ಷೇರು ಮಾರುಕಟ್ಟೆ ಬಗ್ಗೆ ಮಾತು ಬಂದಾಗ ವಾರೆನ್ ಬಫೆಟ್ ಹೆಸರು ಹೇಗೆ ನೆನಪಿಗೆ ಬರುತ್ತದೋ ಹಾಗೆ ಭಾರತದಲ್ಲಿ ಕೇಳಿಬರುವ ಹೆಸರು ರಾಕೇಶ್ ಝುಂಝುನ್ ವಾಲಾ ಅವರದು. ಐದು ಸಾವಿರ ರುಪಾಯಿ ಬಂಡವಾಳದೊಂದಿಗೆ ಷೇರು ಮಾರುಕಟ್ಟೆ ಪ್ರವೇಶಿಸಿದ ರಾಕೇಶ್, ಸೆಪ್ಟೆಂಬರ್ 30, 2018ಕ್ಕೆ ಬಂಡವಾಳವನ್ನು 11,000 ಕೋಟಿಗೆ ಬೆಳೆಸಿದ್ದರು.
ರಾಕೇಶ್ ಮುಂಬೈ ಮೂಲದ ಚಾರ್ಟೆಡ್ ಅಕೌಂಟೆಂಟ್. ಜುಲೈ 5, 1960ರಲ್ಲಿ ಜನಿಸಿದ ಝುಂಝುನ್ ವಾಲಾ, ಅಸಾಮಾನ್ಯ ಬುದ್ಧಿವಂತಿಕೆ ಇದ್ದ ಸಾಮಾನ್ಯ ವ್ಯಕ್ತಿ ಎಂಬುದಕ್ಕೆ ಅತ್ಯುತ್ತಮ ನಿದರ್ಶನ. ಆದಾಯ ತೆರಿಗೆ ಅಧಿಕಾರಿ ಆಗಿದ್ದ ತಂದೆಯ ಮೂಲಕ ಅವರಲ್ಲಿ ಆರಂಭದಲ್ಲಿ ಷೇರು ಮಾರುಕಟ್ಟೆ ಬಗ್ಗೆ ಆಸಕ್ತಿ ಮೂಡಿತು.
ಸ್ನೇಹಿತರ ಜತೆಗೆ ತಮ್ಮ ತಂದೆ ಷೇರುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಾ ಬೆಳೆದವರು ಝುಂಝುನ್ ವಾಲಾ. ತಮ್ಮ ತಂದೆಯ ಬಳಿ, ಏಕೆ ಹೀಗೆ ಷೇರಿನ ಬೆಲೆಯಲ್ಲಿ ಏರಿಳಿತ ಆಗುತ್ತದೆ ಎಂದು ಕೇಳುತ್ತಿದ್ದರು. "ಪತ್ರಿಕೆಗಳನ್ನು ಓದು ನಿನಗೆ ಗೊತ್ತಾಗುತ್ತದೆ" ಎಂಬ ಉತ್ತರ ಸಿಕ್ಕಿತು. ಸುದ್ದಿಯ ಮೂಲಕ ಷೇರುಗಳ ಬೆಲೆಯಲ್ಲಿ ಏರಿಳಿತವಾಗುತ್ತದೆ ಎಂದುಕೊಂಡರು ರಾಕೇಶ್.
"ಷೇರು ಮಾರುಕಟ್ಟೆ ಬಗ್ಗೆ ನನ್ನ ಜೀವನದ ಮೊದಲ ಹಾಗೂ ಅತ್ಯಮೂಲ್ಯ ಪಾಠವನ್ನು ತಂದೆಯಿಂದ ಹಾಗೆ ಕಲಿತೆ" ಎಂದು ಸ್ವತಃ ಝುಂಝುನ್ ವಾಲಾ ಹೇಳಿಕೊಂಡಿದ್ದಾರೆ. ಆದರೆ ಷೇರು ಮಾರುಕಟ್ಟೆ ಪ್ರಯಾಣ ಏನೂ ಸಲೀಸಿರಲಿಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಬಂದು ಫೋರ್ಬ್ಸ್ ನ ಶತಕೋಟ್ಯಧಿಪತಿ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿನ ತನಕದ ಆ ಪಯಣ ಆಸಕ್ತಿಕರವಾದದ್ದು.
ಎಲ್ಲವೂ ಆರಂಭವಾಗಿದ್ದು ಹೇಗೆ?
ಯಾವಾಗ ಷೇರು ಮಾರುಕಟ್ಟೆ ಕಡೆಗೆ ಸೆಳೆತ ಶುರುವಾಯಿತೋ, ಆಗ ರಾಕೇಶ್ ಅದನ್ನೇ ವೃತ್ತಿಯಾಗಿ ಸ್ವೀಕರಿಸಲು ನಿರ್ಧರಿಸುತ್ತಾರೆ. ಈ ಬಗ್ಗೆ ತಮ್ಮ ತಂದೆ ಹತ್ತಿರ ಕೇಳಿದಾಗ, ಮೊದಲಿಗೆ ಪದವಿ ಶಿಕ್ಷಣ ಪೂರೈಸುವಂತೆ ತಿಳಿಸುತ್ತಾರೆ. 1985ರಲ್ಲಿ ಚಾರ್ಟೆಡ್ ಅಕೌಂಟೆಂಟ್ ಶಿಕ್ಷಣ ಪೂರೈಸುತ್ತಾರೆ. ಆ ನಂತರ ಮತ್ತೊಮ್ಮೆ ತಮ್ಮ ತಂದೆ ಜತೆ ವೃತ್ತಿ ಬದುಕಿನ ಬಗ್ಗೆ ಮಾತನಾಡುತ್ತಾರೆ. ಅದಕ್ಕೆ ಒಪ್ಪಿಗೆ ಸಿಗುತ್ತದೆ. ಆದರೆ ಕೆಲವು ಷರತ್ತು ಹಾಕುತ್ತಾರೆ. ತಮ್ಮಿಂದ ಯಾವುದೇ ಆರ್ಥಿಕ ನೆರವು ಸಿಗಲ್ಲ. ಸ್ನೇಹಿತರ ಬಳಿ ಸಾಲ ಮಾಡಬಾರದು. ತಾನೇ ಸಂಪಾದನೆ ಮಾಡಿ, ಅದನ್ನು ಹೂಡಿಕೆ ಮಾಡಬೇಕು ಎನ್ನುತ್ತಾರೆ. 1985ರಲ್ಲಿ ಐದು ಸಾವಿರ ರುಪಾಯಿ ಬಂಡವಾಳದೊಂದಿಗೆ ಷೇರು ಮಾರುಕಟ್ಟೆ ಪ್ರವೇಶಿಸುತ್ತಾರೆ ಝುಂಝುನ್ ವಾಲಾ. ಅವತ್ತಿಗೆ ಸೆನ್ಸೆಕ್ಸ್ ಸೂಚ್ಯಂಕವು 150 ಪಾಯಿಂಟ್ ಇತ್ತು. ಇಲ್ಲಿ ಬಹಳ ಯಶಸ್ವಿ ಹೂಡಿಕೆದಾರ ಅನ್ನಿಸಿಕೊಳ್ಳಬೇಕು ಅಂದರೆ ಬಹಳ ಹಣ ಬೇಕು ಎಂಬುದು ಬೇಗ ಗೊತ್ತಾಯಿತು. ತನ್ನ ಸೋದರನ ಕ್ಲೈಂಟ್ ವೊಬ್ಬರ ಬಳಿ ಬಂಡವಾಳಕ್ಕೆ ಹಣವನ್ನು ಸಾಲವಾಗಿ ಪಡೆದು, ಅದಕ್ಕೆ ಪ್ರತಿಯಾಗಿ ಬ್ಯಾಂಕ್ ನ ಫಿಕ್ಸೆಡ್ ಡೆಪಾಸಿಟ್ ಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವುದಾಗಿ ಮಾತನ್ನು ನೀಡುತ್ತಾರೆ ರಾಕೇಶ್.
ಟೈಟನ್ ಕಂಪೆನಿಯ ಷೇರನ್ನು ಸರಾಸರಿ 3 ರುಪಾಯಿಗೆ ಖರೀದಿ
ಆರಂಭದಿಂದಲೇ ರಾಕೇಶ್ ಝುಂಝುನ್ ವಾಲಾ ಅವರ ಅಪಾಯ ಮೈಮೇಲೆ ಎಳೆದುಕೊಳ್ಳುವ ಸಾಮರ್ಥ್ಯ, ಇಮ್ಯಾಜಿನೇಷನ್ ಹಾಗೂ ಬುದ್ಧಿವಂತಿಕೆ ದೊಡ್ಡ ಮಟ್ಟದ ಲಾಭ ತರಲು ಆರಂಭಿಸಿತು. ಅವರ ಮೊದಲ ದೊಡ್ಡ ಪ್ರಮಾಣದ ಲಾಭ 5 ಲಕ್ಷ ರುಪಾಯಿ ಗಳಿಸಿದ್ದು 1986ರಲ್ಲಿ. ಟಾಟಾ ಟೀ ಕಂಪೆನಿಯ 5000 ಷೇರುಗಳನ್ನು ತಲಾ 43 ರುಪಾಯಿಯಂತೆ ಖರೀದಿಸುತ್ತಾರೆ. ಮೂರೇ ತಿಂಗಳ ಅವಧಿಯಲ್ಲಿ ಮೂರು ಪಟ್ಟು ಹೆಚ್ಚು ಲಾಭ ಮಾಡಿಕೊಡುವ ಆ ಷೇರು 143 ರುಪಾಯಿಗೆ ಏರಿಕೆಯಾಗುತ್ತದೆ. ಮುಂದಿನ ಕೆಲವೇ ವರ್ಷಗಳಲ್ಲಿ ಹಲವು ಷೇರುಗಳಲ್ಲಿ ಇದೇ ರೀತಿಯ ಲಾಭ ಗಳಿಸುತ್ತಾರೆ. 1986- 1989ರ ಮಧ್ಯೆ ರಾಕೇಶ್ 20ರಿಂದ 25 ಲಕ್ಷ ಗಳಿಸುತ್ತಾರೆ. ಅವರ ಮುಖ್ಯ ಹೂಡಿಕೆಯಲ್ಲಿ ಸೆಸಾ ಗೋವಾ ಷೇರು ಕೂಡ ಒಂದು. ತಲಾ 28 ರುಪಾಯಿಯಂತೆ ಮೊದಲಿಗೆ ಆ ಷೇರಿನಲ್ಲಿ ಹೂಡಿಕೆ ಮಾಡುತ್ತಾರೆ. 35 ರುಪಾಯಿ ಇದ್ದಾಗ ಮತ್ತಷ್ಟು ಹೂಡಿಕೆ ಮಾಡುತ್ತಾರೆ. ಆ ಷೇರು 65 ರುಪಾಯಿಗೆ ಏರಿಕೆಯಾಗುತ್ತದೆ. 2002- 03ರಲ್ಲಿ ಟೈಟನ್ ಕಂಪೆನಿಯ ಷೇರನ್ನು ಸರಾಸರಿ 3 ರುಪಾಯಿ ದರದಲ್ಲಿ ಖರೀದಿ ಮಾಡುತ್ತಾರೆ. ಅದು ಈಗಲೂ ಲಾಭ ಮಾಡಿಕೊಡುತ್ತಲೇ ಇದೆ.
ಅನುಭವ, ಬದುಕಿನ ಪಾಠಗಳಿಂದ ಸರಿಪಡಿಸಲಾಗದ ಸಮಸ್ಯೆ ಇಲ್ಲ
ರಾಕೇಶ್ ಝುಂಝುನ್ ವಾಲಾ ಹಲವಾರು ಯಶಸ್ವಿ ಹೂಡಿಕೆಗಳನ್ನು ಕಂಡಿದ್ದಾರೆ. ಕ್ರಿಸಿಲ್, ಪ್ರಜ್ ಇಂಡಸ್ಟ್ರೀಸ್, ಅರೊಬಿಂದೋ ಫಾರ್ಮಾ, ಎನ್ ಸಿಸಿ ಹೀಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. 2008ರ ಜಾಗತಿಕ ಆರ್ಥಿಕ ಕುಸಿತದ ನಂತರ ಹಲವು ವೈಫಲ್ಯಗಳನ್ನು ಸಹ ಅವರು ಕಂಡಿದ್ದಾರೆ. ಆ ನಂತರದ ವರ್ಷಗಳಲ್ಲಿ ಅವರು ಖರೀದಿಸಿದ್ದ ಷೇರುಗಳ ಬೆಲೆಯಲ್ಲಿ 30 ಪರ್ಸೆಂಟ್ ಕುಸಿತವಾಯಿತು. ಆದರೆ 2012ರಲ್ಲಿ ಮತ್ತೆ ಪುಟಿದೆದ್ದ ಅವರು, ಎಲ್ಲ ನಷ್ಟವನ್ನು ತುಂಬಿಕೊಂಡರು. ಅನುಭವ ಹಾಗೂ ಬದುಕಿನ ಪಾಠಗಳಿಂದ ಸರಿಪಡಿಸಲಾಗದ ಸಮಸ್ಯೆಗಳು ಯಾವುದೂ ಇಲ್ಲ ಎಂಬುದು ಝುಂಝುನ್ ವಾಲಾ ಅವರಿಂದ ಕಲಿತುಕೊಳ್ಳಬಹುದಾದ ಪಾಠ. ಸದ್ಯಕ್ಕೆ ಖಾಸಗಿಯಾದ ಸ್ಟಾಕ್ ಟ್ರೇಡಿಂಗ್ ಸಂಸ್ಥೆ 'RARE' ಎಂಟರ್ ಪ್ರೈಸಸ್ (ರಾಕೇಶ್ ಹಾಗೂ ಅವರ ಪತ್ನಿ ರೇಖಾ ಹೆಸರಿನ ಇಂಗ್ಲಿಷ್ ಮೊದಲೆರಡು ಅಕ್ಷರ) ನಡೆಸುತ್ತಿದ್ದಾರೆ.
ತಪ್ಪುಗಳಿಂದ ಪಾಠ ಕಲಿಯಬೇಕು
ಯಾರೇ ಆಗಲಿ ತಪ್ಪು ಮಾಡಬೇಕು ಮತ್ತು ಅದರಿಂದ ಪಾಠ ಕಲಿಯಬೇಕು ಎಂಬುದು ರಾಕೇಶ್ ಝುಂಝುನ್ ವಾಲಾ ಹೇಳುವ ಯಶಸ್ವಿ ಹೂಡಿಕೆದಾರನ ಪಾಠ. ಮಾರ್ಕೆಟ್ ಸರ್ವೋಚ್ಚವಾದದ್ದು ಎಂಬುದನ್ನು ನಂಬದಿದ್ದಲ್ಲಿ ಅದು ನಿಮ್ಮ ತಪ್ಪು ಎಂಬುದನ್ನು ಒಪ್ಪುವುದಿಲ್ಲ. ಅದು ನಿಮ್ಮ ತಪ್ಪು ಎಂಬುದನ್ನು ಒಪ್ಪದಿದ್ದಲ್ಲಿ ಕಲಿಯುವುದಕ್ಕೆ ಆಗಲ್ಲ. ಷೇರು ಮಾರುಕಟ್ಟೆಯಲ್ಲಿ ಯಶಸ್ಸು ಪಡೆಯಬೇಕೆಂದರೆ, ತಪ್ಪುಗಳಿಂದ ಪಾಠ ಕಲಿಯುವುದಷ್ಟೇ ಅಲ್ಲ- ಆ ತಪ್ಪಿಗೆ ತಾನೇ ನಿಂದಿಸಿಕೊಳ್ಳಬೇಕು ಎನ್ನುತ್ತಾರೆ. "ನಾನು ಕಂಪೆನಿಯ ಪ್ರಮೋಟರ್ಸ್ ನ ಬಯ್ದುಕೊಳ್ಳುವುದಿಲ್ಲ. ನನ್ನನ್ನು ನಾನೇ ಬಯ್ದುಕೊಳ್ತೀನಿ. ಪ್ರಮೋಟರ್ ಅವರೇ ಆಗಿರುತ್ತಾರೆ. ಆದರೆ ನಾನು ನಿರೀಕ್ಷೆ ಮಾಡಿದಂತೆ ಆತ ಅಲ್ಲ ಎಂಬುದನ್ನು ಗುರುತಿಸಬೇಕಾದದ್ದು ನನ್ನ ಜವಾಬ್ದಾರಿ" ಎನ್ನುತ್ತಾರೆ ಝುಂಝುನ್ ವಾಲಾ. ಯಶಸ್ಸಿಗೆ ಯಾವುದೇ ಸುಲಭ ಮಾರ್ಗ ಇಲ್ಲ ಎನ್ನುವ ಅವರು, ಈಗಾಗಲೇ ಮಾರುಕಟ್ಟೆಯಲ್ಲಿ ಸಿಗುವ ಜ್ಞಾನದ ಮೇಲೆ ಅವಲಂಬಿಸಿದರೆ ಯಶಸ್ವಿ ಹೂಡಿಕೆದಾರ ಎನಿಸಿಕೊಳ್ಳಬಹುದು ಎಂದು ಹೇಳುತ್ತಾರೆ. ಅಂದ ಹಾಗೆ ತಮ್ಮ ದಾನ ಕಾರ್ಯಗಳಿಂದಲೂ ಖ್ಯಾತರಾಗಿದ್ದಾರೆ. ಏನನ್ನೂ ನಿರೀಕ್ಷಿಸದೆ ಇಂಥ ಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸುತ್ತಾರೆ.
More From GoodReturns

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಕೊನೆಯ ದಿನದ ಅನಿರೀಕ್ಷಿತ ತಿರುವು!

ಷೇರು ಮಾರುಕಟ್ಟೆ ಹೂಡಿಕೆದಾರರೇ, ಈ ವಾರ ಎಚ್ಚರ ತಪ್ಪಿದರೆ ನಷ್ಟ!

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಷೇರು ಮಾರುಕಟ್ಟೆ ಇಂದು: ಟಿಸಿಎಸ್ ಫಲಿತಾಂಶದ ಅನಿರೀಕ್ಷಿತ ತಿರುವು!



Click it and Unblock the Notifications