ಪೋಸ್ಟ್ ಆಫೀಸ್, ಬ್ಯಾಂಕ್‌ಗಳಲ್ಲಿ (Post Office, Banks) ಹಲವಾರು ಹೂಡಿಕೆ ಯೋಜನೆಗಳಿವೆ. ನಿಮ್ಮಲ್ಲಿರುವ ಹಣಕ್ಕೆ ತಕ್ಕಂತೆ, ನಿಮ್ಮ ಆಯ್ಕೆಯ ಉಳಿತಾಯ ಯೋಜನೆಗಳನ್ನು ತೆರೆಯಬಹುದು. ಸಾಮಾನ್ಯವಾಗಿ ಎಷ್ಟೇ ಕಮ್ಮಿ ಸಂಬಳ ಇರಲಿ, ಹೆಚ್ಚಿರಲಿ ಸ್ವಲ್ಪ ಆದ್ರೂ ಹೂಡಿಕೆ ಮಾಡಬೇಕು ಎಂಬ ಅಭ್ಯಾಸ ಎಲ್ಲರಲ್ಲಿರಬೇಕು. ಹಣಕಾಸು ತಜ್ಞರು ಕೂಡಾ ಇದನ್ನೇ ಸಲಹೆ ನೀಡುತ್ತಾರೆ. ಅದರಲ್ಲೂ ನೀವು ಸಣ್ಣ ವಯಸ್ಸಲ್ಲಿ ಆರಂಭಿಸಿದ ಹೂಡಿಕೆ ಮೊತ್ತ, ನಿಮ್ಮ ನಿವೃತ್ತಿ ಸಮಯದಲ್ಲಿ (Retirement Time) ಭಾರೀ ಆದಾಯವನ್ನು ನೀಡುತ್ತದೆ.

ಭಾರತದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸಾಕಷ್ಟು ಹೂಡಿಕೆ ಯೋಜನೆಗಳ ಆಯ್ಕೆಗಳಿವೆ. ಈ ಹೂಡಿಕೆ ಆಯ್ಕೆಗಳು ಕಡಿಮೆ ಅಪಾಯವನ್ನು ಹೊಂದಿದ್ದು, ಆದಾಯವು ಹೆಚ್ಚು ಪಡೆಯುವ ಅವಕಾಶಗಳಿವೆ. ಈ ಲೇಖನದಲ್ಲಿ ನಿವೃತ್ತಿದಾರರಿಗಾಗಿ ಉತ್ತಮ ಆದಾಯ ಒದಗಿಸುವ ಪ್ರಮುಖ ಹೂಡಿಕೆ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (SCSS):
60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇದು ಸೂಕ್ತ ಯೋಜನೆಯಾಗಿದೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿದ್ದು, ಈ ಯೋಜನೆಯಲ್ಲಿ ಬಡ್ಡಿ ದರ 8.2 % ನೀಡಲಾಗುತ್ತದೆ. ಈ ಯೋಜನೆಯಲ್ಲಿ ಗರಿಷ್ಠ 30 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇದರಲ್ಲಿ ಹೂಡಿಕೆಯ ಅವಧಿ 5 ವರ್ಷಗಳು. ನಂತರ 3 ವರ್ಷಗಳವರೆಗೆ ವಿಸ್ತರಿಸುವ ಅವಕಾಶವೂ ಇರುತ್ತದೆ. ಈ ಯೋಜನೆಯಲ್ಲಿ ತೆರಿಗೆ ಪ್ರಯೋಜನವನ್ನೂ ಪಡೆಯಬಹುದು. ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದ್ದಿ, ಹಿರಿಯರಿಗೆ ಅತ್ಯಂತ ಜನಪ್ರಿಯ ಮತ್ತು ಸುರಕ್ಷಿತ ಆಯ್ಕೆಯಾಗಲಿದೆ.
ಅಟಲ್ ಪಿಂಚಣಿ ಯೋಜನೆ (APY):
ಅಟಲ್ ಪಿಂಚಣಿ ಯೋಜನೆ ಉದ್ಯೋಗಿಗಳಿಗೆ, ಅಸಂಘಟಿತ ವಲಯದ ಕಾರ್ಮಿಕರಿಗೆ ಸೂಕ್ತವಾಗಿದೆ. 18 ರಿಂದ 40 ವರ್ಷದೊಳಗಿನ ವ್ಯಕ್ತಿಗಳು 60 ವರ್ಷ ವಯಸ್ಸಿನವರೆಗೆ ಇದರಲ್ಲಿ ಹೂಡಿಕೆ ಮಾಡಬಹುದು. ನಿವೃತ್ತಿಯ ನಂತರ ಹೂಡಿಕೆದಾರರು ಈ ಯೋಜನೆಯಿಂದ ಆದಾಯ ಪಡೆಯಬಹುದು. ನಿಮ್ಮ ಹೂಡಿಕೆಗೆ ತಕ್ಕಂತೆ ಮಾಸಿಕವಾಗಿ 1,000 ರಿಂದ 5,000 ರೂ.ಗಳವರೆಗೆ ಸ್ಥಿರ ಮಾಸಿಕವಾಗಿ ಪಿಂಚಣಿಯನ್ನು ಪಡೆಯಬಹುದು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS):
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಸರ್ಕಾರಿ ಬೆಂಬಲಿತ, ಮಾರುಕಟ್ಟೆ ಸಂಬಂಧಿತ ನಿವೃತ್ತಿ ಯೋಜನೆಯಾಗಿದೆ. 18 ರಿಂದ 70 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಇದು ಮುಕ್ತವಾಗಿದೆ. ಹೂಡಿಕೆದಾರರು 60 ವರ್ಷದ ವಯಸ್ಸಿನಲ್ಲಿ ನಿವೃತ್ತಿಯಾಗುವವರೆಗೆ ಹೂಡಿಕೆ ಮಾಡಬಹುದು. ಆದ್ದರಿಂದ ನೀವು ಹೂಡಿಕೆ ಮಾಡಿದ ಮೊತ್ತವನ್ನು, ನಿವೃತ್ತಿಯ ನಂತರ ಪಡೆಯುವ ಅವಕಾಶವಿರುತ್ತದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS):
ಇದು ಕೂಡಾ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಕಡಿಮೆ ಅಪಾಯದ ಉಳಿತಾಯ ಯೋಜನೆಯಾಗಿದ್ದು, ನಿಯಮಿತವಾಗಿ ಮಾಸಿಕ ಬಡ್ಡಿದರವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಬಡ್ಡಿದರ ಸುಮಾರು 7.4% ಆಗಿದ್ದು, ಗರಿಷ್ಠ ಠೇವಣಿ ಮೊತ್ತ 4.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇನ್ನು ಅವಧಿ 5 ವರ್ಷಗಳಾಗಿದ್ದು, ಉತ್ತಮ ಆದಾಯ ಪಡೆಯಬಹುದು. ನಿಯಮಿತ ಆದಾಯ ಪಡೆಯುವವರು, ಹಿರಿಯ ನಾಗರಿಕರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications