ಕೇಂದ್ರ ಸರ್ಕಾರವು ಮತ್ತೊಮ್ಮೆ ಡಿಎ ಪರಿಷ್ಕರಣೆ ಮಾಡುವ ಸಮಯ ಬಂದಿದೆ. ಕೇಂದ್ರ ಸರ್ಕಾರವು ತನ್ನ ಒಂದು ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ಶೀಘ್ರವೇ ಶೇಕಡ 3ರಷ್ಟು ತುಟ್ಟಿಭತ್ಯೆ (ಡಿಎ) ಏರಿಕೆ ಮಾಡುವ ಸಾಧ್ಯತೆಯಿದೆ. ಹೀಗೆ ಏರಿಕೆ ಮಾಡಿದರೆ ತುಟ್ಟಿಭತ್ಯೆಯು ಶೇಕಡ 42 ರಿಂದ ಶೇಕಡ 45 ಕ್ಕೆ ಹೆಚ್ಚಳವಾಗಲಿದೆ.
ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ-ಐಡಬ್ಲ್ಯೂ) ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಲೇಬರ್ ಬ್ಯೂರೋ ಕಾರ್ಮಿಕ ಸಚಿವಾಲಯದ ಒಂದು ವಿಭಾಗವಾಗಿದೆ.

ಈ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅಖಿಲ ಭಾರತ ರೈಲ್ವೇ ನೌಕರರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ, "ಜೂನ್ 2023 ರ ಸಿಪಿಐ-ಐಡಬ್ಲ್ಯೂ ಜುಲೈ 31, 2023 ರಂದು ಬಿಡುಗಡೆಯಾಗಿದೆ. ಇದರ ಆಧಾರದಲ್ಲಿ ನಾವು ತುಟ್ಟಿಭತ್ಯೆಯಲ್ಲಿ ಶೇಕಡ ನಾಲ್ಕರಷ್ಟು ಏರಿಕೆಗೆ ಒತ್ತಾಯ ಮಾಡುತ್ತೇವೆ," ಎಂದು ತಿಳಿಸಿದರು.
ಆದರೆ ಈ ವರದಿಯ ಪ್ರಕಾರ ಶೇಕಡ 3 ಕ್ಕಿಂತ ಕೊಂಚ ಅಧಿಕ ತುಟ್ಟಿಭತ್ಯೆ ಹೆಚ್ಚಳ ಮಾಡಲು ಅವಕಾಶವಿದೆ. ಆದರೆ ಸರ್ಕಾರವು ಎಂದಿಗೂ ಕೂಡಾ ಈ ಹೆಚ್ಚಳಕ್ಕೆ ಅವಕಾಶ ಇರುವುದಕ್ಕಿಂತ ಕಡಿಮೆ ಡಿಎ ಏರಿಕೆ ಮಾಡುತ್ತದೆಯೇ ಹೊರತು ಅದಕ್ಕಿಂತ ಅಧಿಕ ಡಿಎ ಏರಿಕೆಯನ್ನು ಮಾಡುವುವುದಿಲ್ಲ. ಈ ಅಂದಾಜಿನಲ್ಲಿ ನೋಡಿದಾಗ ಕೇಂದ್ರ ಸರ್ಕಾರವು ಶೇಕಡ 3ರಷ್ಟು ಡಿಎ ಏರಿಕೆ ಮಾಡುವ ಸಾಧ್ಯತೆಯಿದ್ದು, ಇದರಿಂದಾಗಿ ಡಿಎ ಶೇಕಡ 45ಕ್ಕೆ ತಲುಪಲಿದೆ.
ಹಣಕಾಸು ಸಚಿವಾಲಯದ ವೆಚ್ಚ ವಿಭಾಗವು ಅದರ ಆದಾಯದ ಮೇಲೆ ಎಷ್ಟು ಪರಿಣಾಮ ಉಂಟಾಗಲಿದೆ ಎಂಬ ಲೆಕ್ಕಾಚಾರದೊಂದಿಗೆ ಡಿಎ ಹೆಚ್ಚಳದ ಪ್ರಸ್ತಾವನೆಯನ್ನು ರೂಪಿಸಿಕೊಳ್ಳುತ್ತದೆ. ಆ ಬಳಿಕ ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟದ ಮುಂದೆ ಪ್ರಸ್ತಾವನೆಯನ್ನು ಇರಿಸುತ್ತದೆ ಎಂದು ಕೂಡಾ ಶಿವ ಗೋಪಾಲ್ ಮಿಶ್ರಾ ವಿವರಿಸಿದರು.
ಜುಲೈ 1ರಿಂದ ಜಾರಿಗೆ ಬರುವಂತೆ ಡಿಎ ಏರಿಕೆ
ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ (ಡಿಆರ್) ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಮಾಡಲಾಗುತ್ತದೆ. ಈ ಏರಿಕೆಯು ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ಬರುತ್ತದೆ. ಕಳೆದ ಬಾರಿಗೆ ಡಿಎಯನ್ನು ಮಾರ್ಚ್‌ನಲ್ಲಿ ಶೇಕಡ 4ರಷ್ಟು ಏರಿಕೆ ಮಾಡಲಾಗಿದೆ. ಇದು ಜನವರಿ 1, 2023 ರಿಂದ ಜಾರಿಗೆ ಬಂದಿದೆ. ಶೇಕಡ 4ರಷ್ಟು ಡಿಎ ಏರಿಕೆ ಬಳಿಕ ಡಿಎ 42ಕ್ಕೆ ಏರಿದೆ.
ಈಗ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಕೇಂದ್ರ ಸರ್ಕಾರ ಮತ್ತೆ ಡಿಎ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಈ ನೂತನ ಡಿಎ ಏರಿಕೆಯು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಪ್ರಸ್ತುತ, ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇಕಡ 42 ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.
ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಡಿಎ ಏರಿಕೆ
ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಡಿಎ ಏರಿಕೆ ಮಾಡುವಂತೆ ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಡಿಎ ಏರಿಕೆಯನ್ನು ಮಾಡುತ್ತದೆ. ಈ ಹಿಂದೆ ಕರ್ನಾಟಕ ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ಡಿಎ ಏರಿಕೆ ಮಾಡಿದೆ. ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಶೇಕಡ 4ರಷ್ಟು ತುಟ್ಟಿಭತ್ಯೆ ಅಥವಾ ಡಿಎ ಏರಿಕೆ ಮಾಡಿದೆ. ಪಿಂಚಣಿದಾರರಿಗೂ ಕೂಡಾ ಡಿಎ ದರ ಹೆಚ್ಚಳ ಮಾಡಲಾಗಿದೆ.
ಕರ್ನಾಟಕ ಸರ್ಕಾರವು ಶೇಕಡ 4ರಷ್ಟು ಡಿಎ ಏರಿಕೆ ಮಾಡಿದ ಬಳಿಕ ಪ್ರಸ್ತುತ ರಾಜ್ಯದಲ್ಲಿ ಡಿಎ ಪ್ರಮಾಣವು ಶೇಕಡ 31ರಿಂದ ಶೇಕಡ 35ಕ್ಕೆ ತಲುಪಿದೆ. ಜನವರಿ 1, 2023ರಿಂದ ಈ ನೂತನ, ಪರಿಷ್ಕೃತ ಡಿಎ ದರವು ಜಾರಿಗೆ ಬರಲಿದೆ ಎಂದು ಸರ್ಕಾರವು ತಿಳಿಸಿದೆ.
ಅದಕ್ಕೂ ಮುನ್ನ ಹಿಮಾಚಲ ಪ್ರದೇಶ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ ತುಟ್ಟಿಭತ್ಯೆ ಏರಿಕೆ ಘೋಷಣೆ ಮಾಡಿದೆ. ಅದರಲ್ಲೂ ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ ಮೊದಲಾದ ರಾಜ್ಯಗಳು ಒಂದು ತಿಂಗಳ ಹಿಂದೆಯೇ ತುಟ್ಟಿಭತ್ಯೆ ಏರಿಕೆ ಘೋಷಣೆ ಮಾಡಿದೆ.


Click it and Unblock the Notifications