ನಮ್ಮ ಜೀವನದಲ್ಲಿ ಶಿಸ್ತು, ಕೆಲಸದ ಮೇಲೆ ಶ್ರದ್ದೆ ಎಷ್ಟು ಮುಖ್ಯವೋ ಅಷ್ಟೇ ಆರ್ಥಿಕ ಶಿಸ್ತು ಕೂಡಾ ಮುಖ್ಯ. ಯಾಕೆಂದರೆ ಆರ್ಥಿಕ ಶಿಸ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಉಳಿತಾಯದ ಕಡೆ ಪ್ರೇರೆಪಿಸಿ ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿಸಲು, ಶಾಂತಿಯುತ ಜೀವನ ನಡೆಸಲು ಸಹಕಾರಿಯಾಗುತ್ತದೆ. ಆರ್ಥಿಕ ಶಿಸ್ತು ಇಲ್ಲದೆ ಹೋದರೆ, ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಆರ್ಥಿಕ ಶಿಸ್ತಿನಲ್ಲಿ ಹೂಡಿಕೆಯೂ ಒಂದು ಭಾಗವಾಗಿದೆ. ಬಹಳಷ್ಟು ಜನ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ, ತಿಂಗಳ ಸಂಬಳ ಖರ್ಚಿಗೆ ಸಾಲಲ್ಲ ಇನ್ನು ಹೂಡಿಕೆ, ಉಳಿತಾಯ ಮಾತೆಲ್ಲಿ ಎಂದು ಹೇಳೋರು ಅನೇಕರು ಇರಬಹುದು. ಆದರೆ ಮನಸ್ಸಿದ್ದರೆ ಮಾತ್ರ ಮಾರ್ಗ ಅಲ್ಲವೇ.!
ಹಿಂದೆ ಅಪ್ಪ ಕೊಟ್ಟ ದಿನಸಿ ಸಾಮಾಗ್ರಿ ಹಣದಲ್ಲಿ ಚೂರು ಚೂರೇ ಹಣ ಸಾಸಿವೆ, ಅಕ್ಕಿ ಡಬ್ಬದಲ್ಲಿ ಕೂಡಿಟ್ಟು, ಹಣ ಉಳಿಸೋ ಅಮ್ಮನಿಗೆ "ಉಳಿತಾಯ"ದ ಮಹತ್ವ ತಿಳಿದಿರುವಾಗ ವಿದ್ಯಾವಂತರಾದ ಇಂದಿನ ಪೀಳಿಗೆ ಉಳಿತಾಯ, ಹೂಡಿಕೆ ಕಡೆ ಗಮನ ನೀಡಲೇಬೇಕು. ಉಳಿತಾಯ ಕಷ್ಟ ಅನ್ನೋರಿಗೆ ಯೋಜನೆಯೊಂದನ್ನು ವಿವರಿಸುತ್ತೇವೆ. ಕೇವಲ ದಿನಕ್ಕೆ 50 ರೂ. ಉಳಿತಾಯ ಮಾಡಿ ಸಣ್ಣ ನಿಧಿಯನ್ನು ಸಂಗ್ರಹಿಸುವ ವಿಧಾನವಿದು.

ಪೋಸ್ಟ್ ಆಫೀಸ್ ಆರ್‌ಡಿ ಯೋಜನೆ: ಪೋಸ್ಟ್ ಆಫೀಸ್ ಯೋಜನೆಗಳು ಅಂದ್ರೆ ಭಾರತೀಯರ ವಿಶ್ವಾಸಕ್ಕೆ ಅರ್ಹವಾದ ಹಾಗೂ ಅತ್ಯಂತ ಕಡಿಮೆ ಅಪಾಯವನ್ನು ಹೊಂದಿರುವ ಯೋಜನೆಗಳಾಗಿರುತ್ತದೆ. ಅಂಚೆ ಕಚೇರಿಯ ಅನೇಕ ಯೋಜನೆಗಳಲ್ಲಿ ಪಿಒಆರ್‌ಡಿ ಯೋಜನೆಯೂ ಒಂದು. ಪೋಸ್ಟ್ ಆಫೀಸ್ ರಿಕರಿಂಗ್ ಠೇವಣಿ ಅಥವಾ ರಾಷ್ಟ್ರೀಯ ಉಳಿತಾಯ ರಿಕರಿಂಗ್ ಠೇವಣಿ ಎಂದೂ ಇದನ್ನು ಕರೆಯುತ್ತಾರೆ. ಇದು ನಿಯಮಿತವಾಗಿ ಸ್ಥಿರ ಠೇವಣಿಗಳು ಮತ್ತು ಅಂಚೆ ಕಚೇರಿಗಳು ನೀಡುವ ಇತರ ದೀರ್ಘಾವಧಿಯ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಉಳಿತಾಯ ಪರ್ಯಾಯಗಳಲ್ಲಿ ಒಂದಾಗಿದೆ.
ಪೋಸ್ಟ್ ಆಫೀಸ್ ರಿಕರಿಂಗ್ ಠೇವಣಿ ಯೋಜನೆಯಲ್ಲಿ ಹೂಡಿಕೆದಾರರಿಗೆ 5 ವರ್ಷಗಳವರೆಗೆ ನಿಯಮಿತ ಮಾಸಿಕ ಆಧಾರದ ಮೇಲೆ ಉಳಿಸಲು ಅನುಕೂಲ ಕಲ್ಪಿಸುತ್ತದೆ. ಅಂದರೆ 60 ಮಾಸಿಕ ಕಂತುಗಳು ಇದರಾಗಿರುತ್ತದೆ. ಈ ಠೇವಣಿಗಳು ಅನ್ವಯವಾಗುವ ತ್ರೈಮಾಸಿಕ ಸಂಯೋಜಿತ ಸಂಯೋಜಿತ(ಕಂಪೌಂಡಿಂಗ್) ದರದ ಪ್ರಕಾರ ಬಡ್ಡಿಯನ್ನು ಗಳಿಸುತ್ತವೆ. ಜೊತೆಗೆ ಇದು ಠೇವಣಿ ಮಾಡಿದ ಹಣವನ್ನು ಮುಕ್ತಾಯ ದಿನಾಂಕದವರೆಗೆ ದ್ವಿಗುಣಗೊಳಿಸಲು ಸಹಕಾರಿಯಾಗಿದೆ.
ಪೋಸ್ಟ್ ಆಫೀಸ್ ಆರ್‌ಡಿ ಖಾತೆಯನ್ನು ಯಾರು ತೆರೆಯಬಹುದು?
ಸರಳವಾಗಿ ಹೇಳುವುದಾದರೆ ವಯಸ್ಕ ವ್ಯಕ್ತಿ ಆರ್‌ಡಿ ಖಾತೆ ತೆರೆಯಬಹುದಾಗಿದ್ದು ಅಪ್ರಾಪ್ತ ವಯಸ್ಕರ/ಅಸ್ವಸ್ಥ ಪರವಾಗಿ ಪೋಷಕರು ತೆರೆಯಬಹುದಾಗಿದೆ. ಈ ಯೋಜನೆಯಡಿಯಲ್ಲಿ ಎಷ್ಟು ಖಾತೆಗಳನ್ನು ಬೇಕಾದರೂ ತೆರೆಯಬಹು. ಪ್ರಸ್ತುತ ಅಂಚೆ ಕಚೇರಿಯ ಆರ್‌ಡಿ ಬಡ್ಡಿದರ ವಾರ್ಷಿಕ ಶೇ 6.70 ರಷ್ಟಿದೆ. ಇನ್ನು ಬ್ಯಾಂಕ್ ಗಳಲ್ಲಿ ಇರುವ ಆರ್‌ಡಿ ಠೇವಣಿಗಳಿಗಿಂತ ಭಿನ್ನವಾಗಿ, ಅಂಚೆ ಕಚೇರಿ ಆರ್‌ಡಿಗಳು ಐದು ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಒಂದ್ ವೇಳೆ ನೀವು 5 ವರ್ಷಗಳ ಅವಧಿಯ ನಂತರ ಆರ್‌ಡಿ ಖಾತೆಯನ್ನು ಮುಂದುವರಿಸಲು ಬಯಸಿದರೆ, ಮತ್ತೆ 5 ವರ್ಷಗಳವರೆಗೆ ವಿಸ್ತರಿಸುವ ಆಯ್ಕೆ ಇದ್ದು ಒಟ್ಟು ಅವಧಿಯನ್ನು 10 ವರ್ಷಗಳಿಗೆ ತರುತ್ತದೆ. ಇನ್ನು ಅಂಚೆ ಕಚೇರಿಯ ಆರ್‌ಡಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಕನಿಷ್ಠ ಠೇವಣಿ ತಿಂಗಳಿಗೆ 100 ರೂ. ಇವುಗಳನ್ನು ದ್ವಿಗುಣ ಗೊಳಿಸುತ್ತಾ ಹೋಗಬಹುದಾಗಿದ್ದು ಗರಿಷ್ಠ ಠೇವಣಿಗೆ ಯಾವುದೇ ಮಿತಿಯಿಲ್ಲ.
ದಿನಕ್ಕೆ 50 ರೂಪಾಯಿ ಹೂಡಿಕೆ ಮಾಡಿ ನೋಡಿ.!
ದಿನಕ್ಕೆ 50 ರೂ.ಯಂತೆ ಕೂಡಿಟ್ಟು ನೀವು ಪ್ರತಿ ತಿಂಗಳು 1,500 ರೂಪಾಯಿಗಳಂತೆ ಹೂಡಿಕೆ ಮಾಡಿದರೆ, ಐದು ವರ್ಷಗಳಲ್ಲಿ ಒಟ್ಟು 90,000 ರೂಪಾಯಿಗಳನ್ನು ಹೂಡಿಕೆ ಮಾಡುತ್ತೀರಿ. 6.7 ಪ್ರತಿಶತ ಬಡ್ಡಿ ದರದಲ್ಲಿ, ನಿಮಗೆ 17,050 ರೂಪಾಯಿಗಳ ಬಡ್ಡಿ ದೊರೆಯುತ್ತದೆ. ಈ ಎರಡನ್ನೂ ಸೇರಿಸಿದರೆ, ಮುಕ್ತಾಯದ ಮೊತ್ತ 1,07,050 ರೂಪಾಯಿಗಳಾಗುತ್ತದೆ.
ಆದರೆ, ಅದೇ ಹೂಡಿಕೆಯನ್ನು ಇನ್ನೂ ಐದು ವರ್ಷಗಳವರೆಗೆ ಮುಂದುವರೆಸಿದರೆ, ಅಂದರೆ ಒಟ್ಟು ಹತ್ತು ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಬಡ್ಡಿ 76,283 ರೂಪಾಯಿಗಳಾಗುತ್ತದೆ. ಆಗ ನಿಮ್ಮ ಕೊನೆಯ ಮೊತ್ತ 2,56,283 ರೂಪಾಯಿಗಳಾಗಿರುತ್ತದೆ. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ಅಲ್ಪಸ್ವಲ್ಪ ಹಣ ಕೂಡಿಟ್ಟು ಹೂಡಿಕೆ ಮಾಡಿದರೆ ಅದೇ ಮುಂದೆ ನಿಮಗೆ ಉತ್ತಮ ನಿಧಿಯಾಗಿರುತ್ತದೆ.
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications