ಕಚ್ಚಾ ತೈಲಗಳ ಬೆಲೆಯು ಹೆಚ್ಚಳವಾಗುತ್ತಾ ಸಾಗುತ್ತಿದೆ. ಇಸ್ರೇಲ್ ಪ್ಯಾಲೆಸ್ತೀನ್ ಸಂಘರ್ಷದ ನಡುವೆ ಕಚ್ಚಾ ತೈಲಗಳ ಬೆಲೆಯು ಏರಿಕೆಯಾಗುತ್ತಿದೆ. ಈ ನಡುವೆ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಕಾರಣ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳವಾದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿಲ್ಲ ಎಂದು ಮೂಡೀಸ್ ಇನ್‌ವೆಸ್ಟರ್ಸ್ ಸರ್ವಿಸ್ ಹೇಳಿದೆ.
ಮೂರು ಸರ್ಕಾರಿ ಸ್ವಾಮ್ಯದ ಇಂಧನ ರಿಟೇಲ್ ವ್ಯಾಪಾರಿಗಳಾದ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಮಾರುಕಟ್ಟೆಯ ಸರಿಸುಮಾರು ಶೇಕಡ 90 ರಷ್ಟು ನಿಯಂತ್ರಣವನ್ನು ಹೊಂದಿದೆ. ಸತತವಾಗಿ 18ನೇ ತಿಂಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿರಿಸಿದೆ.

ತೈಲ ಬೆಲೆಗಳನ್ನು ಕೊಂಚ ಏರಿಸುವ ಮೊದಲು 2022-23 ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಭಾರೀ ನಷ್ಟಕ್ಕೆ ಸಂಸ್ಥೆಗಳು ಒಳಗಾಗಿದೆ. ಕಳೆದ ವರ್ಷ ಕಚ್ಚಾ ವಸ್ತುಗಳ (ಕಚ್ಚಾ ತೈಲ) ಬೆಲೆ ಏರಿಕೆಯ ಸುಳಿಗೂ ಒಳಗಾಗಿದೆ. ಇದಾದ ಬಳಿಕ ಕೊಂಚ ಲಾಭವನ್ನು ಕಾಣುತ್ತಾ ಬಂದಿದೆ. ಅಂತರರಾಷ್ಟ್ರೀಯ ತೈಲ ಬೆಲೆಗಳು ಆಗಸ್ಟ್‌ನಿಂದ ಸ್ಥಿರವಾಗಿದೆ.
"ಹೆಚ್ಚಿನ ಕಚ್ಚಾ ತೈಲ ಬೆಲೆಗಳು ಭಾರತದಲ್ಲಿನ ಮೂರು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಲಾಭವನ್ನು ಕಡಿಮೆಗೊಳಿಸಿದೆ," ಎಂದು ಮೂಡೀಸ್ ವರದಿಯಲ್ಲಿ ತಿಳಿಸಿದೆ. "ಮೇ 2024 ರಲ್ಲಿ ಮುಂಬರುವ ಚುನಾವಣೆಗಳ ಕಾರಣ ಪ್ರಸಕ್ತ ಹಣಕಾಸು ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ರಿಟೇಲ್ ಮಾರಾಟದ ಬೆಲೆಗಳನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಕಚ್ಚಾ ವಸ್ತುಗಳ ವೆಚ್ಚವನ್ನು ವರ್ಗಾಯಿಸಲು ಕಂಪನಿಗಳು ಮುಂದಾಗುತ್ತದೆ," ಎಂದು ಉಲ್ಲೇಖಿಸಲಾಗಿದೆ.
ಒಎಂಸಿಗಳ ಮಾರ್ಕೆಟಿಂಗ್ ಮಾರ್ಜಿನ್‌ಗಳು ಜೂನ್ 30, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ (1Q ಹಣಕಾಸು 2024) ಕಂಡುಬಂದ ಏರಿಕೆ ಮಟ್ಟದಿಂದ ಈಗಾಗಲೇ ಗಮನಾರ್ಹವಾಗಿ ದುರ್ಬಲಗೊಂಡಿದೆ. ಆಗಸ್ಟ್‌ನಿಂದ ಡೀಸೆಲ್‌ನ ಮಾರ್ಕೆಟಿಂಗ್ ಮಾರ್ಜಿನ್‌ಗಳು ನೆಗೆಟಿವ್ ಆಗಿದೆ. ಅಂತರರಾಷ್ಟ್ರೀಯ ಬೆಲೆಗಳು ಹೆಚ್ಚಿದ ಅದೇ ಅವಧಿಯಲ್ಲಿ ಪೆಟ್ರೋಲ್ ಮೇಲಿನ ಲಾಭವು ಕಡಿಮೆಯಾಗಿದೆ.
ಮೂಡೀಸ್ ಏನು ಹೇಳುತ್ತದೆ?
"ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳವು ಸೆಪ್ಟೆಂಬರ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ ಶೇಕಡ 17 ರಷ್ಟು ಅಥವಾ 78 ಡಾಲರ್‌ನಿಂದ 90 ಡಾಲರ್‌ಗೆ ಹೆಚ್ಚಾದ ನಂತರ ಉಂಟಾಗಿದೆ," ಎಂದು ಮೂಡೀಸ್ ಹೇಳಿದೆ. "ಡಿಸೆಂಬರ್ 2023 ರವರೆಗೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ದಿನಕ್ಕೆ ಸುಮಾರು 1 ಮಿಲಿಯನ್ ಬ್ಯಾರೆಲ್‌ಗಳ ಉತ್ಪಾದನಾ ಕಡಿತದ ವಿಸ್ತರಣೆ, ಅದೇ ಅವಧಿಯಲ್ಲಿ ದಿನಕ್ಕೆ ಸುಮಾರು 300,000 ಬ್ಯಾರೆಲ್‌ಗಳ ರಷ್ಯಾದ ವಿಸ್ತೃತ ರಫ್ತು ಕಡಿತವು ತೈಲ ಬೆಲೆಗಳನ್ನು ಹೆಚ್ಚಿಸಿದೆ," ಎಂದು ಉಲ್ಲೇಖಿಸಲಾಗಿದೆ.


Click it and Unblock the Notifications