ಹಿಂದಿನಿಂದಲೂ ಹಿರಿಯರು ಒಂದಲ್ಲಾ ಒಂದು ಕಡೆ ಹೂಡಿಕೆ ಮಾಡುತ್ತಲೇ ಬಂದಿದ್ದಾರೆ. ತಾವು ದುಡಿದ ಒಂದಿಷ್ಟು ಮೊತ್ತವನ್ನು ಬ್ಯಾಂಕಿನಲ್ಲೋ, ಪೋಸ್ಟ್ ಆಫೀಸ್‌ನಲ್ಲೋ (Post Office), ಚಿನ್ನದ ಮೇಲೆ ಹೂಡಿಕೆ ಮಾಡಿಟ್ಟುಕೊಳ್ಳುವ ಅಭ್ಯಾಸ ಹೊಂದಿದ್ದರು. ಅದರಲ್ಲೂ ಇತ್ತೀಚೆಗೆ ಹೂಡಿಕೆದಾರರಿಗಾಗಿ ಹಲವಾರು ಯೋಜನೆಗಳಿವೆ. ವಿಶೇಷವಾಗಿ ಮಹಿಳೆಯರನ್ನು (Women) ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸರ್ಕಾರಗಳು ಹಲವಾರು ಸ್ಕೀಮ್‌ಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯೂ ಒಂದು. ಈ ಯೋಜನೆ ಹುಡುಗಿಯರಿಗಾಗಿಯೇ ವಿಶೇಷವಾಗಿ ಜಾರಿಗೆ ತರಲಾಗಿದೆ.

ಪೋಷಕರಾದವರು ಪ್ರತಿಯೊಬ್ಬರು ತಮ್ಮ ಮಗಳ ಭವಿಷ್ಯದ ಕನಸನ್ನು ಕಾಣುತ್ತಲೇ ಇರುತ್ತಾರೆ. ಅದರಲ್ಲೂ ಮಕ್ಕಳು ದೊಡ್ಡವರಾದಂತೆ ಶಿಕ್ಷಣ, ಮದುವೆ ಅನ್ನೋ ಖರ್ಚುಗಳೇ ಜಾಸ್ತಿಯಾಗುತ್ತದೆ. ಆದ್ದರಿಂದ ಮಗಳು ಚೆನ್ನಾಗಿ ಓದ್ಬೇಕು, ಮದುವೆ ಭರ್ಜರಿಯಾಗಿ ಮಾಡ್ಬೇಕು ಅನ್ನೋ ಕನಸು ಇಟ್ಟುಕೊಂಡವರಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ (SSY) ಒಂದು ಅತ್ಯುತ್ತಮ ಮಾರ್ಗವಾಗಿದೆ. ಇದು ಭಾರತ ಸರ್ಕಾರ ಜಾರಿಗೆ ತಂದ ಉತ್ತಮ ಮತ್ತು ಹೆಚ್ಚು ಲಾಭ ನೀಡುವ ಯೋಜನೆಯೆಂದು ಗುರುತಿಸಿಕೊಂಡಿದೆ.
ಕೇಂದ್ರ ಸರ್ಕಾರದ "ಬೇಟಿ ಬಚಾವೋ, ಬೇಟಿ ಪಢಾವೋ" ಎಂದ ಕಾರ್ಯಕ್ರಮದ ಅಡಿಯಲ್ಲಿ ಈ ಯೋಜನೆಯನ್ನು 2015 ರಲ್ಲಿ ಆರಂಭಿಸಲಾಯಿತು. 10 ವರ್ಷದ ಕೆಳಗಿನ ಹೆಣ್ಣುಮಕ್ಕಳ ಹೆಸರಲ್ಲಿ ಮಾತ್ರ ಈ ಯೋಜನೆಯಲ್ಲಿ ಖಾತೆ ತೆರೆಯಬಹುದು. ಹೆಣ್ಣುಮಕ್ಕಳ ಶಿಕ್ಷಣ, ಮದುವೆಯ ಆರ್ಥಿಕ ನೆರವಿಗೆ ಇದು ಪ್ರಯೋಜನವಾಗಲಿದೆ.
250 ರೂ. ಹೂಡಿಕೆ ಮಾಡಿ:
ಸುಕನ್ಯಾ ಸಮೃದ್ಧಿ ಯೋಜನೆ ತೆರೆದರೆ ವಾರ್ಷಿಕವಾಗಿ ಕನಿಷ್ಠ ₹250 ರೂ. ಹೂಡಿಕೆ ಮಾಡಿದ್ರೆ ಸಾಕು. ಆದರೆ ನೀವು ಗರಿಷ್ಠ ಮೊತ್ತ ಅಂದರೆ 1.5 ಲಕ್ಷದವರೆಗೂ ಹೂಡಿಕೆ ಮಾಡಬಹುದು. ಅಲ್ಲದೇ ನೀವಿಲ್ಲಿ ಒಮ್ಮೆಲೇ ಹೂಡಿಕೆ ಮಾಡಬಹುದು ಅಥವಾ ಕಂತುಗಳಲ್ಲೂ ಹೂಡಿಕೆ ಮಾಡಬಹುದು. ಅಲ್ಲದೇ ಈ ಯೋಜನೆಯಲ್ಲಿ ಕೇವಲ 15 ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ. ಆ ನಂತರದ 6 ವರ್ಷಗಳವರೆಗೆ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಬಡ್ಡಿ ಸೇರುತ್ತದೆ.
ಪ್ರಸ್ತುತ, ಸುಕನ್ಯಾ ಸಮೃದ್ಧಿ ಯೋಜನೆಗೆ ವಾರ್ಷಿಕವಾಗಿ 8.2% ಬಡ್ಡಿದರ ನೀಡಲಾಗುತ್ತಿದೆ. ಈ ಯೋಜನೆಗೆ ಹೋಲಿಸಿದ್ರೆ, ಉಳಿದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸಿಗುವ ಬಡ್ಡಿದರಗಳು ಕಡಿಮೆ.
1000 ರೂ. ಹೂಡಿಕೆ ಮಾಡಿದ್ರೆ, ಎಷ್ಟು ಹಣ ಸಿಗುತ್ತದೆ?
ಉದಾಹರಣೆಗೆ, ನೀವು ಪ್ರತಿ ತಿಂಗಳು ₹1,000 ಹೂಡಿಕೆ ಮಾಡಿದರೆ ವಾರ್ಷಿಕವಾಗಿ 12 ಸಾವಿರ ರೂಪಾಯಿ ಆಗುತ್ತದೆ. ಅಂದರೆ 15 ವರ್ಷಗಳಲ್ಲಿ ಒಟ್ಟು 1.8 ಲಕ್ಷ ರೂ. ಹೂಡಿಕೆ ಮಾಡದಂತಾಗುತ್ತದೆ. ನೀವು ಹೂಡಿಕೆ ಮಾಡಿದ ಮೊತ್ತಕ್ಕೆ 3.74 ಲಕ್ಷ ಬಡ್ಡಿ ಬರುತ್ತದೆ. ಈ ಮೂಲಕ ನೀವು 21 ವರ್ಷ ತುಂಬುವ ಹೊತ್ತಿಗೆ ಒಟ್ಟು ₹5.54 ಲಕ್ಷ ನಿಮ್ಮ ಖಾತೆಗೆ ಸೇರುತ್ತದೆ.
ಒಂದು ಯೋಜನೆ, ಹಲವು ಪ್ರಯೋಜನ!
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ, ವಾರ್ಷಿಕ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶವಿದೆ. ಅಲ್ಲದೇ ನೀವು ಪಡೆಯುವ ಮೊತ್ತದ ಮೇಲೂ ಯಾವುದೇ ತೆರಿಗೆ ಸಿಗುವುದಿಲ್ಲ.


Click it and Unblock the Notifications