ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಈಗಾಗಲೇ ಆರಂಭವಾಗಿ 8 ವರ್ಷಗಳಾಗುತ್ತಾ ಬಂದಿದೆ. ಈವರೆಗೆ ಸಾಕಷ್ಟು ಸೌಲಭ್ಯಗಳನ್ನು ಈ ಯೋಜನೆ ಮೂಲಕ ಕೇಂದ್ರ ಸರ್ಕಾರ ದೇಶದ ರೈತರಿಗೆ ನೀಡುತ್ತಾ ಬಂದಿದೆ. ಡಿಸೆಂಬರ್ 1, 2018 ರಿಂದ ಜಾರಿಗೆ ಬಂದ ಈ ಯೋಜನೆ, ದೇಶದಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ವಾರ್ಷಿಕವಾಗಿ ಆರ್ಥಿಕ ಬೆಂಬಲ ನೀಡುತ್ತದೆ. ಇನ್ನು, ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-KISAN) ದೇಶದ ರೈತರಿಗೆ ಅತ್ಯಂತ ವಿಶ್ವಾಸಾರ್ಹ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಪ್ರತಿ ವರ್ಷ ಅರ್ಹ ರೈತರಿಗೆ ಮೂರು ಸಮಾನ ಕಂತುಗಳಲ್ಲಿ ಒಟ್ಟು ₹6,000 ರೂ. ಹಣ ವಿತರಿಸಲಾಗುತ್ತದೆ. ಈ ಯೋಜನೆಯ 21 ನೇ ಕಂತಿನ ಹಣ ರೈತರ (Farmers) ಖಾತೆಗೆ ಕೆಲತಿಂಗಳ ಹಿಂದಷ್ಟೇ ಜಮಾ ಆಗಿದ್ದು, ಇದೀಗ ರೈತರು 22ನೇ ಕಂತಿಗಾಗಿ (PM Kisan 22nd Installment Money) ಕಾತರದಿಂದ ಕಾಯುತ್ತಿದ್ದಾರೆ.

ಯಾವಾಗ ಜಮಾ ಆಗುತ್ತೆ?
ಮಾಧ್ಯಮ ವರದಿಗಳ ಪ್ರಕಾರ, 22ನೇ ಕಂತಿನ ಬಿಡುಗಡೆಗೆ ಈಗಾಗಲೇ ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ. ಆದ್ದರಿಂದ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರೈತರ ಖಾತೆಗಳಿಗೆ ₹2,000 ಜಮಾ ಆಗುವ ನಿರೀಕ್ಷೆಯಿದೆ. ಈ ಕಂತು ಹಬ್ಬಗಳಿಗೂ ಮುನ್ನವೇ ಸಿಗುವುದರಿಂದ ರೈತರಿಗೆ ಸಕಾಲದಲ್ಲಿ ಆರ್ಥಿಕ ನೆರವು ದೊರೆತಂತಾಗುತ್ತದೆ. ಆದರೂ, ಇಲ್ಲಿಯವರೆಗೆ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಹಲವರಿಗೆ ಸಿಕ್ಕಿಲ್ಲ 21ನೇ ಕಂತಿನ ಹಣ
ಈ ಮಧ್ಯೆ ಹಲವು ರೈತರಿಗೆ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಜಮಾ ಆಗಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಇದು ತಾಂತ್ರಿಕ ಕಾರಣಗಳಿಂದ ಉಂಟಾಗಿದೆ. ಈ ಪರಿಣಾಮ ಅನೇಕ ರೈತರಿಗೆ PM-KISAN ಯೋಜನೆಯ ಹಿಂದಿನ ಕಂತು ಸಿಕ್ಕಿರಲಿಲ್ಲ ಎನ್ನಲಾಗಿದೆ. ಆದ್ದರಿಂದ 22ನೇ ಕಂತು ಆ ರೈತರಿಗೆ ಬಹಳ ಮುಖ್ಯವಾಗಿದೆ. ಆದ್ದರಿಂದ, 21 ನೇ ಕಂತಿನ ಹಣ ಪಡೆಯದವರು ಮೊದಲು ತಮ್ಮ ದಾಖಲೆಗಳು ಸರಿಯಾಗಿದ್ಯಾ ಎಂದು ಚೆಕ್ ಮಾಡಿಕೊಳ್ಳಿ. ಹಾಗಿದ್ರೆ, ಹಿಂದಿನ ಮತ್ತು ಪ್ರಸ್ತುತ ಕಂತುಗಳನ್ನು ಸೇರಿಸಿ ಅವರಿಗೆ ಒಮ್ಮೆಲೆ ₹4,000 ಜಮಾ ಆಗುವ ಸಾಧ್ಯತೆಯಿದೆ. .
ಕೆವೈಸಿ ಕಡ್ಡಾಯ!
ಯೋಜನೆಯ ಲಾಭ ಪಡೆಯಲು ಕೆಲವು ಕಡ್ಡಾಯ ನಿಯಮಗಳನ್ನು ಪಾಲಿಸಬೇಕು. ಇದರಲ್ಲಿ ಪ್ರಮುಖವಾದುದು ಇ-ಕೆವೈಸಿ (e-KYC). ರೈತರು ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಪಿಎಂ ಕಿಸಾನ್ ಹಣ ಖಾತೆಗೆ ಬರುವುದಿಲ್ಲ. ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದು ಮತ್ತು ಭೂ ದಾಖಲೆಗಳು ಸರಿಯಾಗಿರುವುದು ಸಹ ಅಗತ್ಯ. ಸಣ್ಣ ತಪ್ಪು ಸಹ ಹಣ ಜಮಾದಲ್ಲಿ ವಿಳಂಬವಾಗಲು ಕಾರಣವಾಗಬಹುದು.
ಇನ್ನು ರೈತರು ತಮ್ಮ ಪಿಎಂ ಕಿಸಾನ್ ಹಣ ಬಂದಿದೆಯಾ? ಇಲ್ವಾ? ಎಂದು ಮನೆಯಲ್ಲಿ ಕುಳಿತುಕೊಂಡು ಪರಿಶೀಲಿಸಬಹುದು. ಇದಕ್ಕಾಗಿ, ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 'ಫಲಾನುಭವಿ ಸ್ಥಿತಿ' (Beneficiary Status) ಆಯ್ಕೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಕಂತು ಪಾವತಿಯಾಗಿದೆಯೇ ಅಥವಾ ಬಂದಿಲ್ಲದಿದ್ದರೆ ಅದಕ್ಕೆ ಕಾರಣ ಏನು ಎಂಬುದು ಲಭ್ಯವಾಗುತ್ತದೆ. ಯಾವುದೇ ಸಮಸ್ಯೆ ಎದುರಾದರೆ, ಹತ್ತಿರದ ಕೃಷಿ ಕಚೇರಿ ಅಥವಾ ಸೇವಾ ಕೇಂದ್ರದ ಸಹಾಯ ಪಡೆಯಬಹುದು.


Click it and Unblock the Notifications