ಬೆಂಗಳೂರು, ಜೂನ್ 1: ದೇಶದ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಪ್ರಸಕ್ತ ಮಾರ್ಚ್ ಅಂತ್ಯದವರೆಗೆ ವಾರಸುದಾರರು ಇಲ್ಲದ ಠೇವಣಿ ಶೇಕಡ 26ರಷ್ಟು ಜಿಗಿತ ಕಂಡಿದ್ದು, ಇದು 78,213 ಕೋಟಿ ರೂ. ಗೆ ತಲುಪಿದೆ ಎಂದು ಆರ್‌ಬಿಐ ಗುರುವಾರ ಬಿಡುಗಡೆ ಮಾಡಿದ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಹೀಗಾಗಿ ಸುಮಾರು 78 ಸಾವಿರ ಕೋಟಿ ಹಣಕ್ಕೆ ವಾರಸುದಾರರೇ ಇಲ್ಲದಂತಾಗಿದೆ.!
ಮಾರ್ಚ್ 2023 ರ ಅಂತ್ಯಕ್ಕೆ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ(DEA)ಯಲ್ಲಿನ ಮೊತ್ತವು ₹ 62,225 ಕೋಟಿಗಳಷ್ಟಿತ್ತು ಎಂದು ವರದಿ ತಿಳಿಸಿದೆ. ಸಹಕಾರಿ ಬ್ಯಾಂಕ್‌ಗಳು ಸೇರಿದಂತೆ ಎಲ್ಲಾ ಬ್ಯಾಂಕ್‌ಗಳಲ್ಲಿ, 10 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳವರೆಗೆ ಖಾತೆಗಳಲ್ಲಿರುವ ಹಣಕ್ಕಾಗಿ ಯಾರೂ ಹಕ್ಕು ಮಂಡಿಸದೇ ಇರುವ ಠೇವಣಿಗಳನ್ನು RBI ಯ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (DEA) ನಿಧಿಗೆ ವರ್ಗಾಯಿಸುತ್ತವೆ.

ಖಾತೆದಾರರಿಗೆ ಸಹಾಯ ಮಾಡುವ ದೃಷ್ಟಿಯಿಂದ, ವಾರಸುದಾರರ ಠೇವಣಿಗಳ ಪ್ರಮಾಣ ತಗ್ಗಿಸಲು, ಅರ್ಹ ಹಕ್ಕುದಾರರಿಗೆ ಠೇವಣಿ ಮರಳಿಸುವ ಮತ್ತು ನಿಷ್ಕ್ರಿಯ ಖಾತೆಗಳ ಅಸ್ತಿತ್ವದಲ್ಲಿರುವ ಸೂಚನೆಗಳನ್ನು ಕ್ರೋಢೀಕರಿಸುವ ಮತ್ತು ತರ್ಕಬದ್ಧಗೊಳಿಸುವ ದೃಷ್ಟಿಯಿಂದ, ರಿಸರ್ವ್ ಬ್ಯಾಂಕ್ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಈ ವರ್ಷದ ಆರಂಭದಲ್ಲಿ ಖಾತೆಗಳನ್ನು ವರ್ಗೀಕರಿಸುವ ವಿವಿಧ ಅಂಶಗಳನ್ನು ಒಳಗೊಂಡಿರುವ ಬ್ಯಾಂಕ್‌ಗಳು ಜಾರಿಗೆ ತರಬೇಕಾದ ಕ್ರಮಗಳ ಕುರಿತು ಸಮಗ್ರ ಮಾರ್ಗಸೂಚಿಗಳನ್ನು ನೀಡಿತ್ತು. ಇದು ವಾಣಿಜ್ಯ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಕ್ , ಸಹಕಾರಿ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂ ಕ್ ಗಳಿಗೆ ಅನ್ವಯವಾಗಲಿದೆ. ಈ ಮಾರ್ಗ ಸೂಚಿ ಪ್ರಕಾರ ಸಂದರ್ಭಾನುಸಾರ ನಿಷ್ಕ್ರಿಯ ಖಾತೆಗಳು, ಕ್ಲೈಮ್ ಮಾಡದ ನಿಶ್ಚಿತ ಠೇವಣಿಗಳು ಪ್ರತ್ಯೇಕವಾಗಿ ವರ್ಗೀಕರಿಸಬೇಕು.
ಇಂತಹ ಖಾತೆಗಳನ್ನು ಆಗ್ಗಾಗ್ಗೆ ಪರಿಶೀಲನೆ ನಡೆಸಬೇಕು. ಅಂತಹ ಖಾತೆಗಳಲ್ಲಿ ಆಗಬಹುದಾದ ವಂಚನೆಯನ್ನು ತಡೆಗಟ್ಟುವ ಸಮುವಾಗಿ ಮುನ್ನೆಚ್ಚರಿಕಾ ಕ್ರಮಗಳು ಕೈಗೊಳ್ಳಬೇಕು, ಕ್ಲೈಮ್ ಮಾಡದ ಠೇವಣಿಗಳ ಗ್ರಾಹಕರನ್ನು, ಅವುಗಳ ಕಾನೂನು ಉತ್ತರಾಧಿಕಾರಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕು. ಠೇವಣಿ ಬಗ್ಗೆ ಹಕ್ಕು ದಾರರು ಸಲ್ಲಿಸುವ ದೂರುಗಳ ತ್ವರಿತ ಇತ್ಯರ್ಥಕ್ಕೆ ಪರಿಹಾರಕ್ಕಾಗಿ ಕಾರ್ಯವಿಧಾನ ಅಳವಡಿಸಿಕೊಳ್ಳಬೇಕು ಎಂದು ಆರ್‌ಬಿಐ ತಿಳಿಸಿದೆ.
ಆರ್‌ಬಿಐ ಈ ನಿರ್ದೇಶನವೂ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ಲೈಮ್ ಮಾಡದ ಠೇವಣಿಗಳ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಅಂತಹ ಠೇವಣಿಗಳನ್ನು ತಮ್ಮ ನಿಜವಾದ ಮಾಲೀಕರು ಅಥವಾ ಹಕ್ಕುದಾರರಿಗೆ ಹಿಂದಿರುಗಿಸಲು ಬ್ಯಾಂಕುಗಳು ಮತ್ತು ರಿಸರ್ವ್ ಬ್ಯಾಂಕ್ ಕೈಗೊಂಡಿರುವ ನಿರಂತರ ಪ್ರಯತ್ನ ಮತ್ತು ಪೂರಕ ಕ್ರಮವಾಗಿದೆ.
ಪರಿಷ್ಕೃತ ಸೂಚನೆಗಳು ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳಿಗೆ (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಸೇರಿದಂತೆ) ಮತ್ತು ಎಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಅನ್ವಯಿಸುತ್ತವೆ ಮತ್ತು ಏಪ್ರಿಲ್ 1, 2024 ರಿಂದ ಜಾರಿಗೆ ಬಂದಿವೆ.
ಬ್ಯಾಂಕ್ ಗಳಲ್ಲಿ ಹಲವು ವರ್ಷಗಳಿಂದ ಉಳಿದುಕೊಂಡಿರುವ ಠೇವಣಿಗಳನ್ನು ಹುಡುಕಿ, ಹಿಂದಕ್ಕೆ ಪಡೆದುಕೊಳ್ಳಲು ಸುಲಭವಾಗುವಂತೆ, ಒಂದೇ ಸ್ಥಳದಲ್ಲಿ ಹುಡುಕಲು ಅನುಕೂಲವಾಗುವಂತೆ, ರಿಸರ್ವ್ ಬ್ಯಾಂಕ್ ಕೇಂದ್ರೀಕೃತ ವೆಬ್ ಪೋರ್ಟಲ್, UDGAM (ಅನ್‌ಕ್ಲೈಮ್ಡ್ ಡೆಪಾಸಿಟ್ಸ್ ಗೇಟ್‌ವೇ ಟು ಆಕ್ಸೆಸ್ ಮಾಹಿತಿ) ಅನ್ನು ಅಭಿವೃದ್ಧಿಪಡಿಸಿದೆ.


Click it and Unblock the Notifications