
ಮೇಲ್ನೋಟಕ್ಕೆ ವ್ಯಾಪಾರಿ ಹಾಗೂ ಹೂಡಿಕೆದಾರರಿಬ್ಬರ ಕಾರ್ಯ ನಿರ್ವಹಣೆ ಒಂದೇ ಆದರೂ, ವಹಿವಾಟಿನಲ್ಲಿ ಕೊಂಚ ಬದಲಾವಣೆ ಇರುತ್ತದೆ. ವ್ಯಾಪಾರಿ ಹಾಗೂ ಹೂಡಿಕೆದಾರ ಪದದ ಅರ್ಥ ಸರಳ ವಿಶ್ಲೇಷಣೆ ಇಲ್ಲಿದೆ.
ಹೂಡಿಕೆದಾರ: ದೀರ್ಘಕಾಲಿಕ ಅಂದರೆ 1 ವರ್ಷದಿಂದ 10 ವರ್ಷ ಅಥವಾ ಇನ್ನೂ ಅಧಿಕ ಅವಧಿಗೆ ಹೂಡಿಕೆ ಮಾಡುವವರಿಗೆ ಹೂಡಿಕೆದಾರ ಎಂದು ಗುರುತಿಸಲಾಗುತ್ತದೆ. ಆಸ್ತಿ, ಸರಕು, ನಗ ನಾಣ್ಯ ಸೇರಿದಂತೆ ವಿವಿಧ ರೀತಿ ಹೂಡಿಕೆಯಲ್ಲಿ ಇವರು ತೊಡಗಿರುತ್ತಾರೆ. buy and hold ನಿಯಮ ಅನುಸರಿಸಿ ಮಾರುಕಟ್ಟೆಯಲ್ಲಿ ಉಳಿದಿರುತ್ತಾರೆ.
ಪ್ರತಿ ಹೂಡಿಕೆಗೂ ಮೊದಲು ಹಾಗೂ ನಂತರ ಇಂದಿನ ಮಾರುಕಟ್ಟೆ ಸ್ಥಿತಿ ಗತಿ, ಪೂರ್ವ ಇತಿಹಾಸ ಹಾಗೂ ಭವಿಷ್ಯತ್ತಿನ ಏರಿಕೆ ಇಳಿಕೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಿಸುತ್ತಾರೆ.
ಹೂಡಿಕೆ ಮಾಡಿರುವ ಮೌಲ್ಯಕ್ಕೆ ತಕ್ಕ ಒಳ್ಳೆ ಪ್ರತಿಫಲ ದೀರ್ಘಕಾಲಿಕವಾಗಿ ಸಿಗುವುದು ಬಿಡುವುದು ಷೇರು ಹೂಡಿಕೆ ಅವಧಿ ಹಾಗೂ ವಿಶ್ವಾಸಾರ್ಹತೆ ಮೇಲೆ ನಿಂತಿರುತ್ತದೆ.
ವ್ಯಾಪಾರಿ: ವ್ಯಾಪಾರಿಗಳು ಸಾಮಾನ್ಯವಾಗಿ ಕೆಲ ನಿಮಿಷಗಳಿಂದ ಹಿಡಿದು ಕೆಲ ದಿನಗಳವರೆಗೆ ಮಾತ್ರ ಮಾರುಕಟ್ಟೆಯಲ್ಲಿ ಸಕ್ರಿಯರಾಗಿರುತ್ತಾರೆ. ಅತ್ಯಂತ ತ್ವರಿತ ಹಾಗೂ ಅನಿಶ್ಚಿತವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ದೈನಂದಿನ ಸುದ್ದಿ, ಸಮಾಚಾರ, ತಾಂತ್ರಿಕ ವಿಶ್ಲೇಷಣೆ ಮೇಲೆ ಸದಾ ನಿಗಾ ಇರಿಸಿಕೊಂಡಿರುತ್ತಾರೆ. ವ್ಯಾಪಾರಿಗಳು ಸದಾ buy and sell ನಿಯಮ ಅನುಸರಿಸುತ್ತಾರೆ. ಮಾರುಕಟ್ಟೆಯಲ್ಲಿ ಕೊಂಚ ಏರುಪೇರಾದರೂ ವ್ಯಾಪಾರಿಗಳ ಹೊಟ್ಟೆಯಲ್ಲಿ ತಳಮಳ ಗ್ಯಾರಂಟಿ.
ಎಷ್ಟು ತ್ವರಿತವಾಗಿ ಹೂಡಿಕೆ ಮಾಡಿ ಪ್ರತಿಫಲ ನಿರೀಕ್ಷಿಸುತ್ತಾರೋ ಅಷ್ಟೇ ವೇಗವಾಗಿ ನಿರಾಸೆ ಅನುಭವಿಸುವ ಸಾಧ್ಯತೆಯೂ ಇದೆ. ಹೀಗಾಗಿ ವ್ಯಾಪಾರಿಗಳ ಕಾರ್ಯ ನಿರ್ವಹಣೆ ಕಡಿಮೆ ಅವಧಿಯ ವಹಿವಾಟಿನ ಮೇಲೆ ನಿಂತಿರುತ್ತದೆ. [ಷೇರು ಮಾರುಕಟ್ಟೆ ಬಗ್ಗೆ ತಿಳಿಯಿರಿ]
ವ್ಯಾಪಾರಿ ಅಥವಾ ಹೂಡಿಕೆದಾರ ನಾವೇನಾಗಬೇಕು?: ಷೇರು ಪೇಟೆಗೆ ಇಳಿಯುವ ಮುನ್ನ ಇದು ಮುಖ್ಯವಾಗಿ ಎಲ್ಲರನ್ನೂ ಕಾಡುತ್ತದೆ. ವ್ಯಾಪಾರಿಯಾಗುವ ಮೂಲಕ ತ್ವರಿತವಾಗಿ ಅಧಿಕ ಹಣ ಸಂಪಾದನೆ ಸಾಧ್ಯವಿದೆ. ಆದರೆ, ಹಗಲು ರಾತ್ರಿ ಷೇರುಪೇಟೆಯ ಆಳ ಅಗಲವನ್ನು ಅರಿದು ಕುಡಿದಿರಬೇಕು. ಇಲ್ಲವೇ ಸೂಕ್ತ ಸಲಹೆಗಾರರ ನೆರವು ಪಡೆದಿರಬೇಕು ಇಲ್ಲದಿದ್ದರೆ ವ್ಯಾಪಾರಿಯಾಗಲು ಹೋಗಿ ಪಾಪರ್ ಆಗುವ ಅಪಾಯವಿರುತ್ತದೆ.
ನಿಪುಣ ವ್ಯಾಪಾರಿಗಳಿಗೆ ಕೂಡಾ ಷೇರುಪೇಟೆ ಏರಿಳಿತ ಕಂಗೆಡಿಸಿಬಿಡುತ್ತದೆ. ಸೂಕ್ಷ್ಮವಾಗಿ ಪರಿಸ್ಥಿತಿ ಅವಲೋಕಿಸಿ ಯಾವ ಷೇರು ಕೊಳ್ಳಬೇಕು ಯಾವ ಷೇರು ಮಾರಬೇಕು ಯಾವ ಸಮಯಕ್ಕೆ ಈ ವ್ಯವಹಾರ ಮಾಡಬೇಕು ಎಂಬುದನ್ನು ಸ್ಥೂಲವಾಗಿ ಅರಿತಿರಬೇಕು.
ಆದರೆ, ಕಡಿಮೆ ಹೂಡಿಕೆ ಮಾಡಬಯಸುವವರ ಆರಂಭ ಶೂರತ್ವಕ್ಕೆ ವ್ಯಾಪಾರಿ ಮಾದರಿ ಹೇಳಿ ಮಾಡಿಸಿದ್ದಂತಿದೆ. ಆದರೆ, ಜನ ಸಾಮಾನ್ಯರಿಗೆ ವ್ಯಾಪಾರಿ ಮಾದರಿಗಿಂತ ಹೂಡಿಕೆದಾರನ ಪಾತ್ರವೇ ಸೂಕ್ತವಾಗಿದ್ದು, ಕಡಿಮೆ ಅಪಾಯ ಹೊಂದಿದೆ.
(ಗುಡ್ ರಿಟರ್ನ್ಸ್ )


Click it and Unblock the Notifications