ಪೋಸ್ಟ್ ಆಫೀಸ್, ಬ್ಯಾಂಕ್ (Post Office, Bank) ಸೇರಿ ಹೀಗೆ ಹಲವು ರೀತಿಯಲ್ಲಿ ಹೂಡಿಕೆ ಮಾಡುವ ಗುರಿಯನ್ನು ಹಲವರು ಹೊಂದಿರುತ್ತಾರೆ. ಎಷ್ಟೇ ಸಂಬಳ ಇದ್ದರೂ ಕೆಲವರು ಹೂಡಿಕೆ ಮಾಡೋದೆ ಇಲ್ಲ, ಇನ್ನೂ ಕೆಲವರು ಸ್ವಲ್ಪ ಸಂಬಳ ಇದ್ದರೂ ಹೂಡಿಕೆ (Investment) ಮಾಡುತ್ತಾರೆ. ಆದರೆ ಇದೀಗ ಪೋಸ್ಟ್ ಆಫೀಸ್‌ನ ಬೆಸ್ಟ್ ಹೂಡಿಕೆ ಯೋಜನೆಯೊಂದಿದೆ. ಇಲ್ಲಿ ನೀವು ಹೂಡಿಕೆ ಮಾಡಿದ್ರೆ ಸಾಕು, ಹೆಚ್ಚಿನ ಆದಾಯ ಗಳಿಸಬಹುದು. ಹಾಗಿದ್ರೆ ಆ ಯೋಜನೆ ಯಾವುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ಅನೇಕರು ತಮ್ಮ ಆದಾಯದ ಒಂದು ಭಾಗವನ್ನು ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಇಂತಹ ಜನಪ್ರಿಯ ಯೋಜನೆಗಳಲ್ಲಿ ಅಂಚೆ ಕಚೇರಿಗಳು ನೀಡುವ ಸರ್ಕಾರಿ ಯೋಜನೆಗಳು ಕೂಡಾ ಒಂದು. ಅಂಚೆ ಕಚೇರಿಯ ಹಲವು ಯೋಜನೆಗಳು ಹೂಡಿಕೆಗೂ ವಿಶ್ವಾಸಾರ್ಹ, ಉತ್ತಮ ಆದಾಯವನ್ನೂ ನೀಡುತ್ತದೆ.
ವಿಶೇಷವಾಗಿ ಹಿರಿಯ ನಾಗರಿಕರಿಗೆ, ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ನಿವೃತ್ತಿಯ ನಂತರ ಮಾಸಿಕ ₹17,000 ಕ್ಕೂ ಹೆಚ್ಚು ಆದಾಯವನ್ನು ಪಡೆಯುವ ಅವಕಾಶ ನೀಡುತ್ತದೆ. ಸರ್ಕಾರಿ ಸ್ವಾಮ್ಯದ ಯೋಜನೆ ಇದಾಗಿರುವುದರಿಂದ, ಸರಿಯಾದ ಹೂಡಿಕೆ ಆಯ್ಕೆ ಮಾಡಿದ್ರೆ, ನಿವೃತ್ತಿ ಸಮಯದಲ್ಲಿ ಉತ್ತಮ ಆದಾಯ ಗಳಿಸಬಹುದು..
ಬಡ್ಡಿದರ ಎಷ್ಟು?
SCSS ಪ್ರಸ್ತುತ ಶೇಕಡಾ 8.2% ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಇದು ಬಹುತೇಕ ಬ್ಯಾಂಕ್ ಸ್ಥಿರ ಠೇವಣಿಗಳ ಬಡ್ಡಿದರಗಳಿಗೆ ಹೋಲಿಸಿದ್ರೆ ಹೆಚ್ಚಾಗಿದೆ. ಈ ಯೋಜನೆಯಲ್ಲಿ ಕನಿಷ್ಠ ₹1,000 ದಿಂದ ಹೂಡಿಕೆ ಮಾಡಲು ಆರಂಭಿಸಬಹುದು. ಇನ್ನು ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿ ₹30 ಲಕ್ಷ ರೂ. ಇನ್ನು ತೆರಿಗೆ ಪ್ರಯೋಜನಗಳನ್ನು ಹೊಂದಿರುವ ಈ ಯೋಜನೆಯಲ್ಲಿ, ನಿಮ್ಮ ಹೂಡಿಕೆಯ ಮೊತ್ತ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳಿಗೆ ಅರ್ಹವಾಗಿವೆ. ಇದು ವಾರ್ಷಿಕ ₹1.5 ಲಕ್ಷದವರೆಗೆ ತೆರಿಗೆ ವಿನಾಯತಿ ನೀಡುತ್ತದೆ.
ಯಾರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು?
ಇನ್ನು ಈ ಯೋಜನೆಯಲ್ಲಿ ಯಾರೆಲ್ಲಾ ಹೂಡಿಕೆ ಮಾಡಬಹುದು ಗೊತ್ತಾ? 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ವ್ಯಕ್ತಿ SCSS ಖಾತೆಯನ್ನು ತೆರೆಯಬಹುದು. ಅಲ್ಲದೇ ಹೆಂಡತಿಯೊಂದಿಗೆ ಜಂಟಿ ಖಾತೆಗಳನ್ನು ತೆರೆಯುವ ಅವಕಾಶವೂ ಇದೆ. ಸ್ವಯಂ ನಿವೃತ್ತಿ ಯೋಜನೆ (VRS) ತೆಗೆದುಕೊಂಡ 55-60 ವರ್ಷದವರು ಮತ್ತು ನಿವೃತ್ತ ರಕ್ಷಣಾ ಸಿಬ್ಬಂದಿ (50-60 ವರ್ಷ) ಸಹ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಯೋಜನೆಯು 5 ವರ್ಷಗಳ ಅವಧಿಯನ್ನು ಹೊಂದಿದೆ ಮತ್ತು ಬಡ್ಡಿದರವನ್ನು ಪ್ರತಿ ಮೂರು ತಿಂಗಳಿಗೆ ಜಮಾ ಮಾಡಲಾಗುತ್ತದೆ. ಖಾತೆಯನ್ನು ಅಕಾಲಿಕವಾಗಿ ಮುಚ್ಚಿದರೆ, ದಂಡ ವಿಧಿಸುವ ಸಾಧ್ಯತೆ ಇದೆ. ಇನ್ನು ಒಂದು ವೇಳೆ ಖಾತೆದಾರರು ಮರಣ ಹೊಂದಿದರೆ, ಆ ಸಂದರ್ಭದಲ್ಲಿ ಖಾತೆಯಲ್ಲಿನ ಹಣವು ನಾಮಿನಿಗೆ ಹಸ್ತಾಂತರವಾಗುತ್ತದೆ.
ಒಂದು ಉದಾಹರಣೆಗೆ, ಒಂದು ಜಂಟಿ ಖಾತೆಯಲ್ಲಿ ₹25 ಲಕ್ಷ ಹೂಡಿಕೆ ಮಾಡಿದರೆ, ವಾರ್ಷಿಕ ಶೇ. 8.2% ರ ಬಡ್ಡಿದರದ ಅಡಿಯಲ್ಲಿ 5 ವರ್ಷಗಳಲ್ಲಿ ಒಟ್ಟು ₹10,25,000 ಬಡ್ಡಿ ಸಂಗ್ರಹವಾಗುತ್ತದೆ. ಇದು ವಾರ್ಷಿಕ ₹2,05,000, ತ್ರೈಮಾಸಿಕವಾಗಿ ₹51,250 ಮತ್ತು ತಿಂಗಳಿಗೆ ಸುಮಾರು ₹17,083 ಆದಾಯ ನೀಡಿದಂತಾಗುತ್ತದೆ.
ಇನ್ನು ಒಮ್ಮೆ ನೀವು ಹೂಡಿಕೆ ಮಾಡಿದ್ರೆ, 5 ವರ್ಷಗಳ ನಂತರ ಹೂಡಿಕೆಯನ್ನು ಹಿಂಪಡೆಯಲು ಅಥವಾ ಇನ್ನೂ 3 ವರ್ಷಗಳವರೆಗೆ ವಿಸ್ತರಿಸಲು ಅವಕಾಶವಿದೆ. ಸರ್ಕಾರ ಬಡ್ಡಿದರಗಳನ್ನು ಪರಿಷ್ಕರಿಸಿದರೂ ಸಹ, ಈ ಅವಧಿಯ ಉದ್ದಕ್ಕೂ ಬಡ್ಡಿದರವು ಸ್ಥಿರವಾಗಿರುತ್ತದೆ. ನಿವೃತ್ತರಾದವರಿಗೆ ಯಾವುದೇ ಅಪಾಯವಿಲ್ಲದೆ ನಿರಂತರ ಆದಾಯ ಗಳಿಸಬೇಕೆಂಬ ಗುರಿ ಇದ್ದವರಿಗೆ ಈ ಹೂಡಿಕೆ ಯೋಜನೆ ಊತ್ತಮ ಆಯ್ಕೆಯಾಗಿದೆ.\
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications