ಗೃಹ ಸಾಲ ಯಾವಾಗಾ ಮುಗಿಯುತ್ತೋ ಎಂದು ಬಹಳಷ್ಟು ಜನ ಚಿಂತಿಸುತ್ತಿರುತ್ತಾರೆ. ಇದು ಒಂದು ದೊಡ್ಡ ಮೊತ್ತದ ಸಾಲವಾಗಿರುವುದರಿಂದ ಮತ್ತು ದೀರ್ಘಾವಧಿಯವರೆಗೆ ಇರುವುದರಿಂದ ಸಹಜ. ಗೃಹಸಾಲ ಎಂಬುವುದು ಒಂದು ಬಹುದೊಡ್ಡ ಆರ್ಥಿಕ ಜವಾಬ್ದಾರಿ. ಅದನ್ನು ಪಡೆಯುವಾಗ ಇರುವಾಗ ಎಚ್ಚರ ಅದನ್ನು ಕೊನೆಗೊಳಿಸುವಾಗ ಕೂಡಾ ಇರಬೇಕಾಗುತ್ತದೆ. ಅನೇಕರು ಈ ಹೆಜ್ಜೆಯಲ್ಲಿ ಎಡವುತ್ತಾರೆ. ಹೀಗಾಗಿ ಹೋಮ್ ಲೋನ್ ಪೂರ್ತಿಯಾಗಿ ಮುಗಿದ ನಂತರ ಮಾಡಿ ಮುಗಿಸಬೇಕಾದ ಕಾರ್ಯಗಳು ಯಾವುದು? ಯಾವೆಲ್ಲಾ ದಾಖಲೆಗಳು ಬ್ಯಾಂಕಿನಿಂದ ಪಡೆದುಕೊಳ್ಳಬೇಕು ಎಂದು ತಿಳಿದುಕೊಳ್ಳೋಣ.
1. ಅಸಲಿ ದಾಖಲೆ ಹಿಂಪಡೆಯಿರಿ: ಗೃಹಸಾಲ ನೀಡುವಾಗ ಸಾಲದಾತರು ಮನೆಯ ಮೂಲದಾಖಲೆಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುತ್ತದೆ. ಮನೆ ಸಾಲ ಮರುಪಾವತಿ ಪೂರ್ಣಗೊಂಡ ತಕ್ಷಣ ನಿಮ್ಮ ಆಸ್ತಿಯ ಮೂಲ ದಾಖಲೆಗಳು ಹಿಂಪಡೆಯುವುದು.

ಮಾರಾಟ ಪತ್ರ, ಖಾತಾ ಪ್ರಮಾಣಪತ್ರ, ಟೈಟಲ್ ಡೀಡ್ ಸಾಲದ ಒಪ್ಪಂದ ಪತ್ರ ಇತ್ಯಾದಿ ಸಾಲದ ಅವಧಿಯಲ್ಲಿ ಬ್ಯಾಂಕಿನ ಬಳಿ ಇರುತ್ತವೆ. ಸಾಲ ಪಾವತಿ ಪೂರ್ಣಗೊಂಡ ನಂತರ, ಬ್ಯಾಂಕಿಗೆ ನೀಡಿದ್ದ ಎಲ್ಲಾ ದಾಖಲೆಗಳನ್ನು ವಾಪಾಸ್ ಪಡೆದುಕೊಳ್ಳಬೇಕು. ಜೊತೆಗೆ ಕೊಟ್ಟಿದ್ದ ದಾಖಲೆಗಳು ಸುಸ್ಥಿತಿಯಲ್ಲಿ ಇದೆಯೇ ಎಂದು ದೃಢಪಡಿಸಿಕೊಳ್ಳಬೇಕು. ನಿಯಮದ ಪ್ರಕಾರ ಸಾಲ ಪಾವತಿ ಮುಕ್ತಾಯಗೊಂಡ ನಂತರ 15 ದಿನಗಳ ಒಳಗಾಗಿ ಬ್ಯಾಂಕ್ ಸಾಲ ಮರುಪಾವತಿ ಮಾಡಿದ ಗ್ರಾಹಕನಿಗೆ ಎಲ್ಲಾ ಮೂಲ ದಾಖಲೆಗಳನ್ನು ವಾಪಾಸ್ ನೀಡಬೇಕಾಗುತ್ತದೆ.
2. ನೋ ಡ್ಯೂಸ್ ಪ್ರಮಾಣಪತ್ರ (No Dues Certificate - NDC) ಪಡೆಯಿರಿ:
ಬ್ಯಾಂಕಿನಿಂದ ಅಧಿಕೃತವಾಗಿ ಯಾವುದೇ ಬಾಕಿ ಇಲ್ಲ ಎಂದು ದೃಢೀಕರಿಸುವ ಪತ್ರವನ್ನು ಪಡೆಯುವುದು ಬಹಳ ಮುಖ್ಯ. ಇದು ನಿಮ್ಮ ಸಾಲವು ಸಂಪೂರ್ಣವಾಗಿ ಪಾವತಿಯಾಗಿದೆ ಎಂಬುದಕ್ಕೆ ಅಧಿಕೃತ ಪುರಾವೆಯಾಗಿದೆ. ಅಲ್ಲದೆ ಮುಂದೆ ಯಾವುದೇ ಮೊತ್ತ ಪಾವತಿ ಅಗತ್ಯವಿಲ್ಲ ಎಂದು ಬ್ಯಾಂಕ್ ನಿಮಗೆ ಪ್ರಮಾಣಪತ್ರಕೊಡುವುದು ಅಗತ್ಯ. ಈ ಪ್ರಮಾಣಪತ್ರದಲ್ಲಿ ಸಾಲದ ಖಾತೆ ಸಂಖ್ಯೆ, ಸಾಲದ ಮೊತ್ತ, ಸಾಲ ಆರಂಭವಾದ ದಿನಾಂಕ, ಪಾವತಿಯಾದ ಕೊನೆ ದಿನಾಂಕ ಮತ್ತು ಬ್ಯಾಂಕಿನ ಅಧಿಕೃತ ಸಹಿ ಮತ್ತು ಮುದ್ರೆ ಇರಬೇಕು. ಇವುಗಳು ಸರಿಯಾಗಿ ಇವೆ ಎಂಬುವುದನ್ನು ದೃಢಪಡಿಸಿಕೊಳ್ಳಿ.
3. ಹೊರೆ ತೆಗೆದುಹಾಕುವ ಪ್ರಕ್ರಿಯೆ (Encumbrance Removal Process): ಬ್ಯಾಂಕಿನಿಂದ ಪಡೆದ NOC ಯೊಂದಿಗೆ ನೀವು ಉಪ-ನೋಂದಣಿ ಕಚೇರಿಗೆ (Sub-Registrar's Office) ಭೇಟಿ ನೀಡಿ ಆಸ್ತಿಯ ಮೇಲಿನ ಹೊರೆ ತೆಗೆದುಹಾಕುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆಯಲ್ಲಿ NOC ಮತ್ತು ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಈ ಪ್ರಕ್ರಿಯೆಯ ನಂತರ, ನಿಮ್ಮ ಆಸ್ತಿಯ ಮೇಲಿನ ಹೊರೆ ಅಧಿಕೃತವಾಗಿ ದಾಖಲೆಗಳಿಂದ ತೆಗೆದುಹಾಕಲ್ಪಡುತ್ತದೆ.
4. ಚೆಕ್ ಮತ್ತು ಇತರ ಭದ್ರತಾ ದಾಖಲೆಗಳನ್ನು ಹಿಂತಿರುಗಿಸಿ: ಸಾಲದಾತರು ಸಾಲ ಕೊಡುವ ಸಂದರ್ಭದಲ್ಲಿ ಖಾಲಿ ಚೆಕ್ ಗಳಿಗೆ ಸಹಿ ಮಾಡಿಕೊಂಡಿರುತ್ತಾರೆ. ಹೀಗಾಗಿ ನೀವು ಸಾಲ ಪಡೆಯುವಾಗ ಭದ್ರತೆಗಾಗಿ ನೀಡಿದ್ದ ಖಾಲಿ ಚೆಕ್‌ಗಳು ಅಥವಾ ಇತರ ಯಾವುದೇ ಭದ್ರತಾ ದಾಖಲೆಗಳನ್ನು ಬ್ಯಾಂಕಿನಿಂದ ಮರಳಿ ಪಡೆಯಿರಿ. ಇದರಿಂದ ಚೆಕ್ ಗಳ ಸಂಭಾವ್ಯ ದುರ್ಬಳಕೆ ತಡೆಯಬಹುದು.
5. ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ಪರಿಶೀಲಿಸಿ: ನಿಮ್ಮ ಸಾಲವು ಮುಕ್ತಾಯವಾಗಿದೆ ಎಂದು ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ಅಪ್‌ಡೇಟ್ ಆಗಿದೆಯೇ ಎಂದು ಪರಿಶೀಲಿಸಿ. ಕೆಲವೊಮ್ಮೆ ಇದು ತಡವಾಗಬಹುದು, ಆದ್ದರಿಂದ ನಿಯಮಿತವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಗಮನಿಸಿ. ಸಾಲ ಪಾವತಿ ಕೊನೆಯಾದ ಸುಮಾರು 1 ತಿಂಗಳ ಬಳಿಕ ಕ್ರೆಡಿಟ್ ರಿಪೋರ್ಟ್ ನಲ್ಲಿ ಸಾಲ ಮರುಪಾವತಿ ಮಾಡಿದ ಉಲ್ಲೇಖವಿರಬೇಕು. ಹೀಗಾಗಿ ಏನಾದರೂ ವ್ಯತ್ಯಾಸ ಕಂಡುಬಂದರೆ ಬ್ಯಾಂಕನ್ನು ಹಾಗೂ ಕ್ರೆಡಿಟ್ ಬ್ಯೂರೋಗೆ ವರದಿ ಮಾಡಿ ಸರಿಪಡಿಸಿಕೊಳ್ಳಿ.
6. ಆಟೋ ಡೆಬಿಟ್/ಇಸಿಎಸ್ ಸೂಚನೆಗಳನ್ನು ರದ್ದುಗೊಳಿಸಿ: ನಿಮ್ಮ ಮಾಸಿಕ ಕಂತುಗಳನ್ನು ಪಾವತಿಸಲು ನೀವು ನೀಡಿದ್ದ ಆಟೋ ಡೆಬಿಟ್ ಅಥವಾ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ECS) ಸೂಚನೆಗಳನ್ನು ರದ್ದುಗೊಳಿಸಲು ಬ್ಯಾಂಕಿಗೆ ತಿಳಿಸುವುದು ಬಹಳ ಮುಖ್ಯ.


Click it and Unblock the Notifications