
ಅಂಚೆ ಕಚೇರಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದಲ್ಲಿ ಪಬ್ಲಿಕ್ ಪ್ರಾವಿಡೆಂಚ್ ಫಂಡ್ ಖಾತೆಯನ್ನು ತೆರೆಯಬಹುದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೆಸರು ಕೇಳಿಯೇ ಇದರಿಂದ ದೂರ ಉಳಿಯುವವರೇ ಹೆಚ್ಚು. ಆದರೆ, ನೆನಪಿಡಿ, ಈ ಖಾತೆಯನ್ನು ತೆರೆಯುವುದು ಎಷ್ಟು ಸುಲಭವೋ, ಇದನ್ನು ನಿಭಾಯಿಸುವುದು ಕೂಡ ಅಷ್ಟೇ ಸುಲಭ.
ಈಗ ಎಲ್ಲ ಬ್ಯಾಂಕುಗಳೂ ಗಣಕೀಕರಣವಾಗಿದ್ದರಿಂದ ಎಸ್‌ಬಿಐನ ಯಾವುದೇ ಶಾಖೆಯಲ್ಲಿ ಖಾತೆ ತೆರೆದರೂ, ನಿಮ್ಮ ಮನೆ ಬಳಿಯ ಬ್ಯಾಂಕ್ ಶಾಖೆಯಲ್ಲಿ ಹಣ ಕಟ್ಟಬಹುದಾಗಿದೆ. ನಿಗದಿತ ಅವಧಿಯವರೆಗೆ ಹಣ ತೆರೆಯಲು ಸಾಧ್ಯವಿಲ್ಲ ಮತ್ತು ಬಡ್ಡಿದರ(8.8%)ವೂ ಹೆಚ್ಚಿರುವುದರಿಂದ ಇಲ್ಲಿ ಉಳಿತಾಯವೂ ಉಳಿದೆಲ್ಲ ಖಾತೆಗಳಿಗಿಂತ ಹೆಚ್ಚು. ಮತ್ತೊಂದು ಅಂಶವೇನೆಂದರೆ, ಅಂಚೆ ಕಚೇರಿಗಿಂತ ಎಸ್‌ಬಿಐನಲ್ಲಿ ಪಿಪಿಎಫ್ ಖಾತೆ ತೆರೆಯಲು ಹೆಚ್ಚು ಜನರು ಇಷ್ಟಪಡುತ್ತಾರೆ.
ಸಂಬಳದಾರರಿಗೆ ಮತ್ತು ಸ್ವಉದ್ಯೋಗಸ್ಥರಿಗೆ ಆದಾಯ ತೆರಿಗೆ ಉಳಿಸಲು ಇದು ಹೇಳಿ ಮಾಡಿಸಿದ ಖಾತೆ. ಆದಾಯ ತೆರಿಗೆ ಕಾಯ್ದೆಯ 80ಸಿ ಸೆಕ್ಷನ್ ಅಡಿ ಈ ಖಾತೆಯಲ್ಲಿ 1 ಲಕ್ಷ ರು.ವರೆಗೆ ಜಮಾ ಮಾಡಿದ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ದೊರೆಯುತ್ತದೆ. ಈ ಖಾತೆಯಲ್ಲಿ ಎಷ್ಟಾದರೂ ಮೊತ್ತವನ್ನು ಜಮಾ ಮಾಡಬಹುದು. ಆದರೆ, ವರ್ಷಕ್ಕೆ ಕನಿಷ್ಠ ಮಿತಿ 500 ರು. ಮತ್ತು ಗರಿಷ್ಠ ಮಿತಿ 1 ಲಕ್ಷ ರು. ಇದೂ ಕೂಡ ಉಳಿತಾಯ ಖಾತೆ ನಿಭಾಯಿಸಿದಂತೆಯೇ ಅಲ್ಲವೆ? ಈ ಖಾತೆಯ ಸದುಪಯೋಗ ಪಡಿಸಿಕೊಂಡಲ್ಲಿ 15 ವರ್ಷಗಳ ಅವಧಿಯ ನಂತರ ನಿಮ್ಮ ಜೇಬು ತುಂಬುವುದು ಖಚಿತ.
ಶಾಖೆ ಆಯ್ಕೆ ಮಾಡಿಕೊಳ್ಳಿ
ಎಲ್ಲ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ಪಿಪಿಎಫ್ ಅಕೌಂಟ್ ತೆರೆಯಲು ಸೌಲಭ್ಯವಿರುವುದಿಲ್ಲ. ಆದ್ದರಿಂದ ನಿಮ್ಮ ಮನೆಗೆ ಅಥವಾ ಕಚೇರಿಗೆ ಹತ್ತಿರವಾದ, ಪಿಪಿಎಫ್ ಖಾತೆ ತೆರೆಯಲು ಸೌಲಭ್ಯವಿರುವ ಶಾಖೆಯನ್ನು ಆಯ್ದುಕೊಳ್ಳಿ. ಈ ಖಾತೆ ತೆರೆಯಲು ಎಸ್‌ಬಿಐನಲ್ಲಿ ಉಳಿತಾಯ ಖಾತೆ ಇರಬೇಕೆಂದೇನೂ ಇಲ್ಲ. ಅಂದರೆ, ಉಳಿತಾಯ ಖಾತೆ ಇಲ್ಲದೆಯೂ ಪಿಪಿಎಫ್ ಅಕೌಂಟ್ ತೆರೆಯಬಹುದಾಗಿದೆ.
ಯಾವ್ಯಾವ ದಾಖಲೆಗಳು ಬೇಕು?
ಖಾತೆ ತೆರೆಯಲು ಮನೆ ವಿಳಾಸದ ದಾಖಲೆ, ಗುರುತಿನ ಪುರಾವೆ ಮತ್ತು ಎರಡು ಪಾಸ್ಪೋರ್ಟ್ ಸೈಜಿನ ಫೋಟೋಗಳು ಅಗತ್ಯ. ಬ್ಯಾಂಕಿನಿಂದ ಫಾರ್ಮ್ ತಂದು, ತುಂಬಿ ಅಗತ್ಯ ದಾಖಲೆಗಳ ಝೆರಾಕ್ಸ್ ಕಾಪಿಯನ್ನು ಲಗತ್ತಿಸಿ ಬ್ಯಾಂಕಿಗೆ ನೀಡಬೇಕು.
ಯಾವ ದಾಖಲೆ ಗುರುತಿನ ಪುರಾವೆ ಆಗಬಲ್ಲದು?
1) ಪಾನ್ ಕಾರ್ಡ್
2) ಡ್ರೈವಿಂಗ್ ಲೆಸೆನ್ಸ್
3) ಮತದಾರರ ಗುರುತಿನ ಚೀಟಿ
4) ಪಾಸ್ಪೋರ್ಟ್
ಯಾವ ದಾಖಲೆ ವಿಳಾಸದ ಪುರಾವೆ ಆಗಬಲ್ಲದು?
1) ದೂರವಾಣಿ ಬಿಲ್
2) ರೇಷನ್ ಕಾರ್ಡ್
3) ವಿದ್ಯುತ್ ಬಿಲ್
4) ಮತದಾರರ ಗುರುತಿನ ಚೀಟಿ
ಫಾರ್ಮ್ ಸಲ್ಲಿಸುವಾಗ ಈ ದಾಖಲೆಗಳ ಮೂಲಪ್ರತಿಯನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ.
ಪಾಸ್ ಬುಕ್ ವಿತರಣೆ
ಎಲ್ಲ ದಾಖಲೆಗಳ ತಪಾಸಣೆಯಾಗಿ ಎಲ್ಲವೂ ಸರಿಯಾಗಿದೆ ಎಂದು ಮನವರಿಕೆಯಾದರೆ ಬ್ಯಾಂಕ್ ಕನಿಷ್ಠ ಡೆಪಾಸಿಟ್ ಮೊತ್ತವನ್ನು ತುಂಬಿಸಿಕೊಂಡು ಉಳಿತಾಯ ಖಾತೆಗೆ ನೀಡುವಂತಹ ಪಾಸ್ ಬುಕ್ ನೀಡುತ್ತಾರೆ. ಮುಂದಿನ ದಿನಗಳಲ್ಲಿ, ನಿಮ್ಮ ಖಾತೆಯಲ್ಲಿ ನೀವು ಎಷ್ಟು ಜಮಾ ಮಾಡಿದ್ದೀರಿ, ಎಷ್ಟು ಬಡ್ಡಿ ಬಂದಿದೆ ಮುಂತಾದ ವಿವರಗಳನ್ನು ನೋಡಬಹುದು.
ಆನ್‌ಲೈನ್ ನಿರ್ವಹಣೆ
ಶಾಖೆಗಳಿಗೆ ಖುದ್ದಾಗಿ ಹೋಗಲು ಆಗದಿದ್ದರೆ ಆನ್‌ಲೈನ್ ಮುಖಾಂತರ ಕೂಡ ಹಣವನ್ನು ಜಮಾ ಮಾಡಬಹುದು. ಈ ಅವಕಾಶವನ್ನು ಗ್ರಾಹಕರು ಬ್ಯಾಂಕಿನಿಂದ ಕೇಳಿ, ನೊಂದಾಯಿಸಿಕೊಂಡು ಪಡೆದುಕೊಳ್ಳಬೇಕು. ನಿಮ್ಮ ಉಳಿತಾಯ ಖಾತೆಯಿಂದ ನೇರವಾಗಿ ಪಿಪಿಎಫ್ ಖಾತೆಗೆ ಹಣ ಹಾಕಬಹುದು. ಹಾಗೆಯೆ, ನಿಗದಿತ ಹಣವನ್ನು ನೇರವಾಗಿ ಜಮಾ ಮಾಡಲು ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್ ಕೂಡ ನೀಡಬಹುದು.
ಆದರೆ, ಒಂದು ವರ್ಷದಲ್ಲಿ ಕೇವಲ 12 ಬಾರಿ ಮಾತ್ರ ಜಮಾ ಮಾಡಲು ಇನ್‌ಸ್ಟ್ರಕ್ಷನ್ ನೀಡಬಹುದು.
ಎಸ್‌ಬಿಐ ನೀಡುವ ಇತರ ಸವಲತ್ತುಗಳು
* ಒಬ್ಬರು ಅಥವಾ ಇಬ್ಬರ ಹೆಸರನ್ನು ನಾಮಿನೇಟ್ ಮಾಡಬಹುದು.
* ಯಾವುದೇ ಶಾಖೆಯಿಂದ ಎಸ್‌ಬಿಐನ ಇನ್ನಾವುದೇ ಶಾಖೆಗೆ ಅಥವಾ ಪ್ರಧಾನ ಅಂಚೆ ಕಚೇರಿಗೆ ಶುಲ್ಕವಿಲ್ಲದೆ ಖಾತೆಯನ್ನು ವರ್ಗಾಯಿಸಬಹುದು.
* ನಂಬತಕ್ಕ ಕಾರಣವಿದ್ದರೆ ಮಾತ್ರ ಖಾತೆ ತೆರೆದ ವರ್ಷ ಮುಗಿದ ಮೇಲೆ, ಐದು ವರ್ಷಗಳ ನಂತರವೇ ಖಾತೆಯನ್ನು ಮುಚ್ಚಲು ಅವಕಾಶವಿದೆ.
* ಗ್ರಾಹಕ ಯಾವುದೇ ಸಮಯದಲ್ಲಿ ವಹಿವಾಟು ನಿಲ್ಲಿಸಬಹುದು. ಆದರೆ, ಖಾತೆ ತೆರೆದ ಹಣಕಾಸು ವರ್ಷ ಮುಗಿದ ಮೇಲೆ, 15 ವರ್ಷಗಳ ನಂತರವೇ ಜಮಾ ಆಗಿರುವ ಹಣ ಹಿಂದಿರುಗಿಸಲಾಗುವುದು.
* ಒಂದು ವೇಳೆ ಖಾತೆ ಮುಂದುವರಿಯದ ಪಕ್ಷದಲ್ಲಿ, ಪ್ರತಿ ವರ್ಷಕ್ಕೆ 50 ರು.ನಂತೆ ಹಣ ನೀಡಿ ಖಾತೆಯನ್ನು ಮತ್ತೆ ನವೀಕರಿಸಬಹುದು.


Click it and Unblock the Notifications