ಪ್ರತಿ ಬಾರಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ನ್ಯೂ ಇಯರ್ ರೆಸಲ್ಯೂಷನ್ ಏನು ಎಂದು ಎಲ್ಲರೂ ಕೇಳುವುದು ಮಾಮೂಲಿ. ಸ್ವಲ್ಪ ಮನೆ ಬಜೆಟ್ ಬಗ್ಗೆ ಕಾಳಜಿ ಉಳ್ಳವರು ಎಷ್ಟು ಉಳಿಸುವುದು? ಎಷ್ಟು ಖರ್ಚು ಮಾಡುವುದು? ಎಂಬುದರ ಲೆಕ್ಕಾಚಾರ ಹಾಕಿ ಪಟ್ಟಿ ತಯಾರಿಸುತ್ತಾರೆ.
ಅದರೆ, ಕಾಲ ಸರಿದಂತೆ ಎಲ್ಲಾ ನಿರ್ಣಯಗಳು ಮಾಸ ತೊಡಗುತ್ತವೆ. ಹೀಗಾಗಿ ನಾವು ಇಷ್ಟು ಉಳಿಸೋಣ, ತಿಂಗಳಿಗೆ ಇಷ್ಟೇ ಖರ್ಚು ಮಾಡೋಣ ಎಂಬ ನಿರ್ಣಯಗಳು ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ಅರ್ಥವಿಲ್ಲದ ಕೆಲವು ನಿರ್ಣಯಗಳನ್ನು ಕೈ ಬಿಟ್ಟು ಸರಿಯಾದ ರೀತಿಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬಹುದಾದ ನಿರ್ಣಯಗಳನ್ನು ಕೈಗೊಳ್ಳುವುದು ಒಳಿತು.
ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ನಿಮ್ಮ ಕುಟುಂಬದ ಇತರೆ ಸದಸ್ಯರ ಮೇಲೆ ಹೆಚ್ಚಿನ ಒತ್ತಡ ಹೇರುವುದು ಸರಿಯಲ್ಲ. ಅದರೆ, ನಿಮ್ಮ ಆದಾಯ ಹಾಗೂ ಬಜೆಟ್ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವುದು ಒಳ್ಳೆಯ ನಡವಳಿಕೆ. ಕ್ರೆಡಿಟ್ ಕಾರ್ಡ್ ಅಥವಾ ಚೀಟಿ ವ್ಯವಹಾರದ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡು ನಿಮ್ಮ ಬಜೆಟ್ ಅಥವಾ ನಿರ್ಣಯಗಳನ್ನು ಕೈಗೊಳ್ಳಬೇಡಿ. ಆರ್ಥಿಕ ನಿರ್ಣಯ ಕೈಗೊಳ್ಳುವುದರ ಬಗ್ಗೆ ಅನೇಕ ಸಾಧನಗಳು ಈಗ ಆನ್ ಲೈನ್ ನಲ್ಲಿ ಅಥವಾ ಸ್ಮಾರ್ಟ್ ಫೋನ್ ಗಳಲ್ಲೇ ಲಭ್ಯವಿರುತ್ತದೆ ಪ್ರಯತ್ನಿಸಿ
ನಿಮಗೆ ಅನುಕೂಲವಾಗಲಿ ಎಂದು ನಾವು ಇಲ್ಲಿ ಕೆಲವು ನಿರ್ಣಯಗಳನ್ನು ನೀಡಿದ್ದೇವೆ. ದಯವಿಟ್ಟು ಈ ರೀತಿ ನಿರ್ಣಯಗಳನ್ನು ಕೈಗೊಳ್ಳಬೇಡಿ. ಇವೆಲ್ಲ ಅತ್ಯಂತ ಕೆಟ್ಟ ಆರ್ಥಿಕ ನಿರ್ಣಯಗಳು ಎಂದು ತಜ್ಞರು ಸೀಲ್ ಒತ್ತಿದ್ದಾರೆ....
#1: ನಾನು ಅತ್ಯಂತ ಕಡಿಮೆ ಖರ್ಚು ಮಾಡುತ್ತೇನೆ
ಈ ವರ್ಷ ನಾನು ಅತ್ಯಂತ ಕಡಿಮೆ ಖರ್ಚು ಮಾಡುತ್ತೇನೆ ಎಂಬ ನಿರ್ಣಯ ತೀರಾ ಕ್ಲೀಷೆಯಾಗಿದೆ. ಹಣಕಾಸಿನ ಅಭಾವ ತೋರಿದಾಗ ಅಥವಾ ಐಷಾರಾಮಿ ವಸ್ತು ಖರೀದಿ ಸಂದರ್ಭ ಒದಗಿದಾಗ ಈ ಡೈಲಾಗ್ ಹಲವರ ಬಾಯಲ್ಲಿ ಬರುವುದು ಸಾಮಾನ್ಯ.
ಹೀಗಾಗಿ ನಿಮ್ಮ ದರ ಪಟ್ಟಿಯಲ್ಲಿ ಯಾವುದು ಹೆಚ್ಚು ಕೈ ಕಚ್ಚುತ್ತಿದೆ ಎಂದು ತಿಳಿದು ಅದನ್ನು ಮಾತ್ರ ಕೈ ಬಿಡಿ, ಹೊರಗಡೆ ಓಡಾಟ, ಸಿನಿಮಾ ವೀಕ್ಷಣೆ. ಪಾರ್ಟಿ ಇತ್ಯಾದಿಗಳನ್ನು ಕಡಿಮೆ ಮಾಡಬಹುದು. ಪ್ರತಿ ತಿಂಗಳು ಒಂದಿಷ್ಟು ಹಣ ಆಪತ್ ಕಾಲಕ್ಕೆ ಎಂದು ಮೀಸಲಿಡಿ. ಉಳಿಸುವುದು ಅಭ್ಯಾಸವಾದರೆ ಖರ್ಚು ಮಾಡುವುದು ಸ್ವಯಂ ಕಡಿಮೆಯಾಗುತ್ತದೆ.
#2 ಈ ವರ್ಷ ಸಾಲವನ್ನೆಲ್ಲ ತೀರಿಸಿ ಬಿಡುತ್ತೇನೆ
ಈ ವರ್ಷ ಸಾಲವನ್ನೆಲ್ಲ ತೀರಿಸಿ ಬಿಡುತ್ತೇನೆ ಎಂಬ ಮಾತು ಕೇಳಲು ಆಕರ್ಷಣೀಯ ಆದರೆ, ಇದರಿಂದ ನಿಮ್ಮ ತಿಂಗಳ ಆದಾಯ ಹೆಚ್ಚಾಗಲ್ಲ ಅಥವಾ ಸಾಲದ ಮೇಲಿನ ಬಡ್ಡಿದರವಾಗಲಿ ಕಡಿಮೆಯಾಗಲ್ಲ.
ಪ್ರತಿ ತಿಂಗಳು ಒಂದಿಷ್ಟು ಉಳಿಸುವ ನಿರ್ಣಯ ಕೈಗೊಂಡ ಮೇಲೆ ವಾರ್ಷಿಕವಾಗಿ 12,000 ರು ಅಥವಾ ತಿಂಗಳಿಗೆ 2,000 ರು ಉಳಿಸುವ ಟಾರ್ಗೆಟ್ ಇಟ್ಟುಕೊಳ್ಳಿ. ಅಥವಾ ಅದಕ್ಕಿಂತ ಸಣ್ಣ ಮಟ್ಟದ ಮೊತ್ತವನ್ನು ಸಣ್ಣ ಅವಧಿಗೆ(ವಾರ, ದಿನ) ಇಟ್ಟುಕೊಂಡರೂ ಅಡ್ಡಿಯಿಲ್ಲ. ಹೀಗೆ ಮಾಡಿದರೆ ಉಳಿಸಿದ ಹಣವನ್ನು ಸಾಲ ತೀರಿಸಲು ಬಳಸಬಹುದು.
#3 ನಾನು ನನ್ನ ಬಜೆಟ್ ಮೀರಲ್ಲ
ನೀವು ನಿರ್ಣಯಗಳನ್ನು ಮೊದಲೇ ನಿರ್ಧರಿಸಿಲ್ಲವಾದರೆ ಹಾಗೂ ಸರಿಯಾಗಿ ನಿರ್ಣಯಗಳನ್ನು ಪಾಲಿಸುತ್ತಿಲ್ಲವಾದರೆ ಬಜೆಟ್ ಮೀರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಹೀಗಾಗಿ ಯೋಜನೆ ಪಟ್ಟಿ ಅಥವಾ ಸ್ಮಾರ್ಟ್ ಫೋನ್ ಅಪ್ ಬಳಸಿಯಾದರೂ ನಿಮ್ಮ ಬಜೆಟ್ ಬಗ್ಗೆ ನಿರ್ಣಯಗಳ ಪಟ್ಟಿ ಕಾಲಕಾಲಕ್ಕೆ ನೆನಪಿಟ್ಟುಕೊಳ್ಳಿ.
ದೂರದಲ್ಲಿರುವ ಗುರಿಯನ್ನು ಮುಟ್ಟುವ ಮುನ್ನ ಪ್ರತಿ ದಿನದ ಹೆಜ್ಜೆ ಎಲ್ಲಿ ಇಡಬೇಕು ಹೇಗೆ ಇಡಬೇಕು ಎಷ್ಟು ದೂರ ಕ್ರಮಿಸಬೇಕು ಎಂಬುದರ ಅರಿವಿರಲಿ.
ಕಾಲಕಾಲಕ್ಕೆ ನಿರ್ಣಯಗಳು ಹಾಗೂ ಅನುಷ್ಠಾನದ ಬಗ್ಗೆ ನೋಟ್ ಮಾಡಿಕೊಳ್ಳಿ. ಅದಾಯ ಗಳಿಸಿದರೆ ಸಾಲದು ಆದನ್ನು ಜಾಣ್ಮೆಯಿಂದ ಖರ್ಚು ಮಾಡುವ ಬಜೆಟ್ ಕೂಡಾ ಮುಖ್ಯವಾಗುತ್ತದೆ. ಸ್ವಲ್ಪ ಸಮಯ ಇದಕ್ಕೆ ಮೀಸಲಿಟ್ಟರೆ ವರ್ಷ ಪೂರ್ತಿ ಆರ್ಥಿಕ ನೆಮ್ಮದಿ ಪಡೆಯಲು ಸಾಧ್ಯ.
#4 ಹೆಚ್ಚಿನ ಆದಾಯ ಗಳಿಸುತ್ತೇನೆ.
ಹೆಚ್ಚು ಉಳಿತಾಯ ಮಾಡುವುದನ್ನು ಕಲಿತರೆ ಹೆಚ್ಚು ಆದಾಯ ಗಳಿಕೆ ಸಾಧ್ಯ. ಇಲ್ಲದಿದ್ದರೆ ಆರ್ಥಿಕ ಪರಿಸ್ಥಿತಿ ಹದಗೆಡುವುದು ನಿಶ್ಚಿತ.
ಹೆಚ್ಚಿನ ಆದಾಯಕ್ಕಾಗಿ ಅರೆ ಕಾಲಿಕ ಉದ್ಯೋಗ, ನಿಮ್ಮ ಕೌಶಲ್ಯಕ್ಕೆ ತಕ್ಕ ಕೆಲಸವನ್ನು ಹುಡುಕಿಕೊಳ್ಳಬಹುದು. ಅದರೆ, ನಿಮ್ಮ ಮೂಲ ಆದಾಯಕ್ಕೆ ಇದು ಹೊರೆಯಾಗಬಾರದು. ಇಲ್ಲದಿದ್ದರೆ ಉಳಿತಾಯದ ಮಂತ್ರವೇ ಸಾಕು.
#5 ಐಷಾರಾಮಿ ವಸ್ತುಗಳನ್ನು ಕೊಳ್ಳುವುದಿಲ್ಲ
ಜೀವನಕ್ಕೆ ಅಗತ್ಯವಾಗಿದ್ದರೆ ಐಷಾರಾಮಿ ವಸ್ತುಗಳನ್ನು ಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅದರೆ, ಯಾವುದೇ ಖರೀದಿ ಹಾಗೂ ಹೂಡಿಕೆಗೂ ಮುನ್ನ ಎರಡು ಬಾರಿ ಯೋಚಿಸಿ ನಿರ್ಣಯ ಕೈಗೊಳ್ಳುವುದು ಒಳ್ಳೆಯದು.


Click it and Unblock the Notifications