ಈ ಹಿಂದಿನಿಂದಲೇ ಹಲವಾರು ಬಾರಿ ಹೊಸ ನೇಮಕಾತಿಗೆ ಆಗ್ರಹ ಮಾಡಿ ಬ್ಯಾಂಕುಗಳ ಉದ್ಯೋಗಿಗಳು ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ. ಮುಷ್ಕರಗಳನ್ನು ಮಾಡಿದ್ದಾರೆ, ಹಾಗೆಯೇ ಮನವಿಗಳನ್ನು ಕೂಡಾ ಸಲ್ಲಿಸಿದ್ದಾರೆ. ಈಗ ನೇಮಕಾತಿ ಮಾಡಲು ಆಗ್ರಹಿಸಿ ವಿಶಿಷ್ಟವಾದ ರೀತಿಯಲ್ಲಿ ಪ್ರತಿಭಟನೆಯನ್ನು ಮಾಡಲು ಬ್ಯಾಂಕ್ ಉದ್ಯೋಗಿಗಳು ಮುಂದಾಗಿದ್ದಾರೆ.
ಈ ಬಗ್ಗೆ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಅಸೋಸಿಯೇಷನ್ ಸುತ್ತೋಲೆಯನ್ನು ಹೊರಡಿಸಿದೆ. ಸರಿಯಾಗಿ ಬಾಕಿಯಿರುವ ಅಥವಾ ಅಗತ್ಯವಿರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿದ್ದಾರೆ. ಅಕ್ಟೋಬರ್ 1 ರಿಂದ ಅಂದರೆ "ಕಛೇರಿ ಸಮಯದ ನಂತರ ಬ್ಯಾಂಕ್‌ನಲ್ಲಿರಲ್ಲ" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

"ಹಲವಾರು ಬ್ರ್ಯಾಂಚ್‌ಗಳಲ್ಲಿ ಅಗತ್ಯವಿರುವಷ್ಟು ಉದ್ಯೋಗಿಗಳು ಇಲ್ಲದ ಕಾರಣದಿಂದಾಗಿ, ಇರುವ ಉದ್ಯೋಗಿಗಳು ನಿಗದಿತ ಕೆಲಸದ ಅವಧಿಗೂ ಅಧಿಕ ಕಾಲ ಕೆಲಸ ಮಾಡಬೇಕಾಗಿದೆ. ಆದರೂ ಕೂಡಾ ಮ್ಯಾನೆಜ್‌ಮೆಂಟ್ ಬೇಕಾದಷ್ಟು ಉದ್ಯೋಗಿಗಳನ್ನು ನೇಮಕಾತಿ ಮಾಡುತ್ತಿಲ್ಲ," ಎಂದು ಆರೋಪ ಮಾಡಿದೆ.
"ಮ್ಯಾನೆಜ್‌ಮೆಂಟ್ ಸರಿಯಾಗಿ ನೇಮಕಾತಿ ಮಾಡದ ಕಾರಣದಿಂದಾಗಿ ಈಗ ಇರುವ ಉದ್ಯೋಗಿಗಳಿಗೆ ಕೆಲಸದ ಹೊರೆ ಅಧಿಕವಾಗುತ್ತಿದೆ. ಹೊಸ ನೇಮಕಾತಿಯ ಆಗ್ರಹವನ್ನು ಮಾಡಿ, ಅಕ್ಟೋಬರ್ ಒಂದರಿಂದ ಉದ್ಯೋಗಿಗಳು ಕೆಲಸದ ಅವಧಿಗೂ ಅಧಿಕ ಕಾಲ ಕೆಲಸ ಮಾಡಬಾರದು," ಎಂದು ಎಐಬಿಇಎ ಕರೆ ನೀಡಿದೆ.
ಸಾಮಾನ್ಯವಾಗಿ ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸದ ಅವಧಿ ಬೆಳಿಗ್ಗೆ 9:45 ರಿಂದ ಸಂಜೆ 4:45 ಆಗಿದೆ. ಹೊಸ ನೇಮಕಾತಿಯನ್ನು ಮಾಡಲು ಆಗ್ರಹಿಸಿ ಈ ಅವಧಿಗೂ ಅಧಿಕ ಕಾಲ ಕೆಲಸ ಮಾಡಬಾರದು ಎಂದು ಬ್ಯಾಂಕ್ ಸಂಘಟನೆ ಹೇಳಿದೆ. ನಮ್ಮೆಲ್ಲ ಸಂಘಟನೆಗಳು ತಮ್ಮ ಸದಸ್ಯರಿಗೆ ಈ ಮಾಹಿತಿಯನ್ನು ನೀಡಬೇಕು, ಜಾರಿಗೆ ತರಬೇಕು ಎಂದು ತಿಳಿಸಿದೆ.
ಜನವರಿಯಲ್ಲಿ ಎರಡು ದಿನದ ಮುಷ್ಕರ
ಈ ಹಿಂದೆ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘವು ಬ್ಯಾಂಕ್‌ವಾರು ಮತ್ತು ರಾಜ್ಯವಾರು ಮುಷ್ಕರ ಸೇರಿದಂತೆ ಆಂದೋಲನ ಕಾರ್ಯಕ್ರಮಕ್ಕೆ ಕರೆ ನೀಡಿದೆ. ಸಮರ್ಪಕ ನೇಮಕಾತಿಗಾಗಿ ತನ್ನ ಬೇಡಿಕೆಯನ್ನು ಮುಂದಿಟ್ಟು ಸಂಘಟನೆಯು ಜನವರಿ 19 ಮತ್ತು 20 ರಂದು ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರ ನಡೆಸುವುದಾಗಿ ಹೇಳಿದೆ. ಹಾಗೆಯೇ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಹೊರಗುತ್ತಿಗೆಯನ್ನು ವಿರೋಧಿಸಿಯು ಈ ಮುಷ್ಕರ ಮಾಡಲಾಗಿದೆ.
"ಬ್ಯಾಂಕ್ ಗ್ರಾಹಕರ ಸಂಖ್ಯೆಯು ಬಹುಪಟ್ಟು ಹೆಚ್ಚುತ್ತಿದೆ. ವ್ಯಾಪಾರದ ಪ್ರಮಾಣವು ಹೆಚ್ಚುತ್ತಿದೆ. ಉದ್ಯೋಗಿಗಳಿಗೆ ಕೆಲಸದ ಹೊರೆಯಲ್ಲಿಯೂ ತೀವ್ರ ಹೆಚ್ಚಳ ಕಂಡುಬಂದಿದೆ. ಆದರೆ, ನೇಮಕಾತಿ ಅಸಮರ್ಪಕವಾಗಿದೆ," ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಹೇಳಿದ್ದಾರೆ.
"ನಿವೃತ್ತಿ, ಬಡ್ತಿ, ಸಾವು ಇತ್ಯಾದಿಗಳಿಂದ ಹುದ್ದೆ ಖಾಲಿಯಾದರೆ ಆ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿಲ್ಲ. ವ್ಯಾಪಾರ ಹೆಚ್ಚಳವನ್ನು ನಿಭಾಯಿಸಲು ಶಾಖೆಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸುತ್ತಿಲ್ಲ. ಹೆಚ್ಚು ಹೆಚ್ಚು ಸರ್ಕಾರಿ ಯೋಜನೆಗಳನ್ನು ಬ್ಯಾಂಕ್ ಖಾತೆಗಳ ಮೂಲಕ ಜಾರಿಗೊಳಿಸಲಾಗುತ್ತಿದೆ. ಇವೆಲ್ಲವೂ ಶಾಖೆಗಳಲ್ಲಿನ ಉದ್ಯೋಗಿಗಳ ಕೆಲಸದ ಹೊರೆಯನ್ನು ಹೆಚ್ಚಿಸುತ್ತವೆ," ಎಂದು ಸಿಎಚ್ ವೆಂಕಟಾಚಲಂ ಹೇಳಿದರು.


Click it and Unblock the Notifications