ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರು ಮುಂದಿನ ಹಂತದ ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚಿನ ಅಂಕಿಅಂಶಗಳು ಮತ್ತು ವರದಿಗಳ ಪ್ರಕಾರ, ಪ್ರಸ್ತುತ ಶೇಕಡ 42ರಷ್ಟು ಡಿಎ ಇದ್ದು, ಕೇಂದ್ರ ಸರ್ಕಾರವು ಶೀಘ್ರವೇ ಡಿಎ ಅನ್ನು ಶೇಕಡ 3ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದೆ.
ಜುಲೈನಲ್ಲಿ ದೇಶದಲ್ಲಿ ರಿಟೇಲ್ ಹಣದುಬ್ಬರವು 15 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಈ ನಡುವೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯು ಸುಮಾರು ಶೇಕಡ 3 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಸುಮಾರು ಶೇಕಡ 3ರಷ್ಟು ಡಿಎ ಏರಿಕೆಯನ್ನು ಮಾಡಿದರೆ, ಕೇಂದ್ರ ನೌಕರರಿಗೆ ಡಿಎ ಶೇಕಡ 45 ರಷ್ಟಾಗುತ್ತದೆ.

ಡಿಎ ಮತ್ತು ಡಿಆರ್ ಪ್ರಕಟಣೆಯ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಆದರೆ ಇತ್ತೀಚಿನ ವರದಿಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸೆಪ್ಟೆಂಬರ್‌ನಲ್ಲಿ ಒಳ್ಳೆಯ ಸುದ್ದಿ ಬರುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಡಿಎ ಏರಿಕೆ ಘೋಷಣೆ ಮಾಡಿದರೆ, ಡಿಎ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ.
"ಜೂನ್ 2023 ರ ಸಿಪಿಐ - ಐಡಬ್ಲ್ಯೂ ಅನ್ನು ಜುಲೈ 31, 2023 ರಂದು ಬಿಡುಗಡೆ ಮಾಡಲಾಗಿದೆ. ನಾವು ತುಟ್ಟಿಭತ್ಯೆಯಲ್ಲಿ ನಾಲ್ಕು ಶೇಕಡದಷ್ಟು ಏರಿಕೆ ಮಾಡಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ. ಆದರೆ ತುಟ್ಟಿಭತ್ಯೆ ಶೇಕಡ 3ಕ್ಕಿಂತ ಕೊಂಚ ಅಧಿಕ ಹೆಚ್ಚಳ ಮಾಡುವ ಅವಕಾಶ ಸರ್ಕಾರಕ್ಕಿದೆ. ಡಿಎ ಮೂರು ಶೇಕಡ ಹೆಚ್ಚಳವಾದರೆ, ಡಿಎ ಶೇಕಡ 45ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ," ಎಂದು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಇತ್ತೀಚೆಗೆ ಹೇಳಿದ್ದಾರೆ.
ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ವರ್ಷಕ್ಕೆ ಎರಡು ಬಾರಿ ಕೇಂದ್ರ ಸರ್ಕಾರವು ಡಿಎ, ಡಿಆರ್ ಘೋಷಣೆ ಮಾಡುತ್ತದೆ. ಹಣದುಬ್ಬರದ ಪ್ರಭಾವವನ್ನು ಸರಿದೂಗಿಸಲು ಭತ್ಯೆಯು ಪ್ರಮುಖವಾಗಿದೆ. 7 ನೇ ವೇತನ ಆಯೋಗದ ನಿಯಮಗಳ ಅಡಿಯಲ್ಲಿ ನಿರ್ಧರಿಸಲಾದ ಸೂತ್ರದ ಪ್ರಕಾರ ಕೈಗಾರಿಕಾ ಕಾರ್ಮಿಕರಿಗೆ (ಸಿಪಿಐ- ಐಡಬ್ಲ್ಯೂ) ಗ್ರಾಹಕ ಬೆಲೆ ಸೂಚ್ಯಂಕದಿಂದ ಇತ್ತೀಚಿನ ಡೇಟಾದ ಆಧಾರದ ಮೇಲೆ ಡಿಎ ಮೊತ್ತವನ್ನು ಲೆಕ್ಕಹಾಕಲಾಗುತ್ತದೆ.
ಡಿಎ, ಡಿಆರ್ ಪ್ರಯೋಜನವು ಪ್ರಸ್ತುತ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಲಭ್ಯವಾಗುತ್ತದೆ. ಈ ವರ್ಷದ ಜನವರಿಯಲ್ಲಿ ಜಾರಿಗೆ ಬರುವಂತೆ ಶೇಕಡ 4ರಷ್ಟು ಡಿಎ ಏರಿಕೆಯನ್ನು ಮಾಡಿದ್ದು, ಡಿಎ ಮೊತ್ತವು ಶೇಕಡ 38 ರಿಂದ ಶೇಕಡ 42 ಕ್ಕೆ ಏರಿಕೆಯಾಗಿದೆ. ಈಗ ಮತ್ತೆ ಶೇಕಡ 4ರಷ್ಟು ಏರಿಕೆ ಮಾಡಿದರೆ, ಶೇಕಡ 46ಕ್ಕೆ ಡಿಎ ತಲುಪುತ್ತದೆ.


Click it and Unblock the Notifications