ಹೂಡಿಕೆದಾರರಿಗಾಗಿ (Investors) ಅಂಚೆ ಕಚೇರಿ, ಬ್ಯಾಂಕ್‌ಗಳು ಹಲವಾರು ಯೋಜನೆಗಳನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. ಅದರಲ್ಲೂ ಪೋಸ್ಟ್ ಆಫೀಸ್ (Post Office) ಅನ್ನು ಕೇವಲ ಪೋಸ್ಟ್‌ಗಳಿಗೆ ಅಥವಾ ಪಾರ್ಸೆಲ್ ಸೇವೆಗಳಿಗೆ ಮಾತ್ರ ಬಳಸಲಾಗುತ್ತದೆ ಎಂಬುದು ಹಲವರ ಅಭಿಪ್ರಾಯ. ಆದರೆ, ಪ್ರಸ್ತುತ ಅವು ಬ್ಯಾಂಕ್‌ಗಳಂತೆಯೇ ಹಲವಾರು ಹೂಡಿಕೆ ಯೋಜನೆಗಳನ್ನು ಪರಿಚಯಿಸಿದೆ. ಪೋಸ್ಟ್ ಆಫೀಸ್ ಆವರ್ತಕ ಠೇವಣಿ (RD), ಮಾಸಿಕ ಆದಾಯ ಯೋಜನೆ (MIS), ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಖಾತೆ ಮತ್ತು ಕಿಸಾನ್ ವಿಕಾಸ ಪತ್ರ (KVP) ಹೀಗೆ ಹಲವಾರು ಹೂಡಿಕೆ ಯೋಜನೆಗಳನ್ನು ತಂದಿದೆ. ಇವುಗಳಲ್ಲಿ ಅಂಚೆ ಕಚೇರಿ ಟೈಮ್ ಡೆಪಾಸಿಟ್ (TD) ಯೋಜನೆ ಕೂಡಾ ಸದ್ಯ ಜನಪ್ರಿಯವಾಗಿದೆ.

ಅಂಚೆ ಕಚೇರಿ TD (Post Office Time Travel) ಯೋಜನೆಗಳು ಬ್ಯಾಂಕ್ ಎಫ್‌ಡಿಗಳಿಗಿಂತ ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತವೆ. ಸದ್ಯ ಈ ವರದಿ ಹೆಚ್ಚಿನವರನ್ನು ಅಚ್ಚರಿಗೊಳಿಸಿದೆ. ಹೆಚ್ಚಿನ ಬ್ಯಾಂಕ್‌ಗಳು ಕಡಿಮೆ FD ರಿಟರ್ನ್ಸ್ ನೀಡಿದರೆ, ಅಂಚೆ ಕಚೇರಿ TD ಪ್ರಸ್ತುತ ಹೆಚ್ಚು ಬಡ್ಡಿದರಗಳನ್ನು ನೀಡುವ ಮೂಲಕ ಭಾರೀ ಗಮನ ಸೆಳೆಯುತ್ತಿದೆ. ಈ ಯೋಜನೆ ಮೂಲಕ ಹೂಡಿಕೆದಾರರು 1, 2, 3, ಅಥವಾ 5 ವರ್ಷಗಳ ಠೇವಣಿ ಅವಧಿಗಳನ್ನು ಆಯ್ಕೆ ಮಾಡಬಹುದು. 1 ವರ್ಷದ ಠೇವಣಿಗೆ 6.9%, 2 ವರ್ಷಕ್ಕೆ 7.0%, ಮತ್ತು 3 ಹಾಗೂ 5 ವರ್ಷಗಳ ಠೇವಣಿಗಳಿಗೆ 7.5% ರಷ್ಟು ಬಡ್ಡಿ ದರ ಅನ್ವಯಿಸುತ್ತದೆ.
1 ಲಕ್ಷ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತದೆ?
ನೀವು ₹1 ಲಕ್ಷ ಹಣವನ್ನು 5 ವರ್ಷಗಳ ಅಂಚೆ ಕಚೇರಿ ಟೈಮ್ ಠೇವಣಿಯಲ್ಲಿ 7.5% ಬಡ್ಡಿ ದರದಲ್ಲಿ ಹೂಡಿಕೆ ಮಾಡಿದರೆ, ಅವಧಿಯ ನಂತರ ₹44,995 ಬಡ್ಡಿ ಹಣ ನಿಮಗೆ ಸಿಗುತ್ತದೆ. ಮುಕ್ತಾಯದ ನಂತರ, ಅಸಲು ಮತ್ತು ಬಡ್ಡಿ ಸೇರಿ ಒಟ್ಟು ₹1,44,995 ರೂ. ನಿಮ್ಮ ಖಾತೆಗೆ ಜಮಾ ಆಗುತ್ತದೆ. ಅದೇ ಮೊತ್ತ ಮತ್ತು ಅವಧಿಯನ್ನು ಬ್ಯಾಂಕ್ ಸ್ಥಿರ ಠೇವಣಿಯೊಂದಿಗೆ ಹೋಲಿಕೆ ಮಾಡಿದರೆ, ಅಂಚೆ ಕಚೇರಿ ಟಿಡಿ ಯೋಜನೆ ಉತ್ತಮ ಲಾಭವನ್ನು ನೀಡುತ್ತದೆ ಎಂದು ಹೇಳಲಾಗಿದೆ.
ಎಷ್ಟು ಹಣ ಹೂಡಿಕೆ ಮಾಡಬಹುದು?
ಇನ್ನು ಪೋಸ್ಟ್ ಆಫೀಸ್ ಟೈಂ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಹಣ ಅಗತ್ಯವಿಲ್ಲ. ಕನಿಷ್ಠ ₹1,000 ರೂ. ಇದ್ದರೆ ಸಾಕು, ಇದನ್ನು ಪ್ರಾರಂಭಿಸಬಹುದು ಹಾಗೂ ಯಾವುದೇ ಗರಿಷ್ಠ ಮಿತಿಯಿಲ್ಲ. ಇದು ಕಡಿಮೆ ಆದಾಯ ಇರುವವರನ್ನೂ, ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಮಾಡಬೇಕು ಅಂದುಕೊಂಡಿರುವವರಿಗೂ ಬೆಸ್ಟ್ ಯೋಜನೆಯಾಗಿದೆ. ಅಂಚೆ ಕಚೇರಿ TD ಯೋಜನೆಯಲ್ಲಿ ಜಂಟಿ ಖಾತೆಯನ್ನೂ ತೆರೆಯಬಹುದು. ಒಬ್ಬರೇ ಅಥವಾ ಸಂಗಾತಿ ಮತ್ತು ಮಕ್ಕಳೊಂದಿಗೆ ಜಂಟಿಯಾಗಿ ಖಾತೆ ತೆರೆಯಬಹುದು. ಮೂರು ಜನರನ್ನು ಸೇರಿಸಿ ಒಂದು ಕುಟುಂಬ ಒಟ್ಟಾಗಿ ಉಳಿತಾಯ ಮಾಡುವ ಅವಕಾಶವಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications