ಭಾರತೀಯರಲ್ಲಿ ಬಹುತೇಕರು ಕೃಷಿಯಲ್ಲಿ (Farming) ತೊಡಗಿಸಿಕೊಂಡಿದ್ದಾರೆ. ಅರ್ಧಕ್ಕೂ ಅಧಿಕ ಜನರ ಜೀವನೋಪಾಯವೇ ಕೃಷಿಯಾಗಿದೆ. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನೂ ಯಾವುದಾದರೂ ಒಂದು ರೂಪದಲ್ಲಿ ರೈತರ ಮೇಲೆ ಅವಲಂಬಿತನಾಗಿದ್ದಾನೆ. ಆದ್ದರಿಂದ ರೈತರ (Farmer) ಮಹತ್ವದ ಕೊಡುಗೆಯನ್ನು ಗೌರವಿಸುವ ಸಲುವಾಗಿ, ಪ್ರತಿ ವರ್ಷ ಡಿಸೆಂಬರ್ 23 ರಂದು ದೇಶಾದ್ಯಂತ ರಾಷ್ಟ್ರೀಯ 'ಕಿಸಾನ್ ದಿವಸ್' (Kisan Diwas 2025) ಅನ್ನು ಆಚರಿಸಲಾಗುತ್ತದೆ.

ಈ ದಿನವನ್ನು ಭಾರತದ ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾಗಿ ಸಹ ಸ್ಮರಿಸಲಾಗುತ್ತದೆ. ಸಿಂಗ್ ಅವರು ರಾಜಕೀಯ ಜೀವನದುದ್ದಕ್ಕೂ ರೈತರ ಸಮಸ್ಯೆಗಳಿಗೆ ನಿರಂತರವಾಗಿ ಆದ್ಯತೆ ನೀಡಿದ್ದಾರೆ. ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡವರು. ರೈತರ ಹಿತಾಸಕ್ತಿಗಾಗಿ ಅವರು ನೀಡಿದ ಅನನ್ಯ ಕೊಡುಗೆಗಾಗಿ, 2001 ರಲ್ಲಿ ಈ ದಿನವನ್ನು ರಾಷ್ಟ್ರೀಯ ರೈತ ದಿನಾಚರಣೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು.
ಕಿಸಾನ್ ದಿವಸ್ 2025ರ ಈ ವರ್ಷದ ಪ್ರಮುಖ ವಿಷಯ: "ವಿಕಸಿತ ಭಾರತ 2047: ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಕೃಷಿಯ ಪಾತ್ರ". ಮುಂಬರುವ ವರ್ಷಗಳಲ್ಲಿ ನಮ್ಮ ಭಾರತೀಯ ರೈತರು ಕೇವಲ ದೇಶೀಯ ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೇ, ಇನ್ನು ದೇಶದ ರೈತರು ಉತ್ಪಾದಿಸುವ ಉತ್ಪನ್ನಗಳು ಸಹ ವಿಶ್ವದಾದ್ಯಂತ ಇರುವ ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಬೇಕು ಎಂಬುದು ಈ ವಿಷಯದ ಪ್ರಮುಖ ಗುರಿ.
ಈ ಮಹತ್ವದ ದೃಷ್ಟಿಕೋನವನ್ನು ಉತ್ತಮವಾಗಿ ಸಾಧಿಸುವಲ್ಲಿ ರೈತ ಉತ್ಪಾದಕ ಸಂಸ್ಥೆಗಳು (FPO) ಸದ್ಯ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ, ಸರ್ಕಾರವು ರೈತರ ಆದಾಯವನ್ನು ಹೆಚ್ಚಿಸಲು, ನೈಸರ್ಗಿಕ ವಿಕೋಪಗಳ ನಷ್ಟಗಳಿಂದ ರಕ್ಷಿಸಲು ಮತ್ತು ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ ರೈತರ ಅನುಕೂಲಕ್ಕಾಗಿ ಜಾರಿಗೆ ತಂದಿರುವ 5 ಪ್ರಮುಖ ಸರ್ಕಾರಿ ಯೋಜನೆಗಳ ವಿವರ ಇಲ್ಲಿದೆ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN): ಈ ಯೋಜನೆಯಡಿ ದೇಶದ ಎಲ್ಲಾ ಅರ್ಹ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ಎರಡು ಸಾವಿರದಂತೆ ಒಟ್ಟು 6 ಸಾವಿರ ಹಣ ನೀಡಲಾಗುತ್ತದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಅತಿಯಾದ ಮಳೆ, ಆಲಿಕಲ್ಲು ಮಳೆ, ಬರ ಅಥವಾ ರೋಗಬಾಧೆಯಂತಹ ನೈಸರ್ಗಿಕ ವಿಕೋಪಗಳಿಂದ ಸಾಮಾನ್ಯವಾಗಿ ಬೆಳೆ ಹಾಳಾಗುತ್ತದೆ. ಈ ಯೋಜನೆಯು ರೈತರಿಗೆ ಅಗತ್ಯ ಆರ್ಥಿಕ ಸುರಕ್ಷತೆಯನ್ನು ನೀಡಲು ಅನುಕೂಲವಾಗಿದೆ. ಇದು ಅವರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ (KCC): ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಅಗತ್ಯವಾದ ಬೀಜ, ಗೊಬ್ಬರ, ಕೀಟನಾಶಕ, ನೀರಾವರಿ ಮುಂತಾದ ವೆಚ್ಚಗಳಿಗಾಗಿ ರೈತರು ಈ ಕಾರ್ಡ್ ಮೂಲಕ ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ ಪಡೆಯಬಹುದು. ಇದು ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ: "ಪ್ರತಿ ಹನಿ - ಹೆಚ್ಚಿನ ಬೆಳೆ" ಎಂಬ ತತ್ವದೊಂದಿಗೆ, ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಪಡೆಯಲು ಆಧುನಿಕ ನೀರಾವರಿ ಸೇವೆಗಳನ್ನು, ಉದಾಹರಣೆಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ, ಅಳವಡಿಸಿಕೊಳ್ಳಲು ಈ ಯೋಜನೆಯು ರೈತರಿಗೆ ಸಬ್ಸಿಡಿ ಮತ್ತು ಪ್ರೋತ್ಸಾಹ ನೀಡುತ್ತದೆ.
ಇ-ನಾಮ್ (e-NAM) ವೇದಿಕೆ: ಇದು ಒಂದು ರಾಷ್ಟ್ರೀಯ ಡಿಜಿಟಲ್ ಕೃಷಿ ಮಾರುಕಟ್ಟೆ ವೇದಿಕೆಯಾಗಿದ್ದು, ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ದೇಶಾದ್ಯಂತ ಇರುವ ಖರೀದಿದಾರರಿಗೆ ಉತ್ತಮ ಬೆಲೆಗೆ ಮಾರಾಟ ಮಾಡಲು ಸಹಾಯ ಮಾಡುತ್ತದೆ. ಇದು ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಡಿಜಿಟಲ್ ಮೂಲಕ ಮಾರಾಟಕ್ಕೆ ಸಹಾಯವಾಗುತ್ತದೆ.


Click it and Unblock the Notifications