Englishहिन्दी മലയാളം தமிழ் తెలుగు

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಮಾಡಿಸಿದವರಿಗೆ ನೂರೆಂಟು ಲಾಭ! ತಪ್ಪದೇ ಓದಿ..

Written By: Siddu
Subscribe to GoodReturns Kannada

ಭಾರತ ಸರ್ಕಾರದ ಮೂರು ಮುಖ್ಯ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯು ಕೂಡ ಒಂದು. ವಾರ್ಷಿಕ ನವೀಕರಣವಿರುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY) ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಗಳಿಗೆ ಒಂದು ವರ್ಷದವರೆಗೆ ಕವರೇಜ್ ನೀಡುತ್ತದೆ.

ಕೇವಲ ವಾರ್ಷಿಕ 12 ರೂಪಾಯಿಗಳ ಪ್ರೀಮಿಯಂ ಮೊತ್ತವನ್ನು ಹೊಂದಿರುವ ಈ ವಿಮೆಯು ಬಡವರಿಗೆ ಮತ್ತು ಕಡಿಮೆ ಆದಾಯ ಹೊಂದಿರುವ ಜನರಿಗೆ ಬಹಳ ಉಪಯೋಗಕಾರಿಯಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ಆಕಸ್ಮಿಕ ಮರಣ ಮತ್ತು ಶಾಶ್ವತ ಪೂರ್ಣ ಅಂಗವೈಕಲ್ಯಕ್ಕೆ 2 ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂಪಾಯಿಗಳ ಲೈಫ್ ಕವರೇಜ್ ಲಭಿಸುವುದು.

ಈ ವಿಮೆಯ ಸೌಲಭ್ಯವನ್ನು ಪಡೆಯಲಿಚ್ಛಿಸುವವರಿಗೆ 18 ವರ್ಷ ಭರ್ತಿಯಾಗಿರಬೇಕು ಮತ್ತು ಉಳಿತಾಯ ಖಾತೆಯನ್ನು ಹೊಂದಿರಬೇಕು. 18-70 ವರ್ಷದೊಳಗಿನ ಪ್ರತಿಯೊಬ್ಬರೂ ವಿಮೆಯನ್ನು ಮಾಡಿಸಿಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿದ್ದರೆ, ಕೇವಲ ಒಂದರಿಂದ ಮಾತ್ರ ಈ ವಿಮೆಗೆ ಸೇರಬಹುದು. ಈ ಲೇಖನದಲ್ಲಿ ಯೋಜನೆಯ ವಿವಿಧ ಅಂಶಗಳ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಓದಿರಿ..  ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಯಾಕೆ ಮಾಡಿಸಬೇಕು?

PMSBY ಪಾಲಿಸಿ ಅಡಿಯಲ್ಲಿ ಯಾವ ಅಂಶಗಳಿಗೆ ಎಷ್ಟು ಕವರೇಜ್ ಸಿಗುತ್ತದೆ?

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ವಿಮೆದಾರನ ಆಕಸ್ಮಿಕ ಮರಣದ ಸಂದರ್ಭದಲ್ಲಿ ರೂ. 2 ಲಕ್ಷ ಲಭ್ಯವಾಗುತ್ತದೆ. ಇದಲ್ಲದೆ, ರೂ. 2 ಲಕ್ಷ ಪೂರ್ಣ ಅಂಗವೈಕಲ್ಯತೆ ಅಥವಾ ಎರಡೂ ಕಣ್ಣುಗಳಿಗೆ ಶಾಶ್ವತ ಹಾನಿ ಅಥವಾ ಕೈಗಳು ಮತ್ತು ಪಾದಗಳು, ಪಾರ್ಶ್ವವಾಯು ಇತ್ಯಾದಿಗಳ ಪೂರ್ಣ ಅಸಾಮರ್ಥ್ಯದ ಸಂದರ್ಭದಲ್ಲಿ ಒದಗಿಸಲಾಗುತ್ತದೆ. ಭಾಗಶಃ ಅಂಗವೈಕಲ್ಯತೆಯ ಸಂದರ್ಭದಲ್ಲಿ, ವಿಮೆದಾರರಿಗೆ ರೂ. 1 ಲಕ್ಷಗಳ ಜೀವ ರಕ್ಷಣಾ ಧನವನ್ನು ನೀಡಲಾಗುತ್ತದೆ.

ಮೆಡಿಕ್ಲೈಮ್ (Mediclaim) ಇರುವುದಿಲ್ಲ

ವಿಮಾದಾರರು ಇತರ ಯಾವುದೇ ವಿಮಾ ಯೋಜನೆಯ ಜೊತೆಗೆ PMSBY ಯೋಜನೆಯ ರಕ್ಷಣೆ ಪಡೆಯಬಹುದು. ಇದು ಸಂಪೂರ್ಣ ಜೀವ ವಿಮಾ ಯೋಜನೆ ಆಗಿರುವುದರಿಂದ, ಯೋಜನೆಯು ಯಾವುದೇ ಮೆಡಿಕ್ಲೈಮ್ ಅನ್ನು ಒದಗಿಸುವುದಿಲ್ಲ. ಅಂದರೆ, ಇದು ಅಪಘಾತದ ಕಾರಣದಿಂದಾಗಿ ಆಸ್ಪತ್ರೆಗೆ ತಗಲುವ ವೆಚ್ಚಗಳ ಯಾವುದೇ ಮರುಪಾವತಿಯನ್ನು ಒದಗಿಸುವುದಿಲ್ಲ.

ಸೇರ್ಪಡೆ ಮತ್ತು ಪ್ರತ್ಯೇಕಿಸುವಿಕೆ

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಯಾವುದೇ ಸಾವು, ಅಪಘಾತಗಳು ಮತ್ತು ಅಂಗವೈಕಲ್ಯಗಳು ಸೇರ್ಪಡೆಯಾಗಿವೆ. ಈ ಯೋಜನೆಯು ಆತ್ಮಹತ್ಯೆಗೆ ವಿರುದ್ಧವಾಗಿ ಯಾವುದೇ ರಕ್ಷಣೆಯನ್ನು ಕೊಡುವುದಿಲ್ಲ. ಆದರೆ ಕೊಲೆಯ ಕಾರಣದಿಂದಾಗಿರುವ ಮರಣವು ಪಾಲಿಸಿಯ ಅಡಿಯಲ್ಲಿರುತ್ತದೆ. ಒಂದು ಕೈ ಅಥವಾ ಕಾಲು, ಕಣ್ಣಿನ ದೃಷ್ಟಿ ಕಳೆದುಕೊಂಡಲ್ಲಿ ಕೂಡ ಈ ಯೋಜನೆಯ ಯಾವುದೇ ವ್ಯಾಪ್ತಿಯಲ್ಲಿ ಬರುವುದಿಲ್ಲ.

ಎಸ್ಎಂಎಸ್ ಮೂಲಕ ಸುರಕ್ಷಾ ವಿಮಾ ಯೋಜನೆಗೆ ಸೇರ್ಪಡೆ ಹೇಗೆ?

PMSBYY ಎಂದು ಸಂದೇಶ ಕಳುಹಿಸುವಂತೆ ಅರ್ಹ ಅಭ್ಯರ್ಥಿಗಳಿಗೆ SMS ಕಳುಹಿಸಲಾಗುವುದು. ಈ ಯೋಜನೆಗೆ ಸೇರ್ಪಡೆಯಾಗಲು 'PMSBYY' ಎಂದು ಸಂದೇಶವನ್ನು ಕಳುಹಿಸಬೇಕು. ಈ ಸಂದೇಶಕ್ಕೆ ಬದಲಾಗಿ ಗ್ರಾಹಕರಿಗೆ ಸ್ವೀಕೃತಿಯ ಸಂದೇಶವನ್ನು ಕಳುಹಿಸಲಾಗುತ್ತದೆ.
ಅರ್ಜಿಯ ಪ್ರಕ್ರಿಯೆಯಲ್ಲಿ ಮುಂದುವರೆಯಲು ಚಂದಾದಾರರ ಹೆಸರು, ವೈವಾಹಿಕ ಸ್ಥಿತಿ, ಹುಟ್ಟಿದ ದಿನಾಂಕ ಇತ್ಯಾದಿ ವಿವರಗಳ ಅವಶ್ಯಕತೆಯಿದೆ.
ಈ ವಿವರಗಳು ಬ್ಯಾಂಕಿನ ದಾಖಲೆಯಲ್ಲಿ ದೊರಕದಿದ್ದರೆ, ಅರ್ಜಿಯ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದಿಲ್ಲ ಮತ್ತು ಅರ್ಜಿದಾರರು ಹತ್ತಿರದ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಬ್ಯಾಂಕ್ ಖಾತೆಯಲ್ಲಿ ಪ್ರೀಮಿಯಂ ಕಟ್ಟುವಷ್ಟು ಮೊತ್ತವಿಲ್ಲದಿದ್ದಲ್ಲಿ ಪಾಲಿಸಿಯಿಂದೊದಗುವ ಕವರೇಜ್ ರದ್ದಾಗುತ್ತದೆ. ಆದರೆ ಪಾಲಿಸಿ ಇನ್ನೂ ಜಾರಿಯಲ್ಲಿರುತ್ತದೆ.

ನೆಟ್ ಬ್ಯಾಂಕಿಂಗ್ ಮೂಲಕ ಸುರಕ್ಷಾ ವಿಮಾ ಯೋಜನೆಗೆ ಸೇರ್ಪಡೆ ಹೇಗೆ?

ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಮಾಡಿ ಮತ್ತು ವಿಮೆ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ಪುಟದಲ್ಲಿ ಲಭ್ಯವಿರುವ ಎರಡೂ ಯೋಜನೆಗಳಲ್ಲಿ ಬೇಕಾದದನ್ನು ಆರಿಸಿಕೊಳ್ಳಿ. ನೀವು ಪ್ರೀಮಿಯಂ ಪಾವತಿಸಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ. ಆಯ್ಕೆ ಮಾಡಿದ ಖಾತೆಯ ಪ್ರಕಾರ ಪಾಲಿಸಿ ಕವರ್ ವಿವರ, ನಾಮಿನಿ ವಿವರ ಮತ್ತು ಪ್ರೀಮಿಯಂ ಮೊತ್ತವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ನೀವು ಉಳಿತಾಯ ಖಾತೆಯ ನಾನಿಮಿಯನ್ನು ಕೂಡ ಆಯ್ಕೆ ಮಾಡಬಹುದು ಅಥವಾ ಹೊಸ ನಾಮಿನಿಯನ್ನು ಸೇರಿಸಬಹುದು .ಯೋಜನೆಯ ನಾಮಿನಿಯ ಹೆಸರನ್ನು ಕೊಟ್ಟ ನಂತರ ಈ ಕೆಳಗಿನ ವಿವರಗಳನ್ನು ಕ್ಲಿಕ್ ಮಾಡಿ: ಉತ್ತಮ ಆರೋಗ್ಯದ ಘೋಷಣೆ, ಯೋಜನೆ ವಿವರ, ನಿಯಮಗಳು ಮತ್ತು ಷರತ್ತುಗಳಲ್ಲಿ "ನಾನು ಅದೇ ರೀತಿಯ ಯಾವುದೇ ಪಾಲಿಸಿಯನ್ನು ಹೊಂದಿಲ್ಲ" ಎಂದು ಘೋಷಿಸಿ, ನಂತರ ಕಂಟಿನ್ಯೂ ಬಟನ್ ಅನ್ನು ಕ್ಲಿಕ್ ಮಾಡಿದಾಗ ಪಾಲಿಸಿಯ ಪೂರ್ಣ ವಿವರಗಳು ಪ್ರದರ್ಶಿತವಾಗುತ್ತವೆ.
ಅಪ್ಲಿಕೇಶನ್ ಫಾರ್ಮ್ ನಲ್ಲಿ ತುಂಬಿದ ವಿವರಗಳನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ. ಅನನ್ಯ ಸಂಖ್ಯೆಯಿರುವ ಸ್ವೀಕೃತಿ ಸ್ಲಿಪ್ ಒಂದು ನಿಮಗೆ ದೊರೆಯುತ್ತದೆ. ಯಾವುದೇ ಹೆಚ್ಚಿನ ಉಲ್ಲೇಖಕ್ಕಾಗಿ ಅಂಗೀಕಾರ ಸಂಖ್ಯೆ ಕಾಪಾಡಿಕೊಳ್ಳಲು ಮರೆಯಬೇಡಿ.

PMSBYಗೆ ಸೇರ್ಪಡೆಗೆ ಬೇಕಾದ ಅರ್ಹತೆ

ಕನಿಷ್ಟ 18 ವರುಷ ಪೂರೈಸಿರಬೇಕಾಗಿದ್ದು, 18-70 ವರ್ಷ ವಯಸ್ಸಿನ ವ್ಯಕ್ತಿಗಳು PMSBY ಅನ್ನು ಖರೀದಿಸಲು ಅರ್ಹರಾಗಿದ್ದಾರೆ. ಇದಲ್ಲದೆ, NRIಗಳೂ ಕೂಡ ಪಾಲಿಸಿಗೆ ಸೇರಿಕೊಳ್ಳಬಹುದು ಮತ್ತು ಪಾಲಿಸಿಯ ಕ್ಲೇಮ್ ಗಳನ್ನೂ ಫಲಾನುಭವಿಗಳಿಗೆ ಭಾರತೀಯ ಕರೆನ್ಸಿಯಲ್ಲಿ ಕೊಡಲಾಗುವುದು. ಉಳಿತಾಯ ಖಾತೆಯನ್ನು ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ.

ಪಾಲಿಸಿಯ ಕ್ಲೇಮ್ ಹೇಗೆ?

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯು ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಗಳಿಗೆ ಸರಿಯಾದ ದಾಖಲೆಗಳಿಂದ ದೃಢಪಡಿಸಿಕೊಂಡು ರಕ್ಷಣೆಯನ್ನು ಒದಗಿಸುತ್ತದೆ. ವಿಮಾದಾರನ ಆಕಸ್ಮಿಕ ಮರಣದ ಸಂದರ್ಭದಲ್ಲಿ, ಅಪಘಾತವನ್ನು ಪೊಲೀಸ್ ಠಾಣೆಗೆ ವರದಿ ಮಾಡಬೇಕು ಮತ್ತು ತಕ್ಷಣ ಆಸ್ಪತ್ರೆಯ ದಾಖಲೆಗಳ ಮೂಲಕ ಸ್ಪಷ್ಟ ಪಡಿಸಬೇಕು. ವಿಮೆದಾರರಿಂದ ಪಾಲಿಸಿಯ ದಾಖಲಾತಿ ಫಾರ್ಮ್ ನಲ್ಲಿ ನಮೂದಿಸಲಾದ ಫಲಾನುಭವಿಗಳು ಕ್ಲೇಮ್ ಪಡೆಯಬಹುದು. ಅಂಗವೈಕಲ್ಯ ಕ್ಲೇಮ್ ಸಂದರ್ಭದಲ್ಲಿ, ಪಾಲಿಸಿದಾರನ ಬ್ಯಾಂಕ್ ಖಾತೆಗೆ ಪಾಲಿಸಿಯಲ್ಲಿ ಹೇಳಲಾದ ಮೊತ್ತವನ್ನು ಜಮೆ ಮಾಡಲಾಗುವುದು ಮತ್ತು ಮರಣದ ವೇಳೆ ಪಾಲಿಸಿಯ ಫಲಾನುಭವಿಗೆ ಮರಣದ ಕ್ಲೇಮ್ ಅನ್ನು ನೀಡಲಾಗುವುದು.

ಕೊನೆ ಮಾತು

ಈ ಯೋಜನೆಯಲ್ಲಿ ಸಿಗುತ್ತಿರುವ ಎಲ್ಲಾ ಲಾಭಗಳು, ವೈಶಿಷ್ಟ್ಯಗಳು ಮತ್ತು ಅದರ ಕನಿಷ್ಟ ಪ್ರೀಮಿಯಂ ದರಗಳಿಂದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯು ಅತ್ಯುತ್ತಮ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಒಂದಾಗಿದೆ. ಕಡಿಮೆ ಆದಾಯ ಹೊಂದಿರುವ ಪ್ರತಿಯೊಬ್ಬರಿಗೂ ಉಳಿತಾಯಕ್ಕೇನೂ ತೊಂದರೆ ಕೊಡದೆ ಜೀವ ರಕ್ಷಣೆ ನೀಡುತ್ತದೆ.

English summary

Pradhan Mantri Suraksha Bima Yojana: Features, Benefits and Eligibility

Pradhan Mantri Suraksha Bima Yojana has been announced by the government of India as one of the three social security schemes. PMSBY is an accidental insurance scheme that provides accidental death and disability coverage for one year, with an annual renewal.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns