ನಿವೃತ್ತಿ (Retirement) ಎಂದರೆ ಬರೀ ಕೆಲಸಕ್ಕೆ ವಿದಾಯ ಹೇಳುವುದಲ್ಲ, ಬದಲಿಗೆ ಕೆಲಸ ಬಿಟ್ಟ ನಂತರ ಹೇಗೆ ಸಂಪಾದನೆ ಮಾಡ್ಬೇಕು ಎಂಬುದನ್ನು ಪ್ಲಾನ್ ಮಾಡ್ಬೇಕು. ಅಲ್ಲದೇ ನಿವೃತ್ತಿ ನಂತರ ಆದಾಯ ಸಂಪಾದಿಸೋದು ಹೇಗೆ ಎಂಬುದೇ ಹಲವರ ಪ್ರಶ್ನೆ. ಉದ್ಯೋಗದಲ್ಲಿರುವಾಗ ಇದ್ದಷ್ಟೇ ಖರ್ಚುಗಳು, ನಿವೃತ್ತಿ ನಂತರ ಮುಂದುವರೆಯುತ್ತದೆ. ಮನೆ ದಿನಸಿ, ವೈದ್ಯಕೀಯ, ಕರೆಂಟ್ ಬಿಲ್, ಟ್ರಾವೆಲ್, ಹೀಗೆ ಅನೇಕ ಖರ್ಚುಗಳು ಇರುತ್ತವೆ. ಆದ್ದರಿಂದ ನಿವೃತ್ತಿ ಪ್ಲಾನ್ ಎಂದರೆ ಕೇವಲ ಹೂಡಿಕೆ ಮಾಡಿಟ್ಟುಕೊಳ್ಳುವುದಲ್ಲ, ಪ್ರತೀ ತಿಂಗಳು ಆದಾಯ (Income) ಗಳಿಸುವುದು ಹೇಗೆ ಎಂಬುದನ್ನು ತಿಳಿಯುವುದು ಮುಖ್ಯ.

ಒಳ್ಳೆಯ ಸುದ್ದಿಯೆಂದರೆ, ನಿವೃತ್ತಿದಾರರು ತಮ್ಮ ಬಂಡವಾಳವನ್ನು ಸುರಕ್ಷಿತವಾಗಿಟ್ಟುಕೊಂಡು, ಸರ್ಕಾರಿ ಸ್ವಾಮ್ಯದ ಯೋಜನೆಗಳಲ್ಲಿ ಹೂಡಿಕೆ ಮಾಡಿಟ್ಟುಕೊಳ್ಳಬಹುದು. ಇವುಗಳಲ್ಲಿ ಕೆಲವು ಅಸಂಘಟಿತ ವಲಯದವರಿಗೆ, ಇನ್ನು ಕೆಲವು ಸಂಬಳದಾರ ಉದ್ಯೋಗಿಗಳಿಗೆ ಜಾರಿಗೆ ತರಲಾಗಿದೆ. ಮತ್ತೆ ಕೆಲವು ದೀರ್ಘಾವಧಿಯ ಹೂಡಿಕೆದಾರರಿಗೆ ಉತ್ತಮ ಯೋಜನೆಗಳಿವೆ. ಆ ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಟಲ್ ಪಿಂಚಣಿ ಯೋಜನೆ: ನಿಯಮಿತವಾಗಿ ಆದಾಯ ತೆರಿಗೆ ಪಾವತಿಸದ ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಅಟಲ್ ಪಿಂಚಣಿ ಯೋಜನೆ ಅತ್ಯಂತ ಉತ್ತಮ ಯೋಜನೆ ಆಯ್ಕೆಯಾಗಿದೆ. ಕಡಿಮೆ ಸಂಬಳ ಹೊಂದಿರುವವರಿಗೂ ಇದು ಬೆಸ್ಟ್ ಆಯ್ಕೆಯಾಗಿದೆ. ಈ ಯೋಜನೆಯು 18 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಗಳು 60 ವರ್ಷ ವಯಸ್ಸಿನವರೆಗೂ ಈ ಯೋಜನೆಗೆ ಮಾಸಿಕವಾಗಿ ಹೂಡಿಕೆಗಳನ್ನು ಮಾಡಬಹುದು. ನೀವು ಮಾಡಿದ ಹೂಡಿಕೆಗೆ ತಕ್ಕಂತೆ ಸರ್ಕಾರದಿಂದ 1000 ರೂ.ನಿಂದ 5000 ರೂ.ವರೆಗೆ ಗ್ಯಾರಂಟಿ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಕಡಿಮೆ ಆದಾಯ ಪಡೆಯುವವರಿಗೆ ಇದು ಸೂಕ್ತವಾಗಿದ್ದು, ಆದಾಯ ಮಾತ್ರ ಪಕ್ಕಾ ಸಿಗುತ್ತೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ:
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸರ್ಕಾರಿ ಬೆಂಬಲಿತ ಯೋಜನೆಯಾಗಿದೆ. ಭಾರತ ಸರ್ಕಾರದಿಂದ ಪ್ರಾರಂಭಿಸಲಾದ ಸ್ವಯಂ ಪ್ರೇರಿತ, ಕೊಡುಗಡೆ ಆಧಾರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಇದು ಮಾರುಕಟ್ಟೆಗೆ ಸಂಬಂಧಿಸಿದ ಯೋಜನೆಯಾಗಿದ್ದು, ನಿವೃತ್ತಿಯ ನಂತರ ಆದಾಯವನ್ನು ನೀಡುತ್ತದೆ. ನೀವು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಸರ್ಕಾರಿ ಉದ್ಯೋಗಿಗಳಿಗೆ 10% ಸರ್ಕಾರದಿಂದ ಕೊಡುಗೆ ನೀಡಲಾಗುತ್ತದೆ.
ಈಕ್ವಿಟಿ, ಕಾರ್ಪೊರೇಟ್ ಬಾಂಡ್, ಸರ್ಕಾರಿ ಸೆಕ್ಯೂರಿಟಿ, ಆಲ್ಟರ್ನೇಟಿವ್ ಇನ್ವೆಸ್ಟ್‌ಮೆಂಟ್ ಫಂಡ್‌ಗಳ ಮೂಲಕ ಹೂಡಿಕೆ ಮಾಡಬಹುದು.
EPFO ಮತ್ತು EPS:
ಖಾಸಗಿ ವಲಯದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನೌಕರರ ಪಿಂಚಣಿ ಯೋಜನೆ (EPS) ಮೂಲಕ ಪಿಂಚಣಿ ನೀಡುತ್ತದೆ. ಇದಕ್ಕೆ ಕನಿಷ್ಠ 10 ವರ್ಷಗಳ ಕೊಡುಗೆ ನೀಡಬೇಕು. ಪಿಂಚಣಿ ಮೊತ್ತವು ಸಂಬಳ ಮತ್ತು ಸೇವಾ ವರ್ಷಗಳನ್ನು ಅವಲಂಬಿಸಿದ್ದು, ತುಂಬಾ ಹೆಚ್ಚಿಲ್ಲದಿದ್ದರೂ ನಿವೃತ್ತಿ ನಂತರ ಸ್ಥಿರ ಆದಾಯ ನೀಡುವುದಂತೂ ಪಕ್ಕಾ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS):
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) ನಿಮ್ಮ ಹಣಕ್ಕೆ ಸುರಕ್ಷಿತ ಆದಾಯ ನೀಡುತ್ತದೆ. ಐದು ವರ್ಷಗಳ ಅವಧಿಗೆ ಒಂದೇ ಅಕೌಂಟ್‌ನಲ್ಲಿ ₹9 ಲಕ್ಷ, ಜಂಟಿ ಖಾತೆಯಲ್ಲಿ ₹15 ಲಕ್ಷದವರೆಗೆ ಹೂಡಿಕೆ ಮಾಡಬಹುದು.
ಯೋಜನೆಯು ನಿಗದಿತ ಬಡ್ಡಿ ದರವನ್ನು ಮಾಸಿಕವಾಗಿ ಪಾವತಿಸುತ್ತದೆ. ಪ್ರಸ್ತುತ 7.4% ಬಡ್ಡಿ ದರದೊಂದಿಗೆ, ಹೂಡಿಕೆದಾರರಿಗೆ ಉತ್ತಮ ಆದಾಯ ನೀಡುತ್ತದೆ. ಇನ್ನು ಸರ್ಕಾರಿ ಸ್ವಾಮ್ಯದಡಿ ಈ ಯೋಜನೆ ಕಾರ್ಯನಿರ್ವಹಿಸುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS):
60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಸರ್ಕಾರಿ ಬೆಂಬಲಿತ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ಇದೂ ಉತ್ತಮ ಬಡ್ಡಿದರದೊಂದಿಗೆ ಬರುತ್ತದೆ. ಇದರಲ್ಲಿ ₹30 ಲಕ್ಷದವರೆಗೆ ಹೂಡಿಕೆ ಮಾಡಬಹುದು, ಬಡ್ಡಿಯನ್ನು ಮೂರು ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ. ಈ ಯೋಜನೆ ಐದು ವರ್ಷಗಳ ಅವಧಿಯದ್ದಾಗಿದ್ದು, ಮೂರು ವರ್ಷಗಳವರೆಗೆ ವಿಸ್ತರಿಸಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications