ಬೆಂಗಳೂರು, ಜೂನ್ 5: ಭಾರತದಲ್ಲಿ ಕೆಳ ಮಾಧ್ಯಮ ವರ್ಗ/ ಮಾಧ್ಯಮ ವರ್ಗದ ಕುಟುಂಬಗಳೇ ಹೆಚ್ಚು. ಈ ಕುಟುಂಬಗಳು ತಿಂಗಳ ಆದಾಯವನ್ನೇ ಅವಲಂಬಿಸಿವೆ. ಇಂತಹ ಕುಟುಂಬಗಳು ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಪಡೆಯುವುದಿಲ್ಲ. ಅನೇಕ ಜನರು 20,000 ಅಥವಾ ಅದಕ್ಕಿಂತ ಕಡಿಮೆ ಮಾಸಿಕ ಆದಾಯವನ್ನು ಹೊಂದಿದ್ದಾರೆ. ಇದಕ್ಕಾಗಿ ಇಂತಹ ವ್ಯಕ್ತಿಗಳು ಹೂಡಿಕೆ ಯೋಜನೆಗಳ ಬಗ್ಗೆ ಒಲವು ತೋರುವುದಿಲ್ಲ. ಒಂದು ವೇಳೆ ಆಸಕ್ತಿ ಹೊಂದಿದ್ದರೂ ಅದು ಕೇವಲ ಬೆರಳಣಿಕೆಯ ಮಂದಿ ಮಾತ್ರ. ಹಾಗೆಂದು ಅವರಿಗೆ ಉಳಿತಾಯ, ಹೂಡಿಕೆ ಮಾಡಲು ಇಚ್ಚೆ ಇಲ್ಲ ಎಂದಲ್ಲ. ಅಲ್ಪ ವೇತನದಲ್ಲಿ ದಿನನಿತ್ಯದ ಖರ್ಚು ವೆಚ್ಚ ಸರಿದೂಗಿಸಿಕೊಂಡು ಹೂಡಿಕೆ ಹೇಗೆ ಎಂಬುವುದೇ ಅವರ ಪ್ರಶ್ನೆಯಾಗಿರುತ್ತದೆ.
ಆದರೆ ಮನಸ್ಸಿದ್ದರೆ 15,000 ಅಥವಾ 20,000 ಮಾಸಿಕ ವೇತನ ಪಡೆಯುವವರು ಸಣ್ಣ ಮಟ್ಟಿನ ಹೂಡಿಕೆ ಮಾಡಬಹುದು. ಇದೇ ಹೂಡಿಕೆ ನಿವೃತ್ತಿಯ ಸಮಯದಲ್ಲಿ ಉತ್ತಮ ಮೊತ್ತದ ಹಣವನ್ನು ಪಡೆಯಲು ಸಹಾಯ ಮಾಡುತ್ತವೆ. ಆಶ್ಚರ್ಯವಾದರೂ ಸತ್ಯ ಹನಿ ಹನಿ ಕೂಡಿ ಹಳ್ಳವಾದಂತೆ ಸಣ್ಣ ಮೊತ್ತದ ಹೂಡಿಕೆ ನಿವೃತ್ತಿಯ ವೇಳೆ ಉತ್ತಮ ಮೊತ್ತವಾಗಿ ನಿಮ್ಮ ಕೈಸೇರುತ್ತದೆ.

ಆರ್ಥಿಕ ಸಾಕ್ಷರತೆಯ ಕೊರತೆಯಿಂದ ಮತ್ತು ಜನರ ಆರ್ಥಿಕ ಅಶಿಸ್ತು ಈ ರೀತಿ ಯೋಚಿಸುವಂತೆ ಮಾಡುತ್ತದೆ. ಆದರೆ ಇಂದಿನ ಜಮಾನದಲ್ಲಿ ಉತ್ತಮ ಬಡ್ದಿ ಮತ್ತು ಉತ್ತಮ ಮೊತ್ತ ನೀಡುವ ಅನೇಕ ಹೂಡಿಕೆ ಆಯ್ಕೆಗಳಿವೆ. ಅಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣವು ಬೆಳೆಯುತ್ತದೆ ಮತ್ತು ನಿವೃತ್ತಿಯ ನಂತರ ನಿಮ್ಮ ಕೈಯಲ್ಲಿ ಉತ್ತಮ ಮೊತ್ತವು ಇರುತ್ತದೆ.
ಹೌದು ತಿಂಗಳಿಗೆ 20,000 ರೂಪಾಯಿ ಗಳಿಸುವ ವ್ಯಕ್ತಿ ನಿವೃತ್ತಿಯ ಸಮಯದಲ್ಲಿ1 ಕೋಟಿಯನ್ನು ಗಳಿಸಬಹುದು. ಅದು ಹೇಗೆ ಎಂದು ಯೋಚಿಸುತ್ತಿದ್ದರೆ ನೀವು ಸೂತ್ರವೊಂದನ್ನು ಪಾಲಿಸಬೇಕು. ಅದೇ 70:15:15 ಸೂತ್ರ. ಈ ಸೂತ್ರದ ಪ್ರಕಾರ, ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ನಿಮ್ಮ ಆದಾಯದ 70 ಪ್ರತಿಶತವನ್ನು ಮೀಸಲಿಡಬೇಕು. ಉಳಿದ 15 ಪ್ರತಿಶತವನ್ನು ತುರ್ತು ಪರಿಸ್ಥಿತಿಗಳಿಗೆ ಉಳಿಸಬೇಕು ಮತ್ತು ಕೊನೆಯಲ್ಲಿ ಉಳಿದ 15 ಪ್ರತಿಶತವನ್ನು ಕೆಲವು ಹೂಡಿಕೆ ಯೋಜನೆಯಲ್ಲಿ ಹೂಡಿಕೆ ಮಾಡಬೇಕು.
ಒಬ್ಬ ವ್ಯಕ್ತಿಯ ವೇತನ 20,000 ರೂಗಳಲ್ಲಿ ಆಗಿದ್ದರೆ 70:15:15 ಸೂತ್ರದ ಪ್ರಕಾರ 70 ಪ್ರತಿಶತ ಅಂದರೆ ರೂ 14,000 ರೂಪಾಯಿ ಆಗಿರುತ್ತದೆ. ಈ ದುಡ್ಡು ನಿಮ್ಮ ಒಂದು ತಿಂಗಳ ಒಟ್ಟು ವೆಚ್ಚಕ್ಕೆ ಸೀಮಿತವಾಗಿರಬೇಕು. 15 ರಷ್ಟು ಅಂದರೆ 3000 ರೂಪಾಯಿಗಳನ್ನು ತುರ್ತು ನಿಧಿಗಾಗಿ ಇರಿಸಬೇಕು ಮತ್ತು ಉಳಿದ 15 ಪ್ರತಿಶತವನ್ನು ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಬೇಕು.
1 ಕೋಟಿ ರೂ. ಪಡೆಯಲು ಎಲ್ಲಿ ಹೂಡಿಕೆ ಮಾಡಬೇಕು?
ವ್ಯವಸ್ಥಿತ ಹೂಡಿಕೆ ಯೋಜನೆ (Systematic Investment Plan -SIP) ಮೂಲಕ ಮ್ಯೂಚುವಲ್ ಫಂಡ್ ಹೂಡಿಕೆಯು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ದೀರ್ಘಾವಧಿಯಲ್ಲಿ ಇದರಿಂದ 12% ಆದಾಯವನ್ನು ನಿರೀಕ್ಷಿಸಬಹುದು. ನೀವು SIP ಮೂಲಕ 30 ವರ್ಷಗಳ ಕಾಲ ನಿರಂತರವಾಗಿ ಪ್ರತಿ ತಿಂಗಳು 3,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಮುಕ್ತಾಯದ ಸಮಯದಲ್ಲಿ ಒಟ್ಟು ಹೂಡಿಕೆ ಮೊತ್ತ 10,80,000 ರೂ.ಳಾಗಿರುತ್ತದೆ. 12 ಪ್ರತಿಶತ ವಾರ್ಷಿಕ ರಿಟರ್ನ್ ದರದಲ್ಲಿ, ನೀವು 95,09,741 ರೂ. ಪಡೆಯುತ್ತೀರಿ. ಅಂದರೆ ಇದು 30 ವರ್ಷಗಳಲ್ಲಿ ಒಟ್ಟು 1,05,89,741 ರೂ. ಆಗಿರುತ್ತದೆ.


Click it and Unblock the Notifications