ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಗಡುವು ಸಮೀಪವಾಗುತ್ತಿದೆ. ಈ ತಿಂಗಳ ಕೊನೆಯ ಒಳಗಾಗಿ ಐಟಿಆರ್ ಫೈಲ್ ಮಾಡಬೇಕಾಗುತ್ತದೆ. ಈ ನಡುವೆ ಶನಿವಾರ, ಭಾನುವಾರ ಇರುವುದರಿಂದಾಗಿ ಪ್ರಸ್ತುತ ಕೇವಲ ಒಂದು ಅಧಿಕೃತ ಕೆಲಸದ ದಿನ (ಜುಲೈ 31) ಬಾಕಿಯಿದೆ. ಈ ನಡುವೆ ಈ ಗಡುವನ್ನು ವಿಸ್ತರಣೆ ಮಾಡುವ ಆಗ್ರಹ ಕೇಳಿ ಬಂದಿದೆ. ಸರ್ಕಾರಕ್ಕೆ ಮನವಿಯನ್ನು ಕೂಡಾ ಸಲ್ಲಿಸಲಾಗಿದೆ.
ಹಣಕಾಸು ವರ್ಷ 2022-2023 ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲು ಗ್ರಾಹಕ ಸಂಘಟನೆಯು ಕೇಂದ್ರಕ್ಕೆ ಶುಕ್ರವಾರ ಮನವಿ ನೀಡಿದೆ. ಹಕ್ಕುಗಳ ರಕ್ಷಣಾ ಮಂಡಳಿ (ಸಿಪಿಆರ್) ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ರಾಜ್ಯ ಸಚಿವರು, ಕಾರ್ಯದರ್ಶಿಗಳು ಮತ್ತು ಇತರ ಸಂಬಂಧಿತ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದೆ.

ಮಳೆ, ಪ್ರವಾಹದಿಂದ ದೇಶ ತತ್ತರ
"ಕಳೆದ ಒಂದು ತಿಂಗಳಿನಿಂದ ವಿವಿಧ ಪ್ರದೇಶಗಳಲ್ಲಿ ಧಾರಾಕಾರ ಮಳೆ, ಪ್ರವಾಹ, ಭೂಕುಸಿತ ಮತ್ತು ಇತರ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿದೆ. ಜನರು ಆತಂಕ, ಅಪಾಯದಲ್ಲಿದ್ದಾರೆ. ಉತ್ತರ ಭಾರತದಲ್ಲಿ, ಪ್ರಸ್ತುತ ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿಯೂ ಪರಿಸ್ಥಿತಿಯು ಆತಂಕಕಾರಿಯಾಗಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈ ಸೇರಿದಂತೆ ಹಲವೆಡೆ ಐಟಿಆರ್ ಸಲ್ಲಿಸಲು ಬಯಸುವ ಜನರಿಗೆ ಪ್ರವಾಹ, ಮಳೆ ತೊಂದರೆ ಉಂಟು ಮಾಡಿದೆ," ಎಂದು ಸಿಪಿಆರ್ ಅಧ್ಯಕ್ಷ ಬ್ಯಾರಿಸ್ಟರ್ ವಿನೋದ್ ತಿವಾರಿ ಹೇಳಿದ್ದಾರೆ.
ಅಧಿಕೃತ ಪೋರ್ಟಲ್‌ನಲ್ಲಿ ದಟ್ಟಣೆ
"ಹಣಕಾಸು ವರ್ಷ 2023-2024ಕ್ಕೆ ಲಕ್ಷಗಟ್ಟಲೆ ಜನರು ಐಟಿಆರ್ ಅನ್ನು ಸಲ್ಲಿಸುತ್ತಿದ್ದು, ಇದರಿಂದಾಗಿ ಅಧಿಕೃತ ಪೋರ್ಟಲ್‌ನಲ್ಲಿ ಭಾರೀ ದಟ್ಟಣೆ ಉಂಟಾಗುತ್ತಿದೆ, ಇದರಿಂದಾಗಿ ಪೋರ್ಟಲ್ ಅತೀ ನಿಧಾನವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ನಾವು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಪರಿಸ್ಥಿತಿಯು ಬದಲಾವಣೆಯಾಗಿಲ್ಲ," ಎಂದು ಮುಂಬೈನ ತೆರಿಗೆ ಮತ್ತು ಆರ್ಥಿಕ ಸಲಹೆಗಾರ ಎ.ಎನ್. ದೇಸಾಯಿ ತಿಳಿಸಿದ್ದಾರೆ.
"ಜೂನ್ ಮೂರನೇ ವಾರದಿಂದ ಈ ಪರಿಸ್ಥಿತಿ ಇದೆ. ನಾವು ಗಡುವಿನ ಒಳಗಾಗಿ ಎಲ್ಲ ಕಾರ್ಯವನ್ನು ಮಾಡಿಮುಗಿಸಲು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಜುಲೈ 31ರ ಒಳಗಾಗಿ ಎಲ್ಲ ಕಾರ್ಯವನ್ನು ಮಾಡಿಮುಗಿಸಲು ಸಾಧ್ಯವಾಗದೆ ಇರಬಹುದು. ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡದಿದ್ದರೆ, ಅನೇಕ ಜನರು ತಮ್ಮ ತಪ್ಪಿಲ್ಲದರೆಯೇ ಭಾರೀ ಪ್ರಮಾಣದಲ್ಲಿ ದಂಡವನ್ನು ತೆತ್ತು, ತಡವಾಗಿ ಐಟಿಆರ್ ಸಲ್ಲಿಸಬೇಕಾಗುತ್ತದೆ," ಎಂದು ಕೂಡಾ ಎ.ಎನ್. ದೇಸಾಯಿ ವಾದವಾಗಿದೆ.
ಗಡುವು ವಿಸ್ತರಣೆಗೆ ಮನವಿ, ಎಲ್ಲಿಯವರೆಗೆ?
ಆಗಸ್ಟ್ 15 ರವರೆಗೆ ಗಡುವನ್ನು ವಿಸ್ತರಣೆ ಮಾಡಿ ಎಂದು ಸಿಪಿಆರ್ ಅಧ್ಯಕ್ಷ ಬ್ಯಾರಿಸ್ಟರ್ ವಿನೋದ್ ತಿವಾರಿ ಒತ್ತಾಯಿಸಿದ್ದಾರೆ. ಆದರೆ ಈಗ ಪೋರ್ಟಲ್ ತುಂಬಾ ಸ್ಲೋ ಆಗಿರುವುದನ್ನು ನಾವು ನೋಡಿದಾಗ ಈ ಗಡುವು ಸಾಕಾಗದು, ಕನಿಷ್ಠ 6 ವಾರಗಳವರೆಗೆ (ಸೆಪ್ಟೆಂಬರ್ ಮಧ್ಯದಲ್ಲಿ) ಗಡುವನ್ನು ವಿಸ್ತರಣೆ ಮಾಡಬೇಕಾಗುತ್ತದೆ ಎಂದು ಆರ್ಥಿಕ ಸಲಹೆಗಾರ ಎ.ಎನ್. ದೇಸಾಯಿ ಆಗ್ರಹಿಸಿದ್ದಾರೆ.
ಆದರೆ ಬಾಂಬೆಯ ಚಾರ್ಟರ್ಡ್ ಅಕೌಂಟೆಂಟ್ಸ್ ಸೊಸೈಟಿಯ ಮಾಜಿ ಅಧ್ಯಕ್ಷ ಅಭಯ್ ಮೆಹ್ತಾ ಮಾತ್ರ ಜನರು ಪ್ರತಿ ವರ್ಷ ವಿಸ್ತರಣೆಗಾಗಿ ಕಾಯಬಾರದು. ಕೊನೆಯ ಕ್ಷಣದಲ್ಲಿ ಐಟಿಆರ್ ಸಲ್ಲಿಸಬಾರದು. ಈ ಗಡುವು ವಿಸ್ತರಣೆಗೆ ಕಾಯುವುದು ರೂಢಿಯಾಗಬಾರದು. ಜನರು ಜುಲೈ ವೇಳೆಗೆ ಎಲ್ಲಾ ಐಟಿಆರ್ ಸಂಬಂಧಿತ ಕಾರ್ಯವನ್ನು ಮುಗಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ.
"ಜನರು ಶಿಸ್ತಿನಿಂದ ಇರಬೇಕು. ಸಿಎಗಳು ತಮ್ಮ ರಿಟರ್ನ್ಸ್ ಅನ್ನು ಸಕಾಲಿಕವಾಗಿ ಸಲ್ಲಿಸಬೇಕು. ತಡವಾಗಿ ಫೈಲಿಂಗ್ ಮಾಡಲು ದಂಡವನ್ನು ಪಾವತಿಸುವುದನ್ನು ತಪ್ಪಿಸಲು ತಮ್ಮ ತೆರಿಗೆ ಸಲಹೆಗಾರರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಮೆಹ್ತಾ ಹೇಳಿದ್ದಾರೆ.
ಇನ್ನು ನಾವು ಕಳೆದ ಕೆಲವು ವರ್ಷಗಳ ಬೆಳವಣಿಗೆ ನೋಡಿದಾಗ ಕೇಂದ್ರ ಸರ್ಕಾರವು ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಒಂದೆರಡು ವಾರಗಳ ಕಾಲ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಗಡುವನ್ನು ವಿಸ್ತರಣೆ ಮಾಡಿದೆ. ಆದರೆ ಕಳೆದ ವರ್ಷ ಮಾತ್ರ ಸರ್ಕಾರವು ಗಡುವು ವಿಸ್ತರಣೆ ಮಾಡಿಲ್ಲ. ಈ ವರ್ಷದ ಗಡುವು ಸಮೀಪಿಸುತ್ತಿದ್ದು ಸರ್ಕಾರ ಹೆಚ್ಚಿನ ಕಾಲಾವಕಾಶ ನೀಡುತ್ತಾ ಕಾದು ನೋಡಬೇಕಿದೆ.


Click it and Unblock the Notifications