ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಭಾರೀ ಪ್ರಮಾಣದಲ್ಲಿ ಆಗಿದೆ. ಈ ನಡುವೆ ಕೇಂದ್ರ ಸರ್ಕಾರಿ ನೌಕರರಿಗೆ ಈ ಬಾರಿ ತುಟ್ಟಿಭತ್ಯೆಯಲ್ಲಿ ಶೇಕಡ 3ರಷ್ಟು ಏರಿಕೆ ಮಾಡುವ ನಿರೀಕ್ಷೆಯಿದೆ. ತುಟ್ಟಿಭತ್ಯೆ ಏರಿಕೆಯನ್ನು ಮಂಜೂರು ಮಾಡಿದರೆ, ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಇದರ ಪ್ರಯೋಜನ ಲಭ್ಯವಾಗಲಿದೆ. ಡಿಎ ಶೇಕಡ 45ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.
ಬೆಲೆ ಏರಿಕೆಯನ್ನು ಸರಿದೂಗಿಸಲು ಸರ್ಕಾರಿ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಸಹಕಾರಿಯಾಗುವಂತೆ ಡಿಎ ಒದಗಿಸಲಾಗುತ್ತಿದೆ. ಕಾರ್ಮಿಕ ಬ್ಯೂರೋ (Labour Bureau) ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ-ಡಬ್ಲ್ಯೂ) ಆಧಾರದ ಮೇಲೆ ತುಟ್ಟಿ ಭತ್ಯೆಯನ್ನು ನಿರ್ಧಾರ ಮಾಡಲಾಗುತ್ತದೆ. ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಕಾರ್ಮಿಕ ಬ್ಯೂರೋ ಇದನ್ನು ನಿರ್ವಹಣೆ ಮಾಡುತ್ತದೆ.

ಇದಕ್ಕೂ ಮುನ್ನ ಪಿಟಿಐ ಜೊತೆ ಮಾತನಾಡಿದ ಆಲ್ ಇಂಡಿಯಾ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ, "ಜೂನ್ 2023 ರ ಸಿಪಿಐ- ಡಬ್ಲ್ಯೂ ಅನ್ನು ಜುಲೈ 31, 2023 ರಂದು ಬಿಡುಗಡೆ ಮಾಡಲಾಗಿದೆ. ನಾವು ತುಟ್ಟಿಭತ್ಯೆಯಲ್ಲಿ ಶೇಕಡ ನಾಲ್ಕು ಪಾಯಿಂಟ್ ಹೆಚ್ಚಳ ಮಾಡಬೇಕು ಎಂದು ಒತ್ತಾಯ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.
"ತುಟ್ಟಿಭತ್ಯೆ ಹೆಚ್ಚಳವು ಶೇಕಡ 3ಕ್ಕಿಂತ ಕೊಂಚ ಅಧಿಕವಾಗಿ ಇರಬೇಕಾಗುತ್ತದೆ. ದಶಮಾಂಶ ಬಿಂದುವನ್ನು ಮೀರಿ ಡಿಎ ಹೆಚ್ಚಳವನ್ನು ಸರ್ಕಾರ ಎಂದಿಗೂ ಮಾಡುವುದಿಲ್ಲ. ಹೀಗಾಗಿ ಡಿಎ ಶೇಕಡ 3ರಷ್ಟು ಪಾಯಿಂಟ್‌ಗಳಷ್ಟು ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಇದರಿಂದಾಗಿ ಡಿಎ ಸುಮಾರು ಶೇಕಡ 45ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ," ಎಂದು ಹೇಳಿದ್ದಾರೆ.
ಡಿಎ ಹೆಚ್ಚಳವನ್ನು ಯಾವಾಗ ಘೋಷಿಸಲಾಗುತ್ತದೆ?
ಡಿಎ ಹೆಚ್ಚಳದ ನಿಖರವಾದ ದಿನಾಂಕವನ್ನು ಸರ್ಕಾರ ಘೋಷಣೆ ಮಾಡಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ ಸೆಪ್ಟೆಂಬರ್ 2023 ರಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಮೊದಲು ಹಣಕಾಸು ಸಚಿವಾಲಯ ಡಿಎ ಏರಿಕೆ ಪ್ರಸ್ತಾಪ ಮಾಡುತ್ತದೆ. ಇದಾದ ಬಳಿಕ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಡಿಎ ಏರಿಸಿದರೆ, ಅದು ಜುಲೈ 1, 2023 ರಿಂದ ಜಾರಿಗೆ ಬರಲಿದೆ.
ಪ್ರಸ್ತುತ, ಒಂದು ಕೋಟಿ ರೂಪಾಯಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇಕಡ 42ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಕೊನೆಯದಾಗಿ ಮಾರ್ಚ್ 24, 2023 ರಂದು ತುಟ್ಟಿಭತ್ಯೆಯನ್ನು ಏರಿಕೆ ಮಾಡಲಾಗಿದೆ. ಅದು ಜನವರಿ 1, 2023 ರಿಂದ ಜಾರಿಗೆ ಬಂದಿತು. ಮಾರ್ಚ್‌ನಲ್ಲಿ ಶೇಕಡ 4ರಷ್ಟು ಡಿಎ ಏರಿಕೆ ಬಳಿಕ ಡಿಎ 42ಕ್ಕೆ ಏರಿದೆ.
ಉದ್ಯೋಗಿಗಳ ಮೇಲೆ ಡಿಎ ಹೆಚ್ಚಳದ ಪರಿಣಾಮ
ಡಿಎ ಹೆಚ್ಚಳದ ಘೋಷಣೆಯು ಖಂಡಿತವಾಗಿಯೂ ಕೇಂದ್ರ ಸರ್ಕಾರಿ ನೌಕರರಿಗೆ ಸಂತೋಷವನ್ನು ತರುತ್ತದೆ. ಹಾಗೆಯೇ ಇದು ಸರ್ಕಾರಿ ಉದ್ಯೋಗಿಗಳಿಗೆ ಜೀವನ ಸುಧಾರಣೆಗೆ ಸಹಕಾರಿಯಾಗಲಿದೆ. ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಖರ್ಚು ನಿರ್ವಹಣೆಗೆ ಸಹಕಾರಿಯಾಗುತ್ತದೆ.
ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಡಿಎ ಏರಿಕೆ
ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಡಿಎ ಏರಿಕೆ ಮಾಡುವಂತೆ ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಡಿಎ ಏರಿಕೆಯನ್ನು ಮಾಡುತ್ತದೆ. ಈ ಹಿಂದೆ ಕರ್ನಾಟಕ ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ಡಿಎ ಏರಿಕೆ ಮಾಡಿದೆ. ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಶೇಕಡ 4ರಷ್ಟು ತುಟ್ಟಿಭತ್ಯೆ ಅಥವಾ ಡಿಎ ಏರಿಕೆ ಮಾಡಿದೆ. ಪಿಂಚಣಿದಾರರಿಗೂ ಕೂಡಾ ಡಿಎ ದರ ಹೆಚ್ಚಳ ಮಾಡಲಾಗಿದೆ.
ಕರ್ನಾಟಕ ಸರ್ಕಾರವು ಶೇಕಡ 4ರಷ್ಟು ಡಿಎ ಏರಿಕೆ ಮಾಡಿದ ಬಳಿಕ ಪ್ರಸ್ತುತ ರಾಜ್ಯದಲ್ಲಿ ಡಿಎ ಪ್ರಮಾಣವು ಶೇಕಡ 31ರಿಂದ ಶೇಕಡ 35ಕ್ಕೆ ತಲುಪಿದೆ. ಜನವರಿ 1, 2023ರಿಂದ ಈ ನೂತನ, ಪರಿಷ್ಕೃತ ಡಿಎ ದರವು ಜಾರಿಗೆ ಬರಲಿದೆ ಎಂದು ಸರ್ಕಾರವು ತಿಳಿಸಿದೆ.


Click it and Unblock the Notifications