ಇನ್ನೇನು ಒಂದು ತಿಂಗಳು ಕಳೆದರೆ ಸಾಕು ಹೊಸ ವರ್ಷ ಬಂದಾಯ್ತು. ಹೊಸ ವರ್ಷ ಬರುತ್ತಿದ್ದಂತೆ ಹೊಸ ನಿಯಮ, ಹಲವು ಬದಲಾವಣೆ ಬರೋದು ಸಾಮಾನ್ಯ. ಇದೀಗ ಡಿಸೆಂಬರ್ 1 ರಿಂದಲೇ ಕೆಲವು ನಿಯಮಗಳಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಪಿಂಚಣಿ, ತೆರಿಗೆ ಪಾವತಿ ಮತ್ತು ಎಲ್‌ಪಿಜಿ ಬೆಲೆಗೆ (LPG Price) ಸಂಬಂಧಿಸಿ ಹಲವಾರು ನಿಯಮಗಳಲ್ಲಿ ಪರಿಷ್ಕರಣೆಯಾಗಲಿದೆ ಎಂದು ವರದಿಯಾಗಿದೆ.

ಯುಪಿಎಸ್ (Unified Pension Scheme) ಗೆ ಸೇರುವ ಕೊನೆಯ ದಿನಾಂಕ ಮತ್ತು ಪಿಂಚಣಿದಾರರ ಜೀವಿತ ಪ್ರಮಾಣಪತ್ರ ಸಲ್ಲಿಸಲು ನವೆಂಬರ್ 30 ಅಂತಿಮ ದಿನಾಂಕವಾಗಿದೆ. ಪ್ರಮುಖ TDS ಮತ್ತು ವರ್ಗಾವಣೆ-ಬೆಲೆ ಸಲ್ಲಿಕೆಗಳ ಗಡುವು ಸಹ ಈ ವಾರವೇ ಇರಲಿದೆ. ಇನ್ನು LPG ಮತ್ತು ATF ಬೆಲೆಗಳು ಡಿಸೆಂಬರ್ 1 ರಂದು ಪರಿಷ್ಕರಣೆಯಾಗುವ ಸಾಧ್ಯತೆ ಇದೆ.
ನವೆಂಬರ್ 30 ರಂದು ಹಲವು ಕಡ್ಡಾಯ ಸಲ್ಲಿಕೆಗಳು ಮತ್ತು ಪಿಂಚಣಿ ಸಂಬಂಧಿತ ಕೆಲಸಗಳಿಗೆ ಅಂತಿಮ ದಿನವಾಗಿದೆ. ಪಿಂಚಣಿ ದಾಖಲೆಗಳಿಂದ ಹಿಡಿದು ತೆರಿಗೆ ಸಲ್ಲಿಕೆಗಳು ಮತ್ತು ಇಂಧನ ಬೆಲೆ ಪರಿಷ್ಕರಣೆಗಳವರೆಗೆ, ಡಿಸೆಂಬರ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಮತ್ತೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.
ನವೆಂಬರ್ ಅಂತ್ಯ-ಡಿಸೆಂಬರ್ ಆರಂಭ: ಹೊಸ ನಿಯಮ!
ಯೂನಿಫೈಡ್ ಪಿಂಚಣಿ ಯೋಜನೆ (UPS)
ಕೇಂದ್ರ ಸರ್ಕಾರದ ನೌಕರರಿಗಾಗಿ ಇತ್ತೀಚೆಗೆ ಪರಿಚಯಿಸಲಾದ ಹೊಸ ಗ್ಯಾರಂಟಿ ಲಾಭ ನೀಡುವ ಯೂನಿಫೈಡ್ ಪಿಂಚಣಿ ಯೋಜನೆ (UPS) ಗೆ ಸೇರಲು ಕೇವಲ ಕೆಲವೇ ದಿನಗಳು ಉಳಿದಿವೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ (NPS) ಬದಲಾಯಿಸಲು ಬಯಸುವ ನೌಕರರು ನವೆಂಬರ್ 30 ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.
ಸರ್ಕಾರವು ಈ ಹಿಂದೊಮ್ಮೆ ತಮ್ಮ ಗಡುವನ್ನು ವಿಸ್ತರಿಸಿದ್ದು, ಅಧಿಕಾರಿಗಳು ಡಿಸೆಂಬರ್ 1 ರ ನಂತರ ಈ ಅವಕಾಶವನ್ನು ಮತ್ತೆ ತೆರೆಯುವುದಿಲ್ಲ ಎಂದು ಸೂಚಿಸಿದ್ದಾರೆ.
ಜೀವನ್ ಪ್ರಮಾಣಪತ್ರ (Life Cerificate):
ಲಕ್ಷಾಂತರ ಪಿಂಚಣಿದಾರರಿಗೆ, ವಾರ್ಷಿಕ ಜೀವನ್ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಇದನ್ನು ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30. ಗಡುವನ್ನು ತಪ್ಪಿಸಿಕೊಂಡರೆ ಪಿಂಚಣಿ ಪಾವತಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು.
ಅನೇಕರು ಡಿಜಿಟಲ್ ಜೀವನ್ ಪ್ರಮಾಣ್ ವ್ಯವಸ್ಥೆಗೆ ಬದಲಾಗಿದ್ದರೂ, ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ನೇರ ಸಲ್ಲಿಕೆಗಳನ್ನು ಈಗಾಗಲೇ ಸ್ವೀಕರಿಸುತ್ತಿವೆ. ಡಿಸೆಂಬರ್ 1 ರ ನಂತರ, ಜೀವನ್ ಪ್ರಮಾಣಪತ್ರವನ್ನು ಸಲ್ಲಿಸಲು ವಿಫಲರಾದ ಪಿಂಚಣಿದಾರರು ಹಣ ಪಡೆಯುವಲ್ಲಿಯೂ ವಿಫಲರಾಗುತ್ತಾರೆ.
ಪ್ರಮುಖ ತೆರಿಗೆ ಸಂಬಂಧಿತ ಸಲ್ಲಿಕೆಗಳು
ಹಲವಾರು ನೇರ ತೆರಿಗೆ ಅನುಸರಣೆಗಳು ನವೆಂಬರ್ 30 ರಂದು ಕೊನೆಗೊಳ್ಳುತ್ತವೆ. ಇವುಗಳಲ್ಲಿ ಅಕ್ಟೋಬರ್‌ನಲ್ಲಿ ಸೆಕ್ಷನ್ 194-IA, 194-IB, 194M ಮತ್ತು 194S ಅಡಿಯಲ್ಲಿ ಕಡಿತಗೊಳಿಸಿದ TDS ಸಲ್ಲಿಕೆಗಳು ಕೂಡಾ ಸೇರಿದೆ. ಸೆಕ್ಷನ್ 92E ಅಡಿಯಲ್ಲಿ ಬರುವ ತೆರಿಗೆದಾರರು - ವರ್ಗಾವಣೆ-ಬೆಲೆ ವರದಿಗಳನ್ನು ಸಲ್ಲಿಸಬೇಕಾದವರು ಸಹ ಈ ವಾರ ತಮ್ಮ ಆದಾಯ ತೆರಿಗೆ ಸಲ್ಲಿಕೆ ಗಡುವನ್ನು ಹೊಂದಿದ್ದಾರೆ.
LPG ಬೆಲೆ ಪರಿಷ್ಕರಣೆ:
ಅಡುಗೆ ಅನಿಲ ಬೆಲೆಗಳು ಡಿಸೆಂಬರ್ 1 ರಂದು ಪರಿಷ್ಕರಣೆಯಾಗಲಿದೆ. ಅದೇ ರೀತಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು LPG ದರಗಳನ್ನು ಪರಿಷ್ಕರಿಸುತ್ತವೆ, ಇದು ಜಾಗತಿಕ ಬೆಲೆಗಳು ಮತ್ತು ಕರೆನ್ಸಿ ಚಲನೆಗಳನ್ನು ಆಧರಿಸಿರುತ್ತದೆ.
ಕಳೆದ ತಿಂಗಳು, ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿತ್ತು. ಡಿಸೆಂಬರ್ ಪರಿಷ್ಕರಣೆಯು ಕುಟುಂಬಕ್ಕೆ ಹೊರೆ ನೀಡುತ್ತಾ? ಅಥವಾ ನಿಟ್ಟುಸಿರು ಬಿಡುವಂತೆ ಮಾಡುತ್ತಾ? ಎಂದು ಕಾದು ನೋಡಬೇಕಿದೆ.
ATF ಬೆಲೆ ಅಪ್ಡೇಟ್:
ವಿಮಾನಯಾನ ಟರ್ಬೈನ್ ಇಂಧನ (ATF) ಬೆಲೆಗಳು, LPG ಯಂತೆಯೇ ಮಾಸಿಕವಾಗಿ ಪರಿಷ್ಕರಣೆಯಾಗುತ್ತದೆ. ಆದ್ದರಿಂದೆ ಡಿಸೆಂಬರ್ 1 ರಂದು ಎಟಿಎಫ್ ಬೆಲೆಯೂ ಅಪ್ಡೇಟ್ ಆಗಲಿದೆ ಎಂದು ವರದಿಯಾಗಿದೆ.


Click it and Unblock the Notifications