ಸುಕನ್ಯಾ ಸಮೃದ್ಧಿ ಯೋಜನೆ (SSY): ಭವಿಷ್ಯದ ದೃಷ್ಟಿಯಿಂದ ಅದೆಷ್ಟೋ ಪೋಷಕರು ಮಕ್ಕಳಿಗಾಗಿ ಹೂಡಿಕೆ ಮಾಡುವ ಪ್ಲಾನ್ (Investment Plan) ಮಾಡುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಯೋಜನೆಗಳನ್ನು ಕಂಡುಕೊಳ್ಳುತ್ತಾರೆ. ಕೇಂದ್ರ ಸರ್ಕಾರ ಜಾರಿಗೆ ತಂದ ಈ ಯೋಜನೆಯು ಹೆಣ್ಣು ಮಕ್ಕಳ ಹೆಸರಿನಲ್ಲಿ ಪೋಸ್ಟ್ ಆಫೀಸ್‌ನಲ್ಲಿ (Post Office) ಖಾತೆ ತೆರೆಯಬಹುದಾಗಿದೆ. ಈ ಮೂಲಕ ಮದುವೆ, ಶಿಕ್ಷಣ ಇನ್ನಿತರ ಕೆಲಸಗಳಿಗೆ ತುಂಬಾನೇ ಸಹಕಾರಿಯಾಗಲಿದೆ. ಇನ್ನು ಈ ಯೋಜನೆ ಮೂಲಕ ಹಣ ಹೂಡಿಕೆ ಮಾಡಿದ್ರೆ, 8.2% ಬಡ್ಡಿ ದರವನ್ನು ನೀಡಲಾಗುತ್ತದೆ. ಅಲ್ಲದೇ ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ. ಈ ಯೋಜನೆಯಡಿ, 21 ವರ್ಷಗಳಲ್ಲಿ 70 ಲಕ್ಷ ರೂಪಾಯಿವರೆಗೆ ಹಣ ಪಡೆಯಬಹುದು.

ಕೇಂದ್ರ ಸರ್ಕಾರದ, "ಬೇಟಿ ಬಚಾವೋ, ಬೇಟಿ ಪಢಾವೋ" ಅಭಿಯಾನದ ಅಡಿಯಲ್ಲಿ 2015 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿಗೆ ಮಾತ್ರ ತೆರೆಯಬಹುದು. ಈ ಮೂಲಕ ಹುಡುಗಿಯರ ಭವಿಷ್ಯದ ಆರ್ಥಿಕ ಭದ್ರತೆಗಾಗಿ ಹೂಡಿಕೆ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಮುಖ ವಿಷಯಗಳು:
- 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಅಕೌಂಟ್ ಓಪನ್ ಮಾಡಬಹುದು.
- ಕನಿಷ್ಠ ವಾರ್ಷಿಕ ಠೇವಣಿ ₹ 250, ಗರಿಷ್ಠ ಅಂದರೆ ₹ 1.5 ಲಕ್ಷ.
- ಖಾತೆ ತೆರೆದ ದಿನಾಂಕದಿಂದ 15 ವರ್ಷಗಳವರೆಗೆ ಹಣ ಡೆಪಾಸಿಟ್ ಇಡಬಹುದು.
- ಖಾತೆ 21 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ.
- ಹೆಣ್ಣು ಮಗುವಿಗೆ 21 ವರ್ಷ ತುಂಬುವ ಮುನ್ನ ಮದುವೆಯಾದರೆ, ಖಾತೆ ಕ್ಲೋಸ್ ಆಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮ:
ಖಾತೆ ತೆರೆಯಲು, ಹೆಣ್ಣು ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು. ಈ ಯೋಜನೆಯು ಹೆಣ್ಣು ಮಕ್ಕಳ ಭವಿಷ್ಯ ದೃಷ್ಟಿಯಿಂದ ಬಹಳ ಪ್ರಯೋಜನವಾಗಲಿದೆ. ಇನ್ನು ಒಬ್ಬ ಹೆಣ್ಣು ಮಗುವಿಗೆ ಒಂದು SSY ಖಾತೆ ಮಾತ್ರ ತೆರೆಯಲು ಸಾಧ್ಯ. ಅಲ್ಲದೆ ಒಂದು ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳ ಹೆಸರಲ್ಲಿ ಖಾತೆ ಓಪನ್ ಮಾಡಬಹುದು. ಅವಳಿಯಾದ್ರೆ ಹೆಚ್ಚುವರಿ ಖಾತೆಯನ್ನು ತೆರೆಯಲು ಅವಕಾಶವಿದೆ.
ವಾರ್ಷಿಕ ಠೇವಣಿ ನಿಯಮಗಳು:
SSY ಖಾತೆಯನ್ನು ಆಕ್ಟಿವ್ ಆಗಿಡಬೇಕೆಂದರೆ, ಪ್ರತಿ ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂಪಾಯಿ ಡೆಪಾಸಿಟ್ ಇಡಲೇಬೇಕು. ಈ ಕನಿಷ್ಠ ಮೊತ್ತವನ್ನು ಠೇವಣಿ ಇಡದಿದ್ದರೆ, ಅಕೌಂಟ್ ಬ್ಲಾಕ್ ಆಗುತ್ತದೆ. ಇನ್ನು ಬ್ಲಾಕ್ ಆದ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬೇಕೆಂದರೆ, ಕನಿಷ್ಠ 250 ರೂ. ಜೊತೆಗೆ ಪ್ರತಿ ವರ್ಷಕ್ಕೆ ದಂಡದಂತೆ 50 ರೂ ಪಾವತಿಸಬೇಕು.
ಪೋಷಕರ ನಿಯಮಗಳು:
ಪೋಸ್ಟ್ ಇಲಾಖೆಯ ಅಧಿಕೃತ ಸುತ್ತೋಲೆಯ (ಆಗಸ್ಟ್ 21, 2024 ರ ದಿನಾಂಕ) ಪ್ರಕಾರ, ಕಾನೂನು ಪಾಲಕರು ಅಥವಾ ಅಧಿಕೃತ ಪೋಷಕರು ಮಾತ್ರ SSY ಖಾತೆಗಳನ್ನು ನಿರ್ವಹಿಸಬಹುದು ಎಂದು ಹೇಳಲಾಗಿದೆ.
21 ವರ್ಷಗಳ ನಂತರ ಎಷ್ಟು ಹಣ ಸಿಗುತ್ತದೆ?
ಅಂದರೆ ಹೆಣ್ಣು ಮಗುವೊಬ್ಬಳ ಹೆಸರಿನಲ್ಲಿ 5 ವರ್ಷ ವಯಸ್ಸಿದ್ದಾಗ, ಪ್ರತಿ ವರ್ಷ ₹ 1.5 ಲಕ್ಷವನ್ನು 21 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ, ಪೂರ್ಣಗೊಳ್ಳುವ ಸಮಯದಲ್ಲಿ ಒಟ್ಟು ಹೂಡಿಕೆ 22,50,000 ರೂ. ಆಗುತ್ತದೆ. ಅಂದರೆ 8.2% ಸರಾಸರಿ ಬಡ್ಡಿದರವನ್ನು ಗಣನೆಗೆ ತೆಗೆದುಕೊಂಡರೆ, 2042 ರಲ್ಲಿ ಪೂರ್ಣಗೊಳ್ಳುವ ಸಮಯದಲ್ಲಿ ಸುಮಾರು 70 ಲಕ್ಷ ರೂಪಾಯಿಯಷ್ಟು ಮೊತ್ತ ದೊರೆಯುತ್ತದೆ.


Click it and Unblock the Notifications