ಕೇಂದ್ರ ಸರ್ಕಾರದ (Central Govt) ಮಹತ್ವಾಕಾಂಕ್ಷೆಯ 'ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ' (PM Surya Ghar Muft Bijli Yojana) ಲಕ್ಷಾಂತರ ಕುಟುಂಬಗಳಿಗೆ ವಿದ್ಯುತ್ ಬಿಲ್ ಹೊರೆಯಿಂದ ಬಿಗ್ ರಿಲೀಫ್ ನೀಡಿದೆ. ಈ ಉಪಕ್ರಮದಡಿ ಈಗಾಗಲೇ 7.7 ಲಕ್ಷ ಮನೆಗಳು ಯಾವುದೇ ಆರ್ಥಿಕ ಹೊರೆ ಅನುಭವಿಸದೆ ಶೂನ್ಯದರದಲ್ಲಿ ವಿದ್ಯುತ್ ಬಳಸುತ್ತಿದೆ. ಈ ಯೋಜನೆಯಿಂದಾಗಿ ದೇಶದ ಲಕ್ಷಾಂತರ ಜನರು ಇಂದು ಕಡಿಮೆ ವೆಚ್ಚದಲ್ಲಿ, ಶುದ್ಧ ಮತ್ತು ವಿಶ್ವಾಸಾರ್ಹ ವಿದ್ಯುತ್ ಪಡೆಯಲು ಸಾಧ್ಯವಾಗಿದೆ.

2024ರ ಫೆಬ್ರವರಿಯಲ್ಲಿ ಪ್ರಾರಂಭವಾದ ಈ ಯೋಜನೆ, 2026-27ರೊಳಗೆ ಒಂದು ಕೋಟಿ ಮನೆಗಳಲ್ಲಿ ಸೌರ ಫಲಕ ಅಳವಡಿಸುವ ಗುರಿ ಹೊಂದಿದೆ. ಸರ್ಕಾರವು ಸೌರ ಫಲಕ ಸ್ಥಾಪನೆಗೆ ಶೇಕಡಾ 40ರಷ್ಟು ಸಬ್ಸಿಡಿ ಹಣವನ್ನು ಕೂಡಾ ನೀಡುತ್ತಿದ್ದು, ಇದು ಅಳವಡಿಕೆ ವೆಚ್ಚವನ್ನು ಸಹ ಕಡಿಮೆ ಮಾಡಲು ಮುಂದಾಗಿದೆ. ಆದ್ದರಿಂದ ಕಡಿಮೆ ಖರ್ಚಿನಲ್ಲಿ ಸೌರ ಶಕ್ತಿ ಅಳವಡಿಸುವವರಿಗೆ ಇದು ಸೂಕ್ತವಾಗಿದೆ.
ಏನಿದು ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ?
ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ ಇದಾಗಿದ್ದು, ಪ್ರತೀ ಮನೆಗೆ ಉಚಿತ ವಿದ್ಯುತ್ ಕಲ್ಪಿಸುವುದೇ ಇದರ ಮುಖ್ಯ ಗುರಿ. ಸೌರಶಕ್ತಿ ಅಂದರೆ ಸೂರ್ಯನ ಬೆಳಕಿನ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲದ ಬಳಕೆ ಹೆಚ್ಚಿಸುವುದು ಮತ್ತು ವಿದ್ಯುತ್ ಉತ್ಪಾದನೆಯ ಮೇಲಿನ ಬೇಡಿಕೆಯನ್ನು ಕಡಿಮೆ ಮಾಡುವುದು ಇದೆ ಉದ್ದೇಶವಾಗಿದೆ. ಈ ಯೋಜನೆಯ ಮೂಲಕ ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಸಿದರೆ, ತಿಂಗಳಿಗೆ 300 ಯುನಿಟ್ ವಿದ್ಯುತ್ ಪಡೆಯಬಹುದು. ಅಲ್ಲದೇ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಆದಾಯವನ್ನೂ ಸಂಪಾದಿಸಬಹುದು.
ಈ ಯೋಜನೆಯ ಲಾಭ ಪಡೆಯಲು, ಮಾನ್ಯವಾದ ವಿದ್ಯುತ್ ಸಂಪರ್ಕ ಹೊಂದಿರುವ ಯಾವುದೇ ಭಾರತೀಯ ಪ್ರಜೆ ಅರ್ಹರಾಗಿರುತ್ತಾರೆ. ಆದರೆ, ಅವರು ಈ ಹಿಂದೆ ಯಾವುದೇ ಸೌರ ಸಬ್ಸಿಡಿ ಯೋಜನೆಯ ಸೌಲಭ್ಯ ಪಡೆದಿರಬಾರದು. ಇದು ಖಾಲಿ ಮೇಲ್ಛಾವಣಿ ಹೊಂದಿರುವ ಮತ್ತು ಪರಿಸರದ ಬಗ್ಗೆ ಕಾಳಜಿಯುಳ್ಳವರಿಗೆ ಉತ್ತಮ ಅವಕಾಶವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು, ಮೊದಲಿಗೆ ಅಧಿಕೃತ ವೆಬ್‌ಸೈಟ್ https://pmsuryaghar.gov.in ಗೆ ಭೇಟಿ ನೀಡಿ ನೋಂದಾಯಿಸಬೇಕು. ನಿಮ್ಮ ರಾಜ್ಯ, ವಿದ್ಯುತ್ ವಿತರಣಾ ಕಂಪನಿಯನ್ನು (DISCOM) ಆಯ್ಕೆ ಮಾಡಿ, ಗ್ರಾಹಕ ಸಂಖ್ಯೆ, ಮೊಬೈಲ್ ಮತ್ತು ಇಮೇಲ್ ವಿಳಾಸವನ್ನು ಆಡ್ ಮಾಡಬೇಕು. ಲಾಗಿನ್ ಆಗಿ "Apply for Rooftop Solar" ಆಯ್ಕೆ ಮಾಡಿ, ಫಾರ್ಮ್ ಭರ್ತಿ ಮಾಡಿ ಸಲ್ಲಿಕೆ ಮಾಡಬೇಕು.
ಅರ್ಜಿ ಸಲ್ಲಿಕೆಯ ನಂತರ, ನಿಮ್ಮ DISCOM ನಿಂದ ಕಾರ್ಯಸಾಧ್ಯತೆಯ ಅನುಮೋದನೆ (Feasibility Approval) ಪಡೆಯುವುದು ಅಗತ್ಯ. ಅನುಮೋದನೆ ದೊರೆತ ಮೇಲೆ, DISCOM ಮಾನ್ಯತೆಯುಳ್ಳ ಮಾರಾಟಗಾರರಿಂದ ಸೌರ ಫಲಕಗಳನ್ನು ಅಳವಡಿಸಿಕೊಳ್ಳಬೇಕು. ಅಳವಡಿಕೆ ಪೂರ್ಣಗೊಂಡ ಬಳಿಕ, ಫಲಕ ಮತ್ತು ಸ್ಥಾವರದ ವಿವರ ಹಾಗೂ ನೆಟ್ ಮೀಟರ್‌ಗಾಗಿ ಅರ್ಜಿ ಸಲ್ಲಿಸಬೇಕು.
ಅಂತಿಮವಾಗಿ, ಕಮಿಷನಿಂಗ್ ವರದಿ ಸ್ವೀಕರಿಸಿದ ಕೂಡಲೇ, ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಈ ಮೂಲಕ ನೀವೂ ಕೂಡಾ ಮನೆಯಲ್ಲಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.


Click it and Unblock the Notifications