ನವದೆಹಲಿ, ಜು.9: ಜು.7 ರಿಂದ ಆ.14ರ ವರೆಗೆ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಜು.10ರಂದು 2014-15ನೇ ಸಾಲಿನ ಎನ್ಡಿಎ ಸರ್ಕಾರದ ಸಾಮಾನ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.ಇದುವರೆಗಿನ ಕೇಂದ್ರ ಬಜೆಟ್ ಕುರಿತಂತೆ ಕೆಲವು ಕುತೂಹಲಕಾರಿ ಅಂಶಗಳ ಸಂಗ್ರಹ ಇಲ್ಲಿದೆ ಓದಿ...
* ಪಂಡಿತ್ ಜವಹಾರಲಾಲ್ ನೆಹರೂ ಅವರು ಕೇಂದ್ರ ಬಜೆಟ್ ಮಂಡಿಸಿದ ಪ್ರಪ್ರಥಮ ಪ್ರಧಾನಿ ಎನಿಸಿದ್ದಾರೆ. 1958-59ನೇ ಸಾಲಿನ ಬಜೆಟ್ ಮಂಡಿಸಿದ್ದರು. * ಬಜೆಟ್ ಖೋತಾ ಅತ್ಯಧಿಕ ಪ್ರಮಾಣದಲ್ಲಿದ್ದ 1973-74ರ ಬಜೆಟ್ ಅನ್ನು 'ಬ್ಲಾಕ್ ಬಜೆಟ್' ಎಂದು ಕೂಡಾ ಕರೆಯಲಾಗುತ್ತದೆ. ಬಜೆಟ್ ನಲ್ಲಿ 550 ಕೋಟಿ ರು ಕೊರತೆ ತೋರಿಸಲಾಗಿತ್ತು. * 1951-52ರಲ್ಲಿ ಪ್ರಪ್ರಥಮ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸಿ.ಡಿ ದೇಶ್ ಮುಖ್ ಅವರು ಬಜೆಟ್ ಮಂಡಿಸಿದರು. * ಪ್ರಧಾನಿಯಾಗಿ ಬಜೆಟ್ ಮಂಡಿಸಿದವರ ಪಟ್ಟಿಯಲ್ಲಿ ಜವಹಾರ ಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಮೂವರು ಒಂದೇ ಕುಟುಂಬದವರು ಕಾಣ ಸಿಗುತ್ತಾರೆ. * ಮೊಟ್ಟ ಮೊದಲ ಮಧ್ಯಂತರ ಬಜೆಟ್ ಅನ್ನು ಪಿಕೆ ಷಣ್ಮುಗಂ ಚೆಟ್ಟಿ ಮಂಡಿಸಿದರು. * 1997-98ರಲ್ಲಿ ಅಂದಿನ ವಿತ್ತ ಸಚಿವ ಪಿ ಚಿದಂಬರಂ ಮಂಡಿಸಿದ ಬಜೆಟ್ ಅನ್ನು 'ಕನಸಿನ ಬಜೆಟ್' ಎಂದೇ ಕರೆಯಲಾಗುತ್ತದೆ. * ಬಜೆಟ್ ನಲ್ಲಿ ಹೇಳಲಾಗುವ ಅನುಮೋದನೆ, ಘೋಷಣೆಗಳು ಏಪ್ರಿಲ್ 1 ರಿಂದ ಜಾರಿಗೊಳ್ಳುತ್ತದೆ.[ಕೇಂದ್ರ ಬಜೆಟ್ ನಿರೀಕ್ಷೆಗಳೇನು?] * ಮೊರಾರ್ಜಿ ದೇಸಾಯಿ ಅವರು ಅತ್ಯಧಿಕ ಬಾರಿ ಬಜೆಟ್ ಮಂಡಿಸಿದ್ದಾರೆ. 10 ಬಾರಿ ಬಜೆಟ್ ಮಂಡಿಸಿರುವ ಮೊರಾರ್ಜಿ ದೇಸಾಯಿ ಅವರು ಐದು ವಾರ್ಷಿಕ ಬಜೆಟ್ ಹಾಗೂ ಐದು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಉಪ ಪ್ರಧಾನಿ ಹಾಗೂ ವಿತ್ತ ಸಚಿವರಾಗಿ ಬಜೆಟ್ ಮಂಡಿಸಿದ್ದು ಕೂಡಾ ಇವರೊಬ್ಬರೇ. * ಹುಟ್ಟುಹಬ್ಬದ ದಿನದಂದೇ ಬಜೆಟ್ ಮಂಡಿಸಿದ್ದು ಮೊರಾರ್ಜಿ ದೇಸಾಯಿ ಅವರ ಸಾಧನೆ. ಫೆ.29ರಂದು 1964 ಹಾಗೂ 1968ರಂದು ಬಜೆಟ್ ಮಂಡಿಸಿದ್ದರು. * ಕೇಂದ್ರ ಬಜೆಟ್ ಯಾವಾಗಲೂ ಲೋಕಸಭೆಯಲ್ಲಿ ಮೊದಲು ಮಂಡನೆಯಾಗಿ ಸದನದಲ್ಲಿ ಅನುಮೋದನೆ ಪಡೆಯಲಾಗುತ್ತದೆ. * 1947ರಿಂದ ಇಲ್ಲಿ ತನಕ ಸುಮಾರು 25ಕ್ಕೂ ಅಧಿಕ ವಿತ್ತ ಸಚಿವರನ್ನು ಭಾರತ ಕಂಡಿದೆ.