ಬೆಂಗಳೂರು, ಆಗಸ್ಟ್ 2: ಉನ್ನತ ಶಿಕ್ಷಣ ಪಡೆದುಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು, ಒಳ್ಳೆಯ ಉದ್ಯೋಗ ಮಾಡಬೇಕು ಎನ್ನುವುದು ಹಲವರ ಕನಸು. ಆದರೆ ಕೆಲವೊಂದು ಅನಿವಾರ್ಯ ಕಾರಣದಿಂದ, ಹಣಕಾಸಿನ ಮುಗ್ಗಟ್ಟಿನಿಂದ ಹಲವರು ಉನ್ನತ ಶಿಕ್ಷಣ ಮೊಟಕುಗೊಳಿಸುತ್ತಾರೆ. ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಬೇಕು ಎಂದರೆ ಶಿಕ್ಷಣಕ್ಕಾಗಿಯೇ ದೊಡ್ಡ ಮೊತ್ತ ತೆಗೆದಿಡಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಉನ್ನತ ಶಿಕ್ಷಣ ಪಡೆಯೋದು ಒಂದು ದೊಡ್ಡ ವರ್ಗಕ್ಕೆ ಸವಾಲಾಗಿದೆ.
ಉನ್ನತ ಶಿಕ್ಷಣ ಕನಸು ನನಸು:
ಉನ್ನತ ಶಿಕ್ಷಣಕ್ಕೆ ಹಣ ಹೊಂದಿಸಲು ಎಜುಕೇಶನ್ ಲೋನ್ ಒಂದು ಉತ್ತಮ ಸಾಧನ. ಶಿಕ್ಷಣ ಸಾಲ ಮಾಡೋದು ಜೀವನವನ್ನು ಬದಲಾಯಿಸುವ ಒಂದು ದೃಢ ನಿರ್ಧಾರ ಎಂದೇ ಹೇಳಬಹುದು. ಆದರೆ ಈ ಶಿಕ್ಷಣ ಸಾಲ ಪಡೆದುಕೊಳ್ಳುವ ಮುನ್ನ ಸಾಕಷ್ಟು ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರಬೇಕು.

ಎಲ್ಲ ವೆಚ್ಚಗಳ ಒಟ್ಟು ಲೆಕ್ಕ ಮಾಡಿ:
ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮೊದಲು, ವಿದ್ಯಾರ್ಥಿಗಳು ಎಲ್ಲಾ ರೀತಿಯ ವೆಚ್ಚಗಳನ್ನು ಅಂದಾಜು ಮಾಡಬೇಕು. ಕಾಲೇಜು ಅಥವಾ ಕೋರ್ಸ್ ಶುಲ್ಕದ ಜೊತೆಗೆ, ಇತರ ವೆಚ್ಚಗಳಾದ ಟ್ರಾವೆಲ್, ಅಧ್ಯಯನಕ್ಕಾಗಿ ಬಳಸುವ ಸಾಧನಗಳ ವೆಚ್ಚ, ಜೀವನ ನಿರ್ವಹಣೆ ವೆಚ್ಚ ಹಾಗೂ ಸ್ಟಡಿ ಮೆಟಿರಿಯಲ್ ವೆಚ್ಚ ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಬೇಕು. ಸಾಲವನ್ನು ತೆಗೆದುಕೊಳ್ಳುವ ಮೊದಲು ಒಂದು ಹಂತದ ರಿಸರ್ಚ್ ಮಾಡುವುದು ಮುಖ್ಯ. ಅನೇಕ ಬ್ಯಾಂಕ್ ಗಳು ಆನ್ ಲೈನ್ ನಲ್ಲಿಯೇ ಸ್ಟುಡೆಂಟ್ ಲೋನ್ ಕ್ಯಾಲ್ಕುಲೇಟರ್ ಪರಿಚಯಿಸಿದ್ದು ಇಲ್ಲಿಯೂ ನಿಮಗೆ ಬೇಕಾದ ಸಾಲದ ಮೊತ್ತ ಲೆಕ್ಕ ಹಾಕಿಕೊಳ್ಳಬಹುದು.
ಸಾಲ ಮರುಪಾವತಿ ಹೇಗಿರಬೇಕು?
ಸಾಲವನ್ನು ತೆಗೆದುಕೊಳ್ಳುವ ಮೊದಲು, ವಿದ್ಯಾರ್ಥಿಗಳು ಅವರು ಪ್ರವೇಶ ಪಡೆಯಲು ಬಯಸುವ ಸಂಸ್ಥೆಯ ಪ್ಲೇಸ್‌ಮೆಂಟ್ ಹಿಸ್ಟರಿ ಹೇಗಿದೆ? ಇಲ್ಲಿ ಓದಿದವರಿಗೆ ಸುಲಭವಾಗಿ ಜಾಬ್ ಸಿಗುತ್ತಿದೆಯಾ? ಎನ್ನುವುದನ್ನು ನೋಡಬೇಕು. ಸಾಲ ತೆಗೆದುಕೊಳ್ಳಬೇಕಿದ್ದರೆ ಮರುಪಾವತಿಯ ವೇಳಾಪಟ್ಟಿ ಸಹ ಮುಖ್ಯವಾಗುತ್ತದೆ. ಒಂದು ವೇಳೆ ಶಿಕ್ಷಣ ಪೂರೈಸಿದ ತಕ್ಷಣಕ್ಕೆ ಕೆಲಸ ದೊರೆಯದಿದ್ದರೆ ಆಗ ಸಮಸ್ಯೆ ಎದುರಾಗಬಹುದು. ಸಾಲದ ಮೇಲಿನ EMI ತಲೆನೋವಾಗಿ ಡ್ಯೂ ಆಗಬಹುದು. ಇದು ಮುಂದೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು ಮತ್ತು ಭವಿಷ್ಯದಲ್ಲಿ ನೀವು ಸುಲಭವಾಗಿ ಸಾಲ ಪಡೆಯುವುದಕ್ಕೆ ಅಡ್ಡಗಾಲಾಗಬಹುದು. ಶಿಕ್ಷಣ ಸಾಲದ ಮೊತ್ತವನ್ನು ನಿಜವಾಗಿಯೂ ಅಗತ್ಯವಿರುವಷ್ಟ ಮಾತ್ರ ತೆಗೆದುಕೊಳ್ಳುವುದು ಒಳಿತು. ಹೆಚ್ಚಿನ ಸಾಲದ ಮೊತ್ತ ತೆಗೆದುಕೊಳ್ಳುವುದರಿಂದ ಹೆಚ್ಚಿನ EMI ಬೀಳುತ್ತದೆ ಇದು ಹೆಚ್ಚಿನ ಬಡ್ಡಿಗೆ ಕಾರಣವಾಗುತ್ತದೆ. ಹಾಗಾಗಿ EMI ಕ್ಯಾಲ್ಕುಲೇಟರ್ ಬಳಸಿಕೊಂಡರೆ ನಿಮಗೆ ಸರಿಯಾದ ಒಂದು ಐಡಿಯಾ ಸಿಗಬಹುದು.
ಕೊರೋನಾ ನಂತರ ಏರಿಕೆ ಕಂಡ ಎಜುಕೇಶನ್ ಲೋನ್:
ಕೋವಿಡ್ ನಂತರ ಶಿಕ್ಷಣ ಸಾಲಗಳಲ್ಲಿ ಏಕಾಏಕಿ ಏರಿಕೆ ಕಂಡುಬಂದಿದೆ. ರಿಸರ್ವ್ ಬ್ಯಾಂಕಿನ ಅಂಕಿಅಂಶಗಳ ಪ್ರಕಾರ, ಶಿಕ್ಷಣ ಸಾಲಗಳಲ್ಲಿ ವಾರ್ಷಿಕ ಶೇ. 20.6 ರಷ್ಟು ಬೆಳವಣಿಗೆ ಕಂಡುಬಂದಿದೆ. ಶಿಕ್ಷಣ ಸಾಲದಲ್ಲಿನ ಈ ಬೆಳವಣಿಗೆಯು ಕಳೆದ ಐದು ವರ್ಷಗಳಲ್ಲಿ ಅತ್ಯಧಿಕವಾಗಿದೆ.
ಬಡ್ಡಿ ಹೋಲಿಕೆ ಮಾಡಿ ನೋಡಿ:
ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಸರ್ಕಾರಿ ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ದರಗಳು ಕಡಿಮೆ. ಶಿಕ್ಷಣ ಸಾಲದ ಅಗತ್ಯ ಇರುವವರಿಗೆ ಸರ್ಕಾರ ವಿದ್ಯಾಲಕ್ಷ್ಮಿ ಪೋರ್ಟಲ್ ಪರಿಚಯಿಸಿದೆ. www.vidyalakshmi.co.in ಗೆ ಭೇಟಿ ನೀಡದರೆ ಶಿಕ್ಷಣ ಸಾಲಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಸಿಗುತ್ತದೆ. ಇಲ್ಲಿ ನೋಂದಾಯಿಸಿಕೊಂಡು ವಿವಿಧ ಬ್ಯಾಂಕ್‌ಗಳ ಬಡ್ಡಿದರಗಳನ್ನು ಹೋಲಿಕೆ ಮಾಡಬಹುದು. ಇದಲ್ಲದೆ ಈಗಾಗಲೇ ಶಿಕ್ಷಣ ಸಾಲ ತೆಗೆದುಕೊಂಡು ಅದರಿಂದ ಲಾಭ ಪಡೆದುಕೊಂಡ ಫಲಾನುಭವಿಗಳ ಬಳಿ ನೇರವಾಗಿ ಮಾತನಾಡಿ ಮಾಹಿತಿ ಪಡೆದುಕೊಳ್ಳಬಹುದು.


Click it and Unblock the Notifications