂಥ ಖಾತೆಯನ್ನು ನಿಷ್ಕ್ರಿಯ ಖಾತೆ ಅಥವಾ ವಹಿವಾಟು ರಹಿತ ಖಾತೆ ಎಂದು ಪರಿಗಣಿಸಲಾಗುತ್ತದೆ. ಖಾತೆದಾರರ ವಯಸ್ಸು 58 ವರ್ಷ ದಾಟಿದ ಬಳಿಕ ಇಪಿಎಫ್ ಖಾತೆಯನ್ನು ಇನಾಪರೇಟವ್ ಎಂದು ಪರಿಗಣಿಸಿ ಬ್ಲಾಕ್ ಮಾಡಿಡಲಾಗುತ್ತದೆ.
ಬ್ಲಾಕ್ ಆದ ಇಪಿಎಫ್ ಖಾತೆಯನ್ನು ಅನ್ಬ್ಲಾಕ್ ಮಾಡಲು ಖಾತೆದಾರರು ಅರ್ಜಿ ಹಾಕಬೇಕು. 20-25 ದಿನದಲ್ಲಿ ಖಾತೆ ಅನ್ಬ್ಲಾಕ್ ಆಗಬಹುದು. ಒಂದು ವೇಳೆ ಇನಾಪರೇಟಿವ್ ಖಾತೆಗಳಿಗೆ ಯುಎಎನ್ ಇಲ್ಲದೇ ಇದ್ದರೆ ಮೊದಲು ಅದನ್ನು ಸೃಷ್ಟಿಸಬೇಕು. ದೀರ್ಘಾವಧಿಯಿಂದ ಈ ಖಾತೆ ನಿಷ್ಕ್ರಿಯವಾಗಿರುವುದರಿಂದ ಸಾಧಾರಣ ಮಾರ್ಗದಲ್ಲಿ ಯುಎಎನ್ ನಂಬರ್ ರಚಿಸಲು ಆಗುವುದಿಲ್ಲ ಎನ್ನುವುದು ನಿಮ್ಮ ಗಮನದಲ್ಲಿ ಇರಬೇಕು.
ಇಪಿಎಫ್ ಖಾತೆದಾರರು ವೈಯಕ್ತಿಕವಾಗಿ ಫೀಲ್ಡ್ ಆಫೀಸರ್ ಗೆ ಹೇಳಿ ಹೊಸ ಯುನಿವರ್ಸಲ್ ಅಕೌಂಟ್ ನಂಬರ್ ಅಂದರೆ ಯುಎಎನ್ ಸೃಷ್ಟಿಸಬಹುದು. ಒಂದು ವೇಳೆ ಯುಎಎನ್ ನಂಬರ್ ಇದ್ದೂ ಅದು ಯಾವುದೇ ಇಪಿಎಫ್ ಖಾತೆಗೆ ಲಿಂಕ್ ಆಗಿಲ್ಲದೇ ಇದ್ದರೆ ಅದಕ್ಕೂ ಪರಿಹಾರ ಕಂಡುಕೊಳ್ಳಬಹುದು.
ಇಪಿಎಫ್ ಖಾತೆದಾರರು ಫೀಲ್ಡ್ ಆಫೀಸ್ಗೆ ತೆರಳುವ ಮೊದಲು EPFiGMS ಪೋರ್ಟಲ್ನಲ್ಲಿ ನೋಂದಾವಣೆ ಮಾಡಿಕೊಂಡಿರಬೇಕು. ಇದಾದ ಮೇಲೆ ಬಯೋಮೆಟ್ರಿಕ್ ವೆರಿಫಿಕೇಶನ್ ಸ್ಥಳ, ಸಮಯ, ದಿನ, ಟೋಕನ್ ನಂಬರ್ನೊಂದಿಗೆ ಅಪಾಯಿಂಟ್ಮೆಂಟ್ ಸಿಗುತ್ತದೆ. ಅದಾದ ಬಳಿಕ ಯುಎಎನ್ಗೆ ಇಪಿಎಫ್ ಖಾತೆಯನ್ನು ಲಿಂಕ್ ಮಾಡಲಾಗುತ್ತದೆ.
ಒಂದು ವೇಳೆ ಇಪಿಎಫ್ ಸದಸ್ಯರಿಗೆ ವಯಸ್ಸು ಇಲ್ಲವೇ ಅನಾರೋಗ್ಯದ ಕಾರಣ ಕಾರಣಕ್ಕೆ ಫೀಲ್ಡ್ ಆಫೀಸ್ಗೆ ಹೋಗಲು ಸಾಧ್ಯವಾಗದೇ ಹೋದರೆ EPFiGMS ಪೋರ್ಟಲ್ನಲ್ಲಿ ಯುಎಎನ್ ರಚಿಸಲು ಮನವಿ ಸಲ್ಲಿಸಬಹುದು. ಇಪಿಎಫ್ಒ ಕಚೇರಿಯಿಂದ ಪ್ರತಿನಿಧಿಯೊಬ್ಬರು ಆಗಮಿಸಿ ಗ್ರಾಹಕರ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕಾಗುತ್ತದೆ.
ತಂತ್ರಜ್ಞಾನ ಮತ್ತು ಡೇಟಾ ಸೋರಿಕೆಯ ಲಾಭ ಪಡೆದುಕೊಂಡ ವಂಚಕರು ಇಂಥ ಇಪಿಎಫ್ ಒ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಜಾರಿ ಮಾಡಲಾಗಿದೆ.


Click it and Unblock the Notifications